ಗಂಗಾವತಿ
ತಾಲೂಕಿನ ಮರಳಿ ಗ್ರಾಮದ ಸಮುದಾಯ ಆರೋಗ್ಯ ಕ್ಷೇಮ ಕೇಂದ್ರಕ್ಕೆ ‘ಕಾಯಕಲ್ಪ ಪ್ರಶಸ್ತಿ’ ಲಭಿಸಿದೆ. ಜಿಲ್ಲೆಯಲ್ಲೇ ಸುಸಜ್ಜಿತ ಏಕೈಕ ಸಮುದಾಯ ಆರೋಗ್ಯ ಕ್ಷೇಮ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತಾಲೂಕಿನ ಮರಳಿ ಹೋಬಳಿಗೆ ಸಂದ ಪ್ರಶಸ್ತಿಯಾಗಿದೆ ಎಂದು ಸಮುದಾಯ ಆರೋಗ್ಯ ಅಧಿಕಾರಿ ಶೋಭಾ ಬಿ.ಜಾಲಿ ಹರ್ಷ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೈಸೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯದ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶಸ್ತಿ ನೀಡಿದ್ದಾರೆ. ಪ್ರಶಸ್ತಿ ಪಡೆದುಕೊಂಡ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಶೋಭಾ ಅವರು ಕರ್ನಾಟಕ ಸರಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ೨೦೨೨-೨೩ರ ಜಿಲ್ಲಾ ಮಟ್ಟದ ಕಾಯಕಲ್ಪ ಪ್ರಶಸ್ತಿಯು ಮರಳಿ ಗ್ರಾಮದ ಆರೋಗ್ಯ ಕೇಂದ್ರಕ್ಕೆ ಲಭಿಸಿದೆ. ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸ್ವಚ್ಛತೆ ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸುವುದು ಹಾಗೂ ರೋಗಿಗಳ ಆರೋಗ್ಯ ಸುರಕ್ಷತೆಯಲ್ಲಿ ಕೈಗೊಂಡ ಕ್ರಮಗಳು ಸೇರಿ ಇನ್ನಿತರ ಮಾನದಂಡಗಳ ಆಧಾರದ ಮೇಲೆ ಜಿಲ್ಲೆಯ ಎಲ್ಲಾ ಸಮುದಾ ಆರೋಗ್ಯ ಕೇಂದ್ರಗಳನ್ನು ಪರಿಶೀಲಿಸಿ ಉತ್ತಮ ಕೇಂದ್ರವೆಂದು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಳಿ ಆರೋಗ್ಯ ಕ್ಷೇಮ ಕೇಂದ್ರ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಮೈಸೂರಿನಲ್ಲಿ ನಡೆದ ಇಲಾಖೆಯ ಕಾರ್ಯಕ್ರಮದಲ್ಲಿ ನಮ್ಮ ಕೇಂದ್ರಕ್ಕೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕೊಪ್ಪಳ ಜಿಲ್ಲಾ ಆರೋಗ್ಯಾಧಿಕಾರಿ ಡಾ|| ಲಿಂಗರಾಜ, ತಾಲೂಕು ಆರೋಗ್ಯ ಅಧಿಕಾರಿ ಡಾ|| ಗೌರಿಶಂಕರ ಮತ್ತಿತರ ಹಿರಿಯ ವೈದ್ಯರ ನಿರ್ದೇಶನದಂತೆ ನಮ್ಮ ಕೇಂದ್ರದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ಮತ್ತು ಸ್ವಚ್ಚತೆ ಮತ್ತಿತರ ವಿಷಯದಲ್ಲಿ ವಿಶೇಷ ಆಧ್ಯತೆ ನೀಡುತ್ತಿದ್ದೇವೆ. ಹೀಗಾಗಿ ನಮ್ಮ ಕೇಂದ್ರಕ್ಕೆ ಈ ಪ್ರಶಸ್ತಿ ಲಭಿಸಿದೆ. ಮರಳಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿ, ವೈದ್ಯರು, ಮತ್ತು ಜನರ ಸಹಕಾರದಿಂದ ಮತ್ತು ಆರೋಗ್ಯ ಕ್ಷೇಮ ಕೇಂದ್ರದ ವೈದ್ಯರು, ಸಿಬ್ಬಂದಿಗಳ ಪರಿಶ್ರಮದಿಂದ ಈ ಪ್ರಶಸ್ತಿ ಲಭಿಸಿದೆ. ಕೇಂದ್ರವನ್ನು ಇನ್ನಷ್ಟು ಮಾದರಿ ಮಾಡಲು ನಾವೆಲ್ಲರು ಸೇರಿ ಶ್ರಮಿಸುತ್ತೇವೆ ಎಂದರು.
ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ|| ಲಿಂಗರಾಜ, ಆರೋಗ್ಯ ನಿರೀಕ್ಷಣಾಧಿಕಾರಿ ಗುರುರಾಜ ಹಿರೇಮಠ ಪ್ರಶಸ್ತಿ ಪತ್ರ ನೀಡುವ ಮೂಲಕ ಸನ್ಮಾನಿಸಿದ್ದಾರೆ. ಮರಳಿ ಗ್ರಾಮದಲ್ಲಿರುವ ಆರೋಗ್ಯ ಕ್ಷೇಮ ಕೇಂದ್ರಕ್ಕೆ ಕಾಯಕಲ್ಪ ಪ್ರಶಸ್ತಿ ಬಂದಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಮರಳಿಯ ಸಹಕಾರಿ ಧುರಿಣ ರಮೇಶ ಕುಲಕರ್ಣಿ ಮಾತನಾಡಿ, ಮರಳಿ ಗ್ರಾಮದ ಕೇಂದ್ರಕ್ಕೆ ರಾಜ್ಯ ಸರಕಾರದಿಂದ ಕಾಯಕಲ್ಪ ಪ್ರಶಸ್ತಿ ಬಂದಿರುವುದು ಅತ್ಯಂತ ಸಂತೋಷವಾಗಿದೆ. ಕೊಪ್ಪಳ ಜಿಲ್ಲೆಯಲ್ಲೇ ಶ್ರೀರಾಮನಗರದ ಕೇಂದ್ರ ಗುಣಮಟ್ಟದ ಚಿಕಿತ್ಸೆ, ಸ್ವಚ್ಚತೆ ಮತ್ತಿತರ ನಿರ್ವಹಣೆಯಲ್ಲಿ ಜಿಲ್ಲೆಯಲ್ಲೇ ಉತ್ತಮ ಎಂದು ಗುರುತಿಸಿ ಈ ಪ್ರಶಸ್ತಿಯನ್ನು ರಾಜ್ಯ ಸರಕಾರ ನೀಡಿದೆ. ಕೇಂದ್ರದ ಆರೋಗ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು, ವೈದ್ಯರ ಪರಿಶ್ರಮದಿಂದ ಈ ಪ್ರಶಸ್ತಿ ಬರಲು ಕಾರಣವಾಗಿದೆ ಎಂದು ರಮೇಶ ಕುಲಕರ್ಣಿ ಅಭಿನಂದಿಸಿದ್ದಾರೆ.