ಗಂಗಾವತಿ.
ಆಡಳಿತ ವಿಕೇಂದ್ರೀಕರಣದಿಂದ ಜನರ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ. ಮತ್ತು ಅಭಿವೃದ್ಧಿ ಹಿತ ದೃಷ್ಟಿಯಿಂದಲೂ ಪ್ರತ್ಯೇಕ ಜಿಲ್ಲೆ ಬೇಡಿಕೆ ಸಮಂಜಸವಾಗಿದೆ. ಹೀಗಾಗಿ ನೂತನವಾಗಿ ಗಂಗಾವತಿ ಕೇಂದ್ರವನ್ನಾಗಿಸಿಕೊಂಡು ಕಿಷ್ಕಿಂದಾ ಜಿಲ್ಲೆ ಮಾಡಬೇಕೆಂಬ ಬೇಡಿಕೆಗೆ ನಾನು ಕೂಡಾ ಸಂಪೂರ್ಣ ಬೆಂಬಲ ನೀಡುತ್ತೇನೆ. ಹೋರಾಟ ಸಮಿತಿಯ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇನೆ ಮತ್ತು ಚುನಾವಣೆ ನಂತರ ನಿಮ್ಮ ಹೋರಾಟ ಸಮಿತಿಯೊಂದಿಗೆ ಜಿಲ್ಲೆ ರಚನೆಯಾಗಲು ಕೈ ಜೋಡಿಸುತ್ತೇನೆ ಎಂದು ಕೊಪ್ಪಳ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಹೇಳಿದರು.
ಭಾನುವಾರ ನಗರದ ಗ್ರಾಮ ದೇವತೆ ದುರ್ಗಾದೇವಿ ದೇವಸ್ಥಾನ ದರ್ಶನ ಪಡೆದು ನಂತರ ದೇವಸ್ಥಾನದ ಸಮುದಾಯದಲ್ಲಿ ಭವನದಲ್ಲಿ ಜಿಲ್ಲಾ ಹೋರಾಟ ಸಮಿತಿ ಪದಾಧಿಕಾರಿಗಳು ಹಮ್ಮಿಕೊಂಡಿದ್ದ ಸಭೆಯಲ್ಲಿ ಮನವಿ ಸ್ವೀಕರಿಸಿ ಅವರು ಭರವಸೆ ನೀಡಿದರು. ಅಖಂಡ ರಾಯಚೂರು ಜಿಲ್ಲೆಯಿಂದ ಕೊಪ್ಪಳವನ್ನು ಬೇರ್ಪಡಿಸಿ ಪ್ರತ್ಯೇಕ ಜಿಲ್ಲೆ ರಚನೆಯಾಗಲು ನಮ್ಮ ಹಿರಿಯರು ಸಾಕಷ್ಟು ಶ್ರಮಿಸಿದ್ದರು. ಇದರಿಂದ ಇಂದು ಕೊಪ್ಪಳ ಜಿಲ್ಲೆ ಅಭಿವೃದ್ಧಿಯತ್ತ ಸಾಗಿದೆ. ಮತ್ತು ಆಡಳಿತ ಕೆಲಸಗಳು ಜನರಿಗೆ ಹತ್ತಿರವಾಗಿವೆ. ಈಗ ಗಂಗಾವತಿಯನ್ನು ಕೇಂದ್ರವನ್ನಾಗಿಸಿಕೊಂಡು ನೂತನ ಕಿಷ್ಕಿಂದಾ ಜಿಲ್ಲೆ ರಚನೆಯಾಗಬೇಕೆಂಬ ಬೇಡಿಕೆ ಕೂಡಾ ಮಹತ್ವದ್ದಾಗಿದೆ. ಸುಗಮ ಆಡಳಿತಕ್ಕಾಗಿ ಕೊಪ್ಪಳ ಜಿಲ್ಲೆ ವಿಭಜಿಸಿ ಗಂಗಾವತಿ ಕಿಷ್ಕಿಂದಾ ಜಿಲ್ಲೆ ಮಾಡುವುದು ಅತ್ಯಂತ ಸಮಂಜಸವಾಗಿದೆ. ಜನಸಂಖ್ಯೆ ಆಧಾರದಲ್ಲಿ ಜಿಲ್ಲೆ ಪ್ರತ್ಯೇಕವಾಗುವ ಅವಶ್ಯಕತೆ ಇದೆ. ನಾನು ಕೊಪ್ಪಳ ಕೇಂದ್ರ ಸ್ಥಾನದ ನಿವಾಸಿಯಾಗಿದ್ದರೂ ಗಂಗಾವತಿ ಜಿಲ್ಲೆ ಹೋರಾಟಕ್ಕೆ ನಾನು ಬೆಂಬಲಿಸುತ್ತೇನೆ. ಚುನಾವಣೆಯಲ್ಲಿ ನನಗೆ ನಿವೆಲ್ಲ ಆಶೀರ್ವದಿಸಿ ಎಂದು ಮನವಿ ಮಾಡಿದರು.
ಪ್ರಾರಂಭದಲ್ಲಿ ಹೋರಾಟ ಸಮಿತಿ ಪ್ರಮುಖ ನಾಗರಾಜ ಗುತ್ತೇದಾರ ವಕೀಲ ಮಾತನಾಡಿ,. ನೂತನ ಕಿಷ್ಕಿಂದಾ ಜಿಲ್ಲೆ ಅವಶ್ಯಕತೆ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು. ಮಾಜಿ ಎಂಎಲ್‌ಸಿ ಹೆಚ್.ಆರ್.ಶ್ರೀನಾಥ ಮಾತನಾಡಿ, ಗಂಗಾವತಿ ಜಿಲ್ಲೆಯಾಗಬೇಕೆಂಬ ಜನರ ಇಚ್ಛೆಗೆ ರಾಜಶೇಖರ ಹಿಟ್ನಾಳ ಬೆಂಬಲ ನೀಡಬೇಕು. ವಿಶೇಷವಾಗಿ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಅತ್ಯಾಪ್ತರಾಗಿದ್ದು, ಮುಖ್ಯಮಂತ್ರಿಗಳನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಬೇಕು ಎಂದರು.
ಮುಖಂಡ ಸಂತೋಷ ಕೆಲೋಜಿ ಮಾತನಾಡಿ, ಕೊಪ್ಪಳ ಜಿಲ್ಲೆಯನ್ನು ವಿಭಜಿಸುವ ಅವಶ್ಯಕತೆ ಇಲ್ಲದಿದ್ದರೂ ಕಂಪ್ಲಿ, ತಾವರಗೇರಿ, ಸಿಂಧನೂರು, ಕಾರಟಗಿ, ಕನಕಗಿರಿ ತಾಲೂಕಿನ ಜನರ ಕೆಲಸ ಕಾರ್ಯಗಳಿಗೆ ಮತ್ತು ಶೈಕ್ಷಣಿಕ ಪ್ರಗತಿಗೆ ಪ್ರತ್ಯೇಕೆ ಜಿಲ್ಲೆ ಅತ್ಯವಶ್ಯವಿದೆ. ಹೀಗಾಗಿ ನಾವು ಕಳೆದ ಒಂದು ವರ್ಷದಿಂದ ಹೋರಾಟ ನಡೆಸುತ್ತಿದ್ದು, ಈಗಾಗಲೇ ಮುಖ್ಯಮಂತ್ರಿಗಳಿಗೆ ಒಮ್ಮೆ ಮನವಿ ಸಲ್ಲಿಸಿದ್ದು, ರಾಜಶೇಖರ ಹಿಟ್ನಾಳ್ ಈಗ ನಮ್ಮೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಲಲಿತಾರಾಣಿ ಶ್ರೀರಂಗದೇವರಾಯಲು ಮಾತನಾಡಿ, ನೂತನ ಜಿಲ್ಲೆ ರಚನೆಗೆ ಪಕ್ಷಾತೀತವಾಗಿ ಹೋರಾಟ ನಡೆಸಲಾಗುತ್ತಿದೆ ಎಂದರು. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶ್ಯಾಮೀದ್ ಮನಿಯಾರ್ ಮಾತನಾಡಿ, ಜಿಲ್ಲೆ ರಚನೆಗೆ ರಾಜಶೇಖರ ಹಿಟ್ನಾಳ್ ಅವರು ಗಂಗಾವತಿ ಜನರ ಧ್ವನಿಯಾಗಬೇಕು ಎಂದರು. ನಾರಾಯಣಪ್ಪ ನಾಯಕ, ಸುರೇಶ ಸಿಂಗನಾಳ ಮಾತನಾಡಿ, ಜಿಲ್ಲೆ ರಚನೆಗಾಗಿ ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಹೋರಾಟ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ರಾಜಶೇಖರ ಹಿಟ್ನಾಳ್ ಅವರು ಈ ಹೋರಾಟಕ್ಕೆ ಕೈ ಜೋಡಿಸಬೇಕು ಮತ್ತು ಮುಂದಿನ ದಿನದಲ್ಲಿ ಬೇಡಿಕೆ ಈಡೇರಿಸಲು ಸ್ವಪ್ರಯತ್ನ ಮಾಡಬೇಕು ಎಂದರು. ಪತ್ರಕರ್ತ ಎಂ.ಜೆ.ಶ್ರೀನಾವಾಸ ನಿರ್ವಹಿಸಿದರು.
ಸಭೆಯಲ್ಲಿ ಉದ್ಯಮಿ ಮುಷ್ಟಿ ವಿರುಪಾಕ್ಷಪ್ಪ, ಕೃಷ್ಣಪ್ಪ ನಾಯಕ, ರಾಜೇಶ್ವರಿ ಸುರೇಶ ಮತ್ತಿತರು ಇದ್ದರು.