ಗಂಗಾವತಿ.
ನಾನು ಕಾಂಗ್ರೆಸ್ ಪಕ್ಷ ಸೇರಲು ಸಜ್ಜಾಗಿದ್ದೇನೆ ಎಂದು ಕೆಲವರು ಷಡ್ಯಂತರದ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ದೇಶದಲ್ಲಿ ದೇವಮಾನವರಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಟ್ಟಾ ಅಭಿಮಾನಿಯಾಗಿರುವ ನಾನು ಕಾಂಗ್ರೆಸ್ ಪಕ್ಷ ಸೇರುವ ಮಾತೇ ಇಲ್ಲ. ಬಿಜೆಪಿ ನನಗೆ ತಾಯಿ ಸಮಾನ ಪಕ್ಷವಾಗಿದೆ. ಇಂತಹ ಸಂದರ್ಭದಲ್ಲಿ ಕೆಲವು ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರು ಇಂತಹ ಸುಳ್ಳು ವಿಷಯಗಳನ್ನು ಯಾರು ನಂಬಬಾರದು ಮತ್ತು ಚುನಾವಣೆಯಲ್ಲಿ ಗೊಂದಲ ಸೃಷ್ಟಿಸಲು ನಡೆಸುತ್ತಿರುವ ಇಂತಹ ಷಡ್ಯಂತರಗಳಿಗೆ ಯಾರು ಕಿವಿಗೊಡಬೇಡಿ ಎಂದು ಕಾರ್ಯಕರ್ತರು, ಅಭಿಮಾನಿಗಳು ಮತ್ತು ಮತದಾರರಿಗೆ ಮನವಿ ಮಾಡಿದರು.
ಮಾಜಿ ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಂತೆ ಪರಣ್ಣ ಮುನವಳ್ಳಿ ಕೂಡಾ ಅವರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಾರೆ ಎಂಬ ಚರ್ಚೆ ನಡೆಯುತ್ತಿತ್ತು. ಈ ವಿಷಯವನ್ನು ಈಗಾಗಲೇ ಪರಣ್ಣ ಮುನವಳ್ಳಿ ತಳ್ಳಿ ಹಾಕಿದ್ದರೂ ಕೆಲವು ವ್ಯಕ್ತಿಗಳು ರೋಮರ್ ಹರಿಬಿಡುತ್ತಿರುವುದನ್ನು ಗಮನಿಸಿರುವ ಪರಣ್ಣ ಮುನವಳ್ಳಿ ಭಾನುವಾರ ಸಮರ್ಥವಾಣಿಯೊಂದಿಗೆ ಮಾತನಾಡಿ ಮತ್ತೊಮ್ಮೆ ಸ್ಪಷ್ಟಪಡಿಸಿದರು. ನಾನು ಕಳೆದ ೨೦೦೬ರಿಂದ ಬಿಜೆಪಿ ಸೇರಿದ ನಂತರ ನಾಲ್ಕು ಭಾರಿ ನನಗೆ ಬಿಜೆಪಿ ಟಿಕೆಟ್ ನೀಡಿದೆ. ಮತ್ತು ಎರಡು ಭಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಬಿಜೆಪಿ ಮತ್ತು ಸಂಘ ಪರಿವಾರದ ಪ್ರತಿಯೊಬ್ಬ ಕಾರ್ಯಕರ್ತರೊಡನೆ ನಾನು ನಿಕಟ ಬಾಂಧವ್ಯ ಹೊಂದಿದ್ದೇನೆ. ಮತ್ತು ಭಾರತೀಯ ಜನತಾ ಪಕ್ಷದಲ್ಲಿ ನನಗೆ ಎಲ್ಲಾ ರೀತಿಯ ಸಹಕಾರ ಮತ್ತು ಸಂಬಂಧ ಇದೆ. ಮಾಜಿ ಸಂಸದ ಸಂಗಣ್ಣ ಕರಡಿ ಅವರು ಬಿಜೆಪಿ ತೊರೆಯದಂತೆ ನಾನು ಸಾಕಷ್ಟು ಭಾರಿ ಅವರಲ್ಲಿ ಮನವಿ ಮಾಡಿದ್ದೆ. ಅದರೂ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಅದು ಅವರ ವೈಯಕ್ತಿ ವಿಚಾರವಾಗಿದೆ. ಈ ಚುನಾವಣೆಯಲ್ಲಿ ನಾನು ನಮ್ಮ ಅಭ್ಯರ್ಥಿಯ ಗೆಲುವಿಗೆ ಹಗಲು ರಾತ್ರಿ ಕೆಲಸ ಮಾಡುತ್ತಿದ್ದೇನೆ. ಶನಿವಾರ ದಿನವೀಡಿ ವೆಂಕಟಗಿರಿ ಹೋಬಳಿ, ಇರಕಲ್‌ಗಡಾ ಹೋಬಳಿಗಳ ಹಲವು ಗ್ರಾಮಗಳ್ಳಿ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದೇ. ಹೀಗಾಗಿ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಕಡೆ ಮುಖ ಮಾಡುವ ವ್ಯಕ್ತಿಯಲ್ಲ. ನಾನು ಕಾಂಗ್ರೆಸ್ ಕಡೆ ಹೋಗುತ್ತಿದ್ದೇನೆ ಎಂದು ಕೆಲವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಇದನ್ನು ನನ್ನ ಪಕ್ಷದ ನಾಯಕರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಹಾಗೂ ಮತದಾರರು ಯಾವುದೇ ಕಾರಣಕ್ಕೂ ನಂಬಬಾರದು. ಬಿಜೆಪಿ ನನಗೆ ತಾಯಿ ಪಕ್ಷವಾಗಿದೆ. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯನ್ನಾಗಿ ಮಾಡುವುದು ನಮ್ಮ ಸಂಕಲ್ಪವಾಗಿದೆ. ಹೀಗಾಗಿ ಕೊಪ್ಪಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ|| ಬಸವರಾಜ ಕ್ಯಾವಟರ್ ಗೆಲ್ಲಿಸಲು ನಾನು ಹಗಲು ರಾತ್ರಿ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇನೆ. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ|| ಬಸವರಾಜ ಕ್ಯಾವಟರ್ ಅವರು ನಿಶ್ಚಿತವಾಗಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!