ಗಂಗಾವತಿ.
ನಗರದ ೩೧ನೇ ವಾರ್ಡ್‌ನಲ್ಲಿ ಬಟ್ಟೆಯ ಕೌದಿ ಟೆಂಟ್‌ನಲ್ಲೇ ಕಳೆದ ೩೦-೪೦ ವರ್ಷಗಳಿಂದ ವಾಸ ಮಾಡುತ್ತಿರುವ ಅಲೆಮಾರಿ ಸಮುದಾಯಗಳ ಜನ ವಸತಿ ಪ್ರದೇಶಕ್ಕೆ ಕರ್ನಾಟಕ ಪರಿಶಿಷ್ಟ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ.ಜಿ ಭೇಟಿ ನೀಡಿದ್ದು, ಈ ಸಮುದಾಯಗಳಿಗೆ ನಗರಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ನಿವೇಶನ ನೀಡಿ ಅವರಿಗೆ ಮನೆ ನಿರ್ಮಿಸಿಕೊಡುವುದರ ಜೊತೆಗೆ ಈ ಸಮುದಾಯಗಳ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮುಂದಾಗಬೇಕು ಎಂದು ನಗರಸಭೆ, ಕಂದಾಯ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರ ನಗರದ ಹಿರೇಜಂತಕಲ್ ಹತ್ತಿರದ ೩೧ನೇ ವಾರ್ಡ್‌ನಲ್ಲಿ ವಾಸವಾಗಿರುವ ಅಲೆಮಾರಿ ಸಮುದಾಯಗಳ ಜನವಸತಿಗೆ ಆಗಮಿಸಿ ಅಲ್ಲಿನ ಸಮುದಾಯದ ಶ್ರದ್ಧೆಯ ಕೂಗಮ್ಮ ದೇವಿ ದೇವಸ್ಥಾನ ದರ್ಶನ ಪಡೆದು ನಂತರ ಪ್ರದೇಶವನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅಲೆಮಾರಿ ಸಮುದಾಯದ ನಾಲ್ಕು ಪಂಗಡಗಳ ಮಹಿಳೆಯರು, ವೃದ್ಧೆಯರು ಮತ್ತು ಗಣ್ಯರು ತಮಗೆ ಇಲ್ಲಿ ಯಾವುದೇ ರೀತಿಯ ಮೂಲ ಸೌಲಭ್ಯ ಒದಗಿಸುತ್ತಿಲ್ಲ. ನಲವತ್ತು ವರ್ಷಗಳಿಂದ ವಾಸವಾಗಿದ್ದರೂ ನಮಗೆ ಇಲ್ಲಿ ನಗರಸಭೆ ಅಧಿಕಾರಿಗಳು ಕೆಲವು ಸದಸ್ಯರು ತೊಂದರೆ ಕೊಡುತ್ತಿದ್ದಾರೆ. ಚರಂಡಿ ಸ್ವಚ್ಚತೆಗೆ ಗಮನ ಕೊಡುವುದಿಲ್ಲ. ಚಿಂದಿ ಆರಿಸಿ ಅಥವಾ ಬಿಕ್ಷೆ ಬೇಡಿ ಜೀವನ ನಡೆಸುತ್ತಿದ್ದೇವೆ. ನಮಗೆ ಪ್ರತ್ಯೇಕವಾಗಿ ೫೩ನೇ ಸರ್ವೇ ನಂಬರ ಭೂಮಿಯಲ್ಲಿ ಜಾಗ ನೀಡುವಂತೆ ಮನವಿ ಮಾಡುತ್ತಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನೀವು ಇಲ್ಲಿಗೆ ಆಗಮಿಸಿ ನಮ್ಮ ಜೀವನ ಪರಿಸ್ಥಿತಿಯನ್ನು ಖುದ್ಧು ಅರಿತಿದ್ದೀರಿ. ತಕ್ಷಣ ನಮ್ಮ ಬೇಡಿಕೆಯನ್ನು ಈಡೇರಿಸುವಂತೆ ಅಲೆಮಾರಿ ಸಮುದಾಯದ ಬುಡಗ ಜಂಗಮ, ಸಿಳ್ಳಿಕ್ಯಾತರ, ಸಿಂಧೋಳ ಮತ್ತು ಚನ್ನದಾಸರ ಸಮುದಾಯದ ಮುಖಂಡರು ಮನವಿ ಮಾಡಿದರು.
ಸಮುದಾಯಗಳ ಸಮಸ್ಯೆ ಆಲಿಸಿದ ಅಧ್ಯಕ್ಷೆ ಪಲ್ಲವಿ ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ, ಜನರ ಬೇಡಿಕೆಯಂತೆ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಬೇಕು. ಮತ್ತು ಇಲ್ಲಿ ವಾಸ ಮಾಡುವ ಎಲ್ಲಾ ಕುಟುಂಬಗಳ ಮಕ್ಕಳು ಶಾಲೆಗೆ ಹೋಗುವಂತೆ ಗಮನ ಹರಿಸಬೇಕು. ಪದೇ ಪದೇ ಇಲ್ಲಿಗೆ ಆಗಮಿಸಿ ಈ ಸಮುದಾಯಕ್ಕೆ ಶಿಕ್ಷಣ, ಸ್ವಚ್ಚತೆ ಕುರಿತು ಜಾಗೃತಿ ಮೂಡಿಸಬೇಕು. ಸ್ವತಂತ್ರ ಬಂದು ೭೫ ವರ್ಷ ಪೂರ್ಣಗೊಂಡರು ಈ ಅಲೆಮಾರಿ ಸಮುದಾಯವನ್ನು ನೀವು ಮಾನವರಂತೆ ಕಾಣದಿದ್ದರೆ ಹೇಗೆ. ಅವರ ಜೀವನ ಸುಧಾರಣೆಗೆ ಇಲ್ಲಿನ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷವಹಿಸಿದ್ದೀರಿ. ಇವರ ವಸತಿ ಪ್ರದೇಶವನ್ನು ಒಮ್ಮೆ ನೋಡಿದರೆ ಮನಸ್ಸಿಗೆ ಘಾಸಿಯಾಗುತ್ತದೆ. ನಾನು ಕೂಡಾ ಇದೇ ಸಮುದಾಯದಿಂದ ಬಂದ ಒಬ್ಬ ಮಹಿಳೆಯಾಗಿದ್ದು, ಈ ಸಮುದಾಯದ ಸಮಸ್ಯೆ ಅರಿಯಲು ಖುದ್ದು ಆಗಮಿಸಿದ್ದೇನೆ. ಸರಕಾರ ನನಗೆ ಈ ಸಮುದಾಯದ ನಿಗಮದ ಅಧ್ಯಕ್ಷ ಸ್ಥಾನ ನೀಡಿರುವುದರಿಂದ ನಾನು ೩೧ ಜಿಲ್ಲೆಗಳಿಗೆ ಪ್ರವಾಸ ಮಾಡುತ್ತಿದ್ದೇನೆ. ಗಂಗಾವತಿಯಲ್ಲಿ ವಾಸವಾಗಿರುವ ಈ ಸಮುದಾಯಗಳಿಗೆ ಎಲ್ಲಾ ಮೂಲ ಸೌಲಭ್ಯ ಒದಗಿಸಬೇಕು. ಜಿಲ್ಲಾಧಿಕಾರಿಗಳೊಂದಿಗೆ ನಾಳೆ ಸಭೆ ನಡೆಸುತ್ತಿದ್ದು, ಅವರಿಗೆ ಇಲ್ಲಿನ ಪರಿಸ್ಥಿತಿ ತಿಳಿಸುವ ಕೆಲಸ ಮಾಡುತ್ಥೇನೆ. ಎಲ್ಲಾ ಕುಟುಂಬಗಳ ಪಟ್ಟಿ ಸಿದ್ಧಪಡಿಸಿಕೊಂಡು ನನಗೆ ತಲುಪಿಸಬೇಕು ಎಂದು ಸೂಚನೆ ನೀಡಿದರು. ಮತ್ತು ಅಲೆಮಾರಿ ಸಮುದಾಯದ ವಾಸ ಮಾಡುವ ಟೆಂಟ್‌ಗಳನ್ನು ಗಮನಿಸಿ ಮಹಿಳೆಯರೊಂದಿಗೆ ಮಾತನಾಡಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪರಿಶಿಷ್ಟ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮದ ವಿಶೇಷ ಕರ್ತವ್ಯಾಧಿಕಾರಿ ಬಿ.ಎಸ್.ಆನಂದಕುಮಾರ, ಅಲೆಮಾರಿ ಕುಳುವ ಮಹಾಸಂಗದ ರಾಜ್ಯಾಧ್ಯಕ್ಷ ಶಿವಾನಂದ ಎಂ ಭಜಂತ್ರಿ, ನಗರಸಭೆ ವ್ಯವಸ್ಥಾಪಕ ಸಣ್ಮುಖ, ಆಶ್ರಯ ವಿಭಾಗದ ಬಿಲಾಲ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಂಗಪ್ಪ, ಕಂದಾಯ ಶಿರಸ್ತೇದಾರ ರವಿಕುಮಾರ, ನಿರೀಕ್ಷಕ ಸೈಯದ್ ಬಷುರುದ್ಧೀನ್, ಕೊರವ ಸಮಾಜದ ಮುಖಂಡ ಕೆ.ಬಾಲಪ್ಪ, ಅಲೆಮಾರಿ ಸಮುದಾಯದ ಮುಖಂಡರಾದ ಕೃಷ್ಣ, ನಾಗಪ್ಪ, ಯಲ್ಲಪ್ಪ, ರಾಮಯ್ಯ ಮತ್ತಿತರು ಇದ್ದರು.
ಬಾಕ್ಸ್:
ಮಕ್ಕಳಿಗೆ ಉತ್ತಮ ಉತ್ತಮ ಶಿಕ್ಷಣ ಕೊಡಿಸಿ
ಸ್ವತಂತ್ರ ಬಂದು ೭೫ ವರ್ಷ ಪೂರ್ಣಗೊಂಡರು ಅಲೆಮಾರಿ ಸಮುದಾಯದ ವಿವಿಧ ಪಂಗಡದ ಜನರಿಗೆ ಸರಿಯಾದ ರೀತಿಯಲ್ಲಿ ಮೂಲ ಸೌಲಭ್ಯ ದೊರೆಯುತ್ತಿಲ್ಲ. ಅವರ ಶ್ರೇಯೋಭಿವೃದ್ಧಿಗಾಗಿ ಸರಕಾರ ಪ್ರತ್ಯೇಕವಾಗಿ ಕರ್ನಾಟಕ ಪರಿಶಿಷ್ಟ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮವನ್ನು ರಚನೆ ಮಾಡಿದ್ದು, ಈ ನಿಮಗದ ಮೊದಲ ಅಧ್ಯಕ್ಷೆಯಾಗಿ ಸರಕಾರ ನನಗೆ ಜವಬ್ದಾರಿ ನೀಡಿದೆ. ಪ್ರತಿಯೊಂದು ತಾಲೂಕಿನಲ್ಲೂ ಸಂಬಂಧಿಸಿದ ಅಧಿಕಾರಿಗಳು ಈ ಸಮುದಾಯಗಳ ಅಭಿವೃದ್ಧಿಗೆ ಗಮನ ಕೊಡುತ್ತಿಲ್ಲ. ಇಂದು ಪ್ರತ್ಯಕ್ಷವಾಗಿ ಗಂಗಾವತಿಯಲ್ಲೂ ಅವರ ಸ್ಥಿತಿ ಹೆಗೆ ಇದೆ ಎಂಬುದುನ್ನು ನಾವೆಲ್ಲರು ನೋಡಿದ್ದೇವೆ. ಈ ಹಿನ್ನೆಲೆಯಲ್ಲಿ ನಾನು ಅಲೆಮಾರಿ ಸಮುದಾಯ ವಾಸ ಮಾಡುವ ಎಲ್ಲಾ ಕಡೆಗಳಲ್ಲಿ ಭೇಟಿ ನೀಡುತ್ತಿದ್ದು, ಅವರಿಗೆ ಅವಶ್ಯವಿರುವ ನಿವೇಶನ, ಮನೆ ಒದಗಿಸುವುದರ ಜೊತೆಗೆ ಈ ಕುಟುಂಬಗಳ ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆ ಮಾಡಲು ಸರಕಾರಕ್ಕೆ ವರದಿ ಸಲ್ಲಿಸುತ್ತೇನೆ. ಸ್ಥಳೀಯವಾಗಿ ನಗರಸಭೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಅಲೆಮಾರಿ ಸಮುದಾಯಗಳ ಪರಿಸ್ಥಿತಿಯನ್ನು ಖುದ್ದು ಆಲಿಸಿ ಅವರಿಗೆ ಅವಶ್ಯ ಮೂಲ ಸೌಲಭ್ಯ ಒದಗಿಸಿಕೊಡಲು ಸೂಚನೆ ನೀಡಿದ್ದೇನೆ.
ಪಲ್ಲವಿ.ಜಿ, ರಾಜ್ಯಾಧ್ಯಕ್ಷರು, ಕರ್ನಾಟಕ ಪರಿಶಿಷ್ಟ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮ, ಬೆಂಗಳೂರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!