ಗಂಗಾವತಿ.
ನಗರದ ಜುಲೈನಗರದಿಂದ ರಾಣಾಪ್ರತಾಪ್ ವೃತ್ತದವರೆಗೆ ರಸ್ತೆ ಮಧ್ಯೆ ಹಾಕಿರುವ ವಿದ್ಯತ್ ಕಂಬಳ ತೆರವು ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ವಿಷಯವಾಗಿ ರಾಜ್ಯ ಬಿಜೆಪಿ ಗಂಭೀರವಾಗಿ ಪರಿಗಣಿಸಿ ತಹಶೀಲ್ದಾರರು ಅಧಿಕಾರ ದುರುಪಯೋಪಡಿಸಿಕೊಂಡು ಆದೇಶ ಮಾಡಿ ಗಂಗಾವತಿಯಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದು, ತಕ್ಷಣ ಅವರನ್ನು ಅಮಾನತು ಮಾಡಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ ಸರಕಾರದ ಮುಖ್ಯ ಕಾರ್ದರ್ಶಿಗೆ ದೂರು ನೀಡಿದ್ದಾರೆ.
ಚಲುವಾದಿ ನಾರಾಯಣಸ್ವಾಮಿ ಮುಖ್ಯ ಕಾರ್ಯದರ್ಶಿಗೆ ನರೆದಿರುವ ಪತ್ರ ಸಮರ್ಥವಾಣಿಗೆ ಲಭ್ಯವಾಗಿದೆ. ಐತಿಹಾಸಿಕ ಅಂಜನಾದ್ರಿಗೆ ಸಂಪರ್ಕ ಕಲ್ಪಿಸುವ ಗಂಗಾವತಿ ನಗರದ ರಸ್ತೆಯಲ್ಲಿ ಹನುಮನ ಗದೆ. ರಾಮನ ಧನಸ್ಸು, ಗೋವಿಂದ ನಾಮ ಹೋಲುವ ದೀಪದ ಕಂಬಗಳ ತೆರವಿಗೆ ಆದೇಶ ಹೊರಡಿಸಿದ್ದು, ಈ ಆದೇಶ ಹೊರಡಿಸುವ ಸಂದರ್ಭದಲ್ಲಿ ಯಾವುದೇ ರೀತಿಯ ಪರಿಶೀಲನೆ ನಡೆಸದೆ ಮತ್ತು ಸದರಿ ಆದೇಶವನ್ನು ಹೊರಡಿಸುವ ಅಧಿಕಾರ ವ್ಯಾಪ್ತಿಯು ತನಗೆ ಇದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಯಾವುದೇ ರೀತಿಯ ಗಮನ ಹರಿಸದೇ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ಕೆಆರ್‌ಐಡಿಎಲ್ ರವರು ಅಳವಡಿಸಿದ ಕಂಬಗಳನ್ನು ತೆರವುಗೊಳಿ ಕೆಅರ್ ಡಿಎಲ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಆರಕ್ಷಕ ನಿರೀಕ್ಷಕರು. ನಗರ ಪೊಲೀಸ್ ಠಾಣೆ. ಗಂಗಾವತಿ ಪತ್ರ ಬರೆದಿರುವುದಾಗಿದೆ.
ಈ ವಿಷಯ ರಾಜ್ಯಾದ್ಯಂತ ಪಸರಿಸಿ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪುನಃ ಪತ್ರ ಬರೆದಿರುವ ಗಂಗಾವತಿ ತಹಶೀಲ್ದಾರ್ ರವರು ಸದರಿ ಕಂಬಗಳ ವ್ಯಾಪ್ತಿಯು ಮುನ್ಸಿಪಲ್ ಕೌನ್ಸಿಲ್ ವ್ಯಾಪ್ತಿಗೆ ಬರುವುದರಿಂದ ಮತ್ತು ಸದರಿ ವಿಷಯವು ಮುನ್ಸಿಪಲ್ ಕೌನ್ಸಿಲ್ ಸಭೆಯಲ್ಲಿ ನಿರ್ಧಾರವಾಗಿರುವುದರಿಂದ ಈ ಹಿಂದೆ ಬರೆದಿರುವ ಪತ್ರವು ಹಿಂಪಡೆಯುವುದಾಗಿ ತಿಳಿಸಿರುತ್ತಾರೆ.
ಈ ಅಂಶಗಳನ್ನು ಗಮನಿಸಿದಾಗಿ ತಹಶೀಲ್ದಾರ್ ಗಂಗಾವತಿ ಯವರಿಗೆ ತಮ್ಮ ಅಧಿಕಾರ ವ್ಯಾಪ್ತಿ ಹಾಗೂ ಯಾವ ರೀತಿಯ ಆದೇಶವನ್ನು ಹೊರಡಿಸಬಹುದು ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ನಿಷ್ಕರ್ಷೆ ಮತ್ತು ನಿಲುವುಗಳು ಇಲ್ಲದಿರುವುದು ಕಾನೂನುನಾಬಾಹಿರವಾಗಿದೆ. ತಮ್ಮ ವ್ಯಾಪ್ತಿಗೆ ಬರದೇ ಇರುವ ವಿಷಯಗಳ ಕುರಿತು ಆದೇಶ ಹೊರಡಿಸಿರುವುದು ಖಂಡನೀಯ. ಇಂತಹ ಆದೇಶಗಳಿಂದ ರಾಜ್ಯಾದ್ಯಂತ ಅನಗತ್ಯ ಬಿಗುವಿನ ವಾತಾವರಣ ಉಂಟಾಗಿದ್ದು, ಕಾನೂನು ಸುವ್ಯವಸ್ಥೆಗೂ ಧಕ್ಕೆ ಉಂಟಾಗಿರುವುದಾಗಿದೆ. ಸದರಿ ತಹಶೀಲ್ದಾರ್ ರವರು ಯಾರ ಒತ್ತಡದ ಮೇಲೆ ಮತ್ತು ಯಾರ ಆದೇಶದ ಮೇರೆಗೆ ಸದರಿ ಕಂಬಗಳನ್ನು ತೆರೆವುಗೊಳಿಸಲು ಆದೇಶ ಹೊರಡಿಸಿದ್ದಾರೆಂಬುದರ ಬಗ್ಗೆ ಸಮಗ್ರ ವಿಚಾರಣೆ ನಡೆಸಬೇಕಾಗಿದ್ದು, ಮತ್ತು ತನ್ನ ಕರ್ತವ್ಯ ಹಾಗೂ ಬದ್ಧತೆಗಳ ಬಗ್ಗೆ ಯಾವುದೇ ನಿಲುವು ಇಲ್ಲದಿರುವ ಗಂಗಾವತಿ ತಹಶೀಲ್ದಾರ ನಾಗರಾಜ್ ಇವರ ಮೇಲೆ ಈ ಕೂಡಲೇ ಶಿಸ್ತುಕ್ರಮ ಕೈಗೊಂಡು ಸಮಗ್ರ ವಿಚಾರಣೆ ನಡೆಸಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಕೊರಿದ್ದಾರೆ.