ಕೊಪ್ಪಳ.
ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೌರ್ಜನ್ಯಕ್ಕೆ ಕಾರಣರಾಗಿದ್ದ 98 ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು 3 ಜನರಿಗೆ ಐದು ವರ್ಷ ಕಾರಾಗೃಹ ವಾಸದ ಶಿಕ್ಷೆ ನೀಡಿ ಕೊಪ್ಪಳ ಜಿಲ್ಲಾ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ.
ಜಾತಿ ನಿಂದನೆ ಮತ್ತು ದೌರ್ಜನ್ಯ ಪ್ರಕರಣದಲ್ಲಿ  98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ. 5000 ರೂ. ದಂಡ ವಿಧಿಸಿ ಕೊಪ್ಪಳ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಆದೇಶಿಸಿದೆ. ಪ್ರಕರಣ ಉಳಿದ 3 ಅಪರಾಧಿಗಳಿಗೆ 5 ವರ್ಷ ಜೈಲು ಹಾಗೂ ತಲಾ ರೂ. 2000 ದಂಡ ಹಾಕಿ ಕೊಪ್ಪಳ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ. 2014ರ ಆಗಷ್ಟ ತಿಂಗಳಲ್ಲಿ ಪ್ರಕರಣ ನಡೆದಿದ್ದು, ಪ್ರಕರಣದಲ್ಲಿ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಒಟ್ಟು ೧೧೭ ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಕಳೆದ ೨೦೧೪ರ ಆ.೨೮ ರಂದು ಘಟನೆ ನಡೆದಿತ್ತು.  10 ವರ್ಷಗಳ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಅ.21 ರಂದು ಆರೋಪ ಪಟ್ಟಿಯಲ್ಲಿನ ಎಲ್ಲ ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಮಾನ ಕಾಯ್ದಿರಿಸಿ ಗುರುವಾರ ಅ.24 ರಂದು ಸಂಜೆ ನ್ಯಾಯಾಧೀಶರು ಆದೇಶ ಪ್ರಕಟಿಸಿದರು.
ಕೊಪ್ಪಳದ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಕಳೆದ 2014ರ ಆ.28 ರಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ಆದೇಶ ನೀಡಿದೆ. ಕ್ಷೌರದ ಅಂಗಡಿ ಮತ್ತು ಹೋಟೆಲ್‌ಗೆ ಪ್ರವೇಶಕ್ಕೆ ಸಂಬಂಧಿಸಿದಂತೆ, ದಲಿತರು ಮತ್ತು ಗ್ರಾಮದ ಸವರ್ಣೀಯರ ನಡುವೆ ಗಲಭೆ ನಡೆದಿತ್ತು. ಮತ್ತು
ಗಂಗಾವತಿಯ ಚಿತ್ರಮಂದಿರದಲ್ಲಿ ಗ್ರಾಮದ ಎರಡು ಯುವಕರ ಗುಂಪಿನ ನಡುವೆ ಸಂಘರ್ಷ ನಡೆದು ಇದು ಗ್ರಾಮದ ದಲಿತರು ಮತ್ತು ಸವರ್ಣಿಯರ ನಡುವೆ ದೊಡ್ಡಮಟ್ಟದ ಗಲಭೆಗೆ ಕಾರಣವಾಗಿತ್ತು. ಆ ಸಮಯದಲ್ಲಿ ಮರಕುಂಬಿ ಗ್ರಾಮದಲ್ಲಿ ದಲಿತರ ಕೇರಿಗೆ ನುಗ್ಗಿ ಗುಡಿಸಲಿಗೆ ಬೆಂಕಿ ಹಚ್ಚಲಾಗಿತ್ತು. ಗಲಭೆ ನಿಯಂತ್ರಿಸಲು ಪೊಲೀಸರು ಗ್ರಾಮದಲ್ಲಿ ಬೀಡು ಬಿಟ್ಟು ತನಿಖೆ ನಡೆಸಿ ದಲಿತರ ಕೇರಿಗೆ ನುಗ್ಗಿ ಗುಡಿಸಲಿಗೆ ಬೆಂಕಿ ಇಟ್ಟಿದ್ದರು ಎಂದು ಸುಮಾರು 117 ಜನ ಸವರ್ಣೀಯ ವ್ಯಕ್ತಿಗಳ ವಿರುದ್ಧ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಕಳೆದ ಹತ್ತು ವರ್ಷದಿಂದ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು.
ಜಾತಿ ನಿಂದನೆ ಹಾಗೂ ಅಸ್ಪೃಶ್ಯತೆ ಆಚರಣೆಯ ಪ್ರಕರಣದಲ್ಲಿ ಇಷ್ಟೊಂದು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ಆದೇಶ ಮಾಡಿರುವುದು ದೇಶದಲ್ಲಿ ಇದೇ ಮೊದಲ ಪ್ರಕರಣ ಎಂಬ ಚರ್ಚೆ ನಡೆಯುತ್ತಿದೆ. ಕಳೆದ ನಾಲ್ಕು ದಿನಗಳ ಹಿಂದೆಯೇ ನ್ಯಾಯಾಲಯದಲ್ಲಿ ಆರೋಪ ಸಾಬೀತಾಗುತ್ತಿದ್ದಂತೆ ಗಂಗಾವತಿ ಪೊಲೀಸರು ಅಲರ್ಟ್ ಆಗಿದ್ದು, ಅಪರಾದಿಗಳನ್ನು ವಶಕ್ಕೆ ಪಡೆದಿದ್ದರು. ಮತ್ತು ಅ.೨೪ ರಂದು ಸಂಜೆ ನ್ಯಾಯಾಲಯದಲ್ಲಿ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಪೊಲೀಸರು ಗ್ರಾಮದಲ್ಲಿ ಬಿಡು ಬಿಟ್ಟಿದ್ದು, ಯಾವದೇ ಅಹಿಕರ ಘಟನೆ ನಡೆಯದಂತೆ ಮುನ್ನೆಚ್ಚರಕೆ ಕ್ರಮ ಕೈಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದಲಿತರಿಗೆ ದೌರ್ಜನ್ಯಕ್ಕೊಳಗಾದ ದಲಿತರಿಗೆ ನ್ಯಾಯಾಲಯ ರಕ್ಷಣೆ ನೀಡಿದ್ದು, ಅಪರಾಧಿಗಳಿಗೆ ಶಿಕ್ಷೆ ವಿಧಿಸಿರುವ ನ್ಯಾಯಾಲಯದ ಆದೇಶವನ್ನು ಹಲವು ದಲಿತಪರ ಮತ್ತು ಪ್ರಗತಿಪರ ಸಂಘಟನೆಗಳು ಸ್ವಾಗತಿಸಿವೆ. ಅಪರಾಧಿಗಳ ಸಂಬಂಧಿಕರು ಘಟನೆಗೆ ಸಂಬಂಧಿಸಿದಂತೆ ಅಳಲು ತೊಡಿಕೊಳ್ಳುತ್ತಿದ್ದಾರೆ.
ಬಾಕ್ಸ್:
ಪ್ರಗತಿಪರ ಮುಖಂಡ ಭರಧ್ವಾಜ್ ಸ್ವಾಗತ
ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಕಳೆದ ಹತ್ತು ವರ್ಷದ ಹಿಂದೆ ದಲಿತರ ಮನೆಗಳಿಗೆ ಬೆಂಕಿ ಹಚ್ಚಿ ದಲಿತರ ಮೇಲೆ ದೌರ್ಜನ್ಯ ಮಾಡಿದ್ದ ಪ್ರಕರಣ ಕರ್ನಾಟಕ ರಾಜ್ಯಾಧ್ಯಂತ ಸುದ್ದಿಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ೧೧೮ ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಇವರ ಪೈಕಿ ೧೦೧ ಜನ ಅಪರಾಧಿಗಳೆಂದು ಜಿಲ್ಲಾ ಸತ್ರ ನ್ಯಾಯಾಲಯ ಆದೇಶಿಸಿ ಎಲ್ಲಾ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಿರುವುದು ಸಿಪಿಐಎಂಎಲ್ ಪಕ್ಷದ ಮುಖಂಡ ಭಾರಧ್ವಾಜ್ ಸ್ವಾಗತಿಸಿದ್ದಾರೆ.
ಈ ಕುರಿತು ಅವರು ಮಾಧ್ಯಮಗಳಿಗೆ ತಮ್ಮ ಹೇಳಿಕೆ ನೀಡಿದ್ದಾರೆ. ಇಡೀ ಕರ್ನಾಟಕದಲ್ಲಿ ಈ ರೀತಿ ದಲಿತರ ಮೇಲೆ ದಾಳಿ ಮಾಡಿದವರ ವಿರುದ್ಧ ಶಿಕ್ಷೆ ಪ್ರಕಟಿಸುತ್ತಿರುವುದು ಅಪರೂಪವಾಗಿದೆ. ಆದರೆ ಈ ಪ್ರಕರಣದಲ್ಲಿ ಅಪರಾಧಿಗಳೆಂದು ಸಾಬೀತಾದರವರಲ್ಲಿ ಎಲ್ಲರೂ ಹಿಂದುಳಿದ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಈ ಹೋರಾಟದಲ್ಲಿ ವಿರೇಶಪ್ಪ ಹರಿಜನ ಇವರು ರೈಲ್ವೆ ಹಳಿಗೆ ಬಿದ್ದು ಸಾವನ್ನಪ್ಪಿರುತ್ತಾರೆ. ಇವರ ಸಾವು ಅನುಮಾನಾಸ್ಪದವಾಗಿದೆ. ಈ ಪ್ರಕರಣವನ್ನೂ ಕೂಡಾ ತನಿಖೆ ನಡೆಸಿ, ಮೃತರ ಕುಟುಂಬಕ್ಕೆ ನ್ಯಾಯಕೊಡಿಸಬೇಕೆಂದು ಒತ್ತಾಯಿಸುತ್ತೇವೆ. ಮತ್ತು ಮರಕುಂಬಿ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಪದೇ ಪದೇ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಯಂತ್ರಣಕ್ಕೆ ಕೊಪ್ಪಳ ನ್ಯಾಯಾಲಯ ನೀಡಿರುವ ತೀರ್ಪು ಅತ್ಯಂತ ಮಹತ್ವದ್ದಾಗಿದೆ. ಈಗಲಾದರೂ ಗ್ರಾಮಗಳಲ್ಲಿ ಜಾತಿ ಸಂಘರ್ಷ ಕೊನೆಯಾಗಿ. ಸರ್ವರು ಸೌಹಾರ್ದತೆಯಿಂದ ಜೀವನ ನಡೆಸುವಂತಹ ವಾತಾವರಣ ಸೃಷ್ಟಿಸಬೇಕು. ಮತ್ತು ದಲಿತರ ನಡುವೆ ಸಂಘರ್ಷ ಸೃಷ್ಟಿಸುವಂತಹ ಸನ್ನಿವೇಶವನ್ನು ಕೊನೆಗಾಣಿಸಬೇಕು ಎಂದು ಭರಧ್ವಾಜ್ ಕೊರಿದ್ದಾರೆ.

 

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!