ಗಂಗಾವತಿ.
ಕಾಂಗ್ರೆಸ್ ಪಕ್ಷ ಸೇರಿದ ಸಂದರ್ಭದಲ್ಲಿ ಮಾಜಿ ಸಂಸದ ಹೆಚ್.ಜಿ.ರಾಮುಲು ಅವರನ್ನು ಸ್ಮರಿಸಿಕೊಂಡಿದ್ದ ಮಾಜಿ ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್ ಸೇರ್ಪಡೆ ನಂತರ ಗಂಗಾವತಿ ಬಂದಿದ್ದರೂ ಹೆಚ್.ಜಿ.ರಾಮುಲು ನಿವಾಸಕ್ಕೆ ಭೇಟಿ ನೀಡದೇ ನೇರವಾಗಿ ರಾಮುಲು ಬದ್ಧ ವೈರಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮನೆಗೆ ದೌಡಾಯಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಸಂಸದರಾಗಿರುವ ಸಮಯದಲ್ಲಿ ಸಂಗಣ್ಣ ಕರಡಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಅಹ್ವಾನಿಸಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ಶ್ರೀನಾಥರಿಂದ ಈಗ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಹತ್ತು ವರ್ಷ ಬಿಜೆಪಿ ಸಂಸದರಾಗಿದ್ದ ಸಂಸದ ಸಂಗಣ್ಣ ಕರಡಿ ಬಿಜೆಪಿ ತೊರೆದು ಬೆಂಗಳೂರಿನಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಘಟಾನು ಘಟಿ ನಾಯಕರ ಸಮ್ಮುಖದಲ್ಲಿ ಮಾಜಿ ಸಂಸದ ಗಂಗಾವತಿಯ ಹೆಚ್.ಜಿ.ರಾಮುಲು ಅವರನ್ನು ಸ್ಮರಿಸಿಕೊಂಡು ರಾಮುಲು ತಮ್ಮ ರಾಜಕೀಯ ಗುರು ಎಂದು ಬಿಂಬಿಸಿಕೊಂಡಿದ್ದರು. ರಾಮುಲು ಬಗ್ಗೆ ಗೌರವದ ಮಾತನಾಡುತ್ತಿದ್ದಂತೆ ಇತ್ತ ವೈಟ್ ಹೌಸ್‌ನಲ್ಲಿ ಸಂಗಣ್ಣ ಕರಡಿ ಬಗ್ಗೆ ಗೌರವ ಹೆಚ್ಚಾಗಿತ್ತು. ಆದರೆ ಅದೇ ಸಂಗಣ್ಣ ಕರಡಿ ಪಕ್ಷ ಸೇರ್ಪಡೆಯ ಎರಡು ದಿನದಲ್ಲೇ ಗಂಗಾವತಿಗೆ ಆಗಮಿಸಿದ್ದರೂ ಹೆಚ್.ಜಿ.ರಾಮುಲು ನಿವಾಸದ ಮುಂದೆ ಹಾದು ಹೋಗಿದ್ದರೂ ರಾಮುಲು ಅವರನ್ನು ಭೇಟಿ ಮಾಡುವ ಮನಸ್ಸು ಮಾಡದೇ ನೇರವಾಗಿ ಇಕ್ಬಾಲ್ ಅನ್ಸಾರಿ ಮನೆಗೆ ತೆರಳಿ ಒಂದು ಗಂಟೆಕಾಲ ಅವರೊಂದಿಗೆ ಚರ್ಚಿಸಿ ಕೊಪ್ಪಳಕ್ಕೆ ಹೋರಟು ಹೋಗಿರುವುದು ಆಶ್ಚರ್ಯ ಮೂಡಿಸಿದೆ.
ಶುಕ್ರವಾರ ಸಂಗಾಪುರ ಗ್ರಾಮದ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಬಂದಿದ್ದ ಸಂಗಣ್ಣ ಕರಡಿ ತಮ್ಮ ಮನೆಗೆ ಬರುತ್ತಾರೆ ಎಂದು ಹೆಚ್.ಆರ್.ಶ್ರೀನಾಥ ತಮ್ಮ ಬೆಂಬಲಿಗರನ್ನು ಮತ್ತು ಮಾಧ್ಯದವರನ್ನು ಅಹ್ವಾನಿಸಿ ಸಂಗಣ್ಣ ಕರಡಿಗಾಗಿ ಕಾದು ಕಾದು ಸುಸ್ತಾದರು. ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮಾತನಾಡಿ ಗಂಗಾವತಿಗೆ ಬಂದಾಗ ಕಾಂಗ್ರೆಸ್ ಮುಖಂಡರು ತಮ್ಮ ಮಾತು ಕೇಳದೇ ಯಾರ ಮನೆ ಬಾಗಿಲಿಗೆ ಹೋಗಬಾರದು ಎಂದು ಫರ್ಮಾನು ಹೊರಡಿಸಿದ್ದರು. ಅನ್ಸಾರಿ ಫರ್ಮಾನನ್ನು ಸಂಗಣ್ಣ ಕರಡಿ ಕೂಡಾ ಪಾಲನೆ ಮಾಡಿದರೆ ಎಂಬ ಮಾತು ಈಗ ಕಾಂಗ್ರೆಸ್ ಪಕ್ಷದ ಮತ್ತು ಹೆಚ್.ಆರ್.ಶ್ರೀನಾಥ ವಲಯದಲ್ಲಿ ಕೇಳಿ ಬರುತ್ತಿದೆ.
ಹೆಚ್.ಜಿ.ರಾಮುಲು ಅವರು ಕಳೆದ ೨೦೦೪ ರಲ್ಲಿ ಸಂಸದ ಸ್ಥಾನದಿಂದ ಮುಕ್ತಿ ಪಡೆದ ನಂತರ ರಾಜಕೀಯದಿಂದ ದೂರಾಗಿ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ಕೆ ಮಾತ್ರ ಸಿಮೀತರಾಗಿದ್ದಾರೆ. ಹೀಗಾಗಿ ಅವರ ಮನೆಗೆ ಇಕ್ಬಾಲ್ ಅನ್ಸಾರಿ ಅವರೊಬ್ಬರನ್ನು ಹೊರತುಪಡಿಸಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷದ ನಾಯಕರು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡು ಹೋಗುವುದು ವಾಡಿಕೆ. ಆದರೆ ಸಂಗಣ್ಣ ಕರಡಿ ಬಿಜೆಪಿ ಸಂಸದರಾಗಿದ್ದ ಸಮಯದಲ್ಲಿ ಹತ್ತಾರು ಭಾರಿ ಬಂದು ಹೆಚ್.ಜಿ.ರಾಮುಲು ಮತ್ತು ಹೆಚ್.ಆರ್.ಶ್ರೀನಾಥರನ್ನು ಭೇಟಿಯಾಗುತ್ತಿದ್ದು, ಈಗ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದ ನಂತರ ಹೆಚ್.ಆರ್.ಶ್ರೀನಾಥರಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಇಕ್ಬಾಲ್ ಅನ್ಸಾರಿ ಮಾತಿಗೆ ಮನ್ನಣೆ ನೀಡಿ ಹೆಚ್.ಜಿ.ರಾಮುಲು ಅವರನ್ನು ಭೇಟಿ ಮಾಡುವಲ್ಲಿ ಸಂಗಣ್ಣ ಕರಡಿ ಹಿಂದೆಟು ಹಾಕಿದ್ದಾರೆ ಎಂಬ ಗುಸು ಗುಸು ಶುರವಾಗಿದೆ. ತಮ್ಮ ಮನೆಗೆ ಬರುವುದಾಗಿ ಮಾತು ಕೊಟ್ಟಿದ್ದ ಸಂಗಣ್ಣ ಕರಡಿ ಗಂಟೆಗಟ್ಟಲೇ ಕಾಯಿಸಿ ಮನೆಗೆ ಬರದೇ ನೇರವಾಗಿ ಅನ್ಸಾರಿ ನಿವಾಸಕ್ಕೆ ತೆರಳಿ ಕೊಪ್ಪಳಕ್ಕೆ ವಾಪ್ಪಸ್ಸಾಗಿರುವುದು ಹೆಚ್.ಆರ್.ಶ್ರೀನಾಥಗೆ ಕೊಪ ಹೆಚ್ಚುವಂತೆ ಮಾಡಿದೆ. ಹೆಚ್.ಜಿ.ರಾಮುಲು ಬಗ್ಗೆ ಸದಾ ಗೌರವ ಹೊಂದಿದ್ದ ಸಂಗಣ್ಣ ಕರಡಿ ಕಾಂಗ್ರೆಸ್ ಸೇರ್ಪಡೆ ನಂತರ ಯಾಕೆ ಅವರಿಂದ ಅಂತರ ಕಾಯ್ದುಕೊಂಡರು ಎಂಬುದಕ್ಕೆ ಕರಡಿಯೇ ಉತ್ತರಿಸಬೇಕಿದೆ.