ಗಂಗಾವತಿ.
ತಾಲೂಕಿನ ಐತಿಹಾಸಿಕ ಅಂಜನಾದ್ರಿ ಪರ್ವತದಲ್ಲಿ ಕಳೆದ ದಿನ ರಾಜಸ್ಥಾನದಿಂದ ಆಗಮಿಸಿದ್ದ ಭಕ್ತ ಹಿರಿಯ ಜೀವಿ ಹೃದಯಾಘಾತದಿಂದ ಮರಣ ಹೊಂದಿರುವುದು ಮತ್ತು ಇತ್ತಿಚೀಗೆ ಈ ರೀತಿಯ ಸಾವು, ನೋವುಗಳು ಆಗುತ್ತಿರುವುದು ಅತ್ಯಂತ ವಿಷಾದನೀಯವಾಗಿದೆ. ಭಕ್ತರ ಆರೋಗ್ಯ ರಕ್ಷಣೆಗಾಗಿ ಅಂಜನಾದ್ರಿಯಲ್ಲಿ ತುರ್ತು ವೈದ್ಯಕೀಯ ಚಿಕಿತ್ಸಾ ಘಟಕ ಪ್ರಾರಂಭಿಸಿ ತಜ್ಞ ವೈದ್ಯರನ್ನು ನಿಯೋಜಿಸಬೇಕು ಎಂದು ಬಿಜೆಪಿ ಎಸ್‌ಸಿ ಮೋರ್ಚಾ ಮುಖಂಡ ಶಿವಕುಮಾರ ಪೂಜಾರ ಅವರು ಶಾಸಕ ಗಾಲಿ ಜನಾರ್ಧನರೆಡ್ಡಿ ಮತ್ತು ಜಿಲ್ಲಾಡಳಿತ ಮತ್ತು ಆಡಳಿತಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರನ್ನು ಅಗ್ರಹಿಸಿದ್ದಾರೆ.
ಈ ಕುರಿತು ಅವರು ಸಮರ್ಥವಾಣಿಯೊಂದಿಗೆ ಮಾತನಾಡಿ ಅಗ್ರಹಿಸಿದ್ದಾರೆ. ತಾಲೂಕಿನ ಅಂಜನಾದ್ರಿ ದರ್ಶನಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ದೇಶ, ವಿದೇಶಗಳಿಂದ ಆಗಮಿಸುತ್ತಿದ್ದಾರೆ. ಭಕ್ತರು ೫೭೫ ಮೆಟ್ಟಿಲುಗಳನ್ನು ಏರಿ ದರ್ಶನ ಪಡೆಯುತ್ತಾರೆ. ಬಾಲಕರು, ಮಹಿಳೆಯರು, ವೃದ್ಧರು ಕೂಡಾ ಪರ್ವತ ಏರಿ ದರ್ಶನ ಪಡೆಯುತ್ತಾರೆ. ಆರೋಗ್ಯ ಸಮಸ್ಯೆಯನ್ನು ಲೆಕ್ಕಿಸದೇ ದೇವರ ದರ್ಶನ ಪಡೆಯಬೇಕೆಂಬ ತವಕದಿಂದ ಭಕ್ತರು ಬೆಟ್ಟವನ್ನು ಹತ್ತುವುದು ಸಹಜ. ಆದರೆ ಭಕ್ತರ ಆರೋಗ್ಯವನ್ನು ಕಾಪಾಡುವುದು ದೇವ್ಥಾನದ ಆಡಳಿತ ಮಂಡಳಿ ಮತ್ತು ಜಿಲ್ಲಾಡಳಿತದ ಜವಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಅಂಜನಾದ್ರಿ ಪರ್ವತದಲ್ಲಿ ತುರ್ತು ಚಿಕಿತ್ಸಾ ಘಟಕವನ್ನು ಶೀಘ್ರ ಪ್ರಾರಂಭಿಸಿ ತಜ್ಞ ವೈದ್ಯರು ಮತ್ತು ಔಷದೋಪಚಾರಕ್ಕೆ ವ್ಯವಸ್ಥೆ ಮಾಡಬೇಕು. ಅಂಜನಾದ್ರಿ ದರ್ಶನಕ್ಕೆ ಬರುವ ಸಂದರ್ಭದಲ್ಲಿ ರಸ್ತೆಯಲ್ಲಿ ಕೆಲವೊಮ್ಮೆ ಬೈಕ್ ಅಪಘಾತಗಳು ಸಂಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ಅತ್ಯವಶ್ಯವಾಗಿರುತ್ತದೆ. ಹೀಗಾಗಿ ಗಂಗಾವತಿ ಕ್ಷೇತ್ರದ ಶಾಸಕರು ಈ ಕುರಿತು ತಕ್ಷಣ ಸರಕಾರ ಮತ್ತು ಜಿಲ್ಲಾಡಳಿತದ ಗಮನಕ್ಕೆ ತಂದು ಭಕ್ತರ ಒಳಿತಿಗಾಗಿ ಚಿಕಿತ್ಸಾ ಘಟಕ ಪ್ರಾರಂಭಿಸಲು ಮುಂದಾಗಬೇಕು. ಅಂಜನಾದ್ರಿ ಪರ್ವತದಲ್ಲಿ ಭಕ್ತರ ಕಾಣಿಕೆಯಿಂದ ಪ್ರತಿ ತಿಂಗಳು ರೂ.೩೦ ಲಕ್ಷಕ್ಕೂ ಅಧಿಕ ಆದಾಯ ಬರುತ್ತಿದೆ. ಹೀಗಾಗಿ ತುರ್ತು ಚಿಕಿತ್ಸಾ ಘಟಕ ಮತ್ತು ಕುಡಿಯುವ ನೀರು ಮತ್ತಿತರ ಸೌಲಭ್ಯಗಳನ್ನು ಒದಗಿಸಬೇಕು. ಸಾಧ್ಯವಾದರೆ ಪರ್ವತದ ಮೇಲೆಯೂ ಕೂಡಾ ವಿಶೇಷ ದಿನಗಳಲ್ಲಾದರೂ ವೈದ್ಯಕೀಯ ವ್ಯವಸ್ಥೆ ಮಾಡಬೇಕು ಎಂದು ಶಿವಕುಮಾರ ಪೂಜಾರ ಅಗ್ರಹಿಸಿದ್ದಾರೆ.

 

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!