ಕೊಪ್ಪಳ.
ಪರಿಸರಕ್ಕೆ ಹಾನಿಕಾರವಾದ ಹೊಗೆ ಸೂಸುವಂತಹ ಕೊಪ್ಪಳ ನಗರಕ್ಕೆ ಹೊಂದಿಕೊಂಡು ರೂ.೫೨ ಸಾವಿರ ಕೋಟಿ ವೆಚ್ಚದಲ್ಲಿ ಪ್ರಾರಂಭವಾಗಲು ಸಜ್ಜಾಗಿದ್ದ ಬಿಎಸ್‌ಪಿಎಲ್(ಬಲ್ಡೋಟಾ) ಬೃಹತ್ ಕಾರ್ಖಾನೆಯ ಕಾರ್ಯಾರಂಭಕ್ಕೆ ಬ್ರೇಕ್ ಹಾಕುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೊಪ್ಪಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಾರ್ಖಾನೆ ಪ್ರಾರಂಭಿಸುವುದು ಬೇಡ ಎಂದು ಕೊಪ್ಪಳ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಕಳೆದ ಫೆ.೨೪ರಂದು ನಡೆದಿದ್ದ ಕೊಪ್ಪಳ ಬಂದ್ ಹೋರಾಟವನ್ನು ಬೆಂಬಲಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಸಂಸದ ರಾಜಶೇಖರ ಹಿಟ್ನಾಳ್ ಸೇರಿದಂತೆ ಜಿಲ್ಲೆಯ ಸರ್ವ ಪಕ್ಷದ ಮುಖಂಡರ ನಿಯೋಗದೊಂದಿಗೆ ಭೇಟಿ ಮಾಡಿದ ಮನವಿಗೆ ಸಿಎಂ ಸಿದ್ಧರಾಮಯ್ಯ ಅಭಯ ನೀಡಿರುವುದು ಹೋರಾಟಗಾರರಲ್ಲಿ ಮಂದಹಾಸ ಮೂಡಿದೆ.
ಮಂಗಳವಾರ ಸಚಿವ ಶಿವರಾಜ ತಂಗಡಗಿ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಸಂಸದ ರಾಜಶೇಖರ ಹಿಟ್ನಾಳ್ ಸೇರಿದಂತೆ ಜಿಲ್ಲೆಯ ಸರ್ವ ಪಕ್ಷದ ಹಾಲಿ, ಮಾಜಿ ಶಾಸಕರು, ಸಂಸದರನ್ನು ಬೆಂಗಳೂರಿಗೆ ಅಹ್ವಾನಿಸಿ ತಮ್ಮ ಕಚೇರಿಯಲ್ಲಿ ಸಭೆ ನಡೆಸಿ ನಂತರ ಮುಖ್ಯಮಂತ್ರಿಗಳನ್ನು ಸರ್ವರ ಸಮ್ಮುಖದಲ್ಲಿ ಭೇಟಿ ಮಾಡಿ ಕಾರ್ಖಾನೆಗೆ ಜಿಲ್ಲೆಯ ಜನರ ವಿರೋಧ ಮಾಡುತ್ತಿರುವ ಕುರಿತು ಮನವರಿಕೆ ಮಾಡಿದ್ದು, ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಸರ್ವ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಸರಕಾರದ ಕಾರ್ಯದರ್ಶಿಗಳ ಮೂಲಕ ಕೊಪ್ಪಳ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಸೂಚನೆ ನೀಡಿದರು ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಮಾಧ್ಯಮಗಳಿಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸಾವಿರಾರು ಎಕರೆ ಪ್ರದೇಶವನ್ನು ಖರೀದಿಸಿರುವ ಬಿಎಸ್‌ಪಿಎಲ್ ಕಾರ್ಖಾನೆ ಉಕ್ಕು ತಯಾರಿಸುವ ಉದ್ದೇಶದಿಂದ ಕಾರ್ಯಾರಂಭಕ್ಕೆ ಮುಂದಾಗಿದೆ. ಕೊಪ್ಪಳ ನಗರಕ್ಕೆ ಕೂಗಳತೆಯಲ್ಲಿ ಈ ಕಾರ್ಖಾನೆ ಪ್ರಾರಂಭಿಸುವುದರಿಂದ ಅದರಿಂದ ಬರುವ ಮಾಲಿನ್ಯ ಮತ್ತು ಹೊಗೆಯಿಂದಾಗಿ ಜನ, ಜಾನುವಾರು ಮತ್ತು ಹೊಲ, ಗದ್ದೆಗಳಿಗೆ, ಪರಿಸರಕ್ಕೆ ಬಹುದೊಡ್ಡ ಹಾನಿಯಾಗಲಿದೆ. ಹೀಗಾಗಿ ಕಾರ್ಖಾನೆ ಪ್ರಾರಂಭಕ್ಕೆ ಅನುಮತಿ ನೀಡಬಾರದು ಎಂದು ಹೋರಾಟಗಾರರು ಫೆ.೨೪ರಂದು ಬಂದ್ ಕರೆ ನೀಡಿದ್ದರು. ಬಂದ್‌ಗೆ ಬೆಂಬಲಿಸಿದ್ದ ಕೊಪ್ಪಳ ಗವಿಸಿದ್ದೇಶ್ವರ ಸ್ವಾಮಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ಕಾರ್ಖಾನೆ ಬಂದ್ ಮಾಡುವ ಆದೇಶದ ಪ್ರತಿಯೊಂದಿಗೆ ಕೊಪ್ಪಳಕ್ಕೆ ಬರಬೇಕು ಎಂದು ಸಚಿವ, ಶಾಸಕ, ಸಂಸದರಿಗೆ ನೇರವಾಗಿ ವೇದಿಕೆಯ ಮೂಲಕವೇ ಸೂಚನೆ ನೀಡಿದ್ದರು. ಶ್ರೀಗಳ ಮಾತು ಅತ್ಯಂತ ಗಂಭೀರ ಪರಿಣಾಮ ಬೀರಿದ್ದು, ಸಚಿವ ಶಿವರಾಜ ತಂಗಡಗಿ, ಶಾಸಕ ಹಿಟ್ನಾಳ್ ಅವರಿಗೆ ಇದು ಪ್ರತಿಷ್ಟೆಯೂ ಆಗಿತ್ತು. ಹೀಗಾಗಿ ಸಚಿವ ಶಿವರಾಜ ತಂಗಡಗಿ ಸರ್ವ ಪಕ್ಷಗಳ ಮುಖಂಡರನ್ನು ಅಹ್ವಾನಿಸಿ ನೇರವಾಗಿ ಮುಖ್ಯಮಂತ್ರಿಗಳ ಮುಂದೆ ಸಮಸ್ಯೆ ಮತ್ತು ಗವಿಸಿದ್ದೇಶ್ವರ ಶ್ರೀಗಳ ಅಣತಿಯನ್ನು ಮನವರಿಕೆ ಮಾಡಿದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಸರ್ವ ಪಕ್ಷದ ಮುಖಂಡರು, ಹೋರಾಟಗಾರರು ಒಟ್ಟಾಗಿ ಬಂದು ಮನವಿ ಮಾಡಿರುವುದಕ್ಕೆ ಮನಸೋತ ಸಿಎಂ ಸಿದ್ಧರಾಮಯ್ಯ ಕಾರ್ಖಾನೆ ಕಾರ್ಯಾರಂಭವನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದಾರೆ.
ಮುಖ್ಯಂತ್ರಿಗಳ ಸೂಚನೆಗೆ ಸಂತಸಗೊಂಡಿರುವ ಶಾಸಕ ರಾಘವೇಂದ್ರ ಹಿಟ್ನಾಳ್ ಕಾರ್ಖಾನೆ ಸ್ಥಗಿತಗೊಳಿಸುವ ಹೋರಾಟದಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾತು ಈಗ ಜಿಲ್ಲೆಯಾದ್ಯಂತ ಕೇಳಿ ಬರುತ್ತಿದೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಿಯೋಗದಲ್ಲಿ ಸಚಿವ ಶಿವರಾಜ ತಂಗಡಗಿ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಶಾಸಕ ರಾಘವೇಂದ್ರ ಹಿಟ್ನಾಳ, ಜನಾರ್ಧನರೆಡ್ಡಿ, ದೊಡ್ಡನಗೌಡ ಪಾಟೀಲ್, ಎಂಎಲ್‌ಸಿ ಹೇಮಲತಾ ನಾಯಕ, ಶರಣೇಶಗೌಡ ಬಯ್ಯಾಪುರ, ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ್, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಅಮರೇಗೌಡ ಬಯ್ಯಾಪುರ, ಮಾಜಿ ಸಂಸದ ಸಂಗಣ್ಣ ಕರಡಿ, ಶಿವರಾಮಗೌಡ, ಮಾಜಿ ಎಂಎಲ್‌ಸಿ ಕರಿಯಣ್ಣ ಸಂಕಟಿ, ಬಿಜೆಪಿ ಮುಖಂಡರಾದ ಡಾ|| ಬಸವರಾಜ ಕ್ಯಾವಟರ್, ಜೆಡಿಎಸ್ ಮುಖಂಡ ಸಿ.ವಿ.ಚಂದ್ರಶೇಖರ, ಕಾಂಗ್ರೆಸ್ ಮುಖಂಡ ರೆಡ್ಡಿ ಶ್ರೀನಿವಾಸ ಮತ್ತಿತರು ಇದ್ದರು.

 

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!