ಗಂಗಾವತಿ.
ತಾಲೂಕಿನ ಐತಿಹಾಸಿಕ ಅಂಜನಾದ್ರಿ ಪರ್ವತದಲ್ಲಿ ಡಿ.12 ಮತ್ತು 13 ರಂದು ನಡೆಯುವ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಅಂಜನಾದ್ರಿಗೆ ಬರುವ ಮಾಲಾಧಾರಿಗಳು ಮತ್ತು ಭಕ್ತರಿಗೆ ಮಾರ್ಗ ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ|| ರಾಮ ಅರಸಿದ್ಧಿ ತಿಳಿಸಿದರು.
ಸೋಮವಾರ ನಗರದ ಡಿವೈಎಸ್‌ಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾಹಿತಿ ಬಿಡುಗಡೆ ಮಾಡಿದರು. ಮಾಲೆ ವಿಸರ್ಜನೆಗೆ ಅಂದಾಜ ಲಕ್ಷಕ್ಕೂ ಅಧಿಕ ಭಕ್ತರು ಬರುವ ನಿರೀಕ್ಷೆ ಇದೆ. ಡಿ.13 ರಂದು ಗಂಗಾವತಿ ನಗರದಲ್ಲಿ ನಡೆಯುವ ಸಂಕೀರ್ತನ ಯಾತ್ರೆಯಲ್ಲಿ ಸುಮಾರು 8 ರಿಂದ 10 ಸಾವಿರ ಜನ ಭಾಗವಹಿಸುತ್ತಾರೆ ಎಂಬು ಆಯೋಜಕರು ತಿಳಿಸಿದ್ದಾರೆ. ಹೀಗಾಗಿ ಅಂಜನಾದ್ರಿ ಮತ್ತು ನಗರದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 3 ಹೆಚ್ಚುವರಿ ಎಸ್‌ಪಿ, 10 ಜನ ಡಿವೈಎಸ್‌ಪಿ, 30 ಪಿಎಸ್‌ಐ 1200 ಪೊಲೀಸ್ ಸಿಬ್ಬಂದಿ, 5 ಕೆಎಸ್‌ಆರ್‌ಪಿ ತುಕುಡಿ, 10 ಡಿಆರ್ ನಿಯೋಜನೆ ಮಾಡಲಾಗಿದೆ. ನಗರದಲ್ಲಿ 100 ಮತ್ತು ಅಂಜನಾದ್ರಿ ಮಾರ್ಗದಲ್ಲಿ 75ಕ್ಕೂ ಅಧಿಕ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಅಂಜನಾದ್ರಿ ಸುತ್ತ 22 ಪಾರ್ಕಿಂಗ್ ಸ್ಥಳಗಳನ್ನು ನಿಗದಿಪಡಿಸಿ ಮಾಹಿತಿ ಫಲಕ ಹಾಕಲಾಗುವುದು. ನಗರ ಪ್ರದೇಶಕ್ಕೆ ಪ್ರವೇಶ ಮಾಡುವಲ್ಲಿ 11 ಮತ್ತು ಗ್ರಾಮಾಂತರ ಪ್ರದೇಶದಲ್ಲಿ 9 ಚೆಕ್ಕಪೋಸ್ಟ್ ಮಾಡಿ ಅಲ್ಲಿ ಸಿಸಿ ಕ್ಯಾಮೇರಾ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ. ಗಂಗಾವತಿ ನಗರದಲ್ಲಿ ನಡೆಯುವ ಸಂಕೀರ್ತನ ಯಾತ್ರೆಗೆ ಬರುವವರು ಹೆಸರು ಸಮೇತ ಪಟ್ಟಿ ನೀಡುವಂತೆ ಆಯೋಜಕರಿಗೆ ಸೂಚನೆ ನೀಡಲಾಗಿದೆ. ಮತ್ತು ಅಂಜನಾದ್ರಿಗೆ ಬರುವ ಮಾರ್ಗಗಳನ್ನು ನಿಗದಿಪಡಿಸಿದ್ದು, ಕುಷ್ಟಗಿ, ಕೊಪ್ಪಳ ಮಾರ್ಗದಿಂದ ಬರುವವರನ್ನು ನೇರವಾಗಿ ಹೊಸಪೇಟೆ, ಕಮಲಾಪುರದಿಂದ ಕಡೆಬಾಗಿಲು ಮಾರ್ಗವಾಗಿ ಅಂಜನಾದ್ರಿಗೆ ಬರಬೇಕು. ಬಳ್ಳಾರಿ, ಹೊಸಪೇಟೆ, ಕಂಪ್ಲಿ, ಸಿರಗುಪ್ಪಾ ಕಡೆಯಿಂದ ಬರುವವರು ನೇರವಾಗಿ ಕಡೆಬಾಗಿಲು ಮಾರ್ಗದಿಂದ ಅಂಜನಾದ್ರಿಗೆ ಮತ್ತು ಸಿಂಧನೂರು, ಲಿಂಗಸಗೂರ, ತಾವರಗೇರಿ ಮಾರ್ಗದಿಂದ ಬರುವವರು ಗಂಗಾವತಿ ನಗರದ ರಾಣಾ ಪ್ರತಾಪ್‌ಸಿಂಹ್ ವೃತ್ತದಿಂದ ಬೈಪಾಸ್ ರಸ್ತೆ ಮೂಲಕ ಬಸ್ ನಿಲ್ದಾಣದ ಮುಂದಿನ ಆನೆಗೊಂದಿ ರಸ್ತೆಯಿಂದ ಅಂಜನಾದ್ರಿಗೆ ತೆರಳುವಂತೆ ಸೂಚನೆ ನೀಡಲಾಗುತ್ತಿದೆ. ಹಿಟ್ನಾಳ್ ಮತ್ತು ಅಗಳಕೇರಾ ಮಾರ್ಗದಲ್ಲಿ ರಸ್ತೆ ದುರಸ್ತಿ ನಡೆಯುತ್ತಿರುವುದರಿಂದ ಅಲ್ಲಿನ ಮಾರ್ಗಕ್ಕೆ ಯಾರಿಗೂ ಪ್ರವೇಶ ನೀಡುತ್ತಿಲ್ಲ ಎಂದು ಎಸ್‌ಪಿ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್‌ಪಿ ಸಿದ್ಧಲಿಂಗಪ್ಪಗೌಡ ಪಾಟೀಲ್, ನಗರ ಠಾಣೆ ಪಿಐ ಪ್ರಕಾಶ ಮಾಳೆ, ಗ್ರಾಮೀಣ ಠಾಣೆ ಪಿಐ ಸೋಮಶೇಖರ ಜುಟ್ಟಲ್ ಇದ್ದರು.
ಬಾಕ್ಸ್:
ಕಾನೂನು ಬಾಹಿರ ಚಟುವಟಿಕೆಗೆ ನಿಗಾ
ಅಂಜನಾದ್ರಿಯಲ್ಲಿ ನಡೆಯುವ ಮಾಲೆ ವಿಸರ್ಜನೆಗೆ ಎಲ್ಲಾ ರೀತಿಯ ಬಂದೋಬಸ್ತ್ ಮಾಡಿದ್ದು, ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುವುದು. ಮತ್ತು ಕೆಲವು ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾವಹಿಸಿದ್ದು, ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ಸುದ್ದಿಗಳನ್ನು ನಂಬಬಾರದು. ಮತ್ತು ಅವುಗಳನ್ನು ಫಾರ್ವರ್ಡ್ ಮಾಡಬಾರದು. ಎನಾದರೂ ಅವಘಡಗಳ ಮಾಹಿತಿ ಬಂದಲ್ಲಿ ತಕ್ಷಣ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಬೇಕು. ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಗಂಗಾವತಿ ನಗರದಲ್ಲಿ ಡಿ.೧೩ರಂದು ಸಂಕೀರ್ತನಾ ಯಾತ್ರೆ ನಡೆಯುತ್ತಿರುವುದರಿಂದ ನಗರದ ನಾಗರೀಕರು ಶಾಂತಿ, ಸೌಹಾರ್ದತೆಯನ್ನು ಕಾಪಾಡಬೇಕು.
ಡಾ|| ರಾಮ ಅರಸಿದ್ಧಿ, ಎಸ್‌ಪಿ. ಕೊಪ್ಪಳ.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!