ಕಾರಟಗಿ.
ಗಂಗಾವತಿಯಲ್ಲಿ ಆಯೋಜಿಸಿರುವ ಕೊಪ್ಪಳ ಜಿಲ್ಲೆಯ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಾರಟಗಿ ತಾಲೂಕಿನ ಹೋರಾಟಗಾರರು, ಸಾಹಿತಿಗಳು, ವಾಣಿಜ್ಯೋದ್ಯಮಿಗಳು ಸೇರಿದಂತೆ ಹಲವರನ್ನು ಕಡೆಗಣಿಸಲಾಗಿದೆ ಎಂದು ೩೭೧ಜೆ ಅನುಷ್ಟಾನ ಸಮಿತಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಬಸವರಾಜ ಪಗಡದಿನ್ನಿ ಕಸಾಪ ಜಿಲ್ಲಾ ಪದಾಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ.
ಈ ಕುರಿತು ಅವರು ಸಮರ್ಥವಾಣಿಯೊಂದಿಗೆ ಮಾತನಾಡಿ ಸಾಹಿತ್ಯ ಸಮ್ಮೇಳನಕ್ಕೆ ಜನರ ನಿರುತ್ಸಾ ಎಂಬ ವರದಿಗೆ ಅವರು ಪ್ರತಿಕ್ರೀಯಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಗಂಗಾವತಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿರುವುದು ನಾವು ಸ್ವಾಗತಿಸಿದ್ದೇವೆ. ಆದರೆ ಸಮ್ಮೇಳನಕ್ಕೆ ಕಾರಟಗಿ ತಾಲೂಕಿನ ಬಹುತೇಕ ಜನರನ್ನು ಕಡೆಗಣಿಸಿರುವುದು ನಮಗೆ ಬೇಸರ ಮೂಡಿಸಿದೆ. ಕಾರಟಗಿ ತಾಲೂಕು ಕೂಡಾ ಅಖಂಡ ಗಂಗಾವತಿ ತಾಲೂಕಿನ ಭಾಗವಾಗಿತ್ತು ಎಂಬುದನ್ನು ಕಸಾಪ ಪದಾಧಿಕಾರಿಗಳು ಮರೆತಿದ್ದಾರೆಯೇ. ಸಾಹಿತ್ಯ ಸಮ್ಮೇಳನದಲ್ಲಿ ಕಾರಟಗಿ ತಾಲೂಕುನ್ನು ಒಳಗೊಂಡು ಗಂಗಾವತಿ ಕಿಷ್ಕಿಂಧಾ ಜಿಲ್ಲೆಯಾಗಬೇಕೆಂಬ ಕೂಗು ಹಾಕಲಾಗಿದೆ. ಆದರೆ ಕಾರಟಗಿ ತಾಲೂಕಿನ ಹೋರಾಟಗಾರರನ್ನು ಸಮ್ಮೇಳನಕ್ಕೆ ಕನಿಷ್ಟ ಸೌಜನ್ಯಕ್ಕಾದರೂ ಅಹ್ವಾನ ನೀಡಿಲ್ಲ. ಹೀಗಾದರೆ ಕಾರಟಗಿ ಜನರು ಕಿಷ್ಕಿಂಧೆ ಜಿಲ್ಲೆಗೆ ಯಾಕೆ ಕೈ ಜೋಡಿಸಬೇಕು. ಸಮ್ಮೇಳನ ಆಯೋಜಿಸುವ ಆಯೋಜಕರು ಹತ್ತಾರು ಬಾರಿ ಸಭೆಗಳನ್ನು ನಡೆಸಬೇಕು ಮತ್ತು ಜಿಲ್ಲೆಯ ಎಲ್ಲಾ ತಾಲೂಕಿನ ಹೋರಾಟಗಾರರು, ಗಣ್ಯರೊಂದಿಗೆ ಚರ್ಚಿಸಿ ಅವರನ್ನು ಸಮ್ಮೇಳನದಲ್ಲಿ ಭಾಗವಹಿಸುವಂತೆ ಕರೆ ನೀಡಬೇಕು. ಆದರೆ ಗಂಗಾವತಿ ನಡೆದ ಸಾಹಿತ್ಯ ಸಮ್ಮೇಳನ ಆಯೋಜಕರು ಅಥವಾ ಕಸಾಪ ಪದಾಧಿಕಾರಿಗಳು ಕಾರಟಗಿ ತಾಲೂಕಿನ ಬಹುತೇಕರನ್ನು ಕಡೆಗಣಿಸಿದ್ದಾರೆ ಎಂದು ಪಗಡದಿನ್ನಿ ಆಕ್ರೋಶ ವ್ಯಕ್ತಪಡಿಸಿದರು.
