ಗಂಗಾವತಿ.
ನಗರದಲ್ಲಿ ಮಾವಿನಹಣ್ಣು, ಬಾಳೆಹಣ್ಣು ಸೇರಿದಂತೆ ಹಲವು ಹಣ್ಣುಗಳಲ್ಲಿ ರಸಾಯನಿಕ ವಸ್ತುವನ್ನು ಮಿಶ್ರಣ ಮಾಡಿ ಮಾಗಿಸಿ ಮಾರಾಟ ಮಾಡುವ ಕೆಲಸ ಎಗ್ಗಿಲ್ಲದೇ ನಡೆಯುತ್ತಿದೆ. ಹಣ್ಣುಗಳಿಗೆ ರಸಾಯನಿಕ ವಸ್ತು ಮಿಶ್ರಣ ಮಾಡಿರುವ ಹಣ್ಣುಗಳನ್ನು ತಿನ್ನುವುದರಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಸಂದರ್ಭ ಇರುತ್ತದೆ. ಹೀಗಾಗಿ ನಗರದ ಹಣ್ಣು ಮಾರಾಟಗಾರರನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಯುವ ಮುಖಂಡ ರಾಚಪ್ಪ ಸಿದ್ಧಾಪುರ ಅಗ್ರಹಿಸಿದ್ದಾರೆ.
ಈ ಕುರಿತು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಅವರು ಒತ್ತಾಯಿಸಿದ್ದಾರೆ. ತೋಟದಿಂದ ಮಾಗದೇ ಇರುವಂತಹ ಹಣ್ಣುಗಳನ್ನು ತರುವ ಕೆಲವು ಮಾರಾಟಗಾರರು ತ್ವರಿತವಾಗಿ ಹಣ್ಣು ಮಾಗಲು ರಸಾಯನಿಕ ವಸ್ತು ಮಿಶ್ರಣ ಮಾಡುತ್ತಿದ್ದಾರೆ. ನಗರದ ಬಹುತೇಕ ಹಣ್ಣು ವ್ಯಾಪಾರಿಗಳು ಮತ್ತು ಬಂಡಿಗಳಲ್ಲಿ ಇಂತಹ ರಸಾಯನಿಕ ಮಿಶ್ರಣ ಮಾಡಿರುವ ಹಣ್ಣುಗಳೇ ಮಾರಾಟವಾಗುತ್ತಿವೆ. ಇಂತಹ ಹಣ್ಣುಗಳನ್ನು ಖರೀದಿಸಿ ತಿನ್ನುವ ಗ್ರಾಹಕರು ಹಲುವ ರೋಗಗಳಿಗೆ ತುತ್ತಾಗುತ್ತಾರೆ. ಧೂಮಪಾನ, ಮದ್ಯಪಾನ, ಗುಟಕಾದಂತಹ ವಸ್ತುವನ್ನು ಸೇವಿಸುವುದರಿಂದ ಕ್ಯಾನ್ಸರ್, ಹೃದಯರೋಗ ಬರುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ. ಆದರೆ ಈಗ ರಸಾಯನಿಕ ಮಿಶ್ರಣ ಮಾಡಿರುವ ಹಣ್ಣುಗಳನ್ನು ತಿನ್ನುವುದರಿಂದ ಮನುಷ್ಯರಿಗೆ ಮಾರಕ ರೋಗಗಳು ಬರುತ್ತವೆ. ನಗರದಲ್ಲಿ ರಸಾಯನಿಕ ಮಿಶ್ರಣ ಮಾಡಿರುವ ಹಣ್ಣುಗಳ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದು, ಇದರ ನಿಯಂತ್ರಣಕ್ಕೆ ನಗರಸಭೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಬೇಕು. ಜನತೆಗೆ ಜಾಗೃತಿ ಮೂಡಿಸುವುದರ ಜೊತೆಗೆ ಹಣ್ಣುಗಳ ಮಾರಾಟದ ಬಂಡಿಗಳು, ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಮುಂದೆ ಜನರಿಗೆ ಆಗುವ ಅನಾಹುತವನ್ನು ತಪ್ಪಿಸಬೇಕು ಎಂದು ರಾಚಪ್ಪ ಸಿದ್ಧಾಪುರ ಮನವಿ ಮಾಡಿದ್ದಾರೆ.