ಗಂಗಾವತಿ.
ರಾಜ್ಯ ಸರಕಾರದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ನನಗೆ ಕಾಡಾ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ನನ್ನ ಕ್ಷೇತ್ರ ಕಾಡಾ ವ್ಯಾಪ್ತಿಗೆ ಬರದಿದ್ದರೂ ಸಚಿವರು, ಶಾಸಕರು ಮತ್ತು ಹಿರಿಯರ ಅನುಭವ ಪಡೆದುಕೊಂಡು ನನ್ನ ಹುದ್ದೆಯನ್ನು ನಿಭಾಯಿಸುತ್ತೇನೆ. ಮತ್ತು ತುಂಗಭದ್ರಾ ಜಲಾಶಯದ ಮತ್ತು ಅಚ್ಚುಕಟ್ಟು ಪ್ರದೇಶದ ರೈತರ ನೀರಾವರಿ ಸಮಸ್ಯೆಗಳ ಪರಿಹಾರಕ್ಕೆ ಪ್ರಮಾಣಿಕವಾಗಿ ಸ್ಪಂದಿಸುತ್ತೇನೆ ಎಂದು ನೂತನ ಕಾಡಾ ಅಧ್ಯಕ್ಷ ಹಸನ್‌ಸಾಬ್ ದೋಟಿಹಾಳ್ ಹೇಳಿದರು.
ಶನಿವಾರ ಮುನಿರಾಬಾದ್‌ನಲ್ಲಿ ಅಧಿಕಾರ ಸ್ವೀಕರಿಸಿ ನಂತರ ನೇರವಾಗಿ ನಗರದ ಮಾಜಿ ಸಂಸದ ಹೆಚ್.ಜಿ.ರಾಮುಲು ನಿವಾಸಕ್ಕೆ ಆಗಮಿಸಿ ಅವರ ಆಶೀರ್ವಾದ ಪಡೆದು ನಂತರ ಹೆಚ್.ಆರ್.ಶ್ರೀನಾಥ ಅವರಿಂದ ಸನ್ಮಾನ್ ಸ್ವೀಕರಿಸಿ ಮಾತನಾಡಿದರು. ನಾನು ಹೆಚ್.ಜಿ.ರಾಮುಲು ಅವರ ಮಾರ್ಗದರ್ಶನ ಪಡೆದು ಕುಷ್ಟಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕನಾಗಿದ್ದೆ. ೨೦೦೮ರ ನಂತರ ಬದಲಾದ ರಾಜಕೀಯದಿಂದಾಗಿ ನನಗೆ ಅವಕಾಶ ಕೈತಪ್ಪಿತ್ತು. ಆದರೂ ನಾನು ಕಾಂಗ್ರೆಸ್ ಪಕ್ಷದ ನಿಷ್ಟಾವಂತನಾಗಿ ಕೆಲಸ ಮಾಡಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ನನಗೆ ಈ ಹುದ್ದೆಯನ್ನು ನೀಡಿದ್ದಾರೆ. ಚುನಾವಣೆ ಘೋಷಣೆಯಾಗುತ್ತಿರುವ ಹಿನ್ನೆಲೆಯಲ್ಲಿ ತುರ್ತಾಗಿ ಇಂದು ಅಧಿಕಾರ ಸ್ವೀಕರಿಸಿ ಇಲ್ಲಿಗೆ ಬಂದಿದ್ದೇನೆ. ನಾನು ಒಮ್ಮೆ ಶಾಸಕನಾಗಿ ಅನುಭವ ಹೊಂದಿದ್ದು, ಮಾಜಿ ಕಾಡಾ ಅಧ್ಯಕ್ಷರಾಗಿರುವ ಶ್ರೀನಾಥ ಅವರನ್ನು ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಬರುವ ಸಚಿವರು, ಶಾಸಕರ ಅನುಭವ ಪಡೆದುಕೊಂಡು ಈ ಜವಬ್ದಾರಿ ನಿಭಾಯಿಸುತ್ತೇನೆ. ರೈತರ ಸಮಸ್ಯೆಗಳಿಗೆ ಪ್ರಮಾಣಿಕವಾಗಿ ಪರಿಹರಿಸುವ ಕೆಲಸ ಮಾಡುತ್ತೇನೆ ಎಂದರು.
ಮುಂದುವರೆದು ಮಾತನಾಡಿದ ಅವರು ನನಗೆ ಅಲ್ಪಸಂಖ್ಯಾತನೆಂಬ ಕಾರಣಕ್ಕೆ ಅಥವಾ ಗಂಗಾವತಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಅವರ ಮೇಲಿನ ಕೋಪಕ್ಕಾಗಿ ನನಗೆ ಈ ಹುದ್ದೆ ನೀಡಿದ್ದಾರೆ ಎಂಬ ಭಾವನೆ ಯಾರಲ್ಲಿ ಬರಬಾರದು. ನಾನು ಕಾಂಗ್ರೆಸ್ ಪಕ್ಷದಲ್ಲಿ ಇಕ್ಬಾಲ್ ಅನ್ಸಾರಿಗಿಂತ ಸಿನೀಯರ್ ಲೀಡರ್. ಮಾಜಿ ಸಂಸದ ಹೆಚ್.ಜಿ.ರಾಮುಲು ಅನ್ಸಾರಿ ತಂದೆ ಎಂ.ಎಸ್.ಅನ್ಸಾರಿ ಅವರ ಮಾರ್ಗದರ್ಶನದಲ್ಲಿ ನಾನು ರಾಜಕಾರಣ ಮಾಡಿದ್ದೇನೆ. ತಮ್ಮನ್ನು ಜಿಲ್ಲೆಯ ಕಾಂಗ್ರೆಸ್ ನಾಯಕರು ಕಡೆಗಣಿಸುತ್ತಿದ್ದಾರೆ ಎಂಬ ಅನ್ಸಾರಿ ಭಾವನೆ ಸರಿಯಲ್ಲ. ರಾಜಕಾರಣದಲ್ಲಿ ಕೆಲವೊಮ್ಮೆ ಅವಕಾಶಗಳು ದಿಡೀರ್ ಬರುತ್ತವೆ. ಮತ್ತು ನಿಧಾನವಾಗುತ್ತವೆ. ನಾನು ಇಷ್ಟು ವರ್ಷ ಪಕ್ಷದ ನಿಷ್ಟೆಯಿಂದ ಇದ್ದ ಪರಿಣಾಮ ನನಗೆ ಈ ಹುದ್ದೆ ಬಂದಿದೆ ಹೊರತು ಅನ್ಸಾರಿ ಅವರನ್ನು ಹತ್ತಿಕ್ಕಲು ನನಗೆ ಈ ಹುದ್ದೆ ನೀಡಿದ್ದಾರೆ ಎಂಬುದು ಸರಿಯಲ್ಲ. ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿತ್ತು. ಆದರೆ ಅವರು ಜಿಲ್ಲೆಯ ಎಲ್ಲಾ ನಾಯಕರನ್ನು ಖುದ್ದು ಭೇಟಿ ಮಾಡಿ ಗಂಗಾವತಿ ಕ್ಷೇತ್ರದಲ್ಲಿ ತಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಚರ್ಚಿಸಿ ಎಲ್ಲರೊಂದಿಗೆ ಬಾಂಧವ್ಯದಿಂದ ಚುನಾವಣೆ ಎದುರಿಸಬೇಕಿತ್ತು. ಅಭ್ಯರ್ಥಿಗಳಾದವರು ಚುನಾವಣೆಯಲ್ಲಿ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಬೇಕು. ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲರು ಸೇರಿ ಲೋಕಸಭೆ ಚುನಾವಣೆ ಎದುರಿಸುತ್ತೇವೆ. ಅಮರೇಗೌಡ ಬಯ್ಯಾಪುರ ಅವರಿಗೆ ಟಿಕೆಟ್ ನೀಡಬೇಕು ಎಂದು ನಾನು ಮನವಿ ಮಾಡಿದ್ದೇನೆ. ಆದರೆ ಹೈಕಮಾಂಡ್ ಯಾರಿಗೆ ಅವಕಾಶ ನೀಡಿದರು ನಾವೆಲ್ಲರು ಸೇರಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಕಾಡಾ ಅಧ್ಯಕ್ಷ ಹೆಚ್.ಆರ್.ಶ್ರೀನಾಥ, ಮುಖಂಡ ಆಸೀಫ್ ಅಲಿ, ಡಾ|| ಇಲಿಯಾಸ್‌ಬಾಬಾ, ರಮೇಶ ಗೌಳಿ, ರಾಜಶೇಖರಪ್ಪ ಮುಸ್ಟೂರು, ಸುರೇಶ ಗೌರಪ್ಪ ಮತ್ತಿತರು ಇದ್ದರು.
ಬಾಕ್ಸ್:
ದೋಟಿಹಾಳ ಸಜ್ಜನ ರಾಜಕಾರಣಿ
ಕುಷ್ಟಗಿಯ ಮಾಜಿ ಶಾಸಕ ಹಸನ್‌ಸಾಬ್ ದೋಟಿಹಾಳ ಸಜ್ಜನ ರಾಜಕಾರಣಿಯಾಗಿದ್ದಾರೆ. ಮತ್ತು ಪಕ್ಷ ನಿಷ್ಟರಾಗಿದ್ದಾರೆ. ಹೀಗಾಗಿ ಅವರಿಗೆ ಮುಖ್ಯಮಂತ್ರಿಗಳು ಕಾಡಾ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಪಕ್ಷಕ್ಕೆ ದುಡಿದವರಿಗೆ ಅವಕಾಶ ನೀಡುವಂತೆ ನಾನು ಮನವಿ ಮಾಡಿದ್ದೆ. ಹಸನ್‌ಸಾಬ್ ದೋಟಿಹಾಳಗೆ ಕಾಡಾ ಅಧ್ಯಕ್ಷ ನೀಡಿರುವುದು ನನಗೆ ಸಂತೋಷವಾಗಿದೆ. ಅವರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಹಸನ್‌ಸಾಬ್ ಅವರು ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ನಿಜವಾದ ನಾಯಕರಾಗಿದ್ದಾರೆ. ಆದರೆ ಅವರು ಎಂದಿಗೂ ಜಾತಿ, ಧರ್ಮ ರಾಜಕಾರಣ ಮಾಡುವುದಿಲ್ಲ.
ಹೆಚ್.ಆರ್.ಶ್ರೀನಾಥ, ಮಾಜಿ ಕಾಡಾ ಅಧ್ಯಕ್ಷರು, ಗಂಗಾವತಿ.
ಬಾಕ್ಸ್:
ಅನ್ಸಾರಿಗಿಂತ ನಾನು ಸಿನಿಯರ್
ಇಕ್ಬಾಲ್ ಅನ್ಸಾರಿ ಅವರನ್ನು ಹತ್ತಿಕ್ಕಲು ಅಲ್ಪಸಂಖ್ಯಾತ ಮುಖಂಡ ಎಂಬ ಕಾರಣಕ್ಕೆ ನನಗೆ ಕಾಡಾ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂಬ ವಾದ ಸರಿಯಲ್ಲ. ನಾನು ಇಕ್ಬಾಲ್ ಅನ್ಸಾರಿಗಿಂತ ಕಾಂಗ್ರೆಸ್ ಪಕ್ಷದಲ್ಲಿ ಸಿನೀಯರ್ ಲೀಡರ್. ಆದರೆ ಅವಕಾಶಗಳು ಬಂದಿದ್ದಿಲ್ಲ. ಪಕ್ಷದಲ್ಲಿ ನಿಷ್ಟೆಯಿಂದ ಕೆಲಸ ಮಾಡಿದ್ದೇನೆ. ಹೀಗಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿ ಪಕ್ಷದ ನಾಯಕರು ನನಗೆ ಕಾಡಾ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಹೆಚ್.ಜಿ.ರಾಮುಲು ಅವರು ನನಗೆ ರಾಜಕೀಯ ಮಾರ್ಗದರ್ಶಕರು. ಕಾಡಾ ಅಧ್ಯಕ್ಷರಾಗಿದ್ದರಿಂದ ಅವರ ಆಶೀರ್ವಾದ ಪಡೆಯಲು ಬಂದಿದ್ದೇನೆ.
ಹಸನ್‌ಸಾಬ್ ದೋಟಿಹಾಳ, ಕಾಡಾ ಅಧ್ಯಕ್ಷರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!