ಗಂಗಾವತಿ.
ಅಧ್ಯಕ್ಷರು ರಾಜೀನಾಮೆ ನೀಡಿರುವ ಅವಧಿಯಲ್ಲಿ ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯತ್‌ನಲ್ಲಿ ಉದ್ಯೋಗ ಖಾತ್ರಿ, ೧೫ನೇ ಹಣಕಾಸು ಯೋಜನೆ, ಕರ ವಸೂಲಿಗೆ ಸಂಬಂಧಿಸಿದ ಅಂದಾಜು ರೂ.೩೦ ಲಕ್ಷ ಅನುದಾನವನ್ನು ಬಟಾವಡೆ ಮಾಡಿ ಪಂಚಾಯತನಲ್ಲಿ ಅಂದಾ ದರ್ಬಾರ ನಡೆಸಲಾಗಿದೆ ಎಂಬ ಆರೋಪ ಬಲವಾಗಿ ಕೇಳಿ ಬಂದಿದೆ. ತಮ್ಮ ಅಧಿಕಾರದ ಗದ್ದುಗೆ ರಾಜೀನಾಮೆ ನೀಡಿದ್ದ ಅಧ್ಯಕ್ಷರೊಂದಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಪತ್ತಾರ ಹಣ ಎತ್ತುವಳಿ ಮಾಡಿ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ. ತಕ್ಷಣ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಹಿತಿ ಹಕ್ಕು ಹೋರಾಟಗಾರ ಪರಶುರಾಮ ಸೇರಿದಂತೆ ಗ್ರಾಮ ಪಂಚಾಯತ್‌ನ ಹಲವು ಸದಸ್ಯರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಕಳೆದ ದಿನ ಗ್ರಾಮ ಪಂಚಾಯತ್ ಸದಸ್ಯರಾದ ಸ್ವಾತಿ ಕೃಷ್ಣಪ್ಪ, ಪಾಂಡುರಂಗ, ಧಂಜಪ್ಪ, ಪವಿತ್ರ, ಸುಮೇಶ, ಕಾಶಿರಾವ್ ಮತ್ತಿತರು ನೇರವಾಗಿ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ. ಮತ್ತು ಮಾಹಿತಿ ಹಕ್ಕು ಹೋರಾಟಗಾರ ಪರಶುರಾಮ ಕೂಡಾ ಮಲ್ಲಾಪುರ ಗ್ರಾಮ ಪಂಚಾಯತ್‌ನಲ್ಲಿ ಅಂದಾಜು ರೂ.೩೦ ಲಕ್ಷ ಹಣವನ್ನು ಅಧಿಕಾರ ದುರುಪಯೋಗಪಡಿಸಿಕೊಂಡು ಪಿಡಿಓ ಸರಕಾರದ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಮಲ್ಲಾಪುರ ಗ್ರಾಮ ಪಂಚಾಯತ್‌ನಲ್ಲಿ ಉದ್ಯೋಗ ಖಾತ್ರಿ ಯೋಜನೆ, 15ನೇ ಹಣಕಾಸು ಯೋಜನೆ ಸೇರಿದಂತೆ ಗ್ರಾಮದ ಜನರಿಂದ ವಸೂಲಿ ಮಾಡಿಕೊಂಡಿರುವ ಕರಕ್ಕೆ ಸಂಬಂಧಿಸಿದ ರೂ.30 ಲಕ್ಷಕ್ಕೂ ಅಧಿಕ ಹಣವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರು ರಾಜೀನಾಮೆ ನೀಡಿರುವ ಅವಧಿಯಲ್ಲಿ ಬಟವಾಡೆ ಮಾಡಿ ದಾಖಲೆಗಳನ್ನು ಸೃಷ್ಟಿಸಿರುವುದು ಬಯಲಿಗೆ ಬಂದಿದೆ. ಮಲ್ಲಾಪುರ ಗ್ರಾಮ ಪಂಚಾಯತ ಅಧ್ಯಕ್ಷರು ತಮ್ಮ ಕಳೆದ ಅಕ್ಟೋಬರ್ 14 ರಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮತ್ತು ಅಕ್ಟೋಬರ್ 24 ರಂದು ಉಪ ವಿಭಾಗಾಧಿಕಾರಿಗಳು ಅಧ್ಯಕ್ಷರ ರಾಜೀನಾಮೆಯನ್ನು ಅಂಗೀಕರಿಸಿ ಜಿಪಂ ಮತ್ತು ಗ್ರಾಪಂಗೆ ಸೂಚನೆ ನೀಡಿದ್ದಾರೆ. ಆದರೆ ಅಕ್ಟೋಬರ್ ೩೦ ರಂದು ರೂ.೧೯ ಲಕ್ಷಕ್ಕೂ ಅಧಿಕ ಹಣವನ್ನು ಅಧ್ಯಕ್ಷರ ಲಾಗೀನ್‌ನಲ್ಲಿ ಪೇಮೆಂಟ್ ಮಾಡಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ.
ಅ.14 ರಂದು ಅಧ್ಯಕ್ಷ ರಾಜೀನಾಮೆ ನೀಡಿದ್ದರೂ ಅ.೨೦ರಿಂದ ನ.೪ರವರೆಗೆ ೧೫ನೇ ಹಣಕಾಸು ಯೋಜನೆಯಲ್ಲಿ ಸುಮಾರು ರೂ.4 ಲಕ್ಷಕ್ಕೂ ಅಧಿಕ ಹಣವನ್ನು ವಿವಿಧ ಕಾರ್ಯಗಳಿಗೆ ಖರ್ಚು ಮಾಡಿ ಪೇಮೆಂಟ್ ಮಾಡಿರುವುದಾಗಿ ಪಿಡಿಓ ಶ್ರೀನಿವಾಸ ಪತ್ತಾರ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಮತ್ತು ಅದೇ ರೀತಿ ಉದ್ಯೋಗ ಖಾತ್ರಿ ಯೋಜನೆಯಲ್ಲೂ ಕೂಡಾ ಕೆರೆ ಹೂಳೆತ್ತುವ ಕಾಮಗಾರಿಗಾಗಿ ಅಧ್ಯಕ್ಷರ ರಾಜೀನಾಮೆ ನೀಡಿರುವ ಮತ್ತು ರಾಜೀನಾಮೆ ಅಂಗೀಕಾರವಾಗಿರುವ ಅವಧಿಯಲ್ಲಿ ಅಂದಾಜು ರೂ.16 ಲಕ್ಷಕ್ಕೂ ಅಧಿಕ ಹಣವನ್ನು ಪೇಮೆಂಟ್ ಮಾಡಿರುವುದಾಗಿ ದಾಖಲೆಗಳಲ್ಲಿ ತೊರಿಸುತ್ತಿದ್ದಾರೆ.
ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಓರ ಸಹಿಯೊಂದಿಗೆ ಮಾತ್ರ ಪಂಚಾಯತ್‌ನ ಹಣವನ್ನು ಚೆಕ್ ಮೂಲಕ ಪೆಮೆಂಟ್ ಮಾಡಬೇಕು. ಆದರೆ ಮಲ್ಲಾಪುರ ಗ್ರಾಪಂ ಅಧ್ಯಕ್ಷರು ವೈಯಕ್ತಿಕ ಕಾರಣಕ್ಕಾಗಿ ಅ.೧೪ ರಂದು ತಮ್ಮ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮತ್ತು ಅ.೨೪ ರಂದು ಉಪ ವಿಭಾಗಾಧಿಕಾರಿಗಳು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಆದರೆ ಈ ಅವಧಿಯಲ್ಲಿ ಪಂಚಾಯತ್‌ನ ಹಣ ವಿತರಣೆ ಮಾಡಿ ಪಿಡಿಓ ನಿಯಮ ಉಲ್ಲಂಘಿಸಿದ್ದಾರೆ.
ಅಧ್ಯಕ್ಷರು ರಾಜೀನಾಮೆ ನೀಡಿದ ಸಂದರ್ಭದಲ್ಲಿ ಹೊಸ ಅಧ್ಯಕ್ಷರ ಆಯ್ಕೆಯಾಗುವವರೆಗೂ ಪಂಚಾಯತ್‌ನಲ್ಲಿ ಯಾವುದೇ ಯೋಜನೆಯ ಹಣವನ್ನು ಖಾತೆಯಿಂದ ತೆಗೆಯಲು ಬರದಂತೆ ನಿಯಮವಿದೆ. ಆದರೆ ಮಲ್ಲಾಪುರ ಗ್ರಾಪಂನಲ್ಲಿ ಅಧ್ಯಕ್ಷರು ಇಲ್ಲದ ಅವಧಿಯಲ್ಲಿ ಹಣ ಎತ್ತುವಳಿ ಮಾಡಿರುವ ಪ್ರಕರಣ ಗ್ರಾಮದ ಜನರನ್ನು ಬೆಚ್ಚಿ ಬಿಳಿಸುವಂತೆ ಮಾಡಿದೆ. ಪಂಚಾಯತ್‌ನಲ್ಲಿ ಮಾಜಿ ಅಧ್ಯಕ್ಷರ ಮಾತನ್ನು ಕೇಳಿರುವ ಪಿಡಿಓ ಶ್ರೀನಿವಾಸ ಪತ್ತಾರ ಪಂಚಾಯತನಲ್ಲಿರುವ ಸರಕಾರದ ಅನುದಾನವನ್ನು ದುರ್ಬಳಕೆ ಮಾಡಿರುವುದು ಕಂಡು ಬಂದಿದೆ. ಈ ಕುರಿತು ತಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಯಾವುದೇ ಕ್ರಮ ಕೈಗೊಳ್ಳುವುದು ಅಥವಾ ಪರಿಶೀಲನೆ ಮಾಡಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸುವಲ್ಲಿ ನಿರ್ಲಕ್ಷವಹಿಸಿದ್ದಾರೆ. ಹೀಗಾಗಿ ಪಂಚಾಯತ್ ಸದಸ್ಯರು ಹಣ ದುರ್ಬಳಕೆಯಾಗಿರುವ ಕುರಿತು ನೇರವಾಗಿ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಓ ಅವರಿಗೆ ಲಿಖಿತವಾಗಿ ದೂರು ನೀಡಿದ್ದಾರಲ್ಲದೇ ತಕ್ಷಣ ಮಾಜಿ ಅಧ್ಯಕ್ಷರು ಮತ್ತು ಕರ್ತವ್ಯದಲ್ಲಿರುವ ಪಿಡಿಓ ವಿರುದ್ಧ ಕಾನೂನು ಕ್ರಮ ಕೈಗೊಂಡು ಪೋಲಾಗಿರುವ ಹಣವನ್ನು ಪುನಃ ಪಂಚಾಯತ್‌ಗೆ ಜಮಾ ಮಾಡುವಂತೆ ಒತ್ತಾಯಿಸಿದ್ದಾರೆ.
ಬಾಕ್ಸ್:
ಪಿಡಿಓರಿಂದ ಅನುದಾನ ದುರ್ಬಳಕೆ
ಮಲ್ಲಾಪುರ ಗ್ರಾಪಂನಲ್ಲಿ ಅಧ್ಯಕ್ಷರು ರಾಜೀನಾಮೆ ನೀಡಿರುವ ಅವಧಿಯಲ್ಲಿ ರೂ.೩೦ ಲಕ್ಷಕ್ಕೂ ಅಧಿಕ ಹಣವನ್ನು ಪಿಡಿಓ ಪೇಮೆಂಟ್ ಮಾಡಿದ್ದಾರೆ. ಈ ರೀತಿ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೂ ಪಿಡಿಓ ಪೇಮೆಂಟ್ ಮಾಡಿರುವುದು ಆಶ್ಚರ್ಯ ಮೂಡಿಸಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ನನ್ನ ಬಳಿ ಲಭ್ಯವಿದೆ. ಮತ್ತು ಕೆಲವು ದಾಖಲೆಗಳನ್ನು ನೀಡುವಂತೆ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಅರ್ಜಿ ಸಲ್ಲಿಸಿದರೂ ಪಿಡಿಓ ಸರಿಯಾಗಿ ಮಾಡಿಲ್ಲ. ಪಿಡಿಓ ವಿರುದ್ಧ ಕೆಲವು ಸದಸ್ಯರು ಕೂಡಾ ದೂರು ನೀಡಿದ್ದಾರೆ. ಹೀಗಾಗಿ ತಕ್ಷಣ ಜಿಪಂ ಸಿಇಓ ಅವರು ಪಿಡಿಓ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಲ್ಲಾಪುರ ಗ್ರಾಮದ ಮಾಹಿತಿ ಹಕ್ಕು ಹೋರಾಟಗಾರ ಪರಶುರಾಮ ಒತ್ತಾಯಿಸಿದ್ದಾರೆ.
ಬಾಕ್ಸ್:
ನಿಯಮಾನುಸಾರ ಅನುದಾನ ಬಳಕೆ
ಮಲ್ಲಾಪುರ ಗ್ರಾಪಂನಲ್ಲಿ ಅಧ್ಯಕ್ಷರು ರಾಜೀನಾಮೆ ನೀಡಿರುವ ಅವಧಿಯಲ್ಲಿ ಪೇಮೆಂಟ್ ಮಾಡಿರುವುದು ಸರಿಯಿದೆ. ಇದನ್ನು ನಿಯಮಾನುಸಾರ ಪೇಮೆಂಟ್ ಮಾಡಿದೆ. ಈ ಕುರಿತು ಸಂಬಂಧಿಸಿದ ಮೇಲಾಧಿಕಾರಿಗಳ ಗಮನಕ್ಕು ತರಲಾಗಿದೆ. ನಾನು ಯಾವುದೇ ರೀತಿಯ ನಿಯಮ ಉಲ್ಲಂಘಿಸಿಲ್ಲ. ಅನವಶ್ಯಕವಾಗಿ ನನ್ನ ವಿರುದ್ಧ ನೀಡಿದ್ದಾರೆ. ಈ ಕುರಿತು ಎಲ್ಲಾ ದಾಖಲೆಗಳನ್ನು ಮೇಲಾಧಿಕಾರಿಗಳಿಗೆ ಸಲ್ಲಿಸುತ್ತೇನೆ.
ಶ್ರೀನಿವಾಸ ಪತ್ತಾರ, ಪಿಡಿಓ, ಗ್ರಾಪಂ ಮಲ್ಲಾಪುರ.