ಗಂಗಾವತಿ.
ತಾಲೂಕಿನ ಐತಿಹಾಸಿಕ ಅಂಜನಾದ್ರಿ ಪರ್ವತದಲ್ಲಿನ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆ ಮಾಡಿದ್ದು, ೫೬ ದಿನಗಳಲ್ಲಿ ಒಟ್ಟೂ ರೂ. ೩೦,೨೧,೨೫೩.೦೦ ಸಂಗ್ರಹವಾಗಿದೆ. ಈ ಬಾರಿ ಪಾಕಿಸ್ತಾನ ಸೇರಿದಂತೆ ಶ್ರೀಲಂಕಾ, ನೇಪಾಳ, ಮೋರಾಕೋ, ಯುಎಸ್‌ಎ ದೇಶಗಳ ನಾಣ್ಯಗಳು ಹುಂಡಿಯಲ್ಲಿ ದೇಣಿಗೆ ರೂಪದಲ್ಲಿ ಸಂಗ್ರಹವಾಗಿರುವುದು ವಿಶೇಷವಾಗಿದೆ.
ಮಂಗಳವಾರ ಕೊಪ್ಪಳ ಸಹಾಯಕ ಆಯುಕ್ತ ಹಾಗೂ ಅಂಜನಾದ್ರಿ ಪರ್ವತದ ಕಾರ್ಯ ನಿರ್ವಾಹಣಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಆದೇಶದಂತೆ ತಹಶೀಲ್ದಾರ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ದೇವಸ್ಥಾನದ, ಬ್ಯಾಂಕ್ ಸಿಬ್ಬಂದಿಗಳು ಹಣ ಎಣಿಕೆ ಮಾಡಿರುವ ಕುರಿತು ಸಾರ್ವಜನಿಕರಿಗೆ ಮಾಹಿತಿ ಬಹಿರಂಗಪಡಿಸಿದ್ದಾರೆ.
೨೭-೦೩-೨೦೨೪ ರಿಂದ ೨೧-೦೫-೨೦೨೪ ರವರೆಗೆ ಒಟ್ಟು ೫೬ ದಿನಗಳ ಅವಧಿಯಲ್ಲಿ ಒಟ್ಟು ರೂ. ೩೦,೨೧,೨೫೩/- ರೂಪಾಯಿಗಳು ಸಂಗ್ರಹವಾಗಿದೆ. ಕಳೆದ ಮಾರ್ಚ್.೨೭ ರಂದು ಹುಂಡಿ ಎಣಿಕೆ ಸಂದರ್ಭದಲ್ಲಿ ಕೇವಲ ರೂ. ರೂ.೯,೨೯,೧೪೭.೦೦ ಸಂಗ್ರಹವಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಹಣ ಎಣಿಕೆ ಸಂದರ್ಭದಲ್ಲಿ ಕಂದಾಯ ಇಲಾಖೆ ಶಿರಸ್ತೇದಾರರಾದ ರವಿಕುಮಾರ ನಾಯಕ್ವಾಡಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ್, ಮಹೇಶ್ ದಲಾಲ್, ಹಾಲೇಶ ಗುಂಡಿ, ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ ಶ್ರೀಕಂಠ, ಗುರುರಾಜ, ಮಂಜುನಾಥ ಹಿರೇಮಠ, ಇಂದಿರಾ, ಅನ್ನಪೂರ್ಣ, ಕವಿತಾ ಕೆ, ಸುಧಾ, ಸೌಭಾಗ್ಯ, ಕವಿತಾ, ಸೈಯದ್ ಮುರ್ತುಜಾ, ಶ್ರೀರಾಮ ಜೋಶಿ, ಪವನ್ ಕುಮಾರ್ ನಿಲೋಗಲ್, ಪಿಕೆಜಿಬಿ ಸಣಾಪೂರ ಬ್ಯಾಂಕ್ ಸಿಬ್ಬಂದಿ ಸುನಿಲ್, ರಾಜಶೇಖರ್, ಶ್ರೀನಿವಾಸ್, ದೇವಸ್ಥಾನ ಸಿಬ್ಬಂದಿ ವೆಂಕಟೇಶ ಸೇರಿದಂತೆ ಹಲವು ಭಕ್ತರು ಇದ್ದರು. ಪೊಲೀಸ್ ಮತ್ತು ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಹಣ ಎಣಿಕೆ ಮಾಡಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಾಕ್ಸ್:
ಕಳೆದ ತಿಂಗಳ ಸಂಗ್ರಹ ಕೊರತೆ: ಅಧಿಕಾರಿಗಳ ಮೌನ
ತಾಲೂಕಿನ ಐತಿಹಾಸಿಕ ಅಂಜನಾದ್ರಿ ಪರ್ವತ ಸರಕಾರದ ಸುಪರ್ದಿಗೆ ಬಂದ ನಂತರ ದೇವಸ್ಥಾನದಲ್ಲಿ ಹುಂಡಿ ಹಣವನ್ನು ನಿರಂತರವಾಗಿ ಎಣಿಕೆ ಮಾಡಿ ಸಾರ್ವಜನಿಕವಾಗಿ ಮಾಹಿತಿ ನೀಡಲಾಗುತ್ತಿದೆ. ಪ್ರತಿ ಬಾರಿಯು ಕನಿಷ್ಟ ರೂ.೨೦ ಲಕ್ಷಕ್ಕೂ ಅಧಿಕ ಹಣ ಹುಂಡಿಯಲ್ಲಿ ಸಂಗ್ರಹವಾಗಿರುವುದು ನಾಲ್ಕು ವರ್ಷಗಳಿಂದ ಮಾಹಿತಿ ಇದೆ. ಆದರೆ ಕಳೆದ ಮಾರ್ಚ್ ತಿಂಗಳಲ್ಲಿ ದಿಡೀರ್ ಸಂಗ್ರಹ ಕೇವಲ ರೂ. ೯.೨೯ ಲಕ್ಷ ಮಾತ್ರ ಸಂಗ್ರಹವಾಗಿತ್ತು. ಸಂಗ್ರಹದ ಕೊರತೆ ಕುರಿತು ಚರ್ಚೆ ನಡೆದಿತ್ತು. ಮತ್ತು ದೇವಸ್ಥಾನದಲ್ಲಿ ಒಬ್ಬ ವ್ಯಕ್ತಿ ಭಕ್ತರು ತಟ್ಟೆಯಲ್ಲಿ ಹಾಕಿದ್ದ ಹಣವನ್ನು ಚೀಲದಲ್ಲಿ ತುಂಬಿಕೊಳ್ಳುತ್ತಿರುವ ದೃಶ್ಯ ಸಿಸಿ ಟಿವಿ ಮೂಲಕ ಪತ್ತೆಯಾಗಿತ್ತು. ಮತ್ತು ಇದು ಸಾರ್ವಜನಿಕರ ವಲಯದಲ್ಲಿ ಗಂಭೀರ ಚರ್ಚೆಯಾಗಿತ್ತು. ಈ ಕುರಿತು ಸಹಾಯಕ ಆಯುಕ್ತರು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಮುಂದೆ ಇದರ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಯಿತು ಎಂಬ ಮಾಹಿತಿ ಬಹಿರಂಗಪಡಿಸದೇ ಅಧಿಕಾರಿಗಳು ಮೌನವಾಗಿದ್ದರು. ಆದರೆ ಈಗ ಮತ್ತೆ ಹಣ ಸಂಗ್ರಹ ಏರಿಕೆಯಾಗಿರುವುದು ಭಕ್ತರು ನಿರಾಳರಾಗಿದ್ದಾರೆ. ಆದರೆ ಹಿಂದಿನ ಕೊರತೆ ತನಿಖೆ ನಡೆಸಬೇಕು ಎಂದು ಅಗ್ರಹಿಸುತ್ತಿದ್ದಾರೆ.