ಗಂಗಾವತಿ.
ನಗರದಲ್ಲಿ ಹಾಕಿರುವ ಅಲಂಕಾರಿಕ ಚಿತ್ರಗಳ ವಿದ್ಯತ್ ಕಂಬಗಳ ವಿವಾದ ಈಗ ಸಿಎಂ ಅಂಗಳಕ್ಕೆ ಹೊಗಿದೆ. ಕಳೆದ ದಿನ ಬಾಗಿನ ಸಮರ್ಪಣೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿರುವ ಎಸ್ ಪಿಡಿಐ ಪದಾಧಿಕಾರಿಗಳು ಗಂಗಾವತಿ ನಗರದ ರಾಣಾಪ್ರತಾಪ್ ವೃತ್ತದಿಂದ ಜುಲೈನಗರ ವೃತ್ತದವರೆಗೆ ಹಾಕಿರುವ ಕಂಬಗಳನ್ನು ತೆರವು ಮಾಡುವಂತೆ ಮನವಿ ಮಾಡಿದ್ದು, ಈ ವಿಷಯದಲ್ಲಿ ತಹಶೀಲ್ದಾರ ಮತ್ತು ನಗರಸಭೆ ಪೌರಾಯುಕ್ತರು ರಾಜಕೀಯ ಒತ್ತಡಕ್ಕೆ ಸಿಲುಕಿದ್ದಾರೆ ಎಂದು ಸಿಎಂ ಗೆ ದೂರಿದ್ದಾರೆ.
ಭಾನುವಾರ ಎಸ್ ಡಿಪಿಐ ಕಾರ್ಯದರ್ಶಿ ಚಾಂದ್ ಸಲ್ಮಾನ್ ಮತ್ತಿತರು ಮುನಿರಾಬಾದ್ ಬಳಿ ಖುದ್ದು ಸಿಎಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ಮಾಧ್ಯಮಗಳಿಗೆ ನೀಡಿದ್ದಾರೆ. ಗಂಗಾವತಿ ನಗರದಲ್ಲಿ ಮಹಾರಾಣ ಪ್ರತಾಪ್ ಸರ್ಕಲ್ ನಿಂದ ಜುಲೈ ನಗರ್ ರಸ್ತೆ ಮಧ್ಯೆ ಕೋಮು ಸೌಹಾರ್ದತೆಗೆ ಧಕ್ಕೆಯಾಗುವಂತೆ ಅಸಂವಿಧಾನಿಕವಾಗಿ ಹಾಕಲಾಗಿದ್ದ ವಿವಾದಿತ ವಿದ್ಯುತ್ ದೀಪಗಳನ್ನು ತೆರವುಗೊಳಿಸುವ ಕುರಿತು ನಗರಸಭೆ ಪೌರಾಯುಕ್ತರಿಗೆ ನಮ್ಮ ಪಕ್ಷದ ವತಿಯಿಂದ ಮನವಿ ಸಲ್ಲಿಸಿಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾಧಿಕಾರಿಗಳು ಗಂಗಾವತಿಯ ತಹಸೀಲ್ದಾರರಿಗೆ ಮೌಖಿಕ ಆದೇಶ ನೀಡಿ ನಿರ್ದಿಷ್ಟ ಧರ್ಮದ ಚಿಹ್ನೆಗಳನ್ನು ಹಾಕಲಾಗಿದ್ದ ವಿದ್ಯುತ್ ದೀಪದ ಕಂಬಗಳನ್ನು ತೆರವುಗೊಳಿಸಿ, ಕಾಮಗಾರಿ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಲು ಆದೇಶಿಸಿದ್ದರು. ಆದರೆ ಕೆಲ ಸ್ವಜನಪಕ್ಷಪಾತ ರಾಜಕಾರಣಿಗಳ ಒತ್ತಡಕ್ಕೆ ಮಣಿದು ತಹಶಿಲ್ದಾರರು ತೆರವಿಗೆ ನೀಡಿದ್ದ ಆದೇಶವನ್ನು ಹಿಂಪಡೆದು ವಿವಾದಿತ ವಿದ್ಯುತ್ ಕಂಬಗಳ ವಿಚಾರದ ಕುರಿತು ತೀರ್ಮಾನ ಕೈಗೊಳ್ಳಲು ನಗರಸಭೆ ಆಡಳಿತಕ್ಕೆ ಅಧಿಕಾರ ನೀಡಿ ಸಾಕಷ್ಟು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದ್ದಾರೆ. ಹಾಗೂ ಈ ವಿಷಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸಂವಿಧಾನದಲ್ಲಿ ಪ್ರಸ್ತಾಪವಾಗಿರುವ ಅಧಿಕಾರದ ಪ್ರತ್ಯೇಕತೆಯ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡಿರುತ್ತಾರೆ. ದೇಶದ ಉಚ್ಚನ್ಯಾಯಾಲಯಗಳ ತೀರ್ಪಿನ ಅನುಸಾರ ಸರ್ಕಾರಿ ಕಾಮಗರಿಗಳಲ್ಲಿ ಯಾವುದೇ ನಿರ್ದಿಷ್ಟ ಧರ್ಮದ ಚಿಹ್ನೆಗಳನ್ನು ಬಳಸುವುದು ಸೂಕ್ತವಲ್ಲ ಮತ್ತು ಕಾನೂನುಬಾಹಿರವಾಗಿರುತ್ತದೆ. ಆದುದರಿಂದ ಈ ವಿಷಯದಲ್ಲಿ ತಾವು ಸಂವಿಧಾನ ಬದ್ಧ ತೀರ್ಮಾನ ಕೈಗೊಂಡು ಸಂಬಂಧಪಟ್ಟ ವಿಷಯವನ್ನು ಕಾನೂನಾತ್ಮಕವಾಗಿ ಬಗೆಹರಿಸಲು ಕ್ರಮ ವಹಿಸಬೇಕೆಂದು ಸಿಎಂ ಗೆ ಕೊರಿದ್ದಾರೆ. ಮತ್ತು ಈದ್ ಮಿಲಾದ್ ಹಬ್ಬದ ಸಮಯದಲ್ಲಿ ರಾಜ್ಯದ ಹಲವೆಡೆ ಪ್ಯಾಲೇಸ್ತೀನ್ ಜನರ ಹಕ್ಕುಗಳಿಗಾಗಿ ಅವರಿಗೆ ಬೆಂಬಲ ಸೂಚಿಸುತ್ತಾ ಪ್ಯಾಲೇಸ್ತೀನ್ ಪರ ಬ್ಯಾನರ್ ಮತ್ತು ಧ್ವಜಗಳನ್ನು ಹಿಡಿದ ಕಾರಣಕ್ಕೆ ಅವರ ಮೇಲೆ ಪ್ರಕರಣಗಳು ದಾಖಲಾಗಿದೆ, ಗಂಗಾವತಿಯಲ್ಲೂ ಸಹ ಈದ್ ಮಿಲಾದ್ ಹಬ್ಬಕ್ಕೆ ಶುಭ ಕೋರುವ ಬ್ಯಾನರ್ ನಲ್ಲಿ ಕೇವಲ FREEPALESTINE ಎಂದು ಬರೆದಿದ್ದಕ್ಕೆ ಗಂಗಾವತಿಯ ಪೊಲೀಸರು ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಂಡಿರುತ್ತಾರೆ. ಜಾಗತಿಕ ಮಟ್ಟದಲ್ಲಿ ಭಾರತ ದೇಶವು ಸದಾ ಮಾನವ ಹಕ್ಕುಗಳ ಪರ ಧ್ವನಿ ಎತ್ತಿದ ಇತಿಹಾಸ ಮತ್ತು ಸಂಪ್ರದಾಯ ಹೊಂದಿದೆ. ಜಗತ್ತಿನಲ್ಲಿ ಎಲ್ಲೇ ಅನ್ಯಾಯ ನಡೆದರು ಅದರ ವಿರುದ್ಧ ಮಾತನಾಡಲು ಮತ್ತು ಮರ್ದಿತ ಜನರ ಪರ ಬೆಂಬಲವಾಗಿ ನಿಲ್ಲಲ್ಲು ಸಂವಿಧಾನದ 19 ನೇ ವಿಧಿ ಅನುಮತಿಸುತ್ತದೆ. ಅದಲ್ಲದೆ ಇದು ದೇಶದ ಪ್ರತಿಯೊಬ್ಬ ನಾಗರೀಕನ ಹಕ್ಕಾಗಿದೆ. ಪ್ಯಾಲೇಸೀನ್ ಜನರ ಪರ ಧ್ವನಿಯಾಗಿದ್ದಕ್ಕೆ ರಾಜ್ಯದ ವಿವಿಧ ಕಡೆಗಳಲ್ಲಿ ದಾಖಲಾಗಿರುವ ಪ್ರಕರಣಗಳು ಅನ್ಯಾಯದ ಪ್ರತೀಕ ಮತ್ತು ಸಂವಿಧಾನದ ಆಶಯಕ್ಕೆ ಸವಾಲಾಗಿದೆ. ಆದುದ್ದರಿಂದ ಸಮಾಜದ ಕಾಳಜಿ ಮತ್ತು ಮಾನವೀಯ ಪರ ಸದಾ ಧ್ವನಿಯಾಗುವ ತಾವುಗಳು ರಾಜ್ಯದಲ್ಲಿ ದಾಖಲಾದ ಇಂತಹ ಸುಳ್ಳು ಪ್ರಕರಣಗಳನ್ನು ರದ್ದುಗೊಳಿಸಲು ಕ್ರಮವಹಿಸಿ ಸಂಬಂಧಪಟ್ಟ ಇಲಾಖೆಗೆ ಅದೇಶಿಸಿ, ಪ್ರಕರಣ ದಾಖಲಿಸಿ ಅನ್ಯಾಯವಾಗಿ ಅಮಾಯಕರಿಗೆ ಕಿರುಕುಳ ನೀಡಿದ ಸಂಬಂಧಪಟ್ಟ ಅಧಿಕಾರಿಗಳ ಅಧಿಕಾರದ ದುರುಪಯೋಗದ ವಿರುದ್ಧ ಕಾನೂನು ಕ್ರಮ ಜರುಗಿಸಲು ಸೂಚಿಸಬೇಕೆಂದು ಚಾಂದ್ ಸಲ್ಮಾನ್ ಸಿಎಂಗೆ ಕೊರಿದ್ದಾರೆ.
ಈ ಸಂದರ್ಭದಲ್ಲಿ ಎಸ್ ಡಿಪಿಐ ಸಂಘಟನೆಯ ಗಂಗಾವತಿ ವಿಧಾನಸಭಾ ಕ್ಷೇತ್ರದ ಖಜಾಂಚಿ ಖಾಜಾ ಹುಸೇನ್, ಕಾರ್ಯದರ್ಶಿಯಾದ ಅಲ್ತಾಫ್ ಹುಸೇನ್, ಸದಸ್ಯರಾದ ಸಾಹಿಲ್, ಸದ್ದಾಂ, ಕ ಹುಸೇನ್, ಬಷೀರ್ ಇದ್ದರು.
ಬಾಕ್ಸ್
ವಿದ್ಯುತ್ ಕಂಬಕ್ಕೆ ಲೈಟಿಂಗ್: ನಗರಸಭೆ ಜಿಬಿಯಲ್ಲಿ ಪಾಸ್
ನಗರದಲ್ಲಿ ಹಾಕಿರುವ ವಿದ್ಯುತ್ ಕಂಬಗಳ ಅಲಂಕಾರಿಕ ಚಿತ್ರಗಳು ಯಾವುದೇ ಕೋಮು ಸೌಹಾರ್ದತೆತೆಗೆ ಧಕ್ಕೆ ಬರುವುದಿಲ್ಲ. ಅಂಜನಾದ್ರಿ ಇತಿಹಾಸ ಬಿಂಬಿಸುವ ಉದ್ದೇಶದಿಂದ ಹಾಕಿದ್ದು, ವಿದ್ಯತ್ ಸಂಪರ್ಕ ನೀಡುವಂತೆ ಶಾಸಕ ಜನಾರ್ಧನರೆಡ್ಡಿ ನೇತೃತ್ವದ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಒಪ್ಪಿಗೆ ಪಡೆದು ಅಧ್ಯಕ್ಷ ಮೌಲಾಸಾಬ್ ಅವರು ಅನುಮೊದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೆ ವಿದ್ಯುತ್ ದೀಪಗಳು ರಾರಾಜಿಸಲು ಚಾಲನೆ ನೀಡಲು ನಗರಸಭೆ ಅಧಿಕಾರಿಗಳು ಸಿದ್ದತೆ ಮಾಡುತ್ತಿದ್ದಾರೆ ವಿವಾದ ಸುಖಾಂತ್ಯ ಕಾಉವ ಸಮಯದಲ್ಲಿ ಎಸ್ ಡಿಪಿಐ ಪದಾಧಿಕಾರಿಗಳು ಕಂಬಗಳ ತೆರವಿಗೆ ಸಿಎಂಗೆ ಮನವಿ ಮಾಡಿರುವುದು ಅಧಿಕಾರಿಗಳು ಯಾವ ನಿರ್ಣಯ ಕೈಗೊಳ್ಳುತ್ತಾರೆ ಕಾದು ನೊಡಬೇಕಿದೆ.