ಕೊಪ್ಪಳ.
ಕನಕಗಿರಿ, ಗಂಗಾವತಿ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ಶುಚಿತ್ವ, ಮಕ್ಕಳು ಮತ್ತು ಮಹಿಳೆಯರಿಗೆ ವಿತರಣೆ ಮಾಡುವ ಪೌಷ್ಟಿಕ ಆಹಾರ ಕಾಳಸಂತೆಗೆ ಮಾರಾಟ ಸೇರಿದಂತೆ ಇನ್ನಿತರ ಇಲಾಖೆಯ ನಿಯಮಗಳಂತೆ ನಿರ್ವಹಣೆ ಮಾಡುವಲ್ಲಿ ಲೋಪವೆಸಿಗಿದ್ದಾರೆ ಎಂಬ ಆರೋಪದಡಿ ಮತ್ತು ಅಂಗನವಾಡಿ ಕೇಂದ್ರಗಳಿಗೆ ಖುದ್ಧು ನ್ಯಾಯಾಧೀಶರು ಭೇಟಿ ನೀಡಿ ವರದಿ ನೀಡಿರುವ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೊಪ್ಪಳ ಜಿಲ್ಲೆಯ ಉಪ ನಿರ್ದೇಶಕ ತಿಪ್ಪಣ್ಣ ಸಿರಸಂಗಿ ಅವರನ್ನು ಅಮಾನತ್ತು ಮಾಡಲಾಗಿದೆ.
ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಅಧೀನ ಕಾರ್ಯದರ್ಶಿ ರಶ್ಮಿ ಎಂ.ಎಸ್ ಅವರು ಅ.3 ರಂದು ಅಮಾನತು ಮಾಡಿ ಆದೇಶ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಕನಕಗಿರಿ ಯೋಜನೆಯ ಸಿದ್ದಾಪುರ ವಲಯದ ಗುಂಡೂರು ೨ನೇ ಅಂಗನವಾಡಿ ಕೇಂದ್ರದಲ್ಲಿ ಫಲಾನುಭವಿಗಳಿಗೆ ಮೊಟ್ಟೆಗಳನ್ನು ವಿತರಿಸಿ ನಂತರ ಅವರು ಸೇವಿಸುವ ಸಮಯದಲ್ಲಿ ಕೇಂದ್ರದ ಕಾರ್ಯಕರ್ತೆ ವಾಪಸ್ಸು ಪಡೆದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ “ಮೊಟ್ಟೆ ಮಾಯ” ಎಂಬ ಸುದ್ದಿ ಪ್ರಸಾರವಾಗಿರುವುದು, ಮತ್ತು ಗಂಗಾವತಿ ನಗರದ ಮೆಹಬೂಬ್‌ನಗರದಲ್ಲಿ ಇತ್ತೀಚಿಗೆ “ಅಂಗನವಾಡಿ ಕೇಂದ್ರದ ಛಾವಣಿ ಕುಸಿದು ೪ ಮಕ್ಕಳಿಗೆ ಗಾಯ” ವಾಗಿ ಮಕ್ಕಳು ಆಸ್ಪತ್ರೆಗೆ ದಾಖಲಾಗಿರುವುದು ಮತ್ತು “ಹೋಟೆಲ್ ನಲ್ಲಿ ಅಂಗನವಾಡಿ ಮಸಾಲೆ ಪದಾರ್ಥ ಪ್ರತ್ಯಕ್ಷ” ಅಂಗನವಾಡಿ ಆಹಾರ ಕಾಳಸಂತೆಯಲ್ಲಿ ಮಾರಾಟ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಈ ವರದಿಯನ್ನು ಗಮನಿಸಿದ್ದ ಗಂಗಾವತಿಯ ನ್ಯಾಯಾಧೀಶರು ಖುದ್ದು ಗುಂಡೂರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮತ್ತು ಗಂಗಾವತಿ ಕೇಂದ್ರದ ಮೇಲ್ಚಾವಣಿ ಕುಸಿತವನ್ನು ಪರಿಶೀಲಿಸಿ ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳ ಆರೋಗ್ಯ ವಿಚಾರಿಸಿದ್ದರಲ್ಲದೇ ಅಂಗನವಾಡಿ ಕೇಂದ್ರಗಳ ನಿರ್ವಹಣೆಯಲ್ಲಿ ಲೋಪವಾಗಿರುವುದಕ್ಕೆ ಮಾಧ್ಯಮಗಳ ಮುಂದೆ ಬೇಸರ ವ್ಯಕ್ತಪಡಿಸಿದ್ದರು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿನ ಕಾರ್ಯದರ್ಶಿ ರಶ್ಮೀ ಅವರು ಕೊಪ್ಪಳ ಜಿಲ್ಲೆಯಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಶುಚಿತ್ವ, ಮೂಲಭೂತ ಸೌಕರ್ಯಗಳಾದ ನೀರು ಮತ್ತು ಶೌಚಾಲಯಗಳನ್ನು ಒದಗಿಸುವಲ್ಲಿ ವಿಫಲರಾಗಿರುವುದು, ಅಂಗನವಾಡಿ ಕೇಂದ್ರದ ಮಕ್ಕಳಿಗಾಗಿ ಒದಗಿಸಲಾಗಿರುವ ಪ್ರೀಸ್ಕೂಲ್ ಕಿಟ್‌ಗಳನ್ನು ಬಳಸದೆ ಯಥಾಸ್ಥಿತಿಯಲ್ಲಿಟ್ಟಿರುವುದು, ಮೇಲ್ವಿಚಾರಣೆ ಮಾಡದೇ ಇರುವುದು, ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಒದಗಿಸಲಾಗುತ್ತಿರುವ ಪೂರಕ ಪೌಷ್ಟಿಕ ಆಹಾರದ ತಯಾರಿಕೆ ಹಾಗೂ ಸಂಗ್ರಹಣೆ ಕುರಿತು ತಿಳುವಳಿಕೆಯನ್ನು ಕ್ಷೇತ್ರ ಸಿಬ್ಬಂದಿಯವರಿಗೆ ಒದಗಿಸದೇ ಇರುವುದು, ಅಂಗನವಾಡಿ ಕೇಂದ್ರಗಳಲ್ಲಿ ಫಲಾನುಭವಿಗಳ ಹಾಜರಾತಿ ವಹಿಯನ್ನು ಸರಿಯಾಗಿ ನಿರ್ವಹಿಸದೇ ಇರುವುದು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ವೇಳಾಪಟ್ಟಿಯನ್ನು ಪಾಲಿಸುವಲ್ಲಿ ವಿಫಲರಾಗಿರುವುದರ ಕುರಿತು ಸೆಷನ್ಸ್ ನ್ಯಾಯಧೀಶರು ಮಾಧ್ಯಮಗಳಿಗೆ ಹೇಳಿಕೆ ನೀಡಿ ಇಲಾಖೆ ಮೇಲಾಧಿಕಾರಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿರುವ ವರದಿಯನ್ನು ಗಂಭೀರವಾಗಿ ಪರಿಗಣಿಸಿ ಸದರಿ ಪುಕರಣಕ್ಕೆ ಸಂಬಂಧಿಸಿದಂತೆ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಪದೇ ಪದೇ ತೀವ್ರತರವಾದ ಕರ್ತವ್ಯಲೋಪ ಎಸಗಿದ್ದು, ಇವರ ಬೇಜವಾಬ್ದಾರಿಯುತ ವರ್ತನೆಯಿಂದ ತಮ್ಮ ಅಧೀನ ವ್ಯಾಪ್ತಿಯಲ್ಲಿನ ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಣೆ ಮಾಡದ ಕಾರಣ ಅರ್ಹ ಫಲಾನುಭವಿಗಳು ಪೂರಕ ಪೌಷ್ಠಿಕ ಆಹಾರ ಸಾಮಗ್ರಿಯಿಂದ ವಂಚಿತರಾಗಲು ಕಾರಣರಾಗಿರುತ್ತಾರೆ ಮತ್ತು ಇಲಾಖೆಗಳ ಮೇಲ್ವಿಚಾರಣೆಯಲ್ಲೂ ವಿಫಲವಾಗಿದ್ದರಿಂದ ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ, ಸೇವೆಯಿಂದ ಅಮಾನತ್ತುಗೊಳಿಸಿರುವುದಾಗಿ ಇಲಾಖೆ ಅಧಿನ ಕಾರ್ಯದರ್ಶಿಗಳು ಆದೇಶ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆಯ ಪ್ರತಿಯೊಂದು ಅಂಗನವಾಡಿ ಕೇಂದ್ರಗಳಲ್ಲಿ ಸರಕಾರದಿಂದ ಒದಗಿಸುವ ಸೌಲಭ್ಯಗಳನ್ನು ಮಕ್ಕಳು ಮತ್ತು ಫಲಾನುಭವಿಗಳಿಗೆ ಹಂಚಿಕೆ ಮಾಡುವಲ್ಲಿ ಇಲಾಖೆಯ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷವಹಿಸಿದ್ದಾರೆ ಎಂಬ ಅಂಶ ಉಪ ನಿರ್ದೇಶಕರ ಅಮಾನತ್ತು ಆದೇಶದಿಂದ ತಿಳಿದು ಬಂದಿದೆ. ವಿಶೇಷವಾಗಿ ಅಂಗನವಾಡಿ ಕೇಂದ್ರಗಳಲ್ಲಿ ಆಗುತ್ತಿರುವ ಲೋಪಗಳ ಮಾಧ್ಯಮ ವರದಿಯನ್ನು ಗಮನಿಸುವ ನ್ಯಾಯಾಧೀಶರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿರುವುದು ಇಲಾಖೆ ಮೇಲಾಧಿಕಾರಿಗಳನ್ನು ಎಚ್ಚರಿಸಿದೆ. ನ್ಯಾಯಾಧೀಶರ ಇಂತಹ ಕ್ರಮವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.