ಕೊಪ್ಪಳ.
ಇತ್ತೀಚಿಗೆ ಉಂಟಾದ ನಗರದ ಶ್ರೀ ರಾಯರ ಮಠದ ವಿವಾದ ಭಕ್ತರ ನಡುವೆ ಆತಂಕ ಸೃಷ್ಟಿಸಿದೆ. ಮಂತ್ರಾಲಯ ಶ್ರೀ ಸುಬುಧೇಂದ್ರತೀರ್ಥ ಶ್ರೀಗಳು ಕೊಪ್ಪಳ ಮಠದಲ್ಲಿ ಹಮ್ಮಿಕೊಂಡಿದ್ದ ರಾಮದೇವರ ಪೂಜೆ ಮತ್ತಿತರ ಕಾರ್ಯಕ್ರಮಗಳನ್ನು ಬಿಟ್ಟು ಮಠದ ಹೊರಗೆ ನಮಸ್ಕರಿಸಿ ಬೇಸರದಿಂದ ಹೋಗಿದ್ದರು. ಇದು ಮಠಗಳ ಹೊರತಾಗಿ ಶ್ರೀ ರಾಘವೇಂದ್ರಸ್ವಾಮಿಗಳ ಸರ್ವ ಭಕ್ತರಲ್ಲಿ ಆತಂಕ ಮೂಡಿದೆ. ಹೀಗಾಗಿ ಕೊಪ್ಪಳ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಬಸವರಾಜ ಹಿಟ್ನಾಳ್ ಅವರು ಸಂದಾನಕ್ಕೆ ಎಂಟ್ರಿಯಾಗಿದ್ದಾರೆ.
ಭಾನುವಾರ ಆನೆಗೊಂದಿ ಹತ್ತಿರದ ನವವೃಂದಾವನಗಡ್ಡೆಯಲ್ಲಿ ನಡೆಯುತ್ತಿದ್ದ ಕವೀಂದ್ರತೀರ್ಥರ ಮಧ್ಯಾರಾಧನೆ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರತೀರ್ಥ ಶ್ರೀಗಳನ್ನು ಮಾಜಿ ಶಾಸಕ ಬಸವರಾಜ ಹಿಟ್ನಾಳ್ ಭೇಟಿ ಮಾಡಿ ಆಶೀರ್ವಾದ ಪಡೆದರು. ನಂತರ ಶ್ರೀಗಳೊಂದಿಗೆ ಮಾತನಾಡಿ, ಇತ್ತೀಚಿಗೆ ಕೊಪ್ಪಳ ರಾಯರ ಮಠದಲ್ಲಿ ನಡೆದ ಕೆಲವು ಘಟನೆ ಎಲ್ಲಾ ಭಕ್ತರಲ್ಲೂ ಬೇಸರವಿದೆ. ವಿವಾದ ಮುಂದುವರೆಯಲು ಆಸ್ಪದ ಕೊಡದೇ ಸರ್ವ ಭಕ್ತರಿಗೂ ತಾವು ಆಶೀರ್ವದಿಸಿ ಮಾರ್ಗದರ್ಶನ ಮಾಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರೀಯಿಸಿದ ಶ್ರೀಗಳು ನಮ್ಮ ಮಂತ್ರಾಲಯ ಮಠದಿಂದ ಕೊಪ್ಪಳ ರಾಯರಮಠವನ್ನು ಪಡೆದುಕೊಳ್ಳಬೇಕೆಂಬ ಯಾವ ಇಚ್ಛೆ ನಮಗೆ ಇಲ್ಲ. ಅಲ್ಲಿನ ವ್ಯವಸ್ಥಾಪಕ ಜಗನ್ನಾಥ ಬಗ್ಗೆ ನಮಗೂ ಗೌರವವಿದೆ. ಅಂದು ರಾತ್ರಿ ಸಮಯದಲ್ಲಿ ಭಕ್ತರ ಮನೆ ಮುಂದೆ ಗುಂಪಾಗಿ ಬಂದು ಮಾತನಾಡಿರುವುದು ನಮಗೆ ಬೇಸರವಾಗಿದೆ. ಮಂತ್ರಾಲಯ ಮಠ ಯಾವುದೇ ವಿವಾದಕ್ಕೆ ಆಸ್ಪದ ಕೊಡದಂತೆ ಎಲ್ಲಾ ಮಠಗಳ ಅಭಿವೃದ್ಧಿಗೆ ಮುಂದಾಗುತ್ತದೆ. ನಮ್ಮ ಮಠದ ಬಗ್ಗೆ ಯಾರಲ್ಲೂ ತಪ್ಪು ಕಲ್ಪನೆ ಬರಬಾರದು ಎಂದು ಹಿಟ್ನಾಳ್ ಅವರಿಗೆ ತಿಳಿಸಿದರು ಎಂದು ಅಲ್ಲಿ ನಡೆದ ಚರ್ಚೆ ಬಗ್ಗೆ ಹಿಟ್ನಾಳ್ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಮುಖಂಡ ರಾಘವೆಂದ್ರ ಗುನ್ನಾಳ, ಅಪ್ಪಣ್ಣ ಗುನ್ನಾಳ, ಹನುಮಂತ ಮಾರನಾಳ, ಜಿಪಂ ಮಾಜಿ ಸದಸ್ಯ ಮಹೇಶ ಹಳ್ಳಿ, ಶ್ರೀನಿವಾಸ ಡಣಾಪೂರ ವಕೀಲ, ವಿಜಯ ಡಣಾಪೂರ
ಸುದರ್ಶನ ರಾಘವೆಂದ್ರ ಹಿಟ್ನಾಳ ಇದ್ದರು.
ಬಾಕ್ಸ್:
ಕೊಪ್ಪಳ ಮಠದ ಬಗ್ಗೆ ಶ್ರೀಗಳಲ್ಲಿ ಗೌರವವಿದೆ
ಇತ್ತೀಚಿಗೆ ಕೊಪ್ಪಳಕ್ಕೆ ಮಂತ್ರಾಲಯ ಶ್ರೀಗಳು ಆಗಮಿಸಿದ ಸಂದರ್ಭದಲ್ಲಿ ಕೆಲ ಘಟನೆ ನಡೆದಿದ್ದು, ರಾಯರ ಎಲ್ಲಾ ಭಕ್ತರಿಗೂ ಬೇಸರವಾಗಿದೆ. ಹೀಗಾಗಿ ನಾವು ಮಂತ್ರಾಲಯ ಶ್ರೀಗಳನ್ನು ಭೇಟಿ ಮಾಡಿ ಅವರ ಅನುಗ್ರಹ ಪಡೆದುಕೊಂಡು ವಿವಾದಕ್ಕೆ ಆಸ್ಪದ ಕೊಡದಂತೆ ಎಲ್ಲರಿಗೂ ಆಶೀರ್ವದಿಸಬೇಕೆಂದು ನಾವು ಮನವಿ ಮಾಡಿದೆವು. ಇದಕ್ಕೆ ಶ್ರೀಗಳು ಉತ್ತಮವಾಗಿ ಸ್ಪಂದಿಸಿ ಕೊಪ್ಪಳ ರಾಯರ ಮಠದ ಬಗ್ಗೆ ಗೌರವ ವ್ಯಕ್ತಪಡಿಸಿದರು. ಜೊತೆಗೆ ಕೊಪ್ಪಳದ ಮಠದ ವ್ಯವಸ್ಥಾಪಕ ಜಗನ್ನಾಥ ಅವರ ಬಗ್ಗೆಯೂ ಗೌರವದ ಮಾತನಾಡಿದರು. ಅಂದು ಶ್ರೀಗಳು ತಂಗಿದ್ದ ಭಕ್ತರ ಮನೆಗೆ ತೆರಳಿ ಕೆಲವರು ಮಾತನಾಡಿರುವ ಬಗ್ಗೆ ಶ್ರೀಗಳು ಬೇಸರ ವ್ಯಕ್ತಪಡಿಸಿದರು. ಕೊಪ್ಪಳ ರಾಯರ ಮಠವನ್ನು ಮಂತ್ರಾಲಯ ಮಠಕ್ಕೆ ಪಡೆದುಕೊಳ್ಳಬೇಕೆಂಬ ಉದ್ದೇಶ ತಮಗೆ ಇಲ್ಲ ಎಂದು ಸುಬುಧೇಂದ್ರ ಶ್ರೀಗಳು ನಮಗೆ ಸ್ಪಷ್ಟಪಡಿಸಿದ್ದಾರೆ. ಯಾವ ಮಠದ ಭಕ್ತರು ಈ ವಿಷಯದಲ್ಲಿ ಅನವಶ್ಯಕ ಗೊಂದಲ ಸೃಷ್ಟಿಸಬಾರದು ಎಂಬುದೇ ನಮ್ಮ ಕಳಕಳಿಯಾಗಿದೆ. ಕೊಪ್ಪಳದ ಪ್ರಮುಖ ಸಮಾಜದಲ್ಲಿ ವಿವಾದ ಉಂಟಾಗಬಾರದೆಂಬ ಉದ್ದೇಶದಿಂದ ನಾವು ಶ್ರೀಗಳನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ. ಯಾರಿಂದಲೂ ತಪ್ಪು ಮಾಹಿತಿ ರವಾನೆಯಾಗದಂತೆ ಸಮಾಜದ ಮುಖಂಡರು ಭಕ್ತರಿಗೆ ತಿಳಿಸಬೇಕು.
ಬಸವರಾಜ ಹಿಟ್ನಾಳ್, ಮಾಜಿ ಶಾಸಕರು, ಕೊಪ್ಪಳ.
———
ಅನವಶ್ಯಕ ಆಡಿಯೋ ಮೆಸೇಜ್: ಗೊಂದಲ ಸೃಷ್ಟಿ
ಭಾನುವಾರ ಮಂತ್ರಾಲಯ ಮಠದ ಶ್ರೀಗಳು ನವವೃಂದಾವನಗಡ್ಡೆಯಲ್ಲಿ ಕವೀಂದ್ರತೀರ್ಥರ ಆರಾಧನೆ ಪೂಜೆಯಲ್ಲಿ ನಿರತರಾಗಿದ್ದರು. ಈ ನಡುವೆ ಕೊಪ್ಪಳ ರಾಯರಮಠಕ್ಕೆ ಮಂತ್ರಾಲಯದ ಭಕ್ತರು ಬಂದು ತಮ್ಮ ಶಾಖಾ ಮಠ ಎಂದು ಬೋರ್ಡ್ ಹಾಕಲು ಶ್ರೀಗಳು ಆಜ್ಞೆ ಮಾಡಿದ್ದಾರೆ ಎಂಬ ಆಡಿಯೋ ಮೆಸೇಜ್ ವಾಟ್ಸ್‌ಪ್‌ಗಳಲ್ಲಿ ಹರಿದಾಡಿದ್ದು, ಇದು ಕೊಪ್ಪಳದ ರಾಯರಮಠಕಷ್ಟೆ ಅಲ್ಲ ಕೊಪ್ಪಳ ಸರ್ವ ಸಮುದಾಯದ ಜನರಲ್ಲಿ ಗೊಂದಲ ಮೂಡಿಸಿತ್ತು. ಇದನ್ನು ಗಮನಿಸಿದ್ದ ಶ್ರೀಗಳು ನಾವು ಅಂತಹ ಯಾವುದೇ ವಿಷಯ ಯಾರಿಗೂ ತಿಳಿಸಿಲ್ಲ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಸ್ವತಃ ಕೊಪ್ಪಳದ ಮಾಜಿ ಶಾಸಕ ಬಸವರಾಜ ಹಿಟ್ನಾಳ್ ಅವರ ಮುಂದೆ ಸುಬುಧೇಂದ್ರ ಶ್ರೀಗಳು ಸ್ಪಷ್ಟಪಡಿಸಿದ್ದಾರೆ. ಕೊಪ್ಪಳದ ಮಹಿಳೆಯೋಬ್ಬರಿಂದ ಈ ಮೆಸೇಜ್ ಹರಿದಾಡಿದೆ ಎಂಬ ಮಾಹಿತಿ ಈಗ ಲಭ್ಯವಾಗಿದೆ.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!