ಗಂಗಾವತಿ.
ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ಶ್ರೀನಾಥ ಮನೆಯಲ್ಲಿ ಸೋಮವಾರ ಎಪ್ರೇಲ್.೮ ರಂದು ಲೋಕಸಭೆ ಚುನಾವಣೆ ಪ್ರಚಾರಾರ್ಥವಾಗಿ ಬ್ಲಾಕ್ ಕಾಂಗ್ರೆಸ್‌ವತಿಯಿಂದ ಆಯೋಜಿಸಿರುವ ಸಭೆಯ ವಿರುದ್ಧ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಸಭೆಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ತಮ್ಮ ಅಭಿಮಾನಿಗಳು ಯಾರು ಹೋಗದಂತೆ ಆಡಿಯೋ ಮೂಲಕ ಸಂದೇಶ ರವಾನಿಸಿದ್ದಾರೆ. ಮತ್ತು ಈ ಸಭೆಯ ನೇತೃತ್ವವಹಿಸಿಕೊಂಡಿರುವ ನೂತನ ಕೆಪಿಪಿಸಿ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ಶ್ರೀನಾಥ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಬ್ಲಾಕ್ ಅಧ್ಯಕ್ಷ ಶ್ಯಾಮೀದ್ ಮನಿಯಾರ್, ಹಾಸೀಫ್, ಅರಸನಕೇರಿ, ದೇವರಮನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಶ್ರೀನಾಥ ಮನೆಯಲ್ಲಿ ನಡೆಯುತ್ತಿರುವುದು ಕಾಂಗ್ರೆಸ್ ಸಭೆಯಲ್ಲ ಅದು (ಕೆಆರ್‌ಪಿಪಿ) ಜನಾರ್ಧನರೆಡ್ಡಿ ಬೆಂಬಲಿಗರ ಸಭೆಯಾಗಿದೆ. ಯಾರುಹೋಗಬೇಡಿ ಎಂದು ಅನ್ಸಾರಿ ರವಾನಿಸಿರುವ ಆಡಿಯೋ ಸಂದೇಶ ಈಗ ವೈರಲ್ ಆಗಿದ್ದು, ಎ.೮ ರಂದು ನಡೆಯುವ ಕಾಂಗ್ರೆಸ್ ಸಭೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಭಾನುವಾರ ಆಡಿಯೋ ಮೂಲಕ ಸ್ವತಃ ಅನ್ಸಾರಿ ಮಾತನಾಡಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಇಕ್ಬಾಲ್ ಅನ್ಸಾರಿ ಗಂಗಾವತಿ ಕ್ಷೇತ್ರದ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಯುವ ಘಟಕದ ಅಧ್ಯಕ್ಷ ಹಾಸೀನ್‌ಖಾನ್, ಎಸ್‌ಸಿ ಘಟಕದ ಅಧ್ಯಕ್ಷ ದೇವರಮನಿ ಮಲ್ಲೇಶ, ಹಿಂದುಳಿದ ವರ್ಗದ ಘಟಕದ ಹನುಮಂತಪ್ಪ ಅರಸಿನಕೇರಿ ಸೇರಿದಂತೆ ಮಾಜಿ ಎಂಎಲ್‌ಸಿ ಹೆಚ್.ಆರ್.ಶ್ರೀನಾಥ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ವಿರುದ್ಧ ತೀವ್ರ ಅಸಮಾಧಾನಗೊಂಡು ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಅಭ್ಯರ್ಥಿಪರ ಪ್ರಚಾರಕ್ಕೆ ಹೋಗದೆ ನಿರಾಸಕ್ತಿ ತೋರಿಸಿದ್ದರು. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ನಿವಾಸಕ್ಕೆ ಕೆರೆಸಿಕೊಂಡು ತಮ್ಮ ಮುಖ್ಯಮಂತ್ರಿ ಖುರ್ಚಿ ಉಳಿಯಬೇಕಾದರೆ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್‌ಪರ ಕೆಲಸ ಮಾಡಬೇಕು ಎಂದು ಅನ್ಸಾರಿಗೆ ಸೂಚನೆ ನೀಡಿದ್ದರು. ಸಿದ್ಧರಾಮಯ್ಯ ಮನವಲಿಕೆಗೆ ಓಕೆ ಎಂದಿದ್ದ ಅನ್ಸಾರಿ ಕಳೆದ ಎಪ್ರೇಲ್.೩ ರಂದು ತಮ್ಮ ನಿವಾಸದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳ ಸಭೆ ಆಯೋಜಿಸಿ ಸಚಿವ ತಂಗಡಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಕಾಡಾ ಅಧ್ಯಕ್ಷ ಹಸನ್‌ಸಾಬ್ ದೋಟಿಹಾಳ್, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಮತ್ತಿತರನ್ನು ಅಹ್ವಾನಿಸಿದ್ದರು. ಇವರ ಎದುರಿನಲ್ಲೇ ಮಾಜಿ ಸಂಸದ ಹೆಚ್.ಜಿ.ರಾಮುಲು, ಹೆಚ್.ಆರ್. ಶ್ರೀನಾಥ, ಮಲ್ಲಿಕಾರ್ಜುನ ನಾಗಪ್ಪ ಸೇರಿದಂತೆ ಮನಿಯಾರ್, ಹಾಸೀನ್, ಹನುಮಂತಪ್ಪ ಅರಸಿನಕೇರಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಅನ್ಸಾರಿ ಮಾತನ್ನು ಆಲಿಸಿದ್ದ ಸಚಿವ ತಂಗಡಗಿ, ಬಯ್ಯಾಪುರ, ಹಸನ್‌ಸಾಬ್ ಅವರು ತುಟಿಪಿಟಕ್ಕೆನ್ನದೇ ಗಂಗಾವತಿ ಕಾಂಗ್ರೆಸ್ ಮಾಲೀಕ ಎಂದು ಅನ್ಸಾರಿ ಮಾತಿಗೆ ಬೆಂಬಲ ನೀಡಿ ಹೋಗಿದ್ದರು.
ಆದರೆ ಅನ್ಸಾರಿ ಮನೆಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಹೆಚ್.ಆರ್.ಶ್ರೀನಾಥ, ಮಲ್ಲಿಕಾರ್ಜುನ ನಾಗಪ್ಪ, ಮನಿಯಾರ್ ಮತ್ತಿತರು ಗೈರಾಗಿದ್ದರು. ಮತ್ತು ಅನ್ಸಾರಿ ವಿರೋಧಿ ಬಣವಾಗಿ ಎ.೮ ರಂದು ಹೆಚ್.ಆರ್.ಶ್ರೀನಾಥ ಮನೆಯಲ್ಲಿ ಪ್ರತ್ಯೇಕ ಕಾಂಗ್ರೆಸ್ ಸಭೆ ನಡೆಸುತ್ತಿದ್ದು, ಈ ಸಭೆಗೆ ಸಚಿವ ತಂಗಡಗಿ, ಡಿಸಿಸಿ ಅಧ್ಯಕ್ಷ ಬಯ್ಯಾಪುರ, ಬಸವರಾಜ ರಾಯರೆಡ್ಡಿ ಮತ್ತಿತರು ಆಗಮಿಸುತ್ತಿದ್ದಾರೆ ಎಂದು ಬ್ಲಾಕ್ ಅಧ್ಯಕ್ಷ ಮನಿಯಾರ್ ಮತ್ತಿತರು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಇದನ್ನು ಗಮನಿಸಿರುವ ಇಕ್ಬಾಲ್ ಅನ್ಸಾರಿ ಶ್ರೀನಾಥ ಮನೆಯಲ್ಲಿ ಎ.೮ ರಂದು ನಡೆಯುವ ಸಭೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಆಡಿಯೋ ಮೂಲಕ ತನ್ನ ಬೆಂಬಲಿಗ ಕಾರ್ಯಕರ್ತರಿಗೆ ಅನ್ಸಾರಿ ಸಂದೇಶದಲ್ಲಿ ಮತ್ತೆ ವಾಗ್ದಾಳಿ ನಡೆಸಿ, ಮಾಜಿ ಎಂಎಲ್‌ಸಿ, ಮಾಜಿ ಸಚಿವ, ಬ್ಲಾಕ್ ಅಧ್ಯಕ್ಷ ಮತ್ತಿತರು ಸೇರಿಕೊಂಡು ಎ.೮ ರಂದು ಶ್ರೀನಾಥ ಮನೆಯಲ್ಲಿ ನಡೆಸುತ್ತಿರುವ ಸಭೆ ಕಾಂಗ್ರೆಸ್ ಪಕ್ಷದ ಸಭೆಯಲ್ಲ. ಅದು ಕೆಆರ್‌ಪಿಪಿ ಮುಖಂಡರ ಮತ್ತು ಜನಾರ್ಧನರೆಡ್ಡಿ ಬೆಂಬಲಿಗರ ಸಭೆಯಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಈ ಎಲ್ಲಾ ಮುಖಂಡರು ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಪಕ್ಷಕ್ಕೆ ದ್ರೋಹ ಬಗೆದು ಜನಾರ್ಧನರೆಡ್ಡಿಗೆ ಪರೋಕ್ಷವಾಗಿ ಬೆಂಬಲ ನೀಡಿ ನನ್ನ ಸೋಲಿಗೆ ಕಾರಣರಾಗಿದ್ದಾರೆ. ಇಂತವರಿಂದ ಕಾಂಗ್ರೆಸ್ ಪಕ್ಷ ಗಂಗಾವತಿಯಲ್ಲಿ ಹಾಳಾಗುತ್ತಿದೆ. ಹೀಗಾಗಿ ನಾನು ಎ.೩ ರಂದು ಸಚಿವ, ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಿದ್ದೇನೆ. ಈ ಸಭೆಗೆ ಮಾತ್ರ ಕಾಂಗ್ರೆಸ್ ಪಕ್ಷದ ನೈಜ ಸಭೆಯಾಗಿದೆ. ಆದರೆ ಮಾ.೮ ರಂದು ಶ್ರೀನಾಥ ಮನೆಯಲ್ಲಿ ನಡೆಯುತ್ತಿರುವ ಸಭೆ ಜನಾರ್ಧನರೆಡ್ಡಿಗೆ ಬೆಂಬಲ ಸೂಚಿಸುವ ಸಭೆಯಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಹೆಚ್.ಆರ್.ಶ್ರೀನಾಥ ಸೇರಿ ಅವರ ಕುಟುಂಬ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರೆಲ್ಲರು ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿ ಕೆಆರ್‌ಪಿಪಿಗೆ ಬೆಂಬಲಿಸಿದ್ದಾರೆ. ಹೀಗಾಗಿ ಅವರೆಲ್ಲರು ಕಾಂಗ್ರೆಸ್ ಪಕ್ಷದ ಮುಖವಾಡ ಹಾಕಿಕೊಂಡಿದ್ದಾರೆ. ಜನಾರ್ಧನರೆಡ್ಡಿ ಬಿಜೆಪಿಗೆ ಹೋಗಿದ್ದರಿಂದ ಈಗ ಕಾಂಗ್ರೆಸ್ ನಾಯಕರನ್ನು ಓಲೈಸಿಕೊಳ್ಳುವ ನಾಟಕವಾಡಲು ಮಾ.೮ ರಂದು ಸಭೆ ನಡೆಸುತ್ತಿದ್ದಾರೆ. ಇಂತಹ ಕಾಂಗ್ರೆಸ್ ವಿರೋಧಿ ಮನಸ್ಥಿತಿಯ ವ್ಯಕ್ತಿಗಳು ನಡೆಸುವ ಸಭೆಗೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಯಾರು ಹೋಗಬಾರದು. ನಾನು ಮಾತ್ರ ನೈಜ ಕಾಂಗ್ರೆಸ್ಸಿಗನಾಗಿದ್ದೇನೆ. ಶೀಘ್ರದಲ್ಲಿ ಕ್ಷೇತ್ರದ ಎಲ್ಲಾ ಹೋಬಳಿಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಚುನಾವಣೆ ಸಭೆಯನ್ನು ಆಯೋಜಿಸುವ ಕುರಿತು ಮಾಹಿತಿ ನೀಡುತ್ತೇನೆ. ಶ್ರೀನಾಥ ಮನೆಯಲ್ಲಿ ನಡೆಯುವ ಸಭೆಗೆ ಹೋಗಬಾರದು ಎಂದು ನೇರವಾಗಿ ಅನ್ಸಾರಿ ಸಂದೇಶ ರವಾನಿಸಿದ್ದಾರೆ.
ಬಾಕ್ಸ್:
ಇಕ್ಕಟ್ಟಿನಲ್ಲಿ ಸಿಲುಕಿರುವ ಕಾಂಗ್ರೆಸ್ ಅಭ್ಯರ್ಥಿ..!!
ಕೊಪ್ಪಳ ಲೋಕಸಭೆ ಚುನಾವಣೆಯಲ್ಲಿ ಸತತ ಎರಡು ಭಾರಿ ಸೋಲುಂಡಿರುವ ಹಿಟ್ನಾಳ್ ಕುಟುಂಬ ಈ ಭಾರಿ ಶತಾಯ ಗತಾಯ ಗೆಲ್ಲಲೇಬೇಕೆಂದು ಹಠ ಹಿಡಿದು ಕ್ಷೇತ್ರದಾದ್ಯಂತ ಕೆಲಸ ಮಾಡುತ್ತಿದ್ದಾರೆ. ಅಭ್ಯರ್ಥಿ ರಾಜಶೇಖರ ಹಿಟ್ನಾಳ ಈಗಾಗಲೇ ಲೋಕಸಭೆ ವ್ಯಾಪ್ತಿಯ ಎಲ್ಲಾ ವಿಧಾನಸಭೆ ಕ್ಷೇತ್ರದಲ್ಲೂ ಸಭೆ ನಡೆಸಿ ಪಕ್ಷದ ಕಾರ್ಯಕರ್ತರನ್ನು ಹುರಿ ತುಂಬಿಸುವ ಕೆಲಸ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಮತ ಬ್ಯಾಂಕ್ ಇರುವ ಗಂಗಾವತಿ ಕ್ಷೇತ್ರದಲ್ಲಿ ಮಾತ್ರ ಇಕ್ಬಾಲ್ ಅನ್ಸಾರಿ ಮತ್ತು ಶ್ರೀನಾಥ ನಡುವಿನ ಮುನಿಸಿನಿಂದಾಗಿ ತೀವ್ರ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಎ.೩ ರಂದು ನಡೆದ ಸಭೆಯಲ್ಲಿ ಅನ್ಸಾರಿ ಅವರು ಶ್ರೀನಾಥ, ಮಲ್ಲಿಕಾರ್ಜುನ ನಾಗಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ನಡುವೆ ಮಾ.೮ ರಂದು ಶ್ರೀನಾಥ ಮನೆಯಲ್ಲಿ ಪ್ರತೇಕ ಕಾಂಗ್ರೆಸ್ ಸಭೆ ನಡೆಸಲು ನಿರ್ಧರಿಸಲಾಗಿದ್ದು, ಈ ಸಭೆಯ ವಿರುದ್ಧ ಖಾರವಾಗಿ ಪ್ರತಿಕ್ರೀಯೆ ನೀಡಿರುವ ಅನ್ಸಾರಿ ಸಭೆಗೆ ಹೋಗದಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಮೆಸೇಜ್ ರವಾನಿಸಿದ್ದಾರೆ. ಶ್ರೀನಾಥ ಮತ್ತು ಅನ್ಸಾರಿ ಮುನಿಸಿನಿಂದಾಗಿ ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಿರಾಶರಾಗಿದ್ದು, ಸ್ವತಃ ಅಭ್ಯರ್ಥಿ ಹಿಟ್ನಾಳ್ ಇಕ್ಕಟ್ಟಿನಲ್ಲಿ ಸಿಲುಕಿರುವುದು ಕಂಡು ಬರುತ್ತಿದೆ. ಚುನವಣೆಯಲ್ಲಿ ಹಿಟ್ನಾಳ್ ಗೆಲುವಿಗೆ ಇಬ್ಬರ ಮುನಿಸು ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಆತಂಕ ಕಾಂಗ್ರೆಸ್ ಕಾರ್ಯಕರ್ತರು ವ್ಯಕ್ತಪಡಿಸುತ್ತಿದ್ದಾರೆ.

ಬಾಕ್ಸ್:
ಶ್ರೀನಾಥ ಮನೆಯಲ್ಲಿ ಸಭೆ: ಮಾಹಿತಿ ಇಲ್ಲ
ಎ.೮ ರಂದು ಗಂಗಾವತಿಯ ಹೆಚ್.ಆರ್.ಶ್ರೀನಾಥ ಮನೆಯಲ್ಲಿ ಕಾಂಗ್ರೆಸ್ ಸಭೆ ನಡೆಸುತ್ತಿರುವುದು ನನಗೆ ಇದುವರೆಗೂ ಯಾವುದೇ ಮಾಹಿತಿ ಬಂದಿಲ್ಲ. ಪ್ರತ್ಯೇಕ ಸಭೆಗಳು ನಡೆಸಿ ಪಕ್ಷದಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಈ ಕುರಿತು ಹೈಕಮಾಂಡ್ ಗಮನಕ್ಕೆ ತರುತ್ತೇನೆ. ಸಭೆಗೆ ಹೋಗುವಂತೆ ಹೈಕಮಾಂಡ್ ಸೂಚಿದರೆ ಹೋಗುತ್ತೇನೆ. ಮತ್ತು ಅನ್ಸಾರಿ ಅವರ ಆಡಿಯೋ ಸಂದೇಶ ಕೂಡಾ ನನ್ನ ಗಮನಕ್ಕೆ ಬಂದಿಲ್ಲ. ಈ ಕುರಿತು ಪರಿಶೀಲಿಸುತ್ತೇನೆ.
ಅಮರೇಗೌಡ ಬಯ್ಯಾಪುರ, ಕಾಂಗ್ರೆಸ್ ಜಿಲ್ಲಾಧ್ಯಕ್ಷರು,

 

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!