ಕಾರಟಗಿ.
ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಭಾಗವಹಿಸಿ ಅಯೋಧ್ಯೆಗೆ ಹೊರಟಿದ್ದ ಕಾರಟಗಿ ತಾಲೂಕಿನ ಸಿದ್ಧಾಪುರ ಗ್ರಾಮದ ೨೭ ವರ್ಷದ ಪ್ರವೀಣ ತಂದೆ ಮಲ್ಲಿಕಾರ್ಜುನ ಹೊಸಮನಿ(ಹಗೇದಾಳ) ಎಂಬ ಯುವಕ ಉತ್ತರ ಪ್ರದೇಶದ ಗೋರಖ್‌ಪುರ ರೈಲ್ವೆ ನಿಲ್ದಾಣದಲ್ಲಿ ವಿದ್ಯುತ್ ಶಾಕ್‌ನಿಂದ ಸಾವಪ್ಪಿರುವ ಘಟನೆ ನಡೆದಿದೆ.
ಈ ಕುರಿತು ಗೋರಖ್‌ಪುರ ಪೊಲೀಸ್‌ರಿಂದ ಸಿದ್ಧಾಪುರ ಗ್ರಾಮದ ಮೃತ ಯುವಕನ ಕುಟುಂಬಕ್ಕೆ ಮಾಹಿತಿ ಬಂದಿದೆ. ಕಳೆದ ಜ.೧೩ರಿಂದ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಕುಂಭಮೇಳ ಪ್ರಾರಂಭವಾಗುತ್ತಿದ್ದಂತೆ ತಾಲೂಕಿನ ಸಿದ್ಧಾಪುರ ಗ್ರಾಮದ ಮೇಳಕ್ಕೆ ಹೋಗಿದ್ದ ಯುವಕ ಪ್ರವೀಣ ಹೊಸಮನಿ ನಿನ್ನೆವರೆಗೂ ಪ್ರಯಾಗರಾಜ್‌ನಲ್ಲಿ ಇದ್ದು, ಸೋಮವಾರ ಅಯೋಧ್ಯೆಗೆ ಹೊರಟಿದ್ದು, ಮಾರ್ಗ ಮಧ್ಯೆ ಉತ್ತರ ಪ್ರದೇಶದ ಸಿದ್ಧಾರ್ಥ ಜಿಲ್ಲೆಯ ಗೋರಖ್‌ಪುರ ರೈಲ್ವೆ ನಿಲ್ದಾಣದಲ್ಲಿ ಮದ್ಯಾಹ್ನ ವಿದ್ಯುತ್ ತಗಲಿ ತೀವ್ರ ಗಾಯಗೊಂಡಿದ್ದಾನೆ. ಸ್ಥಳದಲ್ಲಿದ್ದ ರೈಲ್ವೆ ಪೊಲೀಸರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೇ ಗೋರಖ್‌ಪುರ ಬಿಆರ್‌ಡಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಮಂಗಳವಾರ ಮದ್ಯಾಹ್ನ ೨.೦೦ ಗಂಟೆಗೆ ಅಸುನಿಗಿದ್ದಾನೆ ಎಂದು ಮಾಹಿತಿ ಬಂದಿದೆ. ವಿಷಯ ತಿಳಿದು ಸಿದ್ಧಾಪುರ ಗ್ರಾಮದ ಮೃತ ಯುವಕನ ಮನೆಗೆ ಕಾರಟಗಿ ತಹಶೀಲ್ದಾರ ಕುಮಾರಸ್ವಾಮಿ ತೆರಳಿ ಪಾಲಕರಿಗೆ ಮಾಹಿತಿ ನೀಡಿದ್ದು, ಯುವಕನ ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ಪ್ರಯತ್ನಿಸಿದ್ದಾರೆ.
ಮೃತ ಯುವಕ ಪ್ರವೀಣ ಕನ್ನೇರಿಮಠದಲ್ಲಿ ಕೆಲವು ದಿನ ವಾಸವಾಗಿದ್ದು, ಕಳೆದ ತಿಂಗಳಿಂದ ಪ್ರಾರಂಭವಾಗಿರುವ ಕುಂಭಮೇಳಕ್ಕೆ ತೆರಳಿದ್ದನು ಎಂದು ಮೃತ ಸಂಬಂಧಿಕರು ಮಾಹಿತಿ ನೀಡಿದ್ದು, ಮೃತನ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.