ಗಂಗಾವತಿ.
ರಾಜ್ಯದ ಬಡ ಕುಟುಂಬಕ್ಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ನೀಡುತ್ತಿರುವ ಐದು ಕೆಜಿ ಅಕ್ಕಿಯನ್ನು ತಾವು ಕೊಡುತ್ತಿದ್ದೇವೆ ಎಂದು ಸುಳ್ಳು ಹೇಳುವ ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದ ಬೊಕ್ಕಸವನ್ನು ಲೂಟಿ ಮಾಡುತ್ತಿದೆ. ಇಂತಹ ಸರಕಾರದ ವಿರುದ್ಧ ಜನಾಕ್ರೋಶ ಜೋರಾಗತ್ತಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನೇತೃತ್ವದ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ಸಿಗೆ ಬುದ್ದಿ ಕಲಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷ ರಾಜು ನಾಯಕ ಕರೆ ನೀಡಿದರು.
ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷರಾದ ನಂತರ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಮತ್ತು ಜೆಡಿಎಸ್ ಪಕ್ಷದ ಕಾರ್ಯಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾನು ೨೦ ವರ್ಷ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯವಾಗಿ ಕೆಲಸ ಮಾಡಿ ಪಕ್ಷದ ಸಂಘಟನೆಗೆ ದುಡಿದಿದ್ದೆ. ಆದರೆ ಕಾಂಗ್ರೆಸ್ ಪಕ್ಷ ನನ್ನನ್ನು ಸಂಪೂರ್ಣ ಕಡೆಗಣಿಸಿತು. ಆದರೆ ಕುಮಾರಣ್ಣ ಅವರು ನನಗೆ ಕಂಪ್ಲಿ ಕ್ಷೇತ್ರಕ್ಕೆ ಟಿಕೆಟ್ ನೀಡಿ ರಾಜಕೀಯ ಶಕ್ತಿ ತುಂಬಿದರು. ಮತ್ತು ಈಗ ರಾಜ್ಯಾಧ್ಯಕ್ಷರನ್ನಾಗಿ ಈಡಿ ರಾಜ್ಯ ಪ್ರವಾಸ ಮಾಡಲು ಬೆಂಬಲಿಸಿದ್ದಾರೆ. ಕುಮಾರಣ್ಣನವರ ಕೈ ಬಲಪಡಿಸಲು ನಾವೆಲ್ಲರು ಸೇರಿ ಜೆಡಿಎಸ್ ಗಟ್ಟಿಗೊಳಿಸಬೇಕು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನಿಂದ ಯಾರೇ ಅಭ್ಯರ್ಥಿಯಾದರೂ ಮೈತ್ರಿ ಅಭ್ಯರ್ಥಿ ಗೆಲ್ಲಿಸೋಣ ಎಂದು ಕರೆ ನೀಡಿದ ರಾಜು ನಾಯಕ ಅವರು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ನೆಲ ಕಚ್ಚಿವೆ. ಗಂಗಾವತಿ ನಗರದಲ್ಲಿ ಕುಡಿಯುವ ನೀರು, ರಸ್ತೆ ಮತ್ತಿತರ ಮೂಲಭೂತ ಸೌಕರ್ಯಗಳ ಕೊರತೆ ಹೆಚ್ಚುತ್ತಿದೆ. ನಗರಸಭೆಯಲ್ಲಿ ಫಾರಂ-೩ ಪಡೆಯಲು ಬಡವರು ಹರ ಸಾಹಸ ಪಡುವ ಪರಿಸ್ಥಿತಿ ಇದೆ. ಹೀಗೆ ಮುಂದುವರೆದರೆ ಗಂಗಾವತಿಯಲ್ಲಿ ಜೆಡಿಎಸ್ ನೇತೃತ್ವದಲ್ಲಿ ಬೃಹತ್ ಹೋರಾಟ ನಡೆಸಲಾಗುತ್ತದೆ. ಗಂಗಾವತಿಯ ಅವ್ಯವಸ್ಥೆಯನ್ನು ರಾಜ್ಯಾದ್ಯಂತ ಗಮನ ಸೇಳೆಯಲು ಶೀಘ್ರ ಜೆಡಿಎಸ್ ಬೃಹತ್ ಆಂದೋಲನ ನಡೆಸಲಿದ್ದು, ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್ ಸಂಘಟಿಸಲು ಎಲ್ಲರು ಕೆಲಸ ಮಾಡಬೇಕು. ಯುವ ನಾಯಕ ರಾಜು ನಾಯಕ ನೇತೃತ್ವದಲ್ಲಿ ಗಂಗಾವತಿಯಲ್ಲಿ ಮತ್ತೆ ಜೆಡಿಎಸ್ ಅಧಿಕಾರಕ್ಕೆ ಬರುವಂತೆ ಮಾಡಬೇಕು ಎಂದು ಕರೆ ನೀಡಿದರು. ಬಿಜೆಪಿ ಮುಖಂಡರಾದ ತಿಪ್ಪೇರುದ್ರಸ್ವಾಮಿ, ಸಂಗಮೇಶ ಸುಗ್ರೀವಾ ಮಾತನಾಡಿ, ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿ ಗಂಗಾವತಿ ಕ್ಷೇತ್ರ ಸೇರಿದಂತೆ ಕೊಪ್ಪಳ ಲೋಕಸಭೆಯಲ್ಲು ಇರಲಿದೆ. ಹೀಗಾಗಿ ನಾವೆಲ್ಲರೂ ಸೇರಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಲು ಕೆಲಸ ಮಾಡಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಈ ದೇಶವನ್ನು ಮುನ್ನಡೆಸಲು ಒಟ್ಟಾಗಿ ಚುನಾವಣೆ ಎದುರಿಸಿ ಕಾಂಗ್ರೆಸ್ಸಿಗೆ ಬುದ್ದಿ ಕಲಿಸಬೇಕು ಎಂದರು.
ಯಲಬುರ್ಗಾ ಜೆಡಿಎಸ್ ಮುಖಂಡ ಮಲ್ಲನಗೌಡ ಮಾತನಾಡಿ, ಸಮಾಜವಾದ ಹೆಸರಿನಲ್ಲಿ ಸಿಎಂ ಸಿದ್ಧರಾಮಯ್ಯ ಮಜಾ ಮಾಡುತ್ತಿದ್ದಾರೆ. ಹತ್ತಕ್ಕು ಹೆಚ್ಚು ಜನರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಂಡು ಎಲ್ಲರಿಗೂ ಐಷಾರಾಮಿ ಕಾರ್ ನೀಡಿ ಮನೆ ನವೀಕರಣಕ್ಕೆ ಹತ್ತು ಕೋಟಿ ಖರ್ಚು ಮಾಡಿದ್ದಾರೆ. ಇಂತಹ ಸಿಎಂರನ್ನು ಅಧಿಕಾರದಿಮದ ಕೆಳಗಿಸಬೇಕು ಎಂದರು. ಮುಖಂಡ ವಿಶ್ವನಾಥಗೌಡ, ನಾರಾಯಣರೆಡ್ಡಿ, ಬುಲೇಟ್‌ಗೌಡ, ವೀರಪ್ಪ ನಾಯಕ, ಕೃಷ್ಣ, ನಾಗರಾಜ ನಾಯಕ ಮತ್ತಿತರು ಇದ್ದರು, ಯಮನೂರ ದೇಸಾಯಿ ನಿರ್ವಹಿಸಿದರು.
ಬಾಕ್ಸ್:
ಜಿಲ್ಲೆಯಾದ್ಯಂತ ಜೆಡಿಎಸ್ ಸಂಘಟನೆ
ನಾನು ಈ ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದ್ದೆ. ನನ್ನನ್ನು ಕಡೆಗಣಿಸಿದ್ದರಿಂದ ಈಗ ಜೆಡಿಎಸ್ ಪಕ್ಷಕ್ಕೆ ಮರಳಿದ್ದೇನೆ. ಕಳೆದ ಹದಿನೈದು ದಿನಗಳ ಹಿಂದೆ ನನಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದೆ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‌ಯನ್ನು ಜಿಲ್ಲೆಯಾದ್ಯಂತ ಸಂಘಟಿಸಲು ನಾನು ಕೆಲಸ ಮಾಡುತ್ತೇನೆ.
ಸುರೇಶ ಭೂರೆಡ್ಡಿ, ಜಿಲ್ಲಾಧ್ಯಕ್ಷರು, ಜೆಡಿಎಸ್ ಕೊಪ್ಪಳ.
