ಗಂಗಾವತಿ.
ಮಳೆ ಕೊರತೆಯಿಂದ ಜಿಲ್ಲೆಯಾದ್ಯಂತ ಬರಗಾಲ ತೀವ್ರವಾಗುತ್ತಿದೆ. ಜಿಲ್ಲೆಯ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹವು ಕಡಿಮೆಯಾಗುತ್ತಿದೆಈಗಾಗಲೇ ಗಂಗಾವತಿ ನಗರ ಸೇರಿದಂತೆ ಪ್ರತಿಯೊಂದು ಗ್ರಾಮಗಳಲ್ಲೂ ಕುಡಿಯುವ ನೀರಿಗೆ ಆಹಾಕಾರವಾಗುತ್ತಿದೆ. ಇಂತಹ ಪರಿಸ್ಥಿತಿ ಗೋಚರಿಸುತ್ತಿದೆ. ಬರಗಾಲ ಪರಿಸ್ಥಿತಿ ಬಗ್ಗೆ ಜಿಲ್ಲಾಡಳಿತ ಮತ್ತು ಜಿಲ್ಲೆಯ ಸಚಿವರು, ಶಾಸಕರು ಸೇರಿದಂತೆ ಯಾವುಬ್ಬ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸದಿರುವುದು ಕಂಡು ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ರಾಘವೇಂದ್ರಶೆಟ್ಟಿ ಅವರು ತಕ್ಷಣ ಜಲಾಶಯದ ನೀರನ್ನು ನದಿಗಳಿಗೆ ಹರಿಬಿಟ್ಟು ಅನವಶ್ಯಕವಾಗಿ ಪೋಲು ಮಾಡದೇ ನೀರಿನ ಕೊರತೆ ನಿಗಿಸಲು ಎಚ್ಚೆತ್ತುಕೊಳ್ಳಬೇಕು ಎಂದು ಅಗ್ರಹಿಸಿದ್ದಾರೆ.
ಈ ಕುರಿತು ಅವರು ಮಾಧ್ಯಮಗಳಿಗೆ ಪ್ರಕಟಣೆ ನೀಡಿ, ಬರಗಾಲ ನಿರ್ವಹಣೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಜಿಲ್ಲಾಡಳಿತ ಮತ್ತು ಜಿಲ್ಲೆಯ ಜನಪ್ರತಿನಿಧಿಗಳಿಗೆ ಒತ್ತಾಯಿಸಿದ್ದಾರೆ. ಕಳೆದ ಒಂದು ವರ್ಷದಿಂದ ಜಿಲ್ಲೆಯಾದ್ಯಂತ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲ. ಮುಂಗಾರು ಹಂಗಾಮಿನಲ್ಲೇ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ. ಈಗ ಚಳಿಗಾಲ ಪ್ರಾರಂಭವಾಗಿದೆ. ಮಳೆಗಾಲ ಬರಲು ಇನ್ನು ಆರು ತಿಂಗಳು ಕಾಯಬೇಕಿದೆ. ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಇದ್ದರೂ ಕೆಲವು ಯೋಜನೆಗಳ ಕಾರಣ ನೀಡಿ ಮುಖ್ಯಮಂತ್ರಿಗಳ ಸೂಚನೆಯಂತೆ ನದಿಗೆ ನೀರು ಹರಿ ಬಿಡಲಾಗುತ್ತಿದೆ. ಮತ್ತು ವಾಣಿಜ್ಯ ಉದ್ದೇಶಕ್ಕೆ ನೀರು ಹಂಚಿಕೆ ಮಾಡಲಾಗುತ್ತಿದೆ. ಇದರಿಂದ ನದಿಯಲ್ಲೂ ಕೂಡಾ ನೀರು ಇಲ್ಲದಂತಾಗುತ್ತಿದೆ. ಗಂಗಾವತಿ ನಗರದಲ್ಲಿ ಕಳೆದ ಎರಡು ದಶಕಗಳಿಂದ ದಿನ ಬಿಟ್ಟು ದಿನಕ್ಕೊಮ್ಮೆ ಮನೆಗಳಿಗೆ ನೀರು ಪೂರೈಸಲಾಗುತ್ತಿದೆ. ಆದರೆ ಈಗ ನೀರಿನ ಕೊರತೆಯಿಂದಾಗಿ ವಾರಕ್ಕೊಮ್ಮೆ ನೀರು ಬಿಡುವ ಮುನ್ಸೂಚನೆಯನ್ನು ನಗರಸಭೆ ಅಧಿಕಾರಿಗಳು ನೀಡುತ್ತಿದ್ದಾರೆ. ಎಂತಹ ತೀವ್ರತರವಾದ ಬರಗಾಲ ಬಂದರೂ ಗಂಗಾವತಿ ನಗರಕ್ಕೆ ಈ ಹಿಂದೆ ನೀರಿನ ಪೂರೈಕೆಯಲ್ಲಿ ವ್ಯತ್ಯೇಯ ಉಂಟಾಗದಂತೆ ನಿಗಾವಹಿಸಲಾಗುತ್ತಿತ್ತು. ಆದರೆ ಪ್ರಸಕ್ತ ವರ್ಷ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನದಿಯ ನೀರನ್ನು ಸಂಗ್ರಹಿಸುವ ಕೆಲಸ ಮಾಡುತ್ತಿಲ್ಲ. ನದಿಗೆ ರಿಂಗ್‌ಬಂಡ್ ಮಾಡಿ ನಗರಕ್ಕೆ ನೀರು ಸಂಗ್ರಹಿಸಿಕೊಳ್ಳಬೇಕು ಎಂದು ರಾಘವೇಂದ್ರಶೆಟ್ಟಿ ಸಲಹೆ ನೀಡಿದ್ದಾರೆ.