ಕುಷ್ಟಗಿ.
ತಾಲೂಕಿನ ಮೇಣೆದಾಳ ಗ್ರಾಮದಲ್ಲಿರುವ ಮೂರಾರ್ಜಿ ವಸತಿ ಶಾಲೆಯ ಹತ್ತನೇ ತರಗತಿ ನಾಲ್ಕು ವಿದ್ಯಾರ್ಥಿಗಳು ದಿಡೀರ್ ನಾಪತ್ತೆಯಾಗಿರುವ ಘಟನೆ ನಡೆದಿದ್ದು, ಪ್ರಾಚಾರ್ಯರು ಮತ್ತು ಪಾಲಕರಲ್ಲಿ ಆತಂಕ ಸೃಷ್ಟಿಯಾಗಿದೆ.
ಸೋಮವಾರ ರಾತ್ರಿ ೭.೦೦ ಗಂಟೆ ಸುಮಾರಿಗೆ ವಸತಿ ನಿಲಯದಿಂದ ನಾಲ್ಕು ವಿದ್ಯಾರ್ಥಿಗಳು ಹೊರಗೆ ಹೋಗಿ ನಾಪತ್ತೆಯಾಗಿದ್ದಾರೆ. ಈ ಕುರಿತು ಪ್ರಾಚಾರ್ಯ ಕೊಟ್ರೇಶ್ ಅವರು ಮಾಹಿತಿ ನೀಡಿದ್ದು, ಹತ್ತಿರ ತಾವರಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ನಿರ್ವಹಣೆಯಲ್ಲಿ ಕುಷ್ಟಗಿ ತಾಲೂಕಿನ ಮೇಣೆದಾಳ ಗ್ರಾಮದಲ್ಲಿ ಮೂರಾರ್ಜಿ ದೇಸಾಯಿ ವಸತಿ ಶಾಲೆ ಇದೆ. ಈ ಶಾಲೆಯಲ್ಲಿ ೨೪೮ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ೪೮ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ತರಗತಿಯಲ್ಲಿ ಓದುತ್ತಿದ್ದಾರೆ. ಸೋಮವಾರ ರಾತ್ರಿ ಅಭ್ಯಾಸದ ಸಮಯದಲ್ಲಿ ಎಲ್ಲಾ ವಿದ್ಯಾರ್ಥಿಗಳೊಂದಿಗೆ ಓದುತ್ತಾ ಕುಳಿತಿದ್ದ ಹತ್ತನೇ ತರಗತಿ ವಿದ್ಯಾರ್ಥಿಗಳಾದ ಕುಷ್ಟಗಿ ತಾಲೂಕಿನ ಎಂ.ರಾಮಪುರ ಗ್ರಾಮದ ಮನು, ಯಲಬುರ್ಗಾ ತಾಲೂಕಿನ ಚಿಕ್ಕ ವಂಕಲಕುಂಟಾ ಗ್ರಾಮದ ಗುರುರಾಜ, ಯಲಬುರ್ಗಾ ಪಟ್ಟಣದ ವಿಶ್ವ ಮತ್ತು ಕುಷ್ಟಗಿ ತಾಲೂಕಿನ ಗುಮಗೇರಿಯ ನೀಲಕಂಠ ಎಂಬ ನಾಲ್ವರು ವಿದ್ಯಾರ್ಥಿಗಳು ಒಟ್ಟಿಗೆ ವಸತಿ ನಿಲಯದಿಂದ ಪರಾರಿಯಾಗಿದ್ದಾರೆ. ಅಭ್ಯಾಸ ಸಮಯದಲ್ಲಿ ವಸತಿ ನಿಲಯದ ಎಲ್ಲಾ ಬಾಗಿಲುಗಳನ್ನು ಬಂದ್ ಮಾಡಲಾಗಿರುತ್ತದೆ. ಈ ಸಮಯದಲ್ಲಿ ನಾಲ್ವರು ವಿದ್ಯಾರ್ಥಿಗಳು ನಿಲಯದ ಹಿಂದುಗಡೆಯ ಗೋಡೆ ಹಾರಿ ಹೊರಗೆ ಹೋಗಿದ್ದಾರೆ. ರಾತ್ರಿಯಿಡಿ ವಿದ್ಯಾರ್ಥಿಗಳನ್ನು ಹುಡುಕುವ ಕೆಲಸ ಮಾಡಿದ್ದೇವೆ. ಅವರ ಸ್ವಗ್ರಾಮಕ್ಕೂ ಭೇಟಿ ನೀಡಿದ್ದು, ಪಾಲಕರಿಗೂ ಅವರು ತಿಳಿಸದೇ ಬೇರೆ ಊರಿಗೆ ಹೋಗಿದ್ದಾರೆ. ವಿದ್ಯಾರ್ಥಿಗಳ ಸುಳಿವು ಸಿಕ್ಕಲ್ಲಿ ಶಾಲೆಗೆ ಅಥವಾ ಈ 8971360717 /8904624440 ಮೋಬೈಲ್ ನಂಬರಿಗೆ ಕರೆ ಮಾಡುವಂತೆ ಪ್ರಾಚಾರ್ಯ ಕೊಟ್ರೇಶ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಏಕಾ ಏಕಿ ವಸತಿ ನಿಲಯದಲ್ಲಿ ನಾಪತ್ತೆಯಾಗಿರುವುದು ನಮಗೆ ಆತಂಕ ಸೃಷ್ಟಿಯಾಗಿದೆ ಎಂದು ಪ್ರಾಚಾರ್ಯರು ಅಳಲು ತೊಡಿಕೊಂಡಿದ್ದಾರೆ.
