ಕೊಪ್ಪಳ.
ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ಜ.೨೨ರಂದು ಉದ್ಘಾಟನೆಗೊಳ್ಳುತ್ತಿರುವ ವಿಷಯ ಈಗ ಜಗತ್ತಿನಾದ್ಯಂತ ಪಸರಿಸಿದೆ. ಐದು ವರ್ಷಗಳ ಹೋರಾಟದ ಫಲವಾಗಿ ಮತ್ತು ಸಮಸ್ಥ ಹಿಂದುಗಳ ಕನಸು ನನಸಾಗಿದ್ದು, ಜ.೨೨ ರಂದು ಭವ್ಯ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಟಾಪನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಗೆ ಜಗತ್ತಿನ ಜನ ಹೋಗಲು ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಕೊಪ್ಪಳ ಜಿಲ್ಲೆಯ ಮತ್ತು ರಾಮನ ಬಂಟ ಹನುಮಂತನ ಜನ್ಮಸ್ಥಳ ಅಂಜನಾದ್ರಿಯಿಂದ ಅಯೋಧ್ಯಗೆ ಹೋಗಿ ಕಣ್ತುಂಬಿಕೊಳ್ಳಲು ಸಜ್ಜಾಗಿದ್ದಾರೆ. ಭಕ್ತರ ಆಪೇಕ್ಷೆಯನ್ನು ಈಡೇರಿಸಲು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು ಸಂಚಾರ ಪ್ರಾರಂಭಿಸುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೂ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅಂಜನಾದ್ರಿಯ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಕನಕಗಿರಿ ಮಾಜಿ ಶಾಸಕ ಬಸವರಾಜ ದಢೇಸೂಗೂರು, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಆನೆಗೊಂದಿ ಮಾಜಿ ಜಿಪಂ ಸದಸ್ಯ ಸಿದ್ಧರಾಮಸ್ವಾಮಿ ಮತ್ತು ಬಿಜೆಪಿ ಮುಖಂಡ ನರಸಿಂಗರಾವ್ ಕುಲಕರ್ಣಿ ಸಾತ್ ನೀಡಿದ್ದಾರೆ.
ಶುಕ್ರವಾರ ನವ ದೆಹಲಿಯಲ್ಲಿ ಮಾಜಿ ಶಾಸಕರು ಮತ್ತು ಮುಖಂಡರೊಂದಿಗೆ ಸಂಸದ ಸಂಗಣ್ಣ ಕರಡಿ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಖುದ್ದು ಭೇಟಿ ಮಾಡಿ ಅಂಜನಾದ್ರಿಯಿಂದ ಅಯೋಧ್ಯೆಗೆ ಶೀಘ್ರ ರೈಲು ಸಂಚಾರ ಪ್ರಾರಂಭವಿಸುವಂತೆ ಮನವಿ ಮಾಡಿದ್ದಾರೆ. ಶತಮಾನಗಳ ಕನಸನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನನಸು ಮಾಡಿದೆ. ಅಯೋಧ್ಯೆಯ ಸಮಗ್ರ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ಮೀಸಲಿಡಲಾಗಿದೆ. ಇದೇ ಮಾದರಿಯಲ್ಲಿ ಹನುಮ ಹುಟ್ಟಿದ ನಾಡು ಅಂಜನಾದ್ರಿ ಅಭಿವೃದ್ಧಿ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಮುಂದಾಗಬೇಕು ಎಂದು ಸಂಸದರು ಮನವಿ ಮಾಡಿದ್ದಾರೆ. ಗಂಗಾವತಿಯಿಂದ ಅಯೋಧ್ಯೆಗೆ ರೈಲು ಸಂಚಾರ ನಡೆಸಲು ಅವಕಾಶ ಕಲ್ಪಿಸಲು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಶೀಘ್ರವೇ ರೈಲು ಸಂಚಾರಕ್ಕೆ ಹಸಿರು ನಿಶಾನೆ ಸಿಗುವ ಆಶಾಭಾವನೆಯನ್ನು ಸಂಸದರು ವ್ಯಕ್ತಪಡಿಸಿದ್ದಾರೆ.
ಬಾಕ್ಸ್:
ಅಯೋಧ್ಯೆಗೆ ರೈಲು: ಕೇಂದ್ರಕ್ಕೆ ಮನವಿ
ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದ್ದು, ದೇಶ ವಿದೇಶಗಳಿಂದ ಈಗ ಅಯೋಧ್ಯೆಗೆ ಭಕ್ತರು ಪ್ರಯಾಣ ಮಾಡಲು ಮುಂದಾಗಿದ್ದಾರೆ. ಅದೇ ರೀತಿ ಹನುಮಂತ ಜನಿಸಿದ ಸ್ಥಳವಾಗಿರುವ ಅಂಜನಾದ್ರಿ ಕೂಡಾ ಅಯೋಧ್ಯೆಯಷ್ಟೆ ಪವಿತ್ರ ತೀರ್ಥ ಕ್ಷೇತ್ರವಾಗಿದೆ. ನಮ್ಮ ಭಾಗದ ಭಕ್ತರು ಕೂಡಾ ಅಯೋಧ್ಯೆಗೆ ಹೋಗಲು ಮತ್ತು ಅಯೋಧ್ಯೆ ಅಂಜನಾದ್ರಿ ನಡುವೆ ಸುಲಭವಾಗಿ ಸಂಪರ್ಕ ಸಾಧಿಸಲು ಅಂಜನಾದ್ರಿಯ ಗಂಗಾವತಿ ರೈಲ್ವೆ ನಿಲ್ದಾಣದಿಂದ ಅಯೋಧ್ಯೆಗೆ ರೈಲು ಸಂಚಾರ ಪ್ರಾರಂಭಿಸುವಂತೆ ಮನವಿ ಮಾಡಿದ್ದೇವೆ. ನಮ್ಮ ಮನವಿ ಪುರಸ್ಕರಿಸುವ ಭರವಸೆ ಇದೆ. ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯ ಸಂಭ್ರಮವನ್ನು ಸಹಿಸದ ರಾಜ್ಯದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ನಡೆಸುತ್ತಿದೆ. ಕರ ಸೇವಕರಿಗೆ ತೊಂದರೆ ನೀಡಿದರೆ ನಾವು ಸುಮ್ಮನಿರುವುದಿಲ್ಲ.
ಸಂಗಣ್ಣ ಕರಡಿ, ಸಂಸದರು, ಕೊಪ್ಪಳ.