ಗಂಗಾವತಿ.
ನಗರದ ಹೃದಯ ಭಾಗ ಮತ್ತು ಜನನೀಬಿಡ ಪ್ರದೇಶದಲ್ಲಿ ಎಲ್‌ಪಿಜಿ ಸಿಲೆಂಡರ್‌ಗಳನ್ನು ಗೋದಾಮಿನಲ್ಲಿ ಸಂಗ್ರಹಿಸುತ್ತಿದ್ದು, ಅಪಾಯದ ಭಯ ಜನರಲ್ಲಿ ಕಾಡುತ್ತಿದೆ. ಯಾವುದೇ ಅನಾಹುತ ಸಂಭವಿಸಿದರೆ ಇದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿರುವ ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ ಅಮರಜ್ಯೋತಿ ಸಂಬಂಧಿಸಿದ ತಹಶೀಲ್ದಾರರು ಮತ್ತು ಆಹಾರ ನಾಗರೀಕರ ಸರಬಾಜು ಇಲಾಖೆ ಅಧಿಕಾರಿಗಳು ಗೋದಾಮು ಪರಿಶೀಲಿಸಿ ಈ ಸಿಲೆಂಡರ್ ಗೋದಾಮನ್ನು ಸ್ಥಳಾಂತರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಅವರು ಸಮರ್ಥವಾಣಿಯೊಂದಿಗೆ ಮಾತನಾಡಿ, ಸಿಲೆಂಡರ್ ಗೋದಾಮಿನ ಸ್ಥಿತಿಗತಿ ಕುರಿತು ಮಾಹಿತಿ ನೀಡಿದ್ದು, ಸಿಲೆಂಡರ್ ಎಜೆನ್ಸಿ ಮಾಲೀಕರು ಮತ್ತು ಅಧಿಕಾರಿಗಳು ಮುಂಜಾಗೃತೆವಹಿಸಿ ನಗರದ ಹೊರ ಹೊಲಯಕ್ಕೆ ಗೋದಾಮು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದ್ದಾರೆ. ನಗರದ ಸಾವಿರಾರು ಕುಟುಂಬಗಳಿಗೆ ಅಡುಗೆ ಮತ್ತು ವಾಣಿಜ್ಯ ಸಿಲೆಂಡರ್ ವಿತರಿಸುವ ಬಾಲಾಜಿ ಎಲ್‌ಪಿಜಿ ಏಜನ್ಸಿ ಅವರು ನಗರದ ಗುಂಡಮ್ಮಕ್ಯಾಂಪಿನ ಜನವಸತಿ ಪ್ರದೇಶದಲ್ಲಿ ಗೋದಾಮಿನಲ್ಲಿ ಸಾವಿರಾರು ಸಿಲೆಂಡರ್‌ಗಳನ್ನು ಸಂಗ್ರಹಿಸಿ ಇಡುತ್ತಿದ್ದಾರೆ. ಈ ಸ್ಥಳದ ಸುತ್ತಲೂ ಜನರು ವಾಸಿಸುವ ಮನೆಗಳಿವೆ. ಮತ್ತು ಕೆಲವು ಕೃಷಿಕರು ಜಾನುವಾರುಗಳಿಗೆ ಮೇವು ಸಂಗ್ರಹಿಸಿ ಹುಲ್ಲಿನ ಬಣವಿ ಕೂಡಾ ಮಾಡಿದ್ದಾರೆ. ಮತ್ತು ಸುತ್ತಲೂ ವಾಣಿಜ್ಯ ವ್ಯವಹಾರದ ಕಾಂಪ್ಲೇಕ್ಸ್‌ಗಳು ಇವೆ. ಸಿಲೆಂಡರ್ ಸಂಗ್ರಹಿಸಿರುವ ಗೋದಾಮಿನ ಸತ್ತಲು ಯಾವುದೇ ರೀತಿಯ ಭದ್ರತೆ ಮತ್ತು ರಕ್ಷಣೆ ಇಲ್ಲ. ನಿತ್ಯ ಈ ಗೋದಾಮಿನ ಸುತ್ತಲು ಜನರ ಓಡಾಟ ಜೋರಾಗಿರುತ್ತದೆ. ಈ ಗೋದಾಮು ಈಗ ಜನ ವಸತಿ ಪ್ರದೇಶಕ್ಕೆ ಹೊಂದಿಕೊಂಡಿದೆ. ಸಿಲೆಂಡರ್ ಮತ್ತಿತರ ಅಪಾಯದ ವಸ್ತುಗಳನ್ನು ಜನ ವಸತಿ ಪ್ರದೇಶದಲ್ಲಿ ಸಂಗ್ರಹಿಸಬಾರದು ಎಂಬ ನಿಯಮವಿದೆ. ಆದರೆ ಎಲ್‌ಪಿಜಿ ಸಿಲೆಂಡರ್ ಏಜನ್ಸಿಯವರು ಈ ನಗರದ ಮಧ್ಯ ಭಾಗದಲ್ಲಿ ಮತ್ತು ಜನರು ವಾಸಿಸುವ ಪ್ರದೇಶದಲ್ಲಿ ಸಿಲೆಂಡರ್ ಸಂಗ್ರಹಿಸುವ ಗೋದಾಮು ಮಾಡಿದ್ದಾರೆ. ತಕ್ಷಣ ಈ ಗೋದಾಮು ಸ್ಥಳಾಂತರಿಸಿ ಮುಂದಿನ ದಿನಗಳಲ್ಲಿ ಆಗಬಹುದಾದ ಅನಾಹುತವನ್ನು ತಪ್ಪಿಸಬೇಕು ಎಂದು ವೆಂಕಟೇಶ ಅಮರಜ್ಯೋತಿ ಅಗ್ರಹಿಸಿದ್ದಾರೆ.