ಗಂಗಾವತಿ.
ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಹಿಡಿತದಲ್ಲಿದ್ದ ಗಂಗಾವತಿ ನಗರಸಭೆಯನ್ನು ಬಿಜೆಪಿ ತೆಕ್ಕೆಗೆ ತರುವಲ್ಲಿ ಹಾಲಿ ಶಾಸಕ ಗಾಲಿ ಜನಾರ್ಧನರೆಡ್ಡಿ ಅನ್ಸಾರಿ ಬೆಂಬಲಿಗರನ್ನೇ ತಮ್ಮತ್ತ ಸೆಳೆದುಕೊಂಡು ಕಳೆದ ಏಳು ತಿಂಗಳ ಹಿಂದೆ ಕಾಂಗ್ರೆಸ್ ಸದಸ್ಯರಿಗೆ ಅಧ್ಯಕ್ಷ, ಉಪಾಧ್ಯಕ್ಷ ಪಟ್ಟ ಕಟ್ಟಿ ನಗರಸಭೆಯಲ್ಲಿ ಬಿಜೆಪಿ ಧ್ವಜ ಹಾರಾಡಿಸಿದ್ದರು. ರಾಜಕೀಯ ತಂತ್ರಗಾರಿಕೆಯನ್ನು ಅನುಸರಿಸಿದ್ದ ಜನಾರ್ಧನರೆಡ್ಡಿ ಅಧಿಕಾರವನ್ನು ಏಳು ತಿಂಗಳ ನಂತರ ಮೂಲ ಬಿಜೆಪಿಗರಿಗೆ ಹಸ್ತಾಂತರಿಸುವಂತೆ ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಹಾಲಿ ನಗರಸಭೆ ಅಧ್ಯಕ್ಷ ಮೌಲಾಸಾಬ್ ದಾದೇಸಾಬ್ ಮತ್ತು ಉಪಾಧ್ಯಕ್ಷೆ ಪಾರ್ವತಮ್ಮ ದೊಡ್ಡಮನಿ ಅವರ ಅಧಿಕಾರ ಮೊಟಕುಗೊಳಿಸುವ ಸೂಚನೆಯಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ.
ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿರುವ ಅಧ್ಯಕ್ಷ ಮೌಲಾಸಾಬ್ ಮತ್ತು ಉಪಾಧ್ಯಕ್ಷೆ ಪಾರ್ವತಮ್ಮ ದೊಡ್ಡಮನಿ ಶಾಸಕರ ಸೂಚನೆಯಂತೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ೨೦೨೩ರಲ್ಲಿ ಜನಾರ್ಧನರೆಡ್ಡಿ ಗಂಗಾವತೆ ಕ್ಷೇತ್ರಕ್ಕೆ ಕೆಆರ್‌ಪಿಪಿಯಿಂದ ಸ್ಪರ್ಧಿಸಿದ ಸಂದರ್ಭದಲ್ಲಿ ಇಕ್ಬಾಲ್ ಅನ್ಸಾರಿ ಬೆಂಬಲಿತ ಕಾಂಗ್ರೆಸ್ ಪಕ್ಷದ ಹತ್ತಕ್ಕು ಹೆಚ್ಚು ಸದಸ್ಯರನ್ನು ತಮ್ಮತ್ತ ಸೇಳೆದುಕೊಂಡು ಶಾಸಕರಾಗಿದ್ದರು. ನಂತರ ಲೋಕಸಭೆ ಚುನಾವಣೆಯಲ್ಲಿ ರೆಡ್ಡಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಂತೆ ರೆಡ್ಡಿ ಪಾಳಯದಲ್ಲಿದ್ದ ಎಲ್ಲಾ ನಗರಸಭೆ ಸದಸ್ಯರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದರು. ೨೦೨೪ರ ಆಗಷ್ಟನಲ್ಲಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಮಿಸಲಾತಿ ಬದಲಾಗುತ್ತಿದ್ದಂತೆ ಶಾಸಕ ಜನಾರ್ಧನರೆಡ್ಡಿ ನಗರಸಭೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಮೌಲಾಸಾಬ್ ಮತ್ತು ಪಾರ್ವತಮ್ಮ ಅವರು ಮೂಲತಃ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಸದಸ್ಯರಾಗಿದ್ದರೂ ಎಲ್ಲಾ ಬಿಜೆಪಿ ಸದಸ್ಯರೊಂದಿಗೆ ಚರ್ಚಿಸಿ ಅನ್ಸಾರಿಯಿಂದ ನಗರಸಭೆ ಹಿಡಿತ ತಪ್ಪಿಸುವ ಉದ್ದೇಶದಿಂದ ಮೌಲಾಸಾಬ್ ಮತ್ತು ಪಾರ್ವತಮ್ಮಕ್ಕೆ ಪಟ್ಟ ಕಟ್ಟಿದ್ದರು. ಶಾಸಕರು ತೆಗೆದುಕೊಂಡಿದ್ದ ನಿಲುವಿಗೆ ಬಿಜೆಪಿ ಪಾಳಯದಲ್ಲೂ ಅಸಮಾಧಾನ ಸ್ಪೋಟಗೊಂಡಿತ್ತು. ಆದರೆ ಶಾಸಕ ಜನಾರ್ಧನರೆಡ್ಡಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರೊಂದಿಗೆ ಮಾತನಾಡಿ, ಏಳು ತಿಂಗಳ ನಂತರ ಅಧಿಕಾರ ಹಸ್ತಾಂತರಿಸುವಂತೆ ಸೂಚನೆ ನೀಡಿದ್ದರು. ಈಗ ಅವರ ಅವಧಿ ಪೂರ್ಣಗೊಂಡಿದ್ದ ಹಿನ್ನೆಲೆಯಲ್ಲಿ ಮೂಲ ಬಿಜೆಪಿಯವರಿಗೆ ಅಧಿಕಾರ ನೀಡಲು ಹಾಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ರಾಜೀನಾಮೆಗೆ ಸೂಚನೆ ನೀಡಿದ್ದಾರೆ.
ಈಗ ಹಾಲಿ ಅಧ್ಯಕ್ಷ ಉಪಾಧ್ಯಕ್ಷ ರಾಜೀನಾಮೆ ನಂತರ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರೀಯೆ ನಡೆಯಲಿದೆ. ಮೊದಲೇ ನಿರ್ಧರಿಸಿದಂತೆ ಶಾಸಕ ಜನಾರ್ಧನರೆಡ್ಡಿ ವಲಯದಲ್ಲಿ ಗುರುತಿಸಿಕೊಂಡಿರುವ ಮತ್ತು ಬಿಜೆಪಿಯ ಎಲ್ಲಾ ಸದಸ್ಯರು ಒಟ್ಟಾಗಿ ಮಿಸಲಾತಿ ಪ್ರಕಾರ ಪರಶುರಾಮ ಮಡ್ಡೇರ್, ಅಜಯ ಬಿಚ್ಚಾಲಿ ಅಥವಾ ನೀಲಕಂಠ ಕಟ್ಟಿಮನಿ ಅವರಲ್ಲಿ ಒಬ್ಬರಿಗೆ ಅಧ್ಯಕ್ಷರನ್ನಾಗಿ ಮಾಡಲು ಸಿದ್ಧತೆ ನಡೆಯುತ್ತಿದೆ. ಈ ಹಿಂದೆ ಭರವಸೆ ನೀಡಿದಂತೆ ಶಾಸಕ ಗಾಲಿ ಜನಾರ್ಧನರೆಡ್ಡಿ ಮತ್ತು ಬಿಜೆಪಿ ಎಲ್ಲಾ ಹಿರಿಯ ಮುಖಂಡರು ಪರಶುರಾಮ ಮಡ್ಡೇರ್‌ಗೆ ಅಧ್ಯಕ್ಷ ಸ್ಥಾನ ನೀಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಈ ನಡುವೆ ಅಜಯ ಬಿಚ್ಚಾಲಿ ಕೂಡಾ ಅಧ್ಯಕ್ಷರಾಗಲು ಭಾರಿ ಕಸರತ್ತು ನಡೆಸುತ್ತಿದ್ದಾರೆ. ಶಾಸಕ ಜನಾರ್ಧನರೆಡ್ಡಿ ಸೂಚನೆಯಂತೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಅಲಂಕರಿಸುತ್ತಾರೆ. ಈ ನಡುವೆ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತೆ ನಗರಸಭೆ ತಮ್ಮ ಕೈವಶ ಮಾಡಿಕೊಳ್ಳಬೇಕೆಂದು ಬಯಸಿದರೆ ನಗರಸಭೆಯ ಕಾಂಗ್ರೆಸ್ ಸದಸ್ಯರೆಲ್ಲರನ್ನು ಒಂದುಗೂಡಿಸುವ ಪ್ರಯತ್ನ ನಡೆಯಲಿದೆ. ಚುನಾವಣೆ ಪ್ರಕ್ರೀಯೆ ನಂತರ ನಗರಸಭೆ ಆಡಳಿತ ಯಾರ ಕೈಗೆ ಬರಲಿದೆ ಎಂಬುದು ಸ್ಪಷ್ಟವಾಗಲಿದೆ.