ಕೊಪ್ಪಳ : ಕೇಂದ್ರ ಸರ್ಕಾರದ ಏಕಪಕ್ಷೀಯ ನೀತಿ, ಹಾಗೂ ಇತಿಹಾಸದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಂಸದರನ್ನು ಅಧಿವೇಶನದ ಸಮಯದಲ್ಲಿ ಅಮಾನತು ಮಾಡಿದ್ದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶುಕ್ರವಾರ ಕೈ ಮುಖಂಡರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ನಗರದ ಅಶೋಕ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಕೆಲ ಹೊತ್ತು ರಸ್ತೆ ತಡೆದು ಕೇಂದ್ರ ಸರ್ಕಾರದ ನಡೆ ವಿರುದ್ಧ ಮತ್ತು ಬಿಜೆಪಿ ಕ್ರಮಗಳನ್ನು ಖಂಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ದೇಶ ಸ್ವಾತಂತ್ರ್ಯಾ ನಂತರದಲ್ಲಿ ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿಪಕ್ಷ ಸಂಸದರನ್ನು ಹೊರಗಿಡುವ ಮೂಲಕ ತನ್ನ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಮುಂದುವರೆಸಿದೆ. ಈ ಮೂಲಕ ಕೇಂದ್ರ ಸರ್ಕಾರ ತನ್ನ ಹಲವು ಕಾಯ್ದೆಗಳನ್ನು ಏಕಪಕ್ಷಿಯವಾಗಿ ಜಾರಿಗೆ ತರಲು ಮುಂದಾಗಿದೆ,
ಭದ್ರತಾ ವೈಫಲ್ಯದಿಂದ ಸಂಸತ್ತಿನಲ್ಲಿ ದಾಳಿ ನಡೆದಿದೆ ಅದಕ್ಕೆ ಉತ್ತರಿಸಲು ಕೇಳಿದ ವಿರೋದ ಪಕ್ಷದ 145 ಸಂಸದರನ್ನು ಸಂಸತ್ತಿನಿಂದ ಹೊರ ಹಾಕಿದ್ದಾರೆ, ಇವರ ಉದ್ದೇಶ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುವುದು ಮತ್ತು ಸಂವಿಧಾನದ ಅಡಿಯಲ್ಲಿ ಕೆಲಸ ಮಾಡದೆ, ಹಿಟ್ಲರ್ ಆಡಳಿತ, ಸರ್ವಾಧಿಕಾರಿ ಧೋರಣೆ ಬಿಜೆಪಿ ಹಾಗೂ ಅಮಿತ್ ಶಾ ನೇತೃತ್ವದ ಬಿಜೆಪಿ ಸರ್ಕಾರ ಮಾಡುತ್ತಿದ್ದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಜಿಲ್ಲಾ ಪಂಚಾಯತ ಅದ್ಯಕ್ಷ ರಾಜಶೇಖರ ಹಿಟ್ನಾಳ ಮಾತನಾಡಿ, ಸಂಸತ್ತನ್ನು ರಕ್ಷಣೆ ಮಾಡದವರು ಜನರನ್ನು ಹೇಗೆ ರಕ್ಷಣೆ ಮಾಡುತ್ತಾರೆ. ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ಭಾರತ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿರುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ, ಇದನ್ನು ಇಡೀ ದೇಶದ ಜನ ಗಮನಿಸುತ್ತಿದ್ದಾರೆ ಇದಕ್ಕೆ ತಕ್ಕ ಉತ್ತರವನ್ನು ಕೊಡುತ್ತಾರೆ ಎಂದು ಹೇಳಿದರು.
ಶಾಸಕರಾದ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಸದನದಲ್ಲಿ ನಡೆದ ಈ ದುರ್ಘಟನೆಯನ್ನು ಪ್ರಧಾನಿ ಮೋದಿ ಕೇಂದ್ರ ರಕ್ಷಣಾ ಸಚಿವ ಅಮಿತ್ ಶಾ ದುರಾಡಳಿತದ ವೈಫಲ್ಯವನ್ನು ಎತ್ತಿ ತೋರುತ್ತಿದೆ ಇದಲ್ಲದೆ ಈ ಹಿಂದೆ ನಡೆದ ಪುಲ್ವಾಮಾ ದಾಳಿ ಇಂತಹ ಘಟನೆಗಳನ್ನು ವಿರೋಧಪಕ್ಷದವರಾಗಿ ಖಂಡನೆ ಮಾಡುವ ಸಂದರ್ಭದಲ್ಲಿ ಅವಮಾನವೀಯವಾಗಿ ಸಂಸತ್ ಸದಸ್ಯರನ್ನು ಅಮಾನತ್ತು ಮಾಡಿ ಸದನದಿಂದ ಹೊರ ಹಾಕಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಅಹಂಕಾರ ಮತ್ಸರಗಳನ್ನು ತುಂಬಿರುವ ಕೇಂದ್ರ ಸರ್ಕಾರ ದೇಶದ ಜನರ ಮೇಲೆ ಇಡಿ, ಸಿಬಿಐ ಇನ್ನಿತರ ಮೂಲಗಳಿಂದ ಹಣಿಯುವಂತ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ಮಹಿಳಾ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಗೊಂಡಬಾಳ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ ಸಂವಿಧಾನವನ್ನು ಉಳಿಸಲು ಕಾಂಗ್ರೆಸ್ ಹೋರಾಟ ನಡೆಸುತ್ತಿದೆ ಬಿಜೆಪಿ ಸಂವಿಧಾನವನ್ನು ಕಗ್ಗೊಲೆ ಮಾಡುತ್ತೇವೆ ಎಂದು ಬಹಿರಂಗವಾಗಿ ಹೇಳಿಕೆಯನ್ನು ಕೊಟ್ಟಿದೆ ಈಗ ಅದನ್ನು ಚಾಚು ತಪ್ಪದೆ ಮಾಡುತ್ತಿದೆ, ಸಂಸದರನ್ನು ಅಮಾನತ್ತು ಗೊಳಿಸುವುದು ಅಷ್ಟೇ ಅಲ್ಲದೆ ಅವರ ಮೇಲೆ ಕ್ರಿಮಿನಲ್ ಕೇಸಿಗೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ಸುರಕ್ಷಾ ಸಂಹಿತೆ, ಭಾರತೀಯ ಸಾಕ್ಷ ಸಂಹಿತೆ ಯಂತಹ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಅವುಗಳಿಗೆ ಅನುಮೋದನೆ ಕೊಟ್ಟಿರುವುದು ನಮ್ಮ ದೇಶದ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಎದುರಾಗುವ ಲೋಕಸಭಾ ಚುನಾವಣೆಯಲ್ಲಿ ಜನರು ಬುದ್ದಿ ಕಲಿಸಲಿದ್ದಾರೆ ಎಂದು ಹೇಳಿದರು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಮಾಲತಿ ನಾಯಕ್, ಅಲ್ಪಸಂಖ್ಯಾತ ಜಿಲ್ಲಾ ಘಟಕದ ಅಧ್ಯಕ್ಷ ಸಲೀಂ ಅಳವಂಡಿ, ಯುವ ಘಟಕದ ಜಿಲ್ಲಾಧ್ಯಕ್ಷ ಗವಿಸಿದ್ದನ ಗೌಡ ಪಾಟೀಲ್, ಎಸ್.ಸಿ. ಘಟಕದ ಅಧ್ಯಕ್ಷ ಗಾಳೆಪ್ಪ ಪೂಜಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ರೆಡ್ಡಿ ಗಲಬಿ, ನಗರ ಘಟಕ ಅಧ್ಯಕ್ಷ ಕಾಟನ್ ಪಾಶಾ, ಎಸ್. ಟಿ. ಘಟಕದ ತಾಲೂಕ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ನಗರಸಭೆ ಸದಸ್ಯರಾದ ಮುತ್ತುರಾಜ ಕುಷ್ಟಗಿ, ಅಕ್ಬರ್ ಪಾಶಾ ಪಲ್ಟನ್, ಮುಖಂಡರಾದ ವಿಶಾಲಾಕ್ಷಿ ತಾವರಗೇರಾ, ಕಿಶೋರಿ ಬೂದನೂರು, ಶ್ರೀನಿವಾಸ್ ಪಂಡಿತ್, ರೇಷ್ಮಾ ಖಾಜಾವಲಿ, ಸವಿತಾ ಗೋರಂಟ್ಲಿ, ಸುಮಂಗಲಾ ನಾಯಕ, ರಮೇಶ ಗಿಣಗೇರಿ, ಮಾನ್ವಿ ಪಾಶಾ, ಶಿವಕುಮಾರ್ ಪಾವಲಿಶೆಟ್ಡರ್ ಇತರರು ಇದ್ದರು.