ಕಾರಟಗಿ.
ಮಾಜಿ ಶಾಸಕ ಹಾಗೂ ಹಾಲಿ ಕೊಪ್ಪಳ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರ ದೇವದಾಸಿಯರಿಗೆ ಸರಕಾರ ಹಂಚಿಕೆ ಮಾಡಿರುವ ಜಮೀನನ್ನೆ ಕಬಳಿಕೆ ಮಾಡಿರುವ ಕುರಿತು ಈಗಾಗಲೇ ಸಿಂಧನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭೂ ಒಡೆತನ ಯೋಜನೆಯಲ್ಲಿ ರಾಜ್ಯ ಸರಕಾರ ನೀಡಿರುವ ದೇವದಾಸಿಯರ ಜಮೀನನ್ನೆ ಕಬಳಿಕೆ ಮಾಡಿದ್ದಾರೆ ಎಂದರೆ ಮಾಜಿ ಶಾಸಕರು ಹಾಗೂ ಹಾಲಿ ಬಿಜೆಪಿ ಜಿಲ್ಲಾಧ್ಯಕ್ಷರ ಮನಸ್ಥಿತಿ ಯಾವ ರೀತಿ ಇದೆ. ಇಂತವರಿಂದ ರಾಜಕಾರಣಿಗಳು ತಲೆತಗ್ಗಿಸುವಂತಾಗುತ್ತದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಕಾರಟಗಿ ಪಟ್ಟಣದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ದೇವದಾಸಿಯರಿಗೆ ಹಂಚಿಕೆ ಮಾಡಿದ್ದ ಜಮೀನನ್ನು ಕಬಳಿಕೆ ಮಾಡಿದ್ದಾರೆ ಎಂದರೆ ಅವರು ಯಾವ ಮಟ್ಟಕ್ಕೆ ಹೋಗಿದ್ದಾರೆ ಎಂಬುದು ಜನರೇ ಅರ್ಥ ಮಾಡಿಕೊಳ್ಳಬೇಕು. ದೇವದಾಸಿಯವರ ಆಸ್ತಿ ಹೊಡೆಯುವ ವ್ಯಕ್ತಿಯನ್ನು ಬಿಜೆಪಿಯವರು ಜಿಲ್ಲಾಧ್ಯಕ್ಷರನ್ನಾಗಿ ಮಾಡಿರುವುದು ನಾಚಿಕೆಯಾಗುತ್ತದೆ. ಸುಮಾರು ೬೦ ಎಕರೆಯಷ್ಟು ಭೂಮಿಯನ್ನು ಕಬಳಿಸಿದ್ದಾರೆ ಎಂಬ ಆರೋಪ ಇದೆ. ಈ ಕುರಿತು ಪ್ರಕರಣ ದಾಖಲಾಗಿದೆ. ಇದರ ಕುರಿತು ನಾನು ರಾಯಚೂರು ಜಿಲ್ಲಾಧಿಕಾರಿಗಳೊಂದಿಗೆ ಮಾಹಿತಿ ಪಡೆಯುತ್ತೇನೆ. ಈ ಪ್ರಕರಣ ರಾಜ್ಯ ಕಾರ್ಯದರ್ಶಿಯವರ ಮಟ್ಟಕ್ಕೆ ಹೋಗಲಿದೆ. ದೇವದಾಸಿಯವರಿಗೆ ಸರಕಾರ ಯಾಕೆ ಭೂಮಿ ಕೊಟ್ಟಿರುತ್ತದೆ ಎಂಬ ಸಂಗತಿ ಅರಿಯವದವರನ್ನು ಬಿಜೆಪಿಯವರು ಕೊಪ್ಪಳ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಇಂತಹವರು ಕನಕಗಿರಿ ಕ್ಷೇತ್ರಕ್ಕೆ ಶಾಸಕರಾಗಿದ್ದರು. ತಂಗಡಗಿ ಎರಡು ಕೈಗಳಿಂದ ಹಣ ಪಡೆಯುತ್ತಾರೆ ಎಂದು ನನ್ನ ಬಗ್ಗೆ ಹೇಳಿಕೆ ನೀಡುವ ದಢೇಸೂಗೂರು ಈಗ ದೇವದಾಸಿಯವರ ಆಸ್ತಿ ಲೂಟಿ ಮಾಡಿ ಮಾನ ಕಳೆದುಕೊಂಡಿದ್ದಾರೆ. ಜವಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಇಂತಹ ಕೀಳುಮಟ್ಟದ ಕೆಲಸ ಮಾಡುತ್ತಾರೆ ಎಂದರೆ ನನ್ನ ಮನಸ್ಸಿಗೂ ನೋವ್ವಾಗಿದೆ. ಇಂತಹವರಿಗೆ ಜವಬ್ದಾರಿ ನೀಡಿರುವ ಬಿಜೆಪಿಯನ್ನು ಜನ ಎಂದಿಗೂ ಕ್ಷಮಿಸುವುದಿಲ್ಲ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿದ್ದು, ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ತಂಗಡಗಿ ತಿಳಿಸಿದರು.
ಬಾಕ್ಸ್:
ಕೇಂದ್ರದ ಬಜೆಟ್ ಸುಳ್ಳಿನ ಕಂತೆ
ಇಂದು ಮಂಡನೆಯಾಗಿರುವ ಕೇಂದ್ರ ಬಜೇಟ್ ಸಂಪೂರ್ಣ ಸುಳ್ಳಿನ ಕಂತೆಯಾಗಿದೆ. ನಮ್ಮ ಕರ್ನಾಟಕಕ್ಕೆ ಅವರು ನಯ್ಯಾಪೈಸೆ ಕೊಡುವುದಿಲ್ಲ ಎಂಬುದು ನಮಗೆ ದೃಢವಾಗಿದೆ. ಹೀಗಾಗಿ ನಾವು ಅವರಿಂದ ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ. ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಹಣವನ್ನೇ ಅವರು ಕೊಟ್ಟಿಲ್ಲ. ಭದ್ರಾ ಯೋಜನೆ ಅನುಷ್ಟಾನಕ್ಕೆ ಅನುದಾನ ನೀಡಿಲ್ಲ. ನಮ್ಮ ರಾಜ್ಯದವರೆ ಆಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿಯಲ್ಲಿ ೧೬ ಬಣಗಳಾಗಿ ಮುಖಂಡರು ಬಡೆದಾಡಿಕೊಳ್ಳುತ್ತಿದ್ದಾರೆ. ಅವರಿಗೆ ಅಭಿವೃದ್ಧಿ ಚಿಂತನೆ ಮಾಡಲು ಪುರಸತ್ತು ಇಲ್ಲ. ಹೀಗಾಗಿ ಕೇಂದ್ರದ ಮೋದಿ ಸರಕಾರ ನಮ್ಮ ಕರ್ನಾಟಕವನ್ನು ನಿರ್ಲಕ್ಷ ಮಾಡಿದೆ.
ಶಿವಜಾರ ತಂಗಡಗಿ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!