ಗಂಗಾವತಿ.
ನ್ಯಾಯಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವಿವಾಹ ವಿಚ್ಚೇದನ ಬಯಸಿ ಅರ್ಜಿ ಸಲ್ಲಿಸಿದ್ದ ಎಂಟು ದಂಪತಿಗಳ ಮನಸ್ಸು ಬದಲಾಯಿಸಿ ಪುನಃ ಒಂದುಗೂಡಿಸಿದ ಗಂಗಾವತಿ ನ್ಯಾಯಾಧೀಶರು ೧೦೪೨ ವಿವಿಧ ಪ್ರಕರಣಗಳನ್ನು ಇತ್ಯರ್ಥಪಡಿಸಿ ರೂ.7 ಕೋಟಿಗೂ ಅಧಿಕ ಮೊತ್ತವನ್ನು ಸರಕಾರಕ್ಕೆ ಜಮಾ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್, ಹಿರಿಯ ಸಿವಿಲ್ ಮತ್ತು ಪ್ರಭಾರಿ ಪ್ರಧಾನ ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್ ನೇತೃತ್ವದಲ್ಲಿ ಶನಿವಾರ ನಗರದ ನ್ಯಾಯಾಲಯ ಆವರಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿತ್ತು. ಅಪಘಾತ ವಿಮೆ, ನೀರಿನ ಕರ, ಬ್ಯಾಂಕ್ ಸಾಲ ವಸೂಲಿ, ಕೌಟಂಬಿಕ ದೌರ್ಜನ್ಯ, ಜೀವನಾಂಶ, ಚೆಕ್ ಬೌನ್ಸ್, ಜನನ ಮರಣ ಮತ್ತು ಹಲವು ಕ್ರಿಮಿನಲ್ ಕೆಸ್‌ಗಳು ಸೇರಿ ಒಟ್ಟು 9079 ಪ್ರಕರಣಗಳಲ್ಲಿ 1494 ಪ್ರಕರಣಗಳನ್ನು ರಾಜಿ ಸಂದಾನಕ್ಕೆ ಅಹ್ವಾನಿಸಲಾಗಿತ್ತು. ಅದರಲ್ಲಿ 1042 ಪ್ರಕರಣಗಳನ್ನು ನ್ಯಾಯಾಧೀಶರು ಇತ್ಯರ್ಥಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶೇಷವಾಗಿ ದಂಪತಿಗಳಲ್ಲಿ ಮುನಿಸು ಉಂಟಾಗಿ ವಿವಾಹ ವಿಚ್ಚೇದನ ನೀಡುವಂತೆ ಕೊರಿ ಅರ್ಜಿ ಸಲ್ಲಿಸಿದ ಪ್ರಕರಣಗಳಲ್ಲಿ ಎಂಟು ದಂಪತಿಗಳನ್ನು ಒಂದುಗೂಡಿಸುವ ಮೂಲಕ ಗಂಗಾವತಿ ನ್ಯಾಯಾಧೀಶರು ಇತಿಹಾಸ ಸೃಷ್ಟಿಸಿದ್ದಾರೆ. ನ್ಯಾಯಾಧೀಶರು ಮತ್ತು ವಕೀಲರ ಸಮ್ಮುಖದಲ್ಲಿ ದಂಪತಿಗಳು ತಮ್ಮ ವೈಮನಸ್ಸನ್ನು ಬಿಟ್ಟು ಒಂದಾಗಿ ಪುನಃ ದಾಂಪತ್ಯ ಜೀವನ ನಡೆಸುವುದಾಗಿ ಮತ್ತು ಸಂತೊಷದಿಂದ ಕೂಡಿ ಬಾಳುವ ಕುರಿತು ಒಪ್ಪಿಕೊಂಡರು. ಚಳ್ಳೂರಕ್ಯಾಂಪಿನ ಆನಂದಬಾಬು ಮತ್ತು ಸತ್ಯವತಿ ದಂಪತಿಗಳು, ಕಾಟಾಪುರದ ಕನಕಗೌಡ ಕುಷ್ಟಗಿಯ ಪಾರ್ವತಮ್ಮ ದಂಪತಿಗಳು, ನವಲಿಯ ವಿರೇಶ ಮತ್ತು ಸಿರಗುಪ್ಪಿಯ ಸಂಗೀತಾ ದಂಪತಿ, ಯತ್ನಟ್ಟಿಯ ಪಾರ್ವತಿ ಮತ್ತು ಸಂಗನಾಳ ಪುರದ ಕನಕರಾಯ ದಂಪತಿ, ಗೋಡಿನಾಳದ ಮಂಜುಳಾ ಮತ್ತು ಹಿರೇಖೇಡಾದ ಮೌನೇಶ ದಂಪತಿಗಳು, ತೊಂಡಿಹಾಳ ಗ್ರಾಮದ ದುರ್ಗಾ ಮತ್ತು ಹಗೇದಾಳದ ಪರಶುರಾಮ ದಂಪತಿಗಳು, ನವಲಿ ತಾಂಡಾದ ಬುಜ್ಜೀ ಬಾಯಿ ಮತ್ತು ದಾನಪ್ಪ ದಂಪತಿ ಮತ್ತು ಅಂಬಿಕಾ ಚೇತನಕುಮಾರ ದಂಪತಿಗಳು ವಿಚ್ಚೇದನ ಅರ್ಜಿ ಹಿಂದಕ್ಕೆ ಪಡೆದು ಒಂದಾಗಿ ಜೀವನ ನಡೆಸಲು ಮುಂದಾದರು. ಎಂಟು ಜೋಡಿ ದಂಪತಿಗಳು ಹಾರ ಬದಲಾಯಿಸಿ ದಾಂಪತ್ಯ ಜೀವನದ ಮುನಿಸು ಮರೆತಿರುವ ದೃಶ್ಯ ವಿಶೇಷವಾಗಿತ್ತು. ಮತ್ತು ಒಂದಾದ ದಂಪತಿಗಳು ನ್ಯಾಯಾಧೀಶರಿಗೆ ಕೃತಜ್ಞತೆ ಸಲ್ಲಿಸಿರುವ ಘಟನೆ ಲೋಕ ಅದಾಲತ್‌ನ ವಿಶೇಷ ಗಮನ ಸೇಳೆಯಿತು.
ವಿವಾಹ ವಿಚ್ಚೇದನ ಪ್ರಕರಣ ಸೇರಿದಂತೆ ಜಿಲ್ಲಾ ಶತ್ರ ನ್ಯಾಯಾಲಯದಲ್ಲಿ 26 ಪ್ರಕರಣಗಳು, ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 51 ಮೋಟರ್ ವಾಹನ, ೮ ವೈವಾಹಿಕ, 34 ಬ್ಯಾಂಕ್ ಪ್ರಕರಗಳು ಇತ್ಯರ್ಥಗೊಂಡಿವೆ. ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ 14 ಚೆಕ್ ಬೌನ್ಸ್, 1 ಕೌಟಿಂಬಿಕ ದೌರ್ಜನ್ಯ, 14 ಜನನ ಮರಣ, 332 ಕ್ರಿಮಿನಲ್ ಮತ್ತು ಇತರೆ 5 ಪ್ರಕರಣಗಳು ಇತ್ಯರ್ಥಗೊಂಡಿವೆ. ಅದೇ ರೀತಿ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ 7 ಚೆಕ್ ಬೌನ್ಸ್, ೯೯ ಜನನ ಮರಣ, 222 ಕ್ರಿಮಿನಲ್ ಮತ್ತು 13 ಇತರೆ ಪ್ರಕರಗಳು ಸೇರಿ ಒಟ್ಟು ನಾಲ್ಕು ನ್ಯಾಯಾಲಯದಲ್ಲಿ 1042 ಪ್ರಕರಗಳನ್ನು ಇತ್ಯರ್ಥಪಡಿಸುವಲ್ಲಿ ಯಶಸ್ವಿಯಾಗಿರುವ ನ್ಯಾಯಾಧೀಶರು ಒಟ್ಟು ರೂ. 7,00,93,608.00 ಮೊತ್ತವನ್ನು ಸರಕಾರಕ್ಕೆ ಜಮಾ ಮಾಡಿರುವುದಾಗಿ ನ್ಯಾಯಾಲಯದಿಂದ ಅಧಿಕೃತ ಮಾಹಿತಿ ನೀಡಲಾಗಿದೆ.
ಲೋಕ ಅದಾಲತ್‌ನಲ್ಲಿ ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ ಸೇರಿದಂತೆ ಹಿರಿಯ, ಯುವ ಮತ್ತು ಮಹಿಳಾ ವಕೀಲರು ಇದ್ದರು.