ಗಂಗಾವತಿ.
ತಾಲೂಕಿನ ಐತಿಹಾಸಿಕ ಆನೆಗೊಂದಿಯ ನವವೃಂದಾವನಗಡ್ಡೆಯಲ್ಲಿ ಶ್ರೀ ರಘುವರ್ಯತೀರ್ಥ ಯತಿಗಳ ಆರಾಧನೆ ಮಹೋತ್ಸವ ಜೂ.23, 24 ಮತ್ತು 25 ರಂದು ಮೂರು ದಿನಗಳ ಉತ್ತರಾದಿಮಠದ ನೇತೃತ್ವದಲ್ಲಿ ಅದ್ದೂರಿಯಾಗಿ ಆಚರಿಸಲಿದ್ದು, ಶ್ರೀಮಠದ ಪೀಠಾಧೀಶ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಪೂಜಾ ಕಾರ್ಯ ನೇರವೇರಿಸಲಿದ್ದಾರೆ.
ಈ ಕುರಿತು ಉತ್ತರಾದಿಮಠದ ಪ್ರಮುಖ ಅಡಿವರಾವ್ ಕುಲಕರ್ಣಿ ಮಾಹಿತಿ ನೀಡಿದ್ದಾರೆ. ನವವೃಂದಾವನಗಡ್ಡೆಯ ಶ್ರೀ ರಘುವರ್ಯತೀರ್ಥರ ಮೂಲ ವೃಂದಾವನದಲ್ಲಿ ನಡೆಯುವ ಮೂರು ದಿನಗಳ ಆರಾಧನೆ ಮಹೋತ್ಸವದಲ್ಲಿ ರಾಜ್ಯದ ಅನೇಕ ಕಡೆಗಳಿಂದ ಸಾವಿರಾರು ಭಕ್ತರು ಆಗಮಿಸಿಲಿದ್ದಾರೆ. ಮತ್ತು ಶ್ರೀಗಳು ಮೂರು ದಿನಗಳ ಆರಾಧನೆಯಲ್ಲಿ ಧಿಗ್ವಿಜಯ ಮೂಲ ರಾಮದೇವರ ಸಂಸ್ಥಾನ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಆರಾಧನೆ ನಿಮಿತ್ಯ ರಘುವರ್ಯತೀರ್ಥರ ಸನ್ನಿಧಿಗೆ ಸಾವಿರಾರು ಭಕ್ತರು ಆಗಮಿಸಿಲಿದ್ದು, ಆರಾಧನೆಯ ಮೂರು ದಿನಗಳ ಪೂಜಾ ಕೈಂಕರ್ಯವನ್ನು ನಡೆಸುವಂತೆ ಉತ್ತರಾದಿಮಠಕ್ಕೆ ಕೋರ್ಟ್ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆ ಒದಗಿಸಬೇಕು ಎಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ಅಡಿವರಾವ್ ಅವರು ಮನವಿ ಮಾಡಿದ್ದಾರೆ.