ಗಂಗಾವತಿ.
ಶಾಸಕ ಗಾಲಿ ಜನಾರ್ಧನರೆಡ್ಡಿ ತಮ್ಮ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡಿ ಸೋಮವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿದ್ದ ಗಾಲಿ ಜನಾರ್ಧನರೆಡ್ಡಿ ಅವರು ಮಾಧ್ಯಮಗಳ ಮೂಲಕ ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದರು. ಕಳೆದ ಒಂದು ವರ್ಷದ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಸ್ವಂತ ಕೆಆರ್‌ಪಿಪಿ ಪ್ರಾರಂಭಿಸಿ ಗಂಗಾವತಿ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಕೇಂದ್ರದಲ್ಲಿ ಬಿಜೆಪಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿರುವುದರಿಂದ ಸ್ವಂತ ಪಕ್ಷ ಹೊಂದಿದ್ದ ಜನಾರ್ಧನರೆಡ್ಡಿಗೆ ಸರಿಯಾದ ರೀತಿ ಸಹಕಾರ ಸಿಗುತ್ತಿಲ್ಲ. ಇತ್ತೀಚಿಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರಕ್ಕೆ ಅನುದಾನ ನೀಡುವುದರ ಜೊತೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಆಮಿಷ್ ನೀಡಿದ್ದ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ರೆಡ್ಡಿಗೆ ಗಾಳ ಹಾಕಿದ್ದರು. ಆದರೆ ಆನೆಗೊಂದಿ ಉತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಜಿಲ್ಲಾಡಳಿತ ಉತ್ಸವದ ಅಧ್ಯಕ್ಷರಾಗಿದ್ದರೂ ಶಾಸಕ ಜನಾರ್ಧನರೆಡ್ಡಿಗೆ ಕೆಲವು ವಿಚಾರದಲ್ಲಿ ಸರಿಯಾದ ಮನ್ನಣೆ ನೀಡಿದ್ದಿಲ್ಲ. ಇದು ರೆಡ್ಡಿ ಬೆಂಬಲಿಗರ ಆಕ್ರೋಶಕ್ಕೂ ಕಾರಣವಾಗಿತ್ತು. ಈ ಸಂಗತಿಯನ್ನು ಅರಿತ ಜನಾರ್ಧನರೆಡ್ಡಿ ತಮಗೆ ಕಾಂಗ್ರೆಸ್ ಸರಕಾರ ಯಾವುದೇ ಸಹಕಾರ ನೀಡುವುದಿಲ್ಲ ಎಂಬುದನ್ನು ಅರಿತುಕೊಂಡು ಮತ್ತು ತಮ್ಮ ಮಾತೃಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ಸೂಚನೆಯಿಂದಾಗಿ ಉತ್ಸವದ ಮರುದಿನವೇ ದೇಹಲಿಗೆ ತೆರಳಿ ಗೃಹ ಸಚಿವ ಅಮಿತ್ ಷಾ ಭೇಟಿ ಮಾಡಿ ಬಿಜೆಪಿ ಸೇರುವ ಒಲವು ತೊರಿಸಿದ್ದರು. ಭಾನುವಾರ ಬೆಂಬಲಿಗರ ಸಭೆಯ ನಂತರ ಅಧಿಕೃವಾಗಿ ಬಿಜೆಪಿ ಸೇರುವ ಘೋಷಣೆ ಮಾಡಿ ಮುಂದಿನ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ಶಾಸಕ ಗಾಲಿ ಜನಾರ್ಧನರೆಡ್ಡಿ ಅವರು ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗುವ ಕುರಿತು ಇಂದು ಬೆಂಗಳೂರಿನಲ್ಲಿ ಎಲ್ಲಾ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಚರ್ಚಿಸಿದ್ದಾರೆ. ಅವರ ನಿಲುವಿಗೆ ನಾವೆಲ್ಲರೂ ಸಂಪೂರ್ಣ ಸಹಮತ ನೀಡಿದ್ದೇವೆ. ಅವರೊಂದಿಗೆ ನಾವು ಕೂಡಾ ಬಿಜೆಪಿ ಸೇರ್ಪಡೆಯಾಗಲಿದ್ದೇವೆ ಎಂದು ನಗರಸಭೆ ಸದಸ್ಯ ಮುಸ್ತಕ್ ಅಲಿ, ಜುಬೇರ್, ಮುಖಂಡರಾದ ಪಂಪಣ್ಣ ನಾಯಕ, ರಾಜೇಶರೆಡ್ಡಿ, ಮಲ್ಲಿಕಾರ್ಜುನ ನಂದಾಪುರ ಮತ್ತಿತರು ಸಮರ್ಥವಾಣಿಯೊಂದಿಗೆ ಮಾತನಾಡಿದರು.
ಶಾಸಕ ಗಾಲಿ ಜನಾರ್ಧನರೆಡ್ಡಿ ಬಿಜೆಪಿ ಸೇರುತ್ತಿರುವದಕ್ಕೆ ಅವರ ಬಹುತೇಕ ಬೆಂಬಲಿಗರು ಹರ್ಷ ವ್ಯಕ್ತಪಡಿಸಿದ್ದು, ತಮ್ಮ ನಾಯಕನೊಂದಿಗೆ ತಾವು ಬಿಜೆಪಿ ಸೇರ್ಪಡೆಯಾಗುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸುತ್ತಿದ್ದಾರೆ.
ಬಾಕ್ಸ್:
ಶಾಸಕ ರೆಡ್ಡಿ ಬಿಜೆಪಿ ಸೇರ್ಪಡೆ ಮುನವಳ್ಳಿ ಸ್ವಾಗತ
ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿ ಅವರು ಸೋಮವಾರ ಅಧಿಕೃತವಾಗಿ ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗುತ್ತಿರುವುದು ನಾನು ಸ್ವಾಗತಿಸುತ್ತೇನೆ. ಪಕ್ಷದ ಹಿರಿಯರ ನಿರ್ಧಾರಕ್ಕೆ ನಮ್ಮ ಸಂಪೂರ್ಣ ಸಹಮತ ಇದೆ. ಅವರು ಬಿಜೆಪಿ ಸೇರ್ಪಡೆಯಾಗುವ ಸಂಗತಿಯನ್ನು ಪಕ್ಷದ ಹಿರಿಯರಾದ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನನಗೆ ಫೋನ್ ಮೂಲಕ ತಿಳಿಸಿದ್ದಾರೆ. ಸೋಮವಾರ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪಕ್ಷದ ಹಿರಿಯರ ಸಮ್ಮುಖದಲ್ಲಿ ಶಾಸಕರು ಸೇರ್ಪಡೆಯಾಗುತ್ತಿದ್ದಾರೆ. ಗಂಗಾವತಿಗೆ ಬರುತ್ತಿದ್ದಂತೆ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರ ಜೊತೆ ಚರ್ಚಿಸಿ ಅವರನ್ನು ಸ್ವಾಗತಿಸಲಾಗುವುದು.
ಪರಣ್ಣ ಮುನವಳ್ಳಿ, ಮಾಜಿ ಶಾಸಕರು, ಗಂಗಾವತಿ.

 

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!