ಗಂಗಾವತಿ.
ಕಳೆದ ಮಾ.೧ರಿಂದ ಪ್ರಾರಂಭವಾಗಿರುವ ದ್ವೀತಿಯ ಪಿಯಿಸಿ ಪರೀಕ್ಷೆಯ ಪ್ರಶ್ನೇ ಪ್ರತ್ರಿಕೆ ಸೇರಿದಂತೆ ಪರೀಕ್ಷಾ ಗೌಪ್ಯತಾ ವಸ್ತುಗಳನ್ನು ಪರೀಕ್ಷಾ ಕೇಂದ್ರಕ್ಕೆ ಪೂರೈಕೆ ಮಾಡಲು ನೇಮಕವಾದ ಮಾರ್ಗಾಧಿಕಾರಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್ ತಮಗೆ ನೀಡಿದ್ದ ಹೊಣೆಯನ್ನು ತಮ್ಮ ಕಚೇರಿಯ ಪ್ರಥಮ ದರ್ಜೆ ಗುಮಾಸ್ಥನೊಂದಿಗೆ ಪೂರೈಕೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ತಮಗೆ ನೀಡಿರುವ ಜವಬ್ದಾರಿಯನ್ನು ಮರೆತು ಮೇಲಾಧಿಕಾರಿಗಳ ಗಮನಕ್ಕೂ ತರದೇ ಕರ್ತವ್ಯ ಲೋಪವೆಸಗಿದ್ದಾರೆ ಎಂಬ ಆರೋಪ ಬಂದಿದ್ದು, ಪಿಯುಸಿ ಪರೀಕ್ಷಾ ನಿರ್ವಹಣೆ ಹೊಣೆ ಹೊತ್ತಿರುವ ಜಿಲ್ಲಾಧಿಕಾರಿಗಳು ಈಗ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ.
ಮಾ.೧ ರಿಂದ ಪ್ರಾರಂಭವಾಗಿರುವ ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಗೆ ಕೊಪ್ಪಳ ಜಿಲ್ಲೆಯಾದ್ಯಂತ ೨೪ ಪರೀಕ್ಷಾ ಕೇಂದ್ರಗಳನ್ನು ಮಾಡಿ ಈ ಕೇಂದ್ರಗಳಿಗೆ ಪ್ರಶ್ನೇ ಪತ್ರಿಕೆ ಸೇರಿದಂತೆ ಪರೀಕ್ಷಾ ಗೌಪ್ಯತಾ ವಸ್ತುಗಳನ್ನು ಕೊಪ್ಪಳ ಜಿಲ್ಲಾ ಕೇಂದ್ರದ ಖಜಾನೆ ಕಚೇರಿಯಿಂದ ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಸುರಕ್ಷಿತವಾಗಿ ಮತ್ತು ಜವಬ್ದಾರಿಯಿಂದ ಪೂರೈಕೆ ಮಾಡಲು ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳನ್ನು ನಿಯೋಜನೆ ಮಾಡಿ ಮಾರ್ಗಾಧಿಕಾರಿಗಳು ಎಂದು ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ. ಈಗಾಗಲೇ ಪರೀಕ್ಷೆಗಳು ಪ್ರಾರಂಭವಾಗಿದ್ದು, ಕೊಪ್ಪಳ ಜಿಲ್ಲಾ ಕೇಂದ್ರದಿಂದ ಪರೀಕ್ಷಾ ಗೌಪ್ಯತಾ ವಸ್ತುಗಳನ್ನು ಸಂಬಂಧಿಸಿದ ಅಧಿಕಾರಿಗಳು ತಮಗೆ ನೀಡಿರುವ ವಾಹನಗಳ ಮೂಲಕ ಸಂಬಂಧಿಸಿದ ಪರೀಕ್ಷಾ ಕೇಂದ್ರಕ್ಕೆ ಪೂರೈಕೆ ಮಾಡಿ ವರದಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಗಂಗಾವತಿ ನಗರದ ಸರೋಜಮ್ಮ ಕಾಲೇಜಿನ ಮತ್ತು ವಿದ್ಯಾನಗರದ ವೈಜೆಆರ್ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೇ ಪತ್ರಿಕೆಗಳನ್ನು ಪೂರೈಕೆ ಮಾಡಲು ಗಂಗಾವತಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಮಹಾಂತಗೌಡ ಅವರನ್ನು ನಿಯೋಜನೆ ಮಾಡಲಾಗಿದೆ. ಆದರೆ ಮಹಾಂತಗೌಡ ಪಾಟೀಲ್ ಬುಧವಾರದ ಪಿಯುಸಿ ದ್ವಿತೀಯ ವರ್ಷದ ರಾಜ್ಯಶಾಸ್ತ್ರ ವಿಷಯಕ್ಕೆ ಸಂಬಂಧಿಸಿದ ಪರೀಕ್ಷಾ ಗೌಪ್ಯತಾ ವಸ್ತುಗಳನ್ನು ತಮ್ಮ ಕಚೇರಿ ಸಿಬ್ಬಂದಿ ಮೂಲಕ ಪೂರೈಕೆ ಮಾಡಿ ಜವಬ್ದಾರಿ ವಹಿಸಿಕೊಟ್ಟಿರುವುದು ಆಶ್ಚರ್ಯ ಮೂಡಿದೆ.
ಪ್ರಶ್ನೇ ಪತ್ರಿಕೆ ಸೋರಿಕೆ ಮತ್ತಿತರ ಅವಘಡಗಳು ನಡೆಯದಂತೆ ಸುಸೂತ್ರವಾಗಿ ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳು ಪ್ರತಿಯೊಂದು ಕೇಂದ್ರಗಳಿಗೆ ಜವಬ್ದಾರಿಯುತ ಅಧಿಕಾರಿಗಳನ್ನು ನಿಯೋಜನೆ ಮಾಡಿದ್ದಾರೆ. ಈ ಅಧಿಕಾರಿಗಳು ಪ್ರಶ್ನೇ ಪತ್ರಿಕೆಗಳನ್ನು ತಮಗೆ ನೀಡಿರುವ ವಾಹನಗಳಲ್ಲಿ ಅತ್ಯಂತ ಜಾಗೂರುಕತೆಯಿಂದ ಕೇಂದ್ರಕ್ಕೆ ಪೂರೈಕೆ ಮಾಡಿ ತಕ್ಷಣ ಸಂಬಂಧಿಸಿದ ಮೇಲಾಧಿಕಾರಿಗೆ ವರದಿ ಮಾಡಬೇಕು. ಆದರೆ ತಾಪಂ ಸಹಾಯಕ ನಿರ್ದೇಶಕರು ತಮಗೆ ಆರೋಗ್ಯ ಸಮಸ್ಯೆಯಾಗಿದೆ ಎಂದು ಸಂಬಂಧಿಸಿದ ಮೇಲಾಧಿಕಾರಿಗಳ ಗಮನಕ್ಕೂ ತರದೇ ತಮ್ಮ ಕಚೇರಿ ಎಫ್‌ಡಿಸಿಯನ್ನು ಗೌಪ್ಯತಾ ವಸ್ತುಗಳನ್ನು ಪೂರೈಕೆ ಮಾಡಲು ಸೂಚನೆ ನೀಡಿದ್ದಾರೆ. ತಮ್ಮ ಸಹಾಯಕ ನಿರ್ದೇಶಕದ ಆದೇಶವನ್ನು ಪಾಲಿಸಿರುವ ಕಚೇರಿ ಸಿಬ್ಬಂದಿ ಇಂದು ಕೊಪ್ಪಳದಿಂದ ಪರೀಕ್ಷಾ ಗೌಪ್ಯತಾ ವಸ್ತುಗಳನ್ನು ತೆಗೆದುಕೊಂಡು ಕೇಂದ್ರಗಳಿಗೆ ಪೂರೈಕೆ ಮಾಡಿ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ಆದರೆ ಸಹಾಯಕ ನಿರ್ದೇಶಕರು ತಕ್ಷಣ ಮೇಲಾಧಿಕಾರಿಗಳಿಗೆ ಅಧಿಕೃತ ಲಿಖಿತ ರೂಪದಲ್ಲಿ ಒಪ್ಪಿಗೆ ಪಡೆಯದೇ ಯಡವಟ್ಟು ಮಾಡಿಕೊಂಡಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಇತ್ತೀಚಿಗೆ ಪ್ರಶ್ನೇ ಪತ್ರಿಕೆ ಸೋರಿಕೆ ಪ್ರಕರಣ ಜೋರಾಗಿ ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ತಮಗೆ ವಹಿಸಿರುವ ಜವಬ್ದಾರಿಯನ್ನು ಮರೆತು ಸಹಾಯಕ ನಿರ್ದೇಶಕ ಮಹಾಂತಗೌಡ ಅವರು ಮೇಲಾಧಿಕಾರಿಗಳ ಗಮನಕ್ಕೂ ತರದೇ ತಮ್ಮ ಕಚೇರಿ ಸಿಬ್ಬಂದಿ ಕಡೆಯಿಂದ ಈ ಕಾರ್ಯ ಮಾಡಿಸಿರುವುದು ಕರ್ತವ್ಯ ಲೋಪದ ಪ್ರಮುಖ ಅಂಶವಾಗಿದೆ. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಿಸಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರವೇ ಅಧ್ಯಕ್ಷ ಎಚ್.ಎಸ್.ಮುಧೋಳ ಆರೋಪಿಸಿದ್ದಾರೆ.
ಈ ಕುರಿತು ಪಿಯು ವಿಭಾಗದ ಉಪ ನಿರ್ದೇಶಕ ಜಗದೀಶ ಅವರು ಮಾತನಾಡಿ, ಪರೀಕ್ಷಾ ಕೇಂದ್ರಗಳಿಗೆ ನಿಯೋಜನೆ ಮಾಡಿರುವ ಮಾರ್ಗಾಧಿಕಾರಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರದೇ ತಮ್ಮ ಕಚೇರಿ ಸಿಬ್ಬಂದಿಯನ್ನು ಪರೀಕ್ಷಾ ಗೌಪ್ಯತಾ ವಸ್ತುಗಳನ್ನು ಪೂರೈಕೆ ಮಾಡಲು ಸೂಚನೆ ನೀಡಿರುವುದು ಸರಿಯಲ್ಲ. ಇದು ಕರ್ತವ್ಯ ಲೋಪವಾಗಿದೆ. ಈ ಕುರಿತು ನಾವು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟನೆ ನೀಡಿದರು.
ಬಾಕ್ಸ್:
ಮಾರ್ಗಾಧಿಕಾರಿ ಕರ್ತವ್ಯ ಲೋಪ: ಪರಿಶೀಲನೆ
ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆ ಕೇಂದ್ರಗಳಿಗೆ ಪರೀಕ್ಷಾ ಗೌಪ್ಯತಾ ವಸ್ತುಗಳನ್ನು ಪೂರೈಕೆ ಮಾಡಲು ಜಿಲ್ಲೆಯ ೨೪ ಕೇಂದ್ರಗಳಿಗೆ ಮಾರ್ಗಾಧಿಕಾರಿಗಳನ್ನು ನಿಯೋಜನೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ. ಈಗಾಗಲೇ ಪರೀಕ್ಷೆಗಳು ಪ್ರಾರಂಭವಾಗಿವೆ. ಆದರೆ ಗಂಗಾವತಿಯ ಎರಡು ಕೇಂದ್ರಗಳಿಗೆ ನಿಯೋಜನೆ ಮಾಡಿರುವ ಗಂಗಾವತಿ ತಾಪಂ ಸಹಾಯಕ ನಿರ್ದೇಶಕರು ಪರೀಕ್ಷಾ ಗೌಪ್ಯತಾ ವಸ್ತುಗಳನ್ನು ತಾವು ಖುದ್ದಾಗಿ ಪೂರೈಕೆ ಮಾಡಿ ವರದಿ ಮಾಡಿಕೊಳ್ಳದೇ ತಮ್ಮ ಕಚೇರಿ ಎಫ್‌ಡಿಎಗೆ ಹೊಣೆ ಹೋರಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದ್ದು, ಇದು ಮಾರ್ಗಾಧಿಕಾರಿಯ ಕರ್ತವ್ಯ ಲೋಪವಾಗಿದೆ. ಈ ಕುರಿತು ಅಪರ ಜಿಲ್ಲಾಧಿಕಾರಿಗಳು ಮತ್ತು ನಾನು ಪರಿಶೀಲನೆ ಮಾಡುತ್ತಿದ್ದೇವೆ. ತಪ್ಪಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
ಜಗದೀಶ.ಜಿ.ಹೆಚ್. ಉಪ ನಿರ್ದೇಶಕರು, ಪಿಯು ವಿಭಾಗ, ಕೊಪ್ಪಳ.
ಬಾಕ್ಸ್:
ಆರೋಗ್ಯ ಸಮಸ್ಯೆಯಿಂದ ಸಿಬ್ಬಂದಿಗೆ ನಿಯೋಜನೆ
ಪಿಯುಸಿ ಪರೀಕ್ಷಾ ಗೌಪ್ಯತಾ ವಸ್ತುಗಳನ್ನು ಪೂರೈಕೆ ಮಾಡಲು ನನಗೆ ನಗರದ ಎರಡು ಕೇಂದ್ರಗಳಿಗೆ ಜವಬ್ದಾರಿವಹಿಸಿದ್ದಾರೆ. ಆದರೆ ಇಂದು ನನಗೆ ದಿಡೀರ್ ಆರೋಗ್ಯ ಸಮಸ್ಯೆಯಾಗಿರುವುದರಿಂದ ನಮ್ಮ ಕಚೇರಿಯ ಜವಬ್ದಾರಿಯುತ ಎಫ್‌ಡಿಎ ಅವರನ್ನು ನಿಯೋಜನೆ ಮಾಡಿದ್ದೇನೆ. ಇದರಲ್ಲಿ ಯಾವುದೇ ಲೋಪವಾಗಿದೆ. ನಾನು ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಬಂದಿದ್ದರಿಂದ ಹೀಗಾಗಿದೆ. ಪರೀಕ್ಷಾ ಗೌಪ್ಯತಾ ವಸ್ತುಗಳ ಪೂರೈಕೆಯಲ್ಲಿ ಯಾವುದೇ ಲೋಪವಾಗಿಲ್ಲ.
ಮಹಾಂತಗೌಡ ಪಾಟೀಲ್, ಸಹಾಯಕ ನಿರ್ದೇಶಕರು ತಾಪಂ ಗಂಗಾವತಿ, ಹಾಗೂ ಪಿಯುಸಿ ಪರೀಕ್ಷೇ ಕೇಂದ್ರದ ಮಾರ್ಗಾಧಿಕಾರಿ