ಗಂಗಾವತಿ.
ಕ್ಯಾಲೆಂಡರ್ ಬದಲಾವಣೆಯನ್ನೇ ಹೊಸ ವರ್ಷಾಚರಣೆ ಎಂದು ಸಂಭ್ರಮಾಚರಣೆ ಮಾಡುವ ಯುವಕರು ಮೋಜು, ಮಸ್ತಿ ಮಾಡುತ್ತಾ ಹಾದಿ ತಪ್ಪುತ್ತಿರುವುದು ಅತ್ಯಂತ ವಿಷಾದನೀಯವಾಗಿದೆ. ಹಾದಿ ತಪ್ಪುತ್ತಿರುವ ಯುವಕರಿಗೆ ಅರಿವು ಮೂಡಿಸಲು ಅಧಿಕಾರಿ ವರ್ಗ ಅಥವಾ ಪೊಲೀಸರನ್ನು ಹೊಣೆ ಮಾಡುವ ಬದಲು ಪಾಲಕರು ಎಚ್ಚೆತ್ತುಕೊಳ್ಳಬೇಕಿದೆ ಎಂದು ಸದ್ಭಾವನಾ ಸಂಸ್ಥೆಯ ಅಧ್ಯಕ್ಷ ಸುಬ್ರಮಣ್ಯ ರಾಯ್ಕರ್ ಸಲಹೆ ನೀಡಿದ್ದಾರೆ.
‘ಹೊಸ ವರ್ಷಾಚಾರಣೆ: ಮೋಜು ಮಸ್ತಿಗೆ ರೆಸ್ಟೋರೆಂಟ್ ಸಜ್ಜು, ಮಕ್ಕಳಿಗೂ ಆಫರ್: ಕೈ ಕಟ್ಟಿ ಕುಳಿತ ಅಧಿಕಾರಿ ವರ್ಗ
ಕನ್ನಡ ಮತ್ತು ಸಂಸ್ಕೃತಿಗೆ ಕೊಡಲಿ ಪೆಟ್ಟು: ಸಚಿವರ ಕ್ಷೇತ್ರದಲ್ಲಿ ಕಿರಕ್ ಪಾರ್ಟಿ ಅರೇಂಜ್’ ಎಂಬ ಸಮರ್ಥವಾಣಿ ವರದಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು ಹೊಸ ವರ್ಷದ ಸಂಭ್ರಮಾಚರಣೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ ೩೧ ಎಲ್ಲರೂ ಸಂಭ್ರಮಿಸಲು ಹೇಳಿ ಮಾಡಿದಂತಹ ದಿನ. ಹಳ್ಳಿ ಪಟ್ಟಣಗಳೆನ್ನದೇ ಬಡವ ಬಲ್ಲಿದವನೆಂಬದೆ ಎಲ್ಲರೂ ಹೊಸ ವರ್ಷದ ಆಗಮನವನ್ನು ವಿಶ್ವದಾದ್ಯಂತ ಸಡಗರದಿಂದ ಆಚರಿಸುತ್ತಾರೆ. ಈ ಸಂಭ್ರಮಾಚರಣೆಯನ್ನು ಇತ್ತೀಚಿನ ದಿನಗಳಲ್ಲಿ ಟಿವಿ. ಮಾದ್ಯಮಗಳಲ್ಲಿ ವೈಭವೀಕರಿಸುತ್ತಿರುವುದರಿಂದ ಯುವ ಜನಾಂಗದಲ್ಲಿ ಉತ್ಸಾಹ ಇಮ್ಮಡಿಗೊಂಡಂತೆ ಕಾಣುತ್ತಿದೆ. ಸಂಭ್ರಮಾಚರಣೆ ಪ್ರತಿಯೊಬ್ಬ ವ್ಯಕ್ತಿಗೆ ಅತ್ಯವಶ್ಯ. ಸಂಭ್ರಮ ಪಡುವುದರಿಂದ ಮನಸ್ಸು ಉಲ್ಲಸಿತಗೊಳ್ಳುತ್ತದೆ. ಆದರೆ ಈ ಸಂಭ್ರಮದ ನಡುವೆಯೂ ಬೇಸರದ ಸಂಗತಿಯೆಂದರೆ ಈ ಹೊಸ ವರ್ಷಾಚರಣೆಯ ಹೆಸರಿನಲ್ಲಿ ನಮ್ಮ ಯುವಕರು, ಕುಡಿತ, ಮೋಜು, ಮಸ್ತಿಯ ಹೆಸರಿನಲ್ಲಿ ಹಾದಿ ತಪ್ಪುತ್ತಿರುವುದು. ಹೆಣ್ಣು ಗಂಡು ಬೇದವೆನ್ನದೇ ರಾತ್ರಿಯಲ್ಲಾ ಕುಡಿದ ಅಮಲಿನಲ್ಲಿ ಬಾರು, ರೆಸ್ಟೋರೆಂಟುಗಳಲ್ಲಿ ಕುಣಿದು ಕುಪ್ಪಳಿಸುತ್ತಿರುವುದು. ಇದು ನಿಸ್ಸಂಕೋಚವಾಗಿ ಅನೈತಿಕತೆಗೆ ದಾರಿ ಮಾಡಿಕೊಡುತ್ತಿದೆ. ವರ್ಷವಿಡೀ ನಮ್ಮ ಮಕ್ಕಳಿಗೆ ಉತ್ತಮ ಜೀವನದ ನೈತಿಕ ಪಾಠ ಹೇಳುವ ನಾವು ಕ್ಯಾಲೆಂಡರ್ ಬದಲಾವಣೆಯಾಗುವ ಹಿಂದಿನ ದಿನ ಆಚರಿಸುವ ಸಂಭ್ರಮಾಚರಣೆ ಹೊಳೆಯಲ್ಲಿ ಹೋಮ ಮಾಡಿದಂತೆ, ಕುಡಿತದ ಚಟಕ್ಕೆ ಅವರಿಗೆ ಅನುವು ಮಾಡಿಕೊಡುವುದು ತರವೇ. ಪಾಲಕರೂ ಇಂತಹ ಚಟುವಟಿಕೆಯಲ್ಲಿ ತೊಡಗುವದು ಸರಿಯೇ ಎಂಬ ಪ್ರಶ್ನೆ ಕಾಡುತ್ತಿದೆ.
ಮೌಡ್ಯ ಮೂಡನಂಬಿಕೆಗಳ ಬಗ್ಗೆ ಬೊಬ್ಬೆಯಿಡುವ ತಥಾಕಥಿತ ಪ್ರಗತಿಪರರು ಹಾಗೂ ಮಠಾಧೀಶರು ಇದರ ಬಗ್ಗೆ ಧ್ವನಿಯೆತ್ತಬಾರದೇಕೆ. ಹೊಗಲಿ ಹೊಸ ವರ್ಷ ಬರುವ ಮೊದಲ ದಿನ ಅಂದರೆ ಜ.೧ ರಂದು ಸಂಭ್ರಮ ಸಡಗರದಿಂದ ಸ್ವಾಗತಿಬೇಕು. ಆದರೆ ಹೊಸ ವರ್ಷವನ್ನು ಸ್ವಾಗತಿಸುವ ನೆಪದಲ್ಲಿ ಹಿಂದಿನ ದಿನ ಅಂದರೆ ಡಿ.೩೧ರ ಮದ್ಯರಾತ್ರಿಯವರೆಗೂ ಕುಡಿದು, ಕುಣಿದು, ಕುಪ್ಪಳಿಸಿ ಹೊಸ ವರ್ಷ ಬರುತ್ತಿದ್ದಂತೆ ನಿದ್ದೆಗೆ ಜಾರುವುದು ಯಾವ ಸಂಸ್ಕೃತಿ. ಹೊಸ ವರ್ಷಕ್ಕೆ ಹೊಸತನ ಎಲ್ಲರಲ್ಲಿ ಇರಬೇಕು. ಆದರೆ ವಿದೇಶಿ ಸಂಸ್ಕೃತಿಯಾಗಿರುವ ಕ್ಯಾಲೆಂಡರ್ ಬದಲಾವಣೆಯನ್ನೇ ಹೊಸ ವರ್ಷವನ್ನಾಗಿ ಆಚರಿಸುವ ಕೆಲವರು ವರ್ಷದ ಮೊದಲ ದಿನವೇ ಮಲಗಿ ನಿದ್ರಿಸುವುದು ಭಾರತಕ್ಕೆ ಶೋಭೆಯಲ್ಲ. ಈ ನಿಟ್ಟಿನಲ್ಲಿ ನೋಡಿದಾಗ ಭಾರತೀಯ ಪರಂಪರೆಯಂತೆ ಹೊಸ ವರ್ಷ ಯುಗಾದಿ. ಯುಗಾದಿ ಹಬ್ಬ ವೈಜ್ಞಾನಿಕವಾಗಿ, ಸಾಂಸ್ಕೃತಿಕವಾಗಿ ಎಷ್ಟೋ ವಾಸಿ. ಆರೋಗ್ಯವಂತ ಸಮಾಜ ನಿರ್ಮಾಣ, ಎಲ್ಲರ ಜವಾಬ್ದಾರಿಯಾಗಿರುವಾಗ ಭಾರತೀಯರಿಗೆ ಹೊಸ ವರ್ಷ ಯುಗಾದಿ. ಪರಿಸರದಲ್ಲಿ ಕೂಡಾ ಹೊಸತನ ಸೃಷ್ಟಿಯಾಗುತ್ತದೆ ಎಂಬ ಅರಿವು ನಮ್ಮ ಪಾಲಕರು ಮಕ್ಕಳಿಗೆ ತಿಳಿಸಬೇಕಿದೆ. ಮಕ್ಕಳು ಹಾಳಾಗುತ್ತಿದ್ದಾರೆ ಎಂದು ಗೊಣಗುತ್ತಾ ಅವರ ಸ್ವಚ್ಚೆಯಂತೆ ಅವರಿಗೆ ಸ್ವೆಚ್ಛಾಚರ ನಡೆಸಲು ನಾವು ಮೌನವಹಿಸುವುದು ಯಾಕೆ. ಎಚ್ಚೆತ್ತುಕೊಂಡು ಮಕ್ಕಳ ಮನಸ್ಸಿನಲ್ಲಿ ಹೊಸ ವರ್ಷದ ಕಲ್ಪನೆ ತುಂಬುವ ಕೆಲಸ ನಾವು, ನಿವೆಲ್ಲ ಮಾಡಬೇಕಿದೆ ಎಂದು ಸಲಹೆ ನೀಡಿರುವ ಸುಬ್ರಮಣ್ಯ ರಾಯ್ಕರ್ ಅವರು ಮಧ್ಯ ರಾತ್ರಿಯ ಮದ್ಯದ ಅಮಲಿನ ವರ್ಷಾಚರಣೆಗೆ ದಿಕ್ಕಾರವಿರಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.
