ಗಂಗಾವತಿ.
ಹುಬ್ಬಳ್ಳಿಯ ನಿರಂಜನ ಹಿರೇಮಠ ಅವರ ಪುತ್ರಿ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯನ್ನು ಖಂಡಿಸಿ ಎ.೨೪ ರಂದು ಗಂಗಾವತಿ ಬಂದ್ ನಡೆಸಲಾಗುತ್ತಿದೆ. ಅಂದು ಗಂಗಾವತಿ ನಗರ ಮತ್ತು ಗ್ರಾಮಾಂತರ ಭಾಗದ ಸರ್ವ ಸಮಾಜದ ನೇತೃತ್ವದಲ್ಲಿ ಮೆರವಣಿಗೆ ಮೂಲಕ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹಿಂದುಪರ ಸಂಘಟನೆ ಮುಖಂಡ ಸಂತೋಷ ಕೆಲೋಜಿ, ಹಿರಿಯ ಮುಖಂಡ ತಿಪ್ಪೇರುದ್ರಸ್ವಾಮಿ, ವೆಂಕಟೇಶ ಅಮರಜ್ಯೋತಿ, ಹುಸೇನಪ್ಪಸ್ವಾಮಿ ಮಾದಿಗ ಮತ್ತಿತರು ತಿಳಿಸಿದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ತಿಪ್ಪೇರುದ್ರಸ್ವಾಮಿ ಮಾತನಾಡಿ, ಕಳೆದ ದಿನ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಎಂಬ ವಿದ್ಯಾರ್ಥಿಯನ್ನು ಫಯಾಜ್ ಎಂಬ ಯುವಕ ಬರ್ಬವಾಗಿ ಕೊಲೆ ಮಾಡಿರುವ ಘಟನೆ ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ಪ್ರೀತಿಯನ್ನು ನಿರಾಕಸಿದ್ದರಿಂದ ಆರೋಪಿ ಕೊಲೆ ಮಾಡಿದ್ದಾನೆ ಎಂದು ಮೇಲ್ನೊಟಕ್ಕೆ ಇದ್ದರೂ ಸಹ ಈ ರೀತಿಯಾಗಿ ಕೊಲೆ ಮಾಡುವುದು ಕೃರತನದ ಪರಮಾವಧಿಯಾಗಿದೆ. ಇಂತಹ ಘಟನೆ ರಾಜ್ಯದ ಯಾವುದೇ ಭಾಗದಲ್ಲಿ ನಡೆಯಬಾರದು. ಈ ಕೊಲೆಯಿಂದ ಭಯಭೀತರಾಗಿರುವ ಸರ್ವ ಹಿಂದು ಸಮಾಜಕ್ಕೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಮತ್ತು ಕೊಲೆಯ ಬಗ್ಗೆ ಸರಕಾರದ ಜನಪ್ರತಿನಿಧಿಗಳು ಇಲ್ಲ ಸಲ್ಲದ ಸಬೂಬು ನೀಡಿ ಸಮರ್ಥನೆ ಮಾಡಿಕೊಳ್ಳುವುದು ಸರಿಯಲ್ಲ. ಈ ದಿಸೆಯಲ್ಲಿ ಗಂಗಾವತಿಯ ಸರ್ವ ಸಮಾಜ ಕಳೆದ ದಿನ ಸಭೆ ನಡೆಸಿ ಘಟನೆಯನ್ನು ಖಂಡಿಸಿ ಮತ್ತು ಗಂಗಾವತಿಯ ಜನರಲ್ಲಿ ಆತ್ಮ ವಿಶ್ವಾಸ ಮೂಡುವುದಕ್ಕಾಗಿ ಎಲ್ಲಾ ಸಮಾಜದ ನೇತೃತ್ವದಲ್ಲಿ ಎ.೨೪ ರಂದು ಬಂದ್ ಕರೆ ನೀಡಲಾಗಿದೆ ಎಂದರು.
ಮುಖಂಡ ಸಂತೋಷ ಕೆಲೋಜಿ ಮಾತನಾಡಿ, ನೇಹಾ ಕೊಲೆ ಗಂಗಾವತಿಯ ಸರ್ವ ಸಮಾಜ ಬಾಂಧವರಲ್ಲಿ ಅತ್ಯಂತ ನೋವು ತಂದಿದೆ. ನೇರವಾಗಿ ಕೊಲೆ ಮಾಡಿರುವ ದೃಶ್ಯವನ್ನು ಗಮನಿಸಿರುವ ಸಮಾಜದ ಪ್ರತಿಯೊಬ್ಬರಲ್ಲೂ ನೋವ್ವು ಮತ್ತು ಆಕ್ರೋಶ ಮನೆ ಮಾಡಿದೆ. ನೇಹಾ ಕೊಲೆಯ ಹಿಂದೆ ಷಡ್ಯಂತರ ಇರಬಹುದು ಎಂದು ಶಂಕಿಸಲಾಗಿದೆ. ಮತ್ತು ಕೊಲೆಗಡುಕರಿಗೆ ಕಠಿಣ ಶಿಕ್ಷೆ ವಿಧಿಸುವ ಅವಶ್ಯಕತೆ ಇದ್ದು, ಸರಕಾರದ ಮೇಲೆ ಒತ್ತಡ ತರಲು ಗಂಗಾವತಿಯ ಸರ್ವ ಸಮಾಜದ ಹಿರಿಯರು ಶುಕ್ರವಾರ ನಗರದ ಚನ್ನಬಸವಸ್ವಾಮಿ ಮಠದಲ್ಲಿ ಸಭೆ ನಡೆಸಿ ಘಟನೆಯನ್ನು ಖಂಡಿಸಿ ಬಂದ್ ಕರೆ ನೀಡಲು ನಿರ್ಧರಿಸಿದ್ದಾರೆ. ಎ.೨೪ ರಂದು ಎಲ್ಲಾ ಸಮಾಜದ ನೇತೃತ್ವದಲ್ಲಿ ಈ ಬಂದ್ ನಡೆಯಲಿದ್ದು, ಎಲ್ಲಾ ವ್ಯಾಪಾರಸ್ಥರು, ಹೊಟೇಲ್ ಮಾಲೀಕರು, ವಿದ್ಯಾರ್ಥಿಗಳು, ರಾಜಕಾರಣಿಗಳು ಈ ಬಂದ್‌ಗೆ ಬೆಂಬಲ ನೀಡಲು ನಾವು ಮನವಿ ಮಾಡುತ್ತಿದ್ದೇವೆ. ನೇಹಾ ಕೊಲೆ ಎಲ್ಲಾ ಸಮಾಜಕ್ಕೆ ಪಾಠವಾಗಿದೆ. ನಮ್ಮ ಊರಿನಲ್ಲೂ ಮುಂದೆ ಈ ರೀತಿಯ ದುಶ್ಕೃತ್ಯ ನಡೆಯುವ ಮೊದಲೆ ನಾವೆಲ್ಲರು ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ. ಸರ್ವ ಸಮಾಜಕ್ಕೆ ಮತ್ತು ಮಹಿಳಾ ಸಮಾಜಕ್ಕೆ ನೈತಿಕ ಧೈರ್ಯ ತುಂಬುವ ಕಾರಣಕ್ಕೆ ನಾವು ಬಂದ್ ಮೂಲಕ ಪ್ರತಿಭಟನೆ ನಡೆಸಿ ಸರಕಾರಕ್ಕೆ ಇಂತಹ ಘಟನೆ ನಡೆಯದಂತೆ ವಿಶೇಷ ಗಮನ ಹರಿಸುವಂತೆ ಸಂದೇಶ ರವಾನಿಸಲಾಗುತ್ತಿದೆ. ಗಂಗಾವತಿಯ ಸರ್ವ ಜನತೆ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಬಂದ್‌ಗೆ ಕರೆ ನೀಡಲಾಗಿದೆ. ಸರ್ವ ಸಮಾಜದ ಬಾಂಧವರು, ವ್ಯಾಪಾರಸ್ಥರು ಈ ಬಂದ್‌ಗೆ ಬೆಂಬಲಿಸಿ ಅಂದು ನಡೆಯುವ ಪ್ರತಿಭಟನಾ ರ್‍ಯಾಲಿಯಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಹುಸೇನಪ್ಪಸ್ವಾಮಿ ಮಾದಿಗ ಮಾತನಾಡಿ, ವಿದ್ಯಾರ್ಥಿನಿ ನೇಹಾ ಕೊಲೆಯನ್ನು ಕಾಂಗ್ರೆಸ್ ಪಕ್ಷದ ನಾಯಕರು ಸಾಮಾನ್ಯವಾಗಿ ಪರಿಗಣಿಸಿದ್ದಾರೆ. ಆದರೆ ಸಮಸ್ಥ ಹಿಂದು ಸಮಾಜ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ನಾವೆಲ್ಲರು ಸೇರಿ ಈ ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ ಎಂದರು. ನ್ಯಾಯವಾದಿ ನಾಗರಾಜ ಗುತ್ತೇದಾರ ಮಾತನಾಡಿ, ನೇಹಾ ಕೊಲೆ ಅತ್ಯಂತ ಪೈಶಾಚಿಕ ಕೃತ್ಯವಾಗಿದೆ. ರಾಜ್ಯದ ಪ್ರತಿಯೊಬ್ಬರು ಬೆಚ್ಚಿಬಿಳಿಸುವಂತಹ ಘಟನೆ ನಡೆದಿದೆ. ಹೀಗಾಗಿ ನೇಹಾ ಕುಟುಂಬಕಷ್ಟೇ ಅಲ್ಲ ಸರ್ವ ಸಮಾಜಕ್ಕೆ ನೈತಿಕ ಬೆಂಬಲ ನೀಡುವುದಕ್ಕಾಗಿ ಗಂಗಾವತಿಯಲ್ಲಿ ಎಲ್ಲ ಸಮುದಾಯವನ್ನು ಒಗ್ಗೂಡಿಸಿ ಈ ಪ್ರತಿಭಟನೆ ನಡೆಸಲಾಗುತ್ತಿದೆ. ಇದರಲ್ಲಿ ಯಾವುದೇ ದೋಷವನ್ನು ಹುಡುಕದೇ ಗಂಗಾವತಿಯ ಸಮಸ್ಥ ಜನತೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ವೆಂಕಟೇಶ ಅಮರಜ್ಯೋತಿ, ನೀಲಕಂಠ ನಾಗಶೆಟ್ಟಿ ಮಾತನಾಡಿ, ಈ ರೀತಿಯ ಘಟನೆ ರಾಜ್ಯದ ಅನೇಕ ಭಾಗಗಳಲ್ಲಿ ನಡೆಯುತ್ತಿದೆ. ಗಂಗಾವತಿಯಲ್ಲೂ ಇಂತಹ ಘಟನೆ ನಡೆಯುತ್ತಿವೆ. ಹೀಗಾಗಿ ಸಮಾಜಕ್ಕೆ ಜಾಗೃತಿ ಮೂಡಿಸಲು ಮತ್ತು ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲು ಸರ್ವರು ಸೇರಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶರಣಯ್ಯಸ್ವಾಮಿ, ಅಯ್ಯನಗೌಡ ಹೇರೂರು, ಮಹಾಂತೇಶ ಶಾಸ್ತ್ರಿಮಠ, ಡಾ|| ಶರಬಯ್ಯ, ಸಂಗಮೇಶ ಅಯೋಧ್ಯಾ, ಶರಣಪ್ಪ ಮತ್ತಿತರು ಇದ್ದರು.

 

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!