ಗಂಗಾವತಿ.
ನಗರದ ೩೧ನೇ ವಾರ್ಡ್‌ನ ಅಲೆಮಾರಿ ಜನಾಂಗದ ಜನ ವಸತಿ ಪ್ರದೇಶಕ್ಕೆ ಕರ್ನಾಟಕ ಪರಿಶಿಷ್ಟ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ.ಜಿ ಭೇಟಿ ನೀಡಿದ್ದು, ಸಮುದಾಯ ವಾಸ ಮಾಡುವ ಸ್ಥಳದಲ್ಲೇ ಕುಪ್ಪೆಯಾಗಿ ಹಾಕಿದ್ದ ಚರಂಡಿ ತ್ಯಾಜ್ಯವನ್ನು ಕಂಡು ಬೆಚ್ಚಿ ಬಿದ್ದರು. ಮತ್ತು ಸ್ಥಳದಲ್ಲೆ ಇದ್ದ ನಗರಸಭೆ ವ್ಯವಸ್ಥಾಪಕ ಷಣ್ಮುಖ, ಸಮಾಜ ಕಲ್ಯಾಣ ಅಧಿಕಾರಿ ಸಂಗಪ್ಪ ಜೀನಾಪುರ ಅವರನ್ನು ತರಾಟೆಗೆ ತೆಗೆದುಕೊಂಡು, ಅಲೆಮಾರಿ ಜನಾಂಗ ಎಂದರೆ ನಿಮಗೆ ಮನುಷ್ಯರಂತೆ ಕಾಣುತ್ತಿಲ್ಲವೇ. ಅವರು ವಾಸ ಮಾಡುವ ಗುಡಿಸಿಲಿನ ಮುಂದೆಯೇ ಚರಂಡಿಯಲ್ಲಿನ ತ್ಯಾಜ್ಯವನ್ನು ಹಾಕಿದ್ದೀರಿ. ಒಮ್ಮೆಯಾದರೂ ಈ ಪ್ರದೇಶಕ್ಕೆ ಭೇಟಿ ನೀಡಿದ್ದೀರಾ. ಇಂತಹ ಪರಿಸ್ಥಿತಿಯಲ್ಲಿ ಇರುವ ಈ ಅಲೆಮಾರಿ ಜನಾಂಗವನ್ನು ನೋಡಿ ನಿಮಗೆ ಕನಿಕರ ಅನಿಸುವುದಿಲ್ಲವೇ. ನಿಮಗೆ ಮಾನವೀಯತೆ ಸತ್ತು ಹೋಗಿದೆನಾ ಎಂದು ಗುಡುಗಿ ತಕ್ಷಣ ಎಲ್ಲಾ ತ್ಯಾಜ್ಯವನ್ನು ತೆರವು ಮಾಡಬೇಕು. ಮತ್ತು ವಾರಕ್ಕೊಮ್ಮೆ ಅಧಿಕಾರಿಗಳು ಇಲ್ಲಿಗೆ ಬಂದು ಸ್ವಚ್ಚತೆ ಗಮನಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಾದ್ಯಂತ ಇರುವ ಅಲೆಮಾರಿ ಸಮುದಾಯಗಳ ಪರಿಸ್ಥಿತಿ ಮತ್ತು ಅವರಿಗೆ ಅವಶ್ಯವಿರುವ ಮೂಲ ಸೌಕರ್ಯ ಒದಗಿಸುವ ಕುರಿತು ಪ್ರವಾಸ ಕೈಗೊಂಡಿರುವ ಅಧ್ಯಕ್ಷೆ ಪಲ್ಲವಿ ಅವರು ಸೋಮವಾರ ನಗರದ ೩೧ನೇ ವಾರ್ಡ್ ಅಲೆಮಾರಿ ಸಮುದಾಯಗಳ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲೆಮಾರಿ ಜನಾಂಗ ವಾಸ ಮಾಡುವ ಸ್ಥಿತಿಯನ್ನು ಕಂಡು ಮಮ್ಮಲ ಮರಗಿದರು. ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಚರಂಡಿಯಲ್ಲಿನ ತ್ಯಾಜ್ಯವನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸ್ವತಂತ್ರ ಬಂದು ೭೫ ವರ್ಷವಾದರೂ ಈ ಅಲೆಮಾರಿ ಜನಾಂಗದ ಜನ ವಸತಿ ಪ್ರದೇಶದ ಬಗ್ಗೆ ಗಮನ ನೀಡಿಲ್ಲ. ಚರಂಡಿ ತ್ಯಾಜ್ಯವನ್ನು ಅವರು ಅಡುಗೆ ಮಾಡುವ ಸ್ಥಳದಲ್ಲೇ ಹಾಕಲು ನಿಮಗೆ ಮನಸ್ಸಾದರೂ ಹೇಗೆ ಬಂದಿದೆ. ನಿಮ್ಮ ಮಕ್ಕಳನ್ನು ಈ ರೀತಿ ಬದಕು ಬಿಡುತ್ತೀರಾ, ಈ ರೀತಿ ತ್ಯಾಜ್ಯವನ್ನು ಹಾಕಿದರೆ ಸಂಕ್ರಾಮಿಕ ರೋಗ ಹರಡದೇ ಇರುತ್ತದೆಯೇ ಎಂದು ಪ್ರಶ್ನಿಸಿದರಲ್ಲದೇ ಇನ್ನು ಮುಂದೆ ಈ ರೀತಿ ನಿರ್ಲಕ್ಷ ಮಾಡಿದರೆ ನಾನು ಸುಮ್ಮನಿರುವುದಿಲ್ಲ. ಈ ಸಮುದಾಯ ಶ್ರೇಯೋಭಿವೃದ್ಧಿ ಸರಕಾರ ಪ್ರತ್ಯೇಕ ನಿಗಮ ಮಾಡಿದೆ. ಈ ನಿಮಗಮಕ್ಕೆ ನನ್ನನ್ನು ಅಧ್ಯಕ್ಷೆಯನ್ನಾಗಿ ಮಾಡಿದ್ದು, ನಾನು ರಾಜ್ಯಾದ್ಯಂತ ಈ ಸಮುದಾಯ ಸ್ಥಿತಿಗತಿ ಅರಿತು ಅವರಿಗೆ ಅವಶ್ಯವಿರುವ ಎಲ್ಲಾ ಸೌಲಭ್ಯ ಒದಗಿಸುಲು ಭೇಟಿ ನೀಡುತ್ತಿದ್ದೇನೆ. ಇಲ್ಲಿ ವಾಸ ಮಾಡುವ ಅಲೆಮಾರಿ ಸಮುದಾಯಗಳ ಎಲ್ಲ ಪಂಗಡಗಳ ಕುಟುಂಬಗಳಿಗೆ ನಿವೇಶನ ಮತ್ತು ಮನೆ ಒದಗಿಸಿಕೊಡಬೇಕು. ಎಲ್ಲಾ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮದ ಶಾಲೆಗೆ ಕಳುಹಿಸುವ ಕೆಲಸ ಮಾಡಬೇಕು. ಮತ್ತು ಈ ಪ್ರದೇಶವನ್ನು ಸ್ವಚ್ಚವಾಗಿಡುವ ಜವಬ್ದಾರಿ ನಿಮ್ಮದೇ. ಈ ಸಮುದಾಯಗಳನ್ನು ನಿರ್ಲಕ್ಷ ಮಾಡಿದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರಕ್ಕೆ ವರದಿ ನೀಡಬೇಕಾಗುತ್ತದೆ ಎಚ್ಚರಿಸಿ ಮತ್ತೊಮ್ಮೆ ನಾನು ಭೇಟಿ ನೀಡುವಷ್ಟರಲ್ಲಿ ಇಲ್ಲಿನ ಪರಿಸ್ಥಿತಿ ಸುಧಾರಣೆಯಾಗಬೇಕು ಎಂದು ಸೂಚನೆ ನೀಡಿದರು.
ನಂತರ ಕಾಲೋನಿಯಲ್ಲಿನ ಕೂಗಮ್ಮ ದೇವಸ್ಥಾನದ ಆವರಣದಲ್ಲಿ ಅಲೆಮಾರಿ ಸಮುದಾಯದಲ್ಲಿ ಬರುವ ಸಿಳ್ಳಿಕ್ಯಾತರು, ಚನ್ನದಾಸರು, ಸಿಂಧೋಳು, ಬುಡಗ ಜಂಗಮ ಸಮಾಜಗಳ ಜನರ ಸಮಸ್ಯೆಯನ್ನು ಆಲಿಸಿ, ಅವರ ಬೇಡಿಕೆಯಂತೆ ಅವರಿಗೆ ಪ್ರತ್ಯೇಕ ಸ್ಥಳದಲ್ಲಿ ನಿವೇಶನ ನೀಡುವ ವ್ಯವಸ್ಥೆ ಮಾಡುವಂತೆ ನಗರಸಭೆ ಮತ್ತು ಸಮಾಜ ಕಲ್ಯಾಣ ಅಧಿಕಾರಿಗಳು, ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಿಗಮದ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಬಿ.ಎಸ್.ಆನಂದಕುಮಾರ, ಅಲೆಮಾರಿ ಕುಳುವ ಮಹಾಸಂಗದ ರಾಜ್ಯಾಧ್ಯಕ್ಷ ಶಿವಾನಂದ ಎಂ ಭಜಂತ್ರಿ, ನಗರಸಭೆ ವ್ಯವಸ್ಥಾಪಕ ಷಣ್ಮುಖ, ಆಶ್ರಯ ವಿಭಾಗದ ಸಿಬ್ಬಂದಿ ಬಿಲಾಲ್ ಭಾಷಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಂಗಪ್ಪ, ಕಂದಾಯ ಶಿರಸ್ತೇದಾರ ರವಿಕುಮಾರ, ಕಂದಾಯ ನಿರೀಕ್ಷಕ ಸೈಯದ್, ಅಲೆಮಾರಿ ಬುಡುಗ ಜಂಗಮ ಸಮಾಜದ ಕೃಷ್ಣ, ಮಾರೆಪ್ಪ, ಸಿಳ್ಳೇಕ್ಯಾತರ ಸಮುದಾಯದ ಮುಖಂಡ ನಾಗಪ್ಪ, ಸಿಂದೋಳ ಸಮಾಜದ ಯಲ್ಲಪ್ಪ, ನಾಗಪ್ಪ ಸೇರಿದಂತೆ ಚನ್ನದಾಸರ, ಕೊರಮ ಸಮಾಜದ ಬಾಲಪ್ಪ ಮತ್ತಿತರು ಇದ್ದರು.
ಬಾಕ್ಸ್:
ಅಧಿಕಾರಿಗಳ ನಿರ್ಲಕ್ಷಕ್ಕೆ ಅಧ್ಯಕ್ಷೆ ಪಲ್ಲವಿ ಆಕ್ರೋಶ
ನಗರದ ೩೧ನೇ ವಾರ್ಡ್‌ನಲ್ಲಿ ಅಲೆಮಾರಿ ಸಮುದಾಯದ ಬುಡಗ ಜಂಗಮ, ಸಿಳ್ಳೇಕ್ಯಾತರ, ಸಿಂಧೋಳ ಮತ್ತು ಚನ್ನದಾಸರ ಸೇರಿ ನಾಲ್ಕು ಸಮುದಾಯಗಳ ಸುಮಾರು ೧೩೦ಕ್ಕೂ ಹೆಚ್ಚು ಕುಟುಂಬಗಳು ಮನೆ ಇಲ್ಲದೇ ಕೌದಿಯ ಟೆಂಟನಲ್ಲಿ ವಾಸ ಮಾಡುತ್ತಿವೆ. ಈ ಸಮುದಾಯ ವಾಸ ಮಾಡುವ ಪ್ರದೇಶ ಸಂಪೂರ್ಣ ನಿರ್ಲಕ್ಷವಾಗಿದೆ. ಕಸದ ರಾಶಿ, ಚರಂಡಿ ತ್ಯಾಜ್ಯ ವಾಸ ಮಾಡುವ ಮನೆಗಳ ಮುಂದೆಯೇ ಹಾಕಿದ್ದು, ಪ್ರದೇಶಕ್ಕೆ ಕಾಲಿಡದಂತಹ ಪರಿಸ್ಥಿತಿ ಇರುವುದನ್ನು ಕಂಡ ಕರ್ನಾಟಕ ಪರಿಶಿಷ್ಟ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ.ಜಿ ಅವರು ಸಮುದಾಯದ ಮಹಿಳೆಯರನ್ನು ಮಾತನಾಡಿಸಿ ಅವರಿಂದ ಸಮಸ್ಯೆಗಳನ್ನು ಆಲಿಸಿದರು. ಮತ್ತು ಈ ಕುಟುಂಬಗಳ ಮಕ್ಕಳು ಶಾಲೆಗೆ ಹೋಗುತ್ತಿರುವ ಬಗ್ಗೆ ವಿಚಾರಿಸಿದರಲ್ಲದೇ ಎಲ್ಲಾ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜವಬ್ದಾರಿ ನಿಮ್ಮ ಮೇಲೆ ಇದೆ. ಅವರನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೆ ಕಳುಹಿಸುವ ಕೆಲಸ ಮಾಡಬೇಕು. ಮತ್ತು ಅವರ ಕುಟುಂಬಗಳಿಗೆ ಸೂರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಂಗಪ್ಪಗೆ ಸೂಚನೆ ನೀಡಿದರು. ಮತ್ತು ನಿವೇಶನ ಅವಶ್ಯವಿರುವ ೧೨೫ ಕುಟುಂಬಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ನಾಳೆ ಜಿಲ್ಲಾಧಿಕಾರಿಗಳ ಸಭೆಗೆ ಆಗಮಿಸಬೇಕು ಎಂದು ನಗರಸಭೆ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.