ಗಂಗಾವತಿ.
ಈ ಹಿಂದೆ ಎರಡು ಭಾರಿ ಅತ್ಯುತ್ತಮ ನಿರ್ವಹಣೆಯ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಕಾಯಕಲ್ಪ ಪ್ರಶಸ್ತಿ ಪಡೆದುಕೊಂಡಿದ್ದ ನಗರದ ಸರಕಾರಿ ಸಾರ್ವಜನಿಕ ಉಪ ವಿಭಾಗ ಆಸ್ಪತ್ರೆಗೆ ಮೂರನೇ ಭಾರಿಯೂ ಕಾಯಕಲ್ಪ ಪ್ರಶಸ್ತಿ ಪಡೆದುಕೊಂಡಿದೆ. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ|| ಈಶ್ವರ ಸವಡಿ ಅವರ ಸತತ ಪರಿಶ್ರಮ ಮತ್ತು ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳ ಸಹಕಾರದಿಂದ ಗಂಗಾವತಿಯನ್ನು ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿದೆ.
ಮಂಗಳವಾರ ಮೈಸೂರಿನ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್ ವೈದ್ಯಾಧಿಕಾರಿ ಡಾ|| ಈಶ್ವರ ಸವಡಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಪ್ರತಿಷ್ಟಿತ ಖಾಸಗಿ ಆಸ್ಪತ್ರೆಯನ್ನು ಮೀರಿಸುವಂತೆ ಗಂಗಾವತಿ ಉಪ ವಿಭಾಗ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಮತ್ತು ಎಲ್ಲಾ ರೀತಿಯ ಔಷದೋಪಚಾರಕ್ಕೆ ಅನುಕೂಲಗಳನ್ನು ಮಾಡಲಾಗಿದೆ. ಇದನ್ನು ಗಮನಿಸಿರುವ ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಹಿಂದೆ ಎರಡು ಭಾರಿ ನೀಡಿದ್ದ ‘ಕಾಯಕಲ್ಪ’ ಪ್ರಶಸ್ತಿಯನ್ನು ೨೦೨೨-೨೩ನೇ ಸಾಲಿನಲ್ಲೂ ನೀಡಿದೆ. ಸತತವಾಗಿ ಮೂರನೇ ಭಾರಿಗೆ ಈ ಪ್ರಶಸ್ತಿ ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ ಗೌರವಕ್ಕೆ ಗಂಗಾವತಿ ಉಪ ವಿಭಾಗ ಆಸ್ಪತ್ರೆ ಭಾಜನವಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿಯೋಜಿತ ತಜ್ಞರು ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ, ಸ್ವಚ್ಛತೆ, ಶುಚಿತ್ವ ಮತ್ತು ನೈರ್ಮಲ್ಯದಂತ ಮಾನದಂಡಗಳನ್ನು ಗುರುತಿಸಿ ಪ್ರಶಸ್ತಿಗೆ ಪರಿಣಿಸಲಾಗುತ್ತಿದೆ.
ಗಂಗಾವತಿಯಂತ ತಾಲ್ಲೂಕು ಮಟ್ಟದ ಆಸ್ಪತ್ರೆಗೆ ಬಳ್ಳಾರಿ, ರಾಯಚೂರು, ಗದಗ, ವಿಜಯನಗರದ ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಿರುವುದು ವಿಶೇಷ. ಮತ್ತು ಉಪ ವಿಭಾಗ ಆಸ್ಪತ್ರೆಯ ಜೊತೆಯಲ್ಲೇ ನಗರದ ಆನೆಗೊಂದಿ ರಸ್ತೆಯಲ್ಲಿ ಮಹಿಳಾ ಮತ್ತು ಮಕ್ಕಳ ವಿಶೇಷ ಆಸ್ಪತ್ರೆಯು ಇದ್ದು, ಈ ಆಸತ್ರೆಗೂ ಡಾ|| ಈಶ್ವರ ಸವಡಿ ಅವರು ಮುಖ್ಯಸ್ಥರಾಗಿದ್ದು, ಇಲ್ಲಿ ಪ್ರತಿನಿತ್ಯ ೨೫ಕ್ಕೂ ಅಧಿಕ ಸುಸೂತ್ರ ಹೆರಿಗೆಯಾಗುತ್ತವೆ. ಮತ್ತು ಆಸ್ಪತ್ರೆ ಖಾಸಗಿ ಐಷಾರಾಮಿ ಲಾಡ್ಜ್‌ನ್ನು ಮೀರಿಸುವಂತಹ ಗುಣಮಟ್ಟ ಹೊಂದಿದೆ. ರೋಗಿಗಳಿಗೆ ಔಷಧಿ ಮತ್ತು ಗುಣಮಟ್ಟದ ಊಟ, ಉಪಹಾರ ವಿತರಣೆ ಮಾಡುವಲ್ಲಿ ಕೂಡಾ ಈ ಆಸ್ಪತ್ರೆ ರಾಜ್ಯದಲ್ಲಿ ಮಾದರಿಯಾಗಿದೆ. ಪ್ರಶಸ್ತಿ ಕುರಿತು ಡಾ|| ಈಶ್ವರ ಸವಡಿ ಪ್ರತಿಕ್ರೀಯೆ ನೀಡಿದ್ದು, ನಮ್ಮ ಆಸ್ಪತ್ರೆಯ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿಗಳ ಪ್ರಮಾಣಿಕವಾಗಿ ಸೇವೆ ಮತ್ತು ಪರಿಶ್ರಮದಿಂದಾಗಿ ನಮಗೆ ಮತ್ತೊಮ್ಮೆ ಕಾಯಕಲ್ಪ ಪ್ರಶಸ್ತಿ ಲಭಿಸಿದೆ. ನಮಗೆಲ್ಲರಿಗೂ ಅತ್ಯಂತ ಸಂತೋಷವಾಗಿದೆ. ಮೂರನೇ ಭಾರಿ ನಮಗೆ ಪ್ರಶಸ್ತಿ ಬಂದಿರುವುದು ಇನ್ನಷ್ಟು ನಾವು ಜನರಿಗೆ ಆರೋಗ್ಯ ಸೇವೆ ನೀಡುವ ಜವಬ್ದಾರಿ ಹೆಚ್ಚಿದೆ ಎಂದರು.