ಗಂಗಾವತಿ.
ಎಂ.ಡಿ.ರಫೀಕ್ ಸಂಪಂಗಿ ಅಧ್ಯಕ್ಷತೆಯಲ್ಲಿ ನಗರದ ಈದಗಾ ಕಮಿಟಿಗೆ ನೂತನವಾಗಿ ಸರಕಾರದ ವಕ್ಫ್ ಬೋರ್ಡ್‌ನಿಂದ ನೇಮಕವಾಗಿದ್ದ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿ ಆದೇಶಕ್ಕೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿಗರ ಆಡಳಿತಕ್ಕೆ ಶಾಸಕ ಜನಾರ್ಧನರೆಡ್ಡಿ ಬೆಂಬಲಿಗರಿಂದ ಬ್ರೇಕ್ ಬಿದ್ದಿದೆ.
ಗಂಗಾವತಿಯ ಈದಗಾ ಕಮಿಟಿಗೆ ಅಧ್ಯಕ್ಷರಾಗಿದ್ದ ಖಾಸಿಂಸಾಬ್ ಗದ್ವಾಲ್ ಅವರು ಕಳೆದ ವರ್ಷ ರಾಜಿನಾಮೆ ಸಲ್ಲಿಸಿದ್ದರು. ಖಾಸಿಂಸಾಬ್ ಗದ್ವಾಲ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ರಾಜ್ಯ ಸರಕಾರದಲ್ಲಿ ಪ್ರಭಾವ ಬೀರಿ ತಮ್ಮ ಬೆಂಬಲಿಗರಾಗಿರುವ ಎಂ.ಡಿ.ರಫೀಕ್ ಸಂಪಂಗಿ ತಂದೆ ಬಾಬುಸಾಬ್ ಅವರಿಗೆ ಅಧ್ಯಕ್ಷರಾಗಿ ಮತ್ತು ಕಾರ್ಯದರ್ಶಿಯಾಗಿ ಸೈಯದ್ ಇಮ್ತಿಯಾಜ್ ಹುಸೇನ್ ತಂದೆ ಸೈಯದ್ ಜಿಲಾನಿ ಪಾಷಾ ಖಾದ್ರಿ, ಸದಸ್ಯರನ್ನಾಗಿ ಸೈಯದ್ ಇಲಿಯಾಜ್ ಖಾದ್ರಿ ತಂದೆ ಸೈಯದ್ ಮೆಹಬೂಬ್ ಖಾದ್ರಿ, ದಾದಾಫೀರ್ ತಂದೆ ಹುಸೇನ್ ಮಹೆಮದ್, ಜುಬೇರ್ ತಂದೆ ಕಲೀಲ್‌ಸಾಬ್ ಮತ್ತು ಹುಸೇನ್ ಮುಜಾವರ್ ತಂದೆ ಬುಡನ್‌ಸಾಬ್ ಅವರನ್ನು ಮಾ.೧೪ ರಂದು ಈದಗಾ ಕಮಿಟಿಗೆ ನೇಮಕ ಮಾಡಿದ್ದರು. ಈ ನೇಮಕಾತಿ ಆದೇಶದ ವಿರುದ್ಧ ಶಾಸಕ ಜನಾರ್ಧನರೆಡ್ಡಿ ಬೆಂಬಲಿಗ ಸೈಯದ್ ಅಲಿ ಅವರು ಧಾರವಾಡ ಹೈಕೋರ್ಟ್ ಮೊರೆ ಹೋಗಿ ನೂತನ ಈದಗಾ ಕಮಿಟಿಯಲ್ಲಿರುವ ಸದಸ್ಯರು ರೌಡಿ ಶಿಟರ್ ಪ್ರಕರಣದಲ್ಲಿದ್ದು, ಈದಗಾ ಕಮಿಟಿಗೆ ನೇಮಕವಾಗಲು ಅರ್ಹತೆ ಪಡೆದಿಲ್ಲ. ಹೀಗಾಗಿ ಸರಕಾರದ ವಕ್ಪ್ ಬೋರ್ಡ್‌ನ ನೇಮಕಾತಿ ಆದೇಶಕ್ಕೆ ತಡೆ ನೀಡುವಂತೆ ಮನವಿ ಮಾಡಿ ಎ.೮ರಂದು ತಡೆಯಾಜ್ಞೆ ತಂದಿದಾರೆ.
ನಾಳೆ ಮುಸ್ಲಿಂರ ಪವಿತ್ರ ಹಬ್ಬ ರಂಜಾನ್ ಆಚರಣೆ ಇದೆ. ಹಬ್ಬದ ಶುಭ ಸಮಯದಲ್ಲಿ ಬೆಳೆಗ್ಗೆ ನಗರದ ಮುಸ್ಲಿಂ ಸಮಾಜದವರು ಜಯನಗರ ರಸ್ತೆಯಲ್ಲಿರುವ ಈದಗಾ ಮೈದಾನದಲ್ಲಿ ಸಾಮುಹಿಕವಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಮುಸ್ಲಿಂರು ಪ್ರಾರ್ಥನೆ ಸಲ್ಲಿಸಿ ಹೊರ ಬರುವ ಸಮಯದಲ್ಲಿ ರಾಜಕಾರಣಿಗಳು, ವಿವಿಧ ಹಿಂದು ಸಮಾಜದ ಮುಖಂಡರು, ಅಧಿಕಾರಿಗಳು ಶುಭಾಷಯ ಕೊರುವುದು ವಾಡಿಕೆ. ಆದರೆ ಕಳೆದ ವರ್ಷ ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ ಕೆಆರ್‌ಪಿಪಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದ ಗಾಲಿ ಜನಾರ್ಧನರೆಡ್ಡಿ ಅವರು ಶುಭಾಷಯ ವಿನಿಮಯಕ್ಕೆ ಸಿಮೀತವಾಗದೇ ನೇರವಾಗಿ ತಮ್ಮ ಕೆಲವು ಮುಸ್ಲಿಂ ಬೆಂಬಲಿಗರೊಂದಿಗೆ ಈದಗಾ ಮೈದಾನಕ್ಕೆ ಆಗಮಿಸಿ ರಂಜಾನ್ ಸಾಮುಹಿಕ ಪ್ರಾರ್ಥನೆ ಸಲ್ಲಿಸಿ ಅನ್ಸಾರಿಯನ್ನು ವಿರೋಧಿಸುವ ಮುಸ್ಲಿಂ ಸಮುದಾಯದವರನ್ನು ತಮ್ಮತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಚುನಾವಣೆ ನಂತರವು ಶಾಸಕ ಜನಾರ್ಧನರೆಡ್ಡಿಯೊಂದಿಗೆ ಗುರುತಿಸಿಕೊಂಡಿರುವ ಕೆಲವು ಮುಸ್ಲಿಂ ಮುಖಂಡರು, ನಗರಸಭೆ ಸದಸ್ಯರು ಶಾಸಕ ಗಾಲಿ ಜನಾರ್ಧನರೆಡ್ಡಿಯೊಂದಿಗೆ ಇತ್ತೀಚಿಗೆ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಆದರೆ ಈ ವರ್ಷದ ರಂಜಾನ್ ಸಾಮುಹಿಕ ಪ್ರಾರ್ಥನೆಯಲ್ಲಿ ಶಾಸಕ ಗಾಲಿ ಜನಾರ್ಧನರೆಡ್ಡಿ ಭಾಗವಹಿಸುತ್ತಾರೋ ಇಲ್ಲವೋ ಎಂಬ ಚರ್ಚೆ ಜೋರಾಗಿದೆ. ಶಾಸಕರು ಮತ್ತು ಅವರ ಬೆಂಬಲಿಗರು ಸಾಮುಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಲು ಅನ್ಸಾರಿ ಬೆಂಬಲಿತ ನೂತನ ಈದಗಾ ಕಮಿಟಿ ಅಡ್ಡಿಯಾಗಬಹುದು ಎಂಬ ಮುಂದಾಲೋಚನೆಯಿಂದ ಅನ್ಸಾರಿ ಬೆಂಬಲದಿಂದ ನೇಮಕವಾಗಿರುವ ಈದಗಾ ಕಮಿಟಿಗೆ ಕೋರ್ಟ್ ಮೂಲಕ ಜನಾರ್ಧನರೆಡ್ಡಿ ಬೆಂಬಲಿಗರು ತಡೆಯಾಜ್ಞೆ ತಂದಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.