ಗಂಗಾವತಿ.
ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಮೂರು ಬಣಗಳಾಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಗೆ ಹೆಚ್ಚು ಮನ್ನಣೆ ನೀಡುತ್ತಿರುವುದು ಮತ್ತೊಮ್ಮೆ ಸಾಬೀತಾಗಿದೆ. ಇತ್ತೀಚಿಗೆ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಯಲ್ಲಿ ಅನ್ಸಾರಿ ಬೆಂಬಲಿಗರನ್ನು ನಾಮ ನಿರ್ದೇಶನ ಮಾಡಿರುವ ಸರಕಾರ ಈಗ ತಾಲೂಕು ಪಂಚಾಯತ್‌ನ ತ್ರೈಮಾಸಿಕ(ಕೆಡಿಪಿ) ಸಮಿತಿಗೆ ತಮ್ಮ ಬೆಂಬಲಿಗರನ್ನು ನಾಮ ನಿರ್ದೇಶನ ಮಾಡುವಲ್ಲಿ ಅನ್ಸಾರಿ ಯಶಸ್ವಿಯಾಗಿದ್ದಾರೆ.
ಸರಕಾರದ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖಿಕ ಇಲಾಖೆ ಕಾರ್ಯದರ್ಶಿ ಮಲ್ಲಿನಾಥ ಅವರು ಚುನಾವಣೆ ಪೂರ್ವದಲ್ಲೇ ಗಂಗಾವತಿ ತಾಪಂ ತ್ರೈಮಾಸಿಕ ಸಮಿತಿಗೆ ಅನ್ಸಾರಿ ಬೆಂಬಲಿಗ ಆರು ಜನ ಸದಸ್ಯರನ್ನು ನಾಮ ನಿರ್ದೇಶನ ಮಾಡಿದ್ದರು. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬುಧವಾರ ನಾಮ ನಿರ್ದೇಶನ ಸದಸ್ಯರಾಗಿರುವ ಹೇರೂರು ಗ್ರಾಮದ ಉಮೇಶ ತಂದೆ ಅಯ್ಯಣ, ಆಚಾರ ನರಸಾಪುರ ಗ್ರಾಮದ ನಾಗಣ್ಣಗೌಡ, ಮಲಕನಮರಡಿ ಗ್ರಾಮದ ವೆಂಕಟೇಶ, ಗಂಗಾವತಿ ನಗರದ ೮ನೇ ವಾರ್ಡ್‌ನ ರಫಿಕ್ ಸಂಪಂಗಿ, ೨೫ನೇ ವಾರ್ಡ್ ಗೌಸೀಯಾ ಗಂಡ ಕೆ.ಸನ್ನಿಕ್ ಮತ್ತು ೨೬ನೇ ವಾರ್ಡ್‌ನ ಭೀಮೇಶ ಅವರುಗಳು ತಾಪಂ ಇಓ ಲಕ್ಷ್ಮೀದೇವಿ ಮೂಲಕ ನೇಮಕಾತಿ ಆದೇಶ ಪತ್ರವನ್ನು ಪಡೆದುಕೊಂಡು ಪದಗ್ರಹಣ ಮಾಡಿದರು.
ನಂತರ ಎಲ್ಲಾ ಸದಸ್ಯರನ್ನು ಅಭಿನಂದಿಸಿದ ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ ಮಾತನಾಡಿ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ನಿರ್ದೇಶನದಂತೆ ಸರಕಾರ ಗಂಗಾವತಿ ತಾಲೂಕು ಪಂಚಾಯತ್ ಕೆಡಿಪಿ ಸಮಿತಿಗೆ ನೇಮಕ ಮಾಡಿರುವ ಸದಸ್ಯರನ್ನು ಅಭಿನಂದಿಸಲಾಗುವುದು. ಸದಸ್ಯರು ಸರಕಾರದ ನಿರ್ದೇಶನದಂತೆ ಕೆಡಿಪಿ ಸಮಿತಿಯ ಕಾರ್ಯಗಳನ್ನು ಮಾಡುವಲ್ಲಿ ಹೆಚ್ಚು ಶ್ರಮಿಸಿ ಪಕ್ಷದ ಸಂಘಟನೆ ಮಾಡಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಸಮಿತಿ ತಾಲೂಕು ಅಧ್ಯಕ್ಷ ವೆಂಕಟೇಶಬಾಬು, ಸದಸ್ಯ ಕೆ.ಸನ್ನಿಕ್, ಕೆಸರಹಟ್ಟಿ ವಿಎಸ್‌ಎಸ್‌ಎನ್ ನಿರ್ದೇಶಕ ವಿಶ್ವನಾಥ ಮಾಲೀಪಾಟೀಲ್, ಮಾಜಿ ನಗರಸಭೆ ಸದಸ್ಯ ಹುಸೇನಪ್ಪ ಹಂಚಿನಾಳ, ನೀಲಕಂಠ ಹೊಸಳ್ಳಿ ಸೇರಿದಂತೆ ಇಕ್ಬಾಲ್ ಅನ್ಸಾರಿ ಬೆಂಬಲಿತ ಕಾಂಗ್ರೆಸ್ ಮುಖಂಡರು ಇದ್ದರು.
ಬಾಕ್ಸ್:
ಅನ್ಸಾರಿ ಪಾರುಪತ್ಯ: ವಿರೋಧಿ ಬಣಕ್ಕೆ ಮುಜುಗರ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದರೂ ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮೂರು ಬಣಗಳಾಗಿದ್ದು ಮುಖಂಡರಲ್ಲಿ ತಿಕ್ಕಾಟ ನಡೆಯುತ್ತಿದೆ. ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಚುನಾವಣೆಯಲ್ಲಿ ಸೋತಿದ್ದರೂ ಸರಕಾರದಲ್ಲಿ ಸಿಎಂ ಸಿದ್ಧರಾಮಯ್ಯ ಮೂಲಕ ಸರಕಾರದಲ್ಲಿ ತಮ್ಮ ಹಿಡಿತ ಸಾಧಿಸುತ್ತಿದ್ದಾರೆ. ಆದರೆ ಅವರ ವಿರೋಧಿ ಬಣವಾಗಿರುವ ಮಾಜಿ ವಿಧಾನ ಪರಿಷತ್ ಸದಸ್ಯ ಹೆಚ್.ಆರ್.ಶ್ರೀನಾಥ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ಯಾಮೀದ್ ಮನಿಯಾರ್ ಅವರು ಪ್ರತ್ಯೇಕವಾಗಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುತ್ತಿದ್ದು, ಸರಕಾರದ ಕೆಲವು ನಾಮ ನಿರ್ದೇನಗಳನ್ನು ತಮ್ಮ ಬೆಂಬಲಿಗರಿಗೆ ಕೊಡಿಸಲು ಕಸರತ್ತು ನಡೆಸುತ್ತಿದ್ದಾರೆ. ಆದರೆ ಸರಕಾರ ಮಾತ್ರ ಇಕ್ಬಾಲ್ ಅನ್ಸಾರಿಗೆ ಮಣೆಯಾಗುತ್ತಿರುವುದು ಇತ್ತೀಚಿನ ಗ್ಯಾರಂಟಿ ಮತ್ತು ತಾಪಂ ನಾಮ ನಿರ್ದೇಶನದಿಂದ ಬಹಿರಂಗವಾಗಿದೆ. ಈಗ ನಗರ ಪ್ರಾಧಿಕಾರದಲ್ಲೂ ತಮ್ಮ ಬೆಂಬಲಿಗರಿಗೆ ಅಧಿಕಾರ ಕೊಡಿಸಲು ಮುಂದಾಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅನ್ಸಾರಿಗೆ ಹೆಚ್ಚು ಮನ್ನಣೆ ನೀಡುತ್ತಿರುವುದು ಕಂಡು ಬರುತ್ತಿದೆ.