ಕಾರಟಗಿ.
ಪಟ್ಟಣದ ಶಾರದಾ ಇಂಟರ್‌ನ್ಯಾಷನಲ್ ಶಾಲೆಯ ವಾರ್ಷಿಕೋತ್ಸವ ನಿಮಿತ್ಯ ಮಕ್ಕಳಿಂದ ಪಾಲಕರಿಗೆ ಪಾದಪೂಜೆ ಮಾಡುವ ವಿನೂತನ ಮತ್ತು ಭಾವನಾತ್ಮಕ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು. ಕಾರ್ಯಕ್ರಮ ಕುರಿತು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷೆ ಶಾರದಾ ಮಲ್ಲಿಕಾರ್ಜುನ ಮಾತನಾಡಿ, ಮಕ್ಕಳಿಗೆ ಕೇವಲ ಶಿಕ್ಷಣ ನೀಡಿ ಅಂಕಕ್ಕೆ ಸಿಮೀತಗೊಳಿಸುವುದು ಶಾಲೆಯ ಕೆಲಸವಲ್ಲ. ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮ ನಡೆಸಬೇಕು. ಸಂಬಂಧಗಳಿಂದ ಮಕ್ಕಳಲ್ಲಿ ಸಂಸ್ಕಾರ ವೃದ್ಧಿಯಾಗುತ್ತದೆ. ಹೀಗಾಗಿ ನಮ್ಮ ಶಾಲೆಯ ಮಕ್ಕಳಿಗೆ ತಂದೆ, ತಾಯಿ, ಗುರು, ಹಿರಿಯರ ಬಗ್ಗೆ ಗೌರವ ಬರುವಂತಹ ಕಾರ್ಯಕ್ರಮ ನಡೆಸಿದ್ದೇವೆ ಎಂದರು.
ಶುಕ್ರವಾರ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳಿಗೆ ಬಾಲ್ಯದಲ್ಲಿಯೇ ತಂದೆ, ತಾಯಿಯ ಬಗ್ಗೆ ಪೂಜನೀಯ ಭಾವನೆ ಮೂಡಿಸಬೇಕು. ಮಕ್ಕಳಿಗೆ ಸಾಮಾಜಿಕ ಅರಿವು ಮತ್ತು ತಮ್ಮ ಕರ್ತವ್ಯದ ಬಗ್ಗೆ ಮನನ ಮಾಡಬೇಕು. ನಮ್ಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆ ಜೊತೆಗೆ ವರ್ಷದಲ್ಲಿ ಮಕ್ಕಳ ಮಾನಸಿಕ, ಬೌದ್ಧಿಕ, ಶಾರೀರಕ ಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಿರಂತರ ನಡೆಸುತ್ತಿದ್ದೇವೆ. ಪಾಲಕರ ಮತ್ತು ಪಟ್ಟಣದ ಜನತೆಯ ಸಹಕಾರದಿಂದ ಶೈಕ್ಷಣಿಕ ಪ್ರಗತಿಯಲ್ಲಿ ದಾಪುಗಾಲು ಹಾಕುತ್ತಿದ್ದೇವೆ ಎಂದರು.
ತಂದೆ ತಾಯಿಯರ ಪಾದ ಪೂಜೆಯಲ್ಲಿ ಪಾಲ್ಗೊಂಡ ಮಕ್ಕಳ ಮುಖದಲ್ಲಿ ಧನ್ಯತಾ ಭಾವ ಮೂಡಿತ್ತು. ಮಕ್ಕಳಿಂದ ಪಾದ ಪೂಜೆಗೆ ಒಳಗಾದ ತಂದೆ ತಾಯಂದಿರು ಮಕ್ಕಳ ಪ್ರೀತಿ ಕಂಡು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮರಳುಸಿದ್ಧಯ್ಯಸ್ವಾಮಿ ಹಿರೆಮಠ, ವೀರಭದ್ರಯ್ಯಸ್ವಾಮಿ ತಲೆಖಾನ್ ಮಠ ಸಾನಿಧ್ಯವಹಿಸಿದ್ದರು. ದೇವೆಂದ್ರಪ್ಪ ಚಿರ್ಚಿನಮಠ, ಭಿಮಪ್ಪ ಅಪ್ಪಾಜೀ ಅಗ್ನಿಕೊಂಡ ದ್ಯಾಮಮ್ಮ ದೇವಸ್ಥಾನ, ಶಂಕರ್ ಹಿರೆಮಠ, ಪ್ರದೀಪ್ ಆಚಾರ, ಸಂಸ್ಥೆಯ ಉಪಾಧ್ಯಕ್ಷ ಪ್ರಭಣ್ಣ ಉಪನಾಳ, ಕಾರ್ಯದರ್ಶಿ ಮಲ್ಲಿಕಾರ್ಜುನ ತೊಂಡಿಹಾಳ ಪುರಸಭೆ ಸದಸ್ಯ ಈಶಪ್ಪ ಇಟ್ಟಂಗಿ, ಮುಖಂಡ ಬಸವರಾಜ ಪಗಡದಿನ್ನಿ, ಗಂಗಾಧರಗೌಡ ನವಲಿ ಸೇರಿದಂತೆ ಸಂಸ್ಥೆಯ ಸದಸ್ಯರು, ಶಿಕ್ಷಕರು ಪಾಲಕರು ಇದ್ದರು.
