ಗಂಗಾವತಿ.
ತಾಲೂಕಿನ ಮರಳಿ ಹೋಬಳಿಯ ಹಾಗೂ ಕನಕಗಿರಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಸೇರಿರುವ ಹೆಬ್ಬಾಳ್ ಕ್ಯಾಂಪ್ ಮತ್ತು ಕಿಂದಿಕ್ಯಾಂಪ್‌ನ ರೈತರ ಭೂಮಿಯ ದಾಖಲೆಗಳಿಗೂ ವಕ್ಫ್ ಇಲಾಖೆ ದಾಳಿ ಮಾಡಿದ್ದು, ಎಚ್ಚರವಹಿಸಿರುವ ರೈತರು ವಕ್ಫ್ ನ್ಯಾಯಾಧೀಕರಣದ ಮೆಟ್ಟಿಲೇರಿ ತಲಾತಲಾಂತರಿದಿಂದ ಭೂಮಿ ತಮ್ಮ ಪಿತ್ರಾರ್ಜಿತ ಆಸ್ತಿ ಎಂದು ಅರ್ಜಿ ಸಲ್ಲಿಸಿದ್ದಾರೆ. ಮತ್ತು ವಕ್ಪ್ ಇಲಾಖೆಯಿಂದ ಆಗಿರುವ ಸಮಸ್ಯೆಯನ್ನು ಆಲಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ರೈತರಿಗೆ ಅಭಯ ನೀಡಿದ್ದರಿಂದ ಈಗ ರೈತರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಆದರೂ ಮುಂದೆ ತಮ್ಮ ಭೂಮಿ ಎಲ್ಲಿ ವಕ್ಪ್ ಕಸಿದುಕೊಳ್ಳತ್ತದೆಯೋ ಎಂಬ ಆತಂಕ ಎದುರಿಸುತ್ತಿದ್ದಾರೆ.
ಕರ್ನಾಟಕ ವಕ್ಫ್ ಬೋರ್ಡ್‌ನ ಮುಖ್ಯ ಆಡಳಿತಾಧಿಕಾರಿ ಕಳೆದ 2024ರ ಮಾರ್ಚ್ ತಿಂಗಳಲ್ಲಿ ಗಂಗಾವತಿ ತಾಲೂಕಿನ ಮರಳಿ ಹೋಬಳಿ ವ್ಯಾಪ್ತಿಯ ಹೆಬ್ಬಾಳ್ ಕ್ಯಾಂಪ್, ಕಿಂದಿಕ್ಯಾಂಪ್ ಮತ್ತಿತರ ಗ್ರಾಮಗಳ ವಿವಿಧ ಸರ್ವೇ ನಂಬರ್‌ಗಳ ಭೂಮಿಯಲ್ಲಿ ತಂದೆ ಮತ್ತು ತಾತನ ಕಾಲದಿಂದ ಕೃಷಿ ಮಾಡಿಕೊಂಡು ಬಂದಿರುವ ತಮ್ಮ ಹೆಸರಿನ ಕಬ್ಜಾ ಭೂಮಿಗಳು ವಕ್ಫ್ ಇಲಾಖೆಗೆ ಸೇರಿದ್ದು, ಈ ಕುರಿತು ತಕ್ಷಣ ವಕ್ಪ್ ಕೋರ್ಟ್‌ಗೆ ವಿಚಾರಣಗೆ ಹಾಜರಾಗುವಂತೆ ನೊಟೀಸ್ ಕಳುಹಿಸಿದೆ. ನೊಟೀಸ್ ತಮ್ಮ ಕೈ ಸೇರಿಸುತ್ತಿದ್ದಂತೆ ಹೆಬ್ಬಾಳ್ ಮತ್ತು ಕಿಂದಿಕ್ಯಾಂಪಿನ ರೈತರು ಆತಂಕಕ್ಕಿಡಾಗಿದ್ದಾರೆ. ಮತ್ತು ಕೆಲವು ರೈತರು ವಕ್ಪ್ ನೊಟೀಸ್‌ಗೆ ಎಚ್ಚೆತ್ತುಕೊಂಡು ಕಾಂಗ್ರೆಸ್ ಮುಖಂಡ ಹಾಗೂ ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಮೂಲಕ ಸಚಿವ ಶಿವರಾಜ ತಂಗಡಗಿ ಗಮನಕ್ಕೆ ತಂದಿದ್ದಾರೆ. ಸಚಿವ ಶಿವರಾಜ ತಂಗಡಗಿ ವಕ್ಫ್ ನೊಟೀಸ್ ಗಮನಿಸುತ್ತಿದ್ದಂತೆ ಹೆಬ್ಬಾಳದಲ್ಲಿ ಆಯೋಜಿಸಿದ್ದ ಅಭಯ ಹಸ್ತ ಕಾರ್ಯಕ್ರಮದಲ್ಲಿ ತಹಶೀಲ್ದಾರರಿಗೆ ತಾಕೀತು ಮಾಡಿ ಯಾವುದೇ ರೈತರ ಭೂಮಿಯ ಮೇಲೆ ವಕ್ಪ್ ಇಲಾಖೆಯ ಹೆಸರು ನಮೂದಿಸಬಾರದು ಎಂದು ಸೂಚನೆ ನೀಡಿದ್ದಾರಲ್ಲದೇ ಈ ಕುರಿತು ವಕ್ಪ್ ಸಚಿವ ಜಮೀರ್ ಅಹ್ಮದ್‌ರೊಂದಿಗೆ ತಾವು ಮಾತನಾಡಿ ಆಗಿರುವ ಲೋಪವನ್ನು ಸರಿಪಡಿಸುವುದಾಗಿ ರೈತರಿಗೆ ಭರವಸೆ ನೀಡಿದ್ದಾರೆ.
ಅದರೂ ಕೆಲವು ರೈತರು ಕಂದಾಯ ಇಲಾಖೆಗೆ ಭೇಟಿ ನೀಡಿ ವಿಷಯವನ್ನು ಸ್ಪಷ್ಟವಾಗಿ ತಿಳಿದುಕೊಂಡು ವಕ್ಪ್ ಕೋರ್ಟ್‌ಗೆ ಸೂಚನೆಯನ್ನು ಪಾಲಿಸಿ ವಿಚಾರಣೆಗೆ ಹಾಜರಾಗಿ ತಮ್ಮ ಜಮೀನಿನ ಮೂಲ ದಾಖಲೆಗಳನ್ನು ವಕ್ಪ್‌ಗೆ ತೊರಿಸುವ ಮೂಲಕ ವಾದ ಮಂಡಿಸಿದ್ದಾರೆ. ಹೀಗಾಗಿ ಸಚಿವ ಶಿವರಾಜ ತಂಗಡಗಿ ಭರವಸೆ ಮತ್ತು ತಮ್ಮ ವಿವೇಚನೆಯಿಂದ ವಿಚಾರಣೆಗೆ ಹಾಜರಾಗಿರುವ ಹಿನ್ನೆಲೆಯಲ್ಲಿ ರೈತರ ಭೂಮಿಯ ಪಹಣಿ ಕಾಲಂ.11 ರಲ್ಲಿ ವಕ್ಪ್ ಆಸ್ತಿ ಎಂದು ನಮೂದಾಗದೇ ಬಚಾವ್ ಆಗಿದ್ದಾರೆ. ಮತ್ತು ಈಗ ರಾಜ್ಯಾದ್ಯಂತ ವಕ್ಪ್ ಭೂಮಿ ಪ್ರಕರಣ ದೊಡ್ಡಮಟ್ಟದ ಸುದ್ದಿಯಾಗುತ್ತಿದ್ದಂತೆ ಹೆಬ್ಬಾಳ್ ಕ್ಯಾಂಪಿನ ರೈತರು ಮತ್ತಷ್ಟು ಜಾಗೃತರಾಗುತ್ತಿದ್ದಾರೆ.
ಬಾಕ್ಸ್:
ವಕ್ಫ್ ಕೋರ್ಟ್‌ಗೆ ದಾಖಲೆ ಸಲ್ಲಿಕೆ
ಕಳೆದ 2024ರ ಮಾರ್ಚ್ ತಿಂಗಳಲ್ಲಿ ಕೋರ್ಟ್ ಆಫ್ ವಿಚಾರಣಾ ಅಧಿಕಾರಿ, ಕರ್ನಾಟಕ ಸ್ಟೇಟ್ ಬೋರ್ಡ್ ಆಫ್ ವಕ್ಫ್ ಬೆಂಗಳೂರಿನಿಂದ ಭೂಮಿ ಪರಬಾರೆಗೆ ಸಂಬಂಧಿಸಿದಂತೆ ವಿಚಾರಣೆಗೆ ಆಗುವಂತೆ ನೊಟೀಸ್ ಬಂದಿದೆ. ಈ ನೊಟೀಸ್ ಬರುತ್ತಿದ್ದಂತೆ ನಾವು ಸ್ಥಳೀಯವಾಗಿ ಸಚಿವರು ಮತ್ತು ತಹಶೀಲ್ದಾರರ ಗಮನಕ್ಕೆ ತಂದಿದ್ದೇವೆ. ಜೊತೆಗೆ ವಕ್ಫ್ ಕೋರ್ಟ್‌ನ ವಿಚಾರಣೆಗೆ ಹಾಜರಾಗಿ ನಮ್ಮ ಜಮೀನಿನ ಮೂಲ ದಾಖಲೆಗಳನ್ನು ಸಲ್ಲಿಸಿದ್ದೇವೆ. ತಲಾತಲಾಂತರಿಂದ ಜಮೀನು ನಮ್ಮ ಕುಟುಂಬದ ಆಸ್ತಿಯಾಗಿರುವ ಬಗ್ಗೆ ದೃಢೀಕರಿಸಿದ್ದೇವೆ. ಹೀಗಾಗಿ ನಮ್ಮ ಭೂಮಿಯ ಪಹಣಿಯಲ್ಲಿ ಇನ್ನು ವಕ್ಪ್ ಪರಬಾರೆ ಎಂದು ನಮೂದಾಗಿಲ್ಲ. ಆದರೂ ನಾವು ನಮ್ಮ ಜಮೀನು ಉಳಿಸಿಕೊಳ್ಳಲು ಕಾನೂನು ಹೊರಾಟ ನಡೆಸುತ್ತಿದ್ದೇವೆ.
ಮೊಹನಕೃಷ್ಣಾ, ಹೆಬ್ಬಾಳ್ ರೈತ ಮುಖಂಡ, ಹೆಬ್ಬಾಳಕ್ಯಾಂಪ್, ಗಂಗಾವತಿ ತಾಲೂಕು.
ಬಾಕ್ಸ್:
ಯಾವುದೇ ರೈತರಿಗೆ ತೊಂದರೆಯಾಗದಂತೆ ಕ್ರಮ
ರಾಜ್ಯಾದ್ಯಂತ ರೈತರ ಭೂಮಿಗೆ ವಕ್ಪ್ ಇಲಾಖೆ ಪರಬಾರೆ ಮಾಡುತ್ತಿದೆ ಎಂಬ ಚರ್ಚೆ ಜೋರಾಗಿದೆ. ನಮ್ಮ ಮರಳಿ ಹೋಬಳಿ ವ್ಯಾಪ್ತಿಯ ಹೆಬ್ಬಾಳ್‌ಕ್ಯಾಂಪ್ ಮತ್ತು ಕಿಂದಿಕ್ಯಾಂಪ್ ರೈತರಿಗೂ ಕೂಡಾ ಈ ಹಿಂದೆ ವಕ್ಪ್ ಇಲಾಖೆಯಿಂದ ನೊಟೀಸ್ ಜಾರಿಯಾಗಿದೆ. ಈ ವಿಷಯ ರೈತರು ನನಗೆ ತಿಳಿಸುತ್ತಿದ್ದಂತೆ ನಾನು ಎಚ್ಚೆತ್ತುಕೊಂಡು ಸಚಿವ ಶಿವರಾಜ ತಂಗಡಗಿ ಗಮನಕ್ಕೆ ತರುವ ಕೆಲಸ ಮಾಡಿದ್ದೆ. ಹೆಬ್ಬಾಳ್ ಗ್ರಾಮದಲ್ಲಿ ನಡೆದ ಅಭಯ ಹಸ್ತ ಕಾರ್ಯಕ್ರಮದಲ್ಲಿ ಸಚಿವ ಶಿವರಾಜ ತಂಗಡಗಿ ಅವರು ಯಾವುದೇ ರೈತರ ಭೂಮಿ ದಾಖಲೆಗಳಲ್ಲಿ ವಕ್ಫ್ ಹೆಸರು ನಮೂದು ಮಾಡದಂತೆ ತಹಶೀಲ್ದಾರರಿಗೆ ಸೂಚನೆ ನೀಡಿದ್ದರು. ಮತ್ತು ವಕ್ಪ್ ಇಲಾಖೆ ಸಚಿವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿ ರೈತರಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದಾರೆ. ಹೆಬ್ಬಾಳ್ ಕ್ಯಾಂಪ್ ಕೂಡಾ ವಕ್ಪ್ ಆಸ್ತಿ ಎಂಬ ವಿಷಯ ಜನರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ನಮ್ಮ ಕಾಂಗ್ರೆಸ್ ಸರಕಾರ ಕೂಡಾ ರೈತರಿಗೆ ತೊಂದರೆಯಾಗದಂತೆ ಸೂಚನೆ ನೀಡಿದೆ. ಮತ್ತು ಸಚಿವ ಶಿವರಾಜ ತಂಗಡಗಿ ಅವರು ರೈತರಿಗೆ ಅನ್ಯಾಯವಾಗದಂತೆ ಪ್ರಕರಣ ಇತ್ಯರ್ಥಪಡಿಸಲಿದ್ದಾರೆ.
ರೆಡ್ಡಿ ಶ್ರೀನಿವಾಸ, ಜಿಲ್ಲಾಧ್ಯಕ್ಷರು, ಗ್ಯಾರಂಟಿ ಅನುಷ್ಟಾನ ಸಮಿತಿ ಹಾಗೂ ಕಾಂಗ್ರೆಸ್ ಮುಖಂಡರು.