ಗಂಗಾವತಿ.
ಮುಂಬರುವ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬ ಗಂಗಾವತಿ ನಗರದಲ್ಲಿ ಅತ್ಯಂತ ಶಾಂತಿ, ಸಡಗರದಿಂದ ಆಚರಿಸಲು ಸರ್ವರು ಮುಂದಾಗಬೇಕು. ವಿಶೇಷವಾಗಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಡಿಜೆಯ ದೊಡ್ಡ ಸೌಂಡ್ ಮೂಲಕ ಮೆರವಣಿಗೆ ಮಾಡುವುದನ್ನು ಬಿಡಿ ಭಕ್ತಿಯ ಮೂಲಕ ವಿವಿಧ ಸಾಂಸ್ಕೃತಿಕ ಕಲಾ ಮೇಳಗಳ ಮೂಲಕ ಸಂಭ್ರಮದ ಮತ್ತು ಸೌಹಾರ್ದತೆಯ ಮೆರವಣಿಗೆ ನಡೆಸಿ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಸಿದ್ಧಿ ಗಂಗಾವತಿ ಜನತಗೆ ಕರೆ ನೀಡಿದರು.
ಪೊಲೀಸ್ ಠಾಣೆಯ ಮೂಲಕ ನಗರದ ಐಎಂಎ ಭವನದಲ್ಲಿ ಮುಂಬರುವ ಗಣಪತಿ ಮತ್ತು ಈದ್ ಮಿಲಾದ್ ಹಬ್ಬ ಆಚರಣೆ ಕುರಿತು ಆಯೋಜಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆವಹಿಸಿದ್ದ ಅವರು ಕೆಲವು ಮುಖಂಡರ ಸಲಹೆಗಳನ್ನು ಆಲಿಸಿ ನಂತರ ಮಾತನಾಡಿದರು. ಭಾತತ ಸ್ವತಂತ್ರ ಪಡೆಯುವುದಕ್ಕಾಗಿ ಗಣಪತಿ ಹಬ್ಬ ಪ್ರಾರಂಭವಾಯಿತು ಎಂಬ ವಿಚಾರ ನಮಗೆಲ್ಲ ತಿಳಿದಿದೆ. ನಂತರ ಇದು ಸಾರ್ವಜನಿಕ ಆಚರಣೆಯ ಉತ್ಸವಾಗಿ ಪ್ರತಿಯೊಂದ ಕಡೆಗಳಲ್ಲಿ ಸರ್ವ ಸಮಾಜಗಳೊಂದಿಗೆ ಶಾಂತಿ ಮತ್ತು ಸಂಭ್ರಮದಿಂದ ಆಚರಣೆಗೆ ಬಂದಿತು. ಅದೇ ರೀತಿ ಈದ್ ಮಿಲಾದ್ ಕೂಡಾ ಶಾಂತಿಯ ಸಂಕೇತವಾಗಿ ಆಚರಿಸಲಾಗುತ್ತದೆ. ಇಂದು ಈ ಹಬ್ಬಗಳು ರಾಷ್ಟ್ರೀಯ ಹಬ್ಬಗಳಾಗಿವೆ. ಆದರೆ ಹಬ್ಬ ಆಚರಣೆ ಸಂದರ್ಭದಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸದೇ ಇಷ್ಟಬಂದಂತೆ ಆಚರಿಸುವುದರಿಂದ ಶಾಂತಿಗೆ ಭಂಗ ಉಂಟಾಗುತ್ತದೆ. ಶಾಂತಿ ಕಾಪಾಡುವುದು ಮತ್ತು ಶಾಂತಿ ಭಂಗ ಬಂದರೆ ಕಠಿಣ ಕ್ರಮ ಕೈಗೊಳ್ಳುವುದು ಪೊಲೀಸರ ಕರ್ತವ್ಯವಾಗಿದೆ. ನೀವು ಶಾಂತಿಯಿಂದ ಹಬ್ಬ ಆಚರಿಸಿದರೆ ನಾವು ಅರಾಮವಾಗಿ ನಿದ್ದೆ ಮಾಡುತ್ತೇವೆ. ಹಬ್ಬದ ಸಂದರ್ಭದಲ್ಲಿ ಹಿಂದೆ ನಡೆದ ಹಲವು ಘಟನೆಗಳಿಂದಾಗಿ ಈಗ ಶಾಂತಿ ಸಭೆ ನಡೆಸುವ ಅನಿವಾರ್ಯವಿದೆ. ಸೌಹಾರ್ದತೆಯಿಂದ ಯುವಕರಿಗೆ ಹಬ್ಬ ಆಚರಿಸುವಂತೆ ತಿಳಿಸುವುದು ಎಲ್ಲರ ಕರ್ತವ್ಯವಾಗಿದೆ. ಕಳೆದ ವರ್ಷ ಡಿಜೆ ಸೌಂಡ್‌ನಿಂದಾಗಿ ಕೊಪ್ಪಳ ಜಿಲ್ಲೆಯಲಿ ಇಬ್ಬರು ಯುವಕರು ಅಸುನಿಗಿದ್ದಾರೆ. ಮತ್ತು ಸುಪ್ರೀಂ ಕೋರ್ಟ್ ಆದೇಶ ಪಾಲಿಸುವ ಉದ್ದೇಶದಿಂದ ಈ ವರ್ಷದ ಗಣಪತಿ ಮೆರವಣಿಗೆಯಲ್ಲಿ ಡಿಜೆ ಬಳಕೆ ಮಾಡುವುದನ್ನು ಸಂಪೂರ್ಣ ನಿಷೇಧಿಸಿದ್ದು, ಎಲ್ಲರು ಸಹಕಾರ ನೀಡಬೇಕು. ಮತ್ತು ಹಬ್ಬ ಆಚರಣೆಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡುತ್ತಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ಸುದ್ದಿಗಳಿಗೆ ಯಾರು ಮನ್ನಣೆ ನೀಡಬಾರದು. ಯಾವುದೇ ವಿಚಾಗಳಿದ್ದರೂ ತಕ್ಷಣ ನಮ್ಮೊಂದಿಗೆ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಮುಖಂಡ ಹನುಮಂತಪ್ಪ ನಾಯಕ, ಎಸ್.ಬಿ.ಖಾದ್ರಿ ಮಾತನಾಡಿ, ಎರಡು ಹಬ್ಬಗಳು ಒಟ್ಟಿಗೆ ಬಂದಿರುವುದರಿಂದ ಎಲ್ಲರು ಶಾಂತಿಯಿಂದ ಆಚರಿಸುತ್ತೇವೆ. ಗಂಗಾವತಿಯಲ್ಲಿ ಯಾವುದೇ ರೀತಿಯ ಗಲಭೆಯಾಗದಂತೆ ಸೌಹಾರ್ದತೆಯಿಂದ ಹಬ್ಬ ನಡೆಯುತ್ತದೆ ಎಂದರು. ಶಂಕರಗೌಡ ಹೊಸಳ್ಳಿ ಮಾತನಾಡಿ, ಡಿಜೆ ವಿಷಯದಲ್ಲಿ ಪೊಲೀಸರು ಕಠಿಣ ನಿರ್ಧಾರ ಕೈಗೊಳ್ಳಬೇಕು. ರಾಜಕೀಯ ಒತ್ತಡಕ್ಕೆ ಮಣಿದು ಕೆಲವರಿಗೆ ಅವಕಾಶ ಕೊಟ್ಟರೆ ಯುವಕರಲ್ಲಿ ಆಶಾಂತಿ ಸೃಷ್ಟಿಯಾಗುತ್ತದೆ. ಡಿಜೆ ಸಂಪೂರ್ಣ ನಿಷೇಧ ಮಾಡಲು ಮುಂದಾಗಿ ಎಂದು ಸಲಹೆ ನೀಡಿದರು. ಕಾಂಗ್ರೆಸ್ ಅಧ್ಯಕ್ಷ ಶ್ಯಾಮೀದ್ ಮನಿಯರ್ ಮಾತನಾಡಿ, ಈದ್ ಮಿಲಾದ್ ಹಬ್ಬವೂ ಗಣಪತಿ ಹಬ್ಬದ ಸಂದರ್ಭದಲ್ಲಿ ಬಂದಿದೆ. ಗಣಪತಿ ಒಂಬತ್ತನೇ ದಿನ ಸೆ.೧೫ ರಂದು ಬಡೇ ರಾತ್ ಇರುವುದರಿಂದ ಎಲ್ಲ ಮುಖಂಡರು ಸಹಕಾರದಿಂದ ಹಬ್ಬ ಆಚರಿಸಬೇಕು ಎಂದರು. ಸಂತೋಷ ಕೆಲೋಜಿ ಮಾತನಾಡಿ, ಸಂಭ್ರಮಗಳಿಗಾಗಿ ಹಬ್ಬಗಳ ಆಚರಿಸುತ್ತೇವೆ. ಡಿಜೆ ಸಂಪೂರ್ಣ ನಿಷೇಧಿಸುವ ಬದಲು ಕಡಿಮೆ ಸೌಂಡ್ ಇರುವಂತೆ ಆದೇಶ ಮಾಡಿ ಎಂದು ಸಲಹೆ ನೀಡಿದರು. ನೀಲಕಂಠಪ್ಪ ನಾಗಶೆಟ್ಟಿ ಮಾತನಾಡಿ, ಶಾಂತಿ ಸಭೆಗೆ ಬರುವ ಮುಖಂಡರು ಹಬ್ಬ ಆಚರಣೆಯ ಸಂದರ್ಭದಲ್ಲಿ ಭಾಗವಹಿಸಿದರೆ ಯಾವುದೇ ಗಲಭೆಗಳು ಆಗುವುದಿಲ್ಲ ಎಂದರು.
ನಗರಸಭೆ ಅಧ್ಯಕ್ಷ ಮೌಲಾಸಾಬ್ ಮಾತನಾಡಿ, ನಗರದಲ್ಲಿ ನಡೆಯುವ ಎರಡು ಹಬ್ಬಗಳನ್ನು ಶಾಂತಿಯಿಂದ ಆಚರಿಸಬೇಕು. ನಗರಸಭೆಯಿಂದ ಸ್ವಚ್ಚತೆಗೆ ಗಮನ ಕೊಡಲಾಗುವುದು ಎಂದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಪಾರ್ವತಮ್ಮ ದೊಡ್ಡಮನಿ, ಡಿವೈಎಸ್‌ಪಿ ಸಿದ್ಧಲಿಂಗಪ್ಪಗೌಡ ಪಾಟೀಲ್, ತಹಶೀಲ್ದಾರ ನಾಗರಾಜ, ನಗರ ಠಾಣೆ ಪಿಐ ಪ್ರಕಾಶ ಮಾಳೆ, ಗ್ರಾಮೀಣ ಠಾಣೆ ಪಿಐ ಸೋಮಶೇಖರ ಜುಟ್ಟಲ್, ಪರಿಸರ ಅಧಿಕಾರಿ ಹರಿಶಂಕರ, ಜೆಸ್ಕಾಂ ಎಇಇ ವಿರೇಶ, ಅರಣ್ಯಾಧಿಕಾರಿ ಸುಭಾಷ್ ನಾಯಕ, ಪಿಡಬ್ಲ್ಯೂ ಎಇಇ ವಿಶ್ವನಾಥ ಮತ್ತಿತರು ಇದ್ದರು. ನಗರದ ವಿವಿಧ ಗಣಪತಿ ಪ್ರತಿಷ್ಟಾಪನೆ ಸಮಿತಿ ಪದಾಧಿಕಾರಿಗಳು, ವಿವಿಧ ಸಮಾಜದ ಗಣ್ಯರು, ಯುವಕರು ಸಭೆಯಲ್ಲಿ ಭಾಗವಹಿಸಿದ್ದರು.
ಬಾಕ್ಸ್
ಡಿಜೆಗೆ ಅನುಮತಿ ನೀಡುವುದಿಲ್ಲ
ಗಣಪತಿ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಡಿಜೆ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ಡಿಜೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ. ಡಿಜೆಯಿಂದ ಹಲವು ದುರ್ಘಟನೆಗಳು ನಡೆದಿರುವುದು ನಮಗೆಲ್ಲ ತಿಳಿದ ವಿಷಯವಾಗಿದೆ. ಇನ್ನಿತರ ಕಲಾ ಮೆಳಗಳ ಮೂಲಕ ಸಂಭ್ರಮದಿಂದ ಜಿಲ್ಲೆಯ ಜನತೆ ಹಬ್ಬ ಆಚರಿಸಬೇಕು.
ರಾಮ ಅರಸಿದ್ಧಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕೊಪ್ಪಳ.