ಗಂಗಾವತಿ.
ವ್ಯಾಪಾರಸ್ಥರ ದೂರು ಮತ್ತು ಆಕ್ರೋಶಕ್ಕೆ ಎಚ್ಚೆತ್ತ ನಗರಸಭೆ ಅಧಿಕಾರಿಗಳು ಅಧ್ಯಕ್ಷ ಮೌಲಾಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಸದಸ್ಯ ಸೋಮನಾಥ ಭಂಡಾರಿ ನೇತ್ವದಲ್ಲಿ ನಗರದಲ್ಲಿ ಎಲ್ಲೆಂದರಲ್ಲಿ ಹಾಕಿದ್ದ ಅನಧಿಕೃತ ಫ್ಲೇಕ್, ಬ್ಯಾನರ್ ಗಳ ತೆರವು ಕಾರ್ಯಾಚರಣೆ ನಡೆಸಿದರು.
ಬುಧವಾರ ಬೆಳ್ಳಂ ಬೆಳಗ್ಗೆ ತೆರವಿಗೆ ಮುಂದಾದರು. ದೀಪಾವಳಿ, ಕನ್ನಡ ರಾಜ್ಯೋತ್ಸವ, ಜಯಂತಿ ಸೇರಿ ಇನ್ನಿತರ ಕಾರ್ಯಕ್ರಮಗಳ ಶುಭಾಷಯ ಕೊರಲು ಪ್ಲೇಕ್ಸ್ ಹಾಕುವ ಹಾವಳಿ ನಗರದಲ್ಲಿ ಜೋರಾಗಿದೆ. ಫ್ಲೇಕ್ಸ್ ಹಾಕಲು ಕಡಿವಾಣ ಹಾಕುವಂತೆ ಇತ್ತಿಚೀಗೆ ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸ್ವತಃ ಶಾಸಕ ಜನಾರ್ಧನರೆಡ್ಡಿ ಸೂಚನೆ ನೀಡಿದ್ದರು. ಆದರೆ ದೀಪಾವಳಿ ಮತ್ತು ರಾಜ್ಯೋತ್ಸವದ ಅಂಗವಾಗಿ ಸ್ವತಃ ಶಾಸಕರ ಬೆಂಬಲಿಗರ ನಗರದಾದ್ಯಂತ ವ್ಯಾಪಕ ಫ್ಲೇಕ್ಸ್ ಹಾಕಿದ್ದರು. ಇದಕ್ಕೆ ಬೆಸತ್ತ ವ್ಯಾಪಾರಸ್ಥರು ತಮ್ಮ ಅಂಗಡಿ ಕಾಣದಂತೆ ಫ್ಲೆಕ್ಸ್ ಅಳವಡಿಸಿದ್ದರಿಂದ ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ ಎಂದು ನಗರಸಭೆಗೆ ದೂರಿದ್ದರು. ಇದಕ್ಕೆ ಎಚ್ಚೆತ್ತ ಪೌರಾಯುಕ್ತ ವಿರುಪಾಕ್ಷಮೂರ್ತಿ ಅವರು ಅದ್ಯಕ್ಷರು ಮತ್ತು ಸದಸ್ಯರೊಂದಿಗೆ ಚರ್ಚಿಸಿ ಪ್ಲೇಕ್ಸ್ ತೆರವಿಗೆ ಸೂಚನೆ ನೀಡಿದ್ದರು. ಹೀಗಾಗಿ ನಗರಸಭೆ ನೈರ್ಮಲ್ಯ ಅಭಿಯಂತರ ಚೇತನಕುಮಾರ, ಆರೋಗ್ಯ ನಿರೀಕ್ಷಕ ನಾಗರಾಜ ಸೇರಿ ಅಧಿಕಾರಿಗಳು, ಸಿಬ್ಬಂದಿಗಳು ತೆರವು ಕಾರ್ಯಾಚರಣೆ ನಡೆಸಿದರು.
ಸ್ವತಃ ನಗರಸಭೆ ಅದ್ಯಕ್ಷ ಮೌಲಾಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ ಮತ್ತಿತರ ಸದಸ್ಯರು ತೆರವು ಕಾರ್ಯಾಚರಣೆ ನೇತೃತ್ವವಹಿಸಿರುವುದು ವಿಶೇಷವಾಗಿತ್ತು.
ದಿಡೀರ್ ಫ್ಲೆಕ್ಸ್ ತೆರವು ಕಾರ್ಯಾಚರಣೆ ನಡೆಸಿದ್ದ ನಗರಸಭೆ ಅಧಿಕಾರಿಗಳಿಗೆ ಕೆಲವು ಕನ್ನಡಪರ ಸಂಘಟನೆಗಳ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದು,ಕನ್ನಡ ರಾಜ್ಯೋತ್ಸವ ಶುಭಾಷಯ ಕೋರುವ ನಿಮಿತ್ಯ ನಾವು ನಗರದಲ್ಲಿ ಪ್ಲೇಕ್ಸ್ ಹಾಕಿದ್ದೇವೆ. ಕನಿಷ್ಟ ಹದಿನೈದು ದಿನಗಳವರೆಗೆ ಪ್ಲೆಕ್ಸ್ ಹಾಕಲು ಅನುವು ಮಾಡಿಕೊಡಬೇಕೆಂದು ಅಗ್ರಹಿಸಿದ್ದಾರೆ. ಆದರೆ ಅದ್ಯಕ್ಷ ಮೌಲಾಸಾಬ್ ಇದಕ್ಕೆ ಸೊಪ್ಪು ಹಾಕದೇ ತೆರವು ಕಾರ್ಯಾಚರಣೆ ಮುಂದುವರೆಸಿದರು.
ಬಾಕ್ಸ್
ಕಾಟಾಚಾರದ ಕಾರ್ಯಾಚರಣೆ ಮಾಡದಿರಲಿ
ಅನಧಿಕೃತ ಫ್ಲೆಕ್ಸ್ ತೆರವು ಕಾರ್ಯಾಚರಣೆಯನ್ನು ಸ್ವಾಗತಿಸಿರುವ ವ್ಯಾಪಾರಸ್ಥರು ಇದು ಕಾಟಾಚಾರಕ್ಕೆ ಮಾಡದೇ ಕಠಿಣ ನಿಲುವು ತೆಗೆದುಕೊಳ್ಳಬೇಕೆಂದು ನಗರಸಭೆಗೆ ಅಗ್ರಹಿಸಿದ್ದಾರೆ. ಸಾಮನ್ಯ ಸಭೆಯಲ್ಲಿ ನಿರ್ಣಯಿಸಿದ್ದರೂ ಪ್ಲೆಕ್ಸ್ ಹಾಕುವ ಚಾಳಿ ಮುಂದುವರೆದಿದೆ. ಮತ್ತೆ ಹಬ್ಬ, ಜಾತ್ರೆ, ಜಯಂತಿ, ಉತ್ಸವ ಬಂದಾಗ ಶಾಸಕರು, ಶಾಸಕರ ಬೆಂಬಲಿಗರು ಅನುಮತಿ ಪಡೆಯದೇ ಪ್ಲೇಕ್ಸ್ ಹಾಕುವುದರಿಂದ ಇತರರು ಅದನ್ನು ಅನುಸರಿಸುತ್ತಾರೆ. ಹೀಗಾಗಿ ಪ್ಲೇಕ್ಸ್ ಗೆ ಕಡಿವಾಣ ಹಾಕಲು ಜನರಿಗೆ ಕಣ್ಣೋರೆಸುವ ತಂತ್ರ ಮಾಡದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ ಎಂದು ಅಗ್ರಹಿಸಿದ್ದಾರೆ.
ಬಾಕ್ಸ್
ಫುಟ್ ಪಾತ್ ತೆರವಿಗೂ ಮುಂದಾಗಲಿ
ನಗರಸಭೆ ಅಧಿಕಾರಿಗಳು ಅದ್ಯಕ್ಷರು ಕೇವಲ ಫ್ಲೇಕ್ಸ್ ತೆರವು ಮಾಡಿ ಕೈ ತೊಳೆದು ಕೊಳ್ಳಬಾರದು. ಅಮೃತ ಸಿಟಿ ಯೋಜನೆಯಲ್ಲಿ ರಸ್ತೆ ಬದಿಯಲ್ಲಿ ಮಾಡಿರುವ ಫುಟ್ ಪಾತ್ ನಲ್ಲಿ ವ್ಯಾಪಾರಸ್ಥರು ತಮ್ಮ ಅಂಗಡಿ ಸಾಮಗ್ರಿಗಳನ್ನು ಇಟ್ಟುಕೊಟ್ಟು ಕಬಳಿಸಿದ್ದಾರೆ. ಇದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಮತ್ತು ನಾಗರೀಕರು ಒಂದು ಅಂಗಡಿಯಿಂದ ಇನ್ನೊಂದು ಅಂಗಡಿಗಳಿಗೆ ಹೋಗಲು ರಸ್ತೆಯಲ್ಲೆ ಓಡಾಡುವ ಪರಿಸ್ಥಿತಿ ಇದ್ದು,ಮಹಿಳೆಯರು, ವೃದ್ದರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಬಜಾರದಲ್ಲಿನ ಫುಟ್ ಪಾತ್ ಫ್ರೀ ಮಾಡಲು ಮುಂದಾಗಿ ವ್ಯಾಪಾರಸ್ಥರಿಗೆ ಫುಟ್ ಪಾತ್ ಅತಿಕ್ರಮಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಕನ್ನಡಪರ ಸಂಘಟನೆ ಮುಖಂಡರು ಅಗ್ರಹಿಸಿದ್ದಾರೆ.