ಗಂಗಾವತಿ.
ಮೂಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ದೂರುದಾರರ ಅರ್ಜಿಯನ್ನು ಪುರಸ್ಕರಿ ಪ್ರಾಸಿಕ್ಯೂಷನ್‌ಗೆ ರಾಜ್ಯಾಪಾಲರು ನಿಯಮಾನುಸಾರ ಅನುಮತಿ ನೀಡಿದ್ದಾರೆ. ಇದನ್ನು ವಿರೋಧಿಸಿರುವ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿರುವುದು ಅತ್ಯಂತ ಖಂಡನೀಯವಾಗಿದೆ. ಹೋರಾಟದಲ್ಲಿ ಸಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರನ್ನು ಅತ್ಯಂತ ಕೀಳು ಮಟ್ಟದಿಂದ ನಿಂದನೆ ಮಾಡಿರುವ ಕಾಂಗ್ರೆಸ್ ಸರಕಾರದ ಸಚಿವರು, ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರು ಭಾರತ ಸಂವಿಧಾನದ ವಿರೋಧಿ ಕೃತ್ಯವೆಸಗಿದ್ದಾರೆ ಎಂದು ಬಿಜೆಪಿ ಮುಖಂಡ ಸಂಗಮೇಶ ಸುಗ್ರೀವಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿರುವ ಸಂಗಮೇಶ ಸುಗ್ರೀವಾರ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು. ರಾಜ್ಯದಲ್ಲಿ ೧೩೬ ಸ್ಥಾನಗಳೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಯಾವುದೇ ಭ್ರಷ್ಟಾಚಾರವಿಲ್ಲದೇ ಅಧಿಕಾರ ನಡೆಸಿರುವುದು ನಮಗೆಲ್ಲ ಗೊತ್ತಿರುವ ಸಂಗತಿ. ಆದರೆ ಈ ಅವಧಿಯಲ್ಲಿ ಅವರ ಮೇಲೆ ಮೂಡಾ ಹಗರಣ ಬಂದಿದೆ. ಮೈಸೂರು ಮಹಾನಗರ ಪಾಲಿಕೆಯಲ್ಲಿ ಕೋಟಿಗಟ್ಟಲೆ ಬೆಲೆ ಬಾಳುವ ಜಾಗದಲ್ಲಿ ಅವರ ಪತ್ನಿ ಹೆಸರಿನಲ್ಲಿ ಸೈಟ್ ಪಡೆದುಕೊಂಡಿದ್ದಾರೆ ಎಂಬ ವಿಚಾರ ಈಗ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಮೂಡಾದಲ್ಲಿ ಭ್ರಷ್ಟಾಚಾರ ನಡೆಸಿರುವುದು ದಾಖಲೆಗಳಿಂದ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿ ಮುಖ್ಯಮಂತ್ರಿ ರಾಜೀನಾಮೆ ಕೊಡುವಂತೆ ನಮ್ಮ ಪಕ್ಷ ಅಗ್ರಹಿಸಿದೆ. ಜೊತೆಗೆ ಮೂಡಾ ಹಗರಣದ ತನಿಖೆ ನಡೆಸಲು ಮೂರು ಜನ ದೂರುದಾರರು ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಅವರ ಮನವಿಯಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇದನ್ನು ಅತ್ಯಂತ ತಾಳ್ಮೆಯಿಂದ ಒಪ್ಪಿಕೊಂಡು ಮುಖ್ಯಮಂತ್ರಿಗಳು ನೈತಿಕೆ ಹೊಣೆ ಹೊತ್ತು ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು. ತನಿಖೆ ನಂತರ ತಪ್ಪು ಮಾಡಿಲ್ಲ ಎಂಬ ವರದಿ ಬಂದಿರೆ ಪುನಃ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವ ಅವಕಾಶ ಇರುತ್ತದೆ. ಆದರೆ ಇದನ್ನು ಮಾಡದ ಸಿದ್ಧರಾಮಯ್ಯ ಅವರು ರಾಜ್ಯಪಾಲರ ವಿರುದ್ಧ ಹೋರಾಟ ನಡೆಸುವಂತೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಕಳೆದ ದಿನ ಕಾಂಗ್ರೆಸ್ ಮುಖಂಡರು ರಾಜ್ಯಪಾಲರ ವಿರುದ್ಧವೆ ಪ್ರತಿಭಟನೆ ನಡೆಸಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲೂ ಸಚಿವರು, ಶಾಸಕರು, ಮುಖಂಡರು ಹೋರಾಟ ನಡೆಸಿದ್ದಾರೆ. ಆದರೆ ಹೋರಾಟದಲ್ಲಿ ರಾಜ್ಯಪಾಲರ ವಿರುದ್ಧ ಅಪಾದನೆ ಮಾಡಿ ಬಾಂಗ್ಲಾ ದೇಶದ ಪ್ರಧಾನಿಗೆ ಬಂದಂತಹ ಪರಿಸ್ಥಿತಿ ಬರುತ್ತದೆ. ಬಿಜೆಪಿ ಎಜೆಂಟ್, ಅಹಿಂದ ವಿರೋಧಿ ಮತ್ತಿತರ ಹೇಳಿಕೆಗಳನ್ನು ನೀಡಿದ್ದಾರೆ. ರಾಜ್ಯಪಾಲರು ಭಾರತ ಸಂವಿಧಾನದ ಪ್ರಕಾರ ಅಧಿಕಾರ ಚಲಾಯಿಸುತ್ತಿದ್ದಾರೆ. ಸಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್ ಪಕ್ಷದ ಮುಖಂಡರ ಸಣ್ಣತನ ಪ್ರದರ್ಶನವಾಗಿದೆ ಎಂದು ಸುಗ್ರೀವಾ ಆಕ್ರೋಶ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ಅವರು ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೋರಾಟ ನಡೆಸಿರುವ ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು ಕನ್ನಡ ನಾಡಿನ ಜನರ ಹೋರಾಟ ಎಂದು ಬಿಂಬಿಸುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಲವೇ ಕಾರ್ಯಕರ್ತರು, ಮುಖಂಡರು ಹೋರಾಟ ನಡೆಸಿದ್ದಾರೆಯೇ ಹೊರತು ರಾಜ್ಯದ ಯಾವುದೇ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಲ್ಲ. ಇದನ್ನು ಒಪ್ಪಿಕೊಂಡು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಕ್ಷಣ ರಾಜೀನಾಮೆ ನೀಡಬೇಕು. ಕಳೆದ ಒಂದುವರೆ ವರ್ಷದಿಂದ ಗ್ಯಾರಂಟಿಗೆ ಸಿಮೀತವಾಗಿರುವ ರಾಜ್ಯ ಸರಕಾರ ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲು ಮುಂದಾಗಿಲ್ಲ. ಗ್ಯಾರಂಟಿಗೆ ಹಣ ಹೊಂದಿಸುವುದಕ್ಕಾಗಿ ಬೆಂಗಳೂರು ನಗರ ಪಾಲಿಕೆಯ ಮೂಲಕ ರೂ.೪೦೦೦ ಕೋಟಿ ಸಾಲ ಪಡೆಯಲು ಮುಂದಾಗಿದೆ. ಗ್ಯಾರಂಟಿಯಿಂದಾಗಿ ರಾಜ್ಯದಲ್ಲಿ ದುಸ್ಥಿತಿ ಎದುರಾಗಿದೆ. ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿದೆ. ಇದೇ ಪರಿಸ್ಥಿತಿ ಮುಂದಾದರೆ ರಾಷ್ಟ್ರಪತಿ ಆಡಳಿತ ಬಂದರೂ ಬರಬಹುದು. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ತಕ್ಷಣ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ರಾಜೀನಾಮೆ ಪಡೆದುಕೊಂಡು ಪಕ್ಷದ ಮಾನ ಮರ್ಯಾದೆ ಉಳಿಸುವ ಕೆಲಸ ಮಾಡಬೇಕು ಎಂದು ಅಗ್ರಹಿಸಿದರು.
ಬಾಕ್ಸ್:
ಜಿಲ್ಲೆಯಲ್ಲೂ ಅಭಿವೃದ್ಧಿ ಕುಂಟಿತ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕೊಪ್ಪಳ ಜಿಲ್ಲೆಯಲ್ಲೂ ಕೂಡಾ ಅಭಿವೃದ್ಧಿ ಸಂಪೂರ್ಣ ಕುಂಟಿತವಾಗಿದೆ. ಕೊಪ್ಪಳ ನಗರದಲ್ಲಿ ಜಿಲ್ಲಾ ನ್ಯಾಯಾಲಯ ನಿರ್ಮಾಣದ ಅನುದಾನದ ಹಣವನ್ನು ವಾಪಸ್ ಪಡೆದುಕೊಂಡಿದೆ. ಗಂಗಾವತಿ ನಗರಸಭೆಯ ನಗರೋತ್ಥಾನ ಯೋಜನೆಯ ರೂ.೪೦ ಕೋಟಿ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಸಚಿವರಾಗಿ ಜಿಲ್ಲೆಯ ಅಭಿವೃದ್ಧಿಗೆ ಚಿಂತನೆ ನಡೆಸದೇ ಕೇವಲ ತಮ್ಮ ಪಕ್ಷದ ಪ್ರತಿಭಟನೆಯಲ್ಲಿ ಭಾಗವಹಿಸಲು ಸಿಮೀತರಾಗಿದ್ದಾರೆ. ಬೆಂಗಳೂರಿನಿಂದ ಕಾರಟಗಿಗೆ ಬರುವ ಅವರು ಕೊಪ್ಪಳ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಜಿಲ್ಲೆಯ ಇನ್ನಿತರ ಕ್ಷೇತ್ರಗಳಿಗೆ ಭೇಟಿ ನೀಡದೇ ಕಾಲಹರಣ ಮಾಡುತ್ತಿದ್ದಾರೆ. ರಾಜ್ಯ ಸರಕಾರದಲ್ಲಿ ಬೊಕ್ಕಸ ಖಾಲಿ ಮಾಡಿರುವುದರಿಂದ ಸಚಿವ ತಂಗಡಗಿ ಅವರು ಅಭಿವೃದ್ಧಿ ಮಾಡದೇ ಕೈಚೆಲ್ಲಿ ಕುಳಿತಿದ್ದಾರೆ. ಸರಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ವೈಫಲ್ಯವನ್ನು ಖಂಡಿಸಿ ಜಿಲ್ಲೆಯಲ್ಲಿ ಬಿಜೆಪಿ ಶೀಘ್ರ ಹೋರಾಟ ನಡೆಸಲಿದೆ.
ಸಂಗಮೇಶ ಸುಗ್ರೀವಾ, ಬಿಜೆಪಿ ಮುಖಂಡರು, ಗಂಗಾವತಿ.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!