ವೆಂಕಟೇಶ ಕುಲಕರ್ಣಿ
ಕುಷ್ಟಗಿ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವ ಮೂಲಕ ಮುಖ್ಯಮಂತ್ತಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರ ಐದು ಗ್ಯಾರಂಟಿಗಳನ್ನು ಐದು ತಿಂಗಳಲ್ಲಿ ಜನರಿಗೆ ಪೂರ್ಣ ಪ್ರಮಾಣದಲ್ಲಿ ಒದಗಿಸುವ ಮೂಲಕ ಜನರ ವಿಶ್ವಾಸಗಳಿಸಿದೆ. ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಾಗಿರುವ ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಮತ್ತು ಯುವನಿಧಿ ಯೋಜನೆಯಲ್ಲಿ ನಿರೀಕ್ಷೆ ಮೀರಿ ಜನರಿಗೆ ತಲುಪುತ್ತಿವೆ. ಹೀಗಾಗಿ ಈ ಲೋಕಸಭೆ ಚುನಾವಣೆಯಲ್ಲೂ ಕೂಡಾ ಜನ ಎಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇದು ನನ್ನ ಗೆಲುವಿಗೆ ಶ್ರೀರಕ್ಷೆಯಾಗುತ್ತಿದೆ ಎಂಬ ಅಪಾರ ವಿಶ್ವಾಸವಿದೆ. ಕೊಪ್ಪಳ ಲೋಕಸಭೆ ಕ್ಷೇತ್ರದ ಪ್ರತಿಯೊಂದು ವಿಧಾನಸಭೆ ಕ್ಷೇತ್ರದಲ್ಲೂ ಈಗ ಜಾರಿಯಲ್ಲಿರುವ ಕೇಂದ್ರ ಮತ್ತು ರಾಜ್ಯದ ಯೋಜನೆಗಳು ಪೂರ್ಣಗೊಳಿಸುವುದರ ಜೊತೆಗೆ ಐದು ವರ್ಷದಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡುವುದು ನನ್ನ ಸಂಕಲ್ಪವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ತಿಳಿಸಿದರು.
ಮಂಗಳವಾರ ತಮ್ಮ ಹಿಟ್ನಾಳ್ ಗ್ರಾಮದ ನಿವಾಸದಲ್ಲಿ ಲೋಕಸಭೆ ಚುನಾವಣೆ ಕುರಿತು ಸಮರ್ಥವಾಣಿಯೊಂದಿಗೆ ಮಾತನಾಡಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ರಾಜ್ಯ ಕಾಂಗ್ರೆಸ್ ಸರಕಾರದ ಎಲ್ಲಾ ಸಚಿವರು ಅಧಿಕಾರಕ್ಕೆ ಬಂದು ಒಂದು ವರ್ಷದ ಅವಧಿಯಲ್ಲಿ ಜನಪರವಾದ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದಾರೆ. ನುಡಿದಂತೆ ನಡೆದ ಸರಕಾರ ಎಂಬ ಹೆಗ್ಗಳಿಗೆ ರಾಜ್ಯ ಸರಕಾರ ಪತ್ರವಾಗಿದೆ. ರಾಜ್ಯದ ಮಹಿಳೆಯರು, ಯುವಕರು ಸೇರಿದಂತೆ ಎಲ್ಲಾ ಸಮಾಜ ಮತ್ತು ಎಲ್ಲಾ ವರ್ಗದ ಜನರು ಕಾಂಗ್ರೆಸ್ ಪಕ್ಷದ ಬಗ್ಗೆ ಬೆಂಬಲ ನೀಡಲು ಮುಂದೆ ಬರುತ್ತಿದ್ದಾರೆ. ನಿರೀಕ್ಷೆ ಮೀರಿ ಜನರು ಬೆಂಬಲ ನೀಡುತ್ತಿರುವುದು ಗಮನಿಸಿರುವ ನನಗೆ ಈ ಭಾರಿ ನಿಶ್ಚಿತವಾಗಿ ಗೆಲುವು ಸಾಧಿಸುತ್ತೇನೆ ಎಂಬ ವಿಶ್ವಾಸ ಮೂಡಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಎರಡು ಜಿಲ್ಲೆಯ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ಶಾಸಕರು, ಮಾಜಿ ಸಂಸದರು, ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಸಕ್ತ ಚುನಾವಣೆಯಲ್ಲಿ ನನ್ನ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನ ಹಾಕುತ್ತಿದ್ದಾರೆ. ಇಂತಹ ಸುಡು ಬಿಸಿಲಿನಲ್ಲೂ ಎಲ್ಲರು ಪಕ್ಷದ ಅಭ್ಯರ್ಥಿ ಗೆಲ್ಲಸಿಕೊಂಡು ಬರಬೇಕೆಂದು ನಿರಂತರ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಪ್ರತಿಯೊಂದು ಸಭೆ, ಸಮಾರಂಭಗಳಲ್ಲಿ ಜನರು ನಿರೀಕ್ಷೆ ಮೀರಿ ಸೇರುತ್ತಿದ್ದಾರೆ ಎಂದರು.
ಮುಂದುವರೆದು ಮಾತನಾಡಿದ ರಾಜಶೇಖರ ಹಿಟ್ನಾಳ್ ಅವರು ತುಂಗಭದ್ರಾ ಜಲಾಶಯದಲ್ಲಿ ಹೂಳು ತೆಗೆಯುವುದು ಅಥವಾ ಪರ್ಯಾಯವಾಗಿ ರೂಪಿತವಾಗಿರುವ ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಕುರಿತು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಚಿಂತನೆ ನಡೆಸಿದ್ದಾರೆ. ಸಮಾನಾಂತರ ಜಲಾಶಯ ಅನುಷ್ಟಾನಕ್ಕೆ ಸರಕಾರ ಈಗಾಗಲೇ ಅನುದಾನ ಘೋಷಣೆ ಮಾಡಿದೆ. ಆಂದ್ರಾ ಮತ್ತು ತೆಲಂಗಾಣ ಸರಕಾರಗಳೊಂದಿಗೆ ಸ್ವತಃ ನೀರಾವರಿ ಸಚಿವರಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಚರ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಾರಟಗಿ ರೈಸ್ ಪಾರ್ಕ್ ಅಭಿವೃದ್ಧಿಪಡಿಸುವುದು ಮತ್ತು ಜಿಲ್ಲೆಯ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಚಿವ ಶಿವರಾಜ ತಂಗಡಗಿ ಕ್ರಮ ಕ್ರಮ ಕೈಗೊಳ್ಳುತ್ತಿದ್ದಾರೆ. ಬಿಜೆಪಿ ಸಂಸದರಾಗಿದ್ದ ಸಂಗಣ್ಣ ಕರಡಿ ಅವರು ಕೂಡಾ ಈಗ ನಮ್ಮ ಪಕ್ಷಕ್ಕೆ ಬಂದಿರುವುದು ನನ್ನ ಗೆಲುವಿಗೆ ಹೆಚ್ಚಿನ ಬಲ ಬಂದಂತಾಗಿದೆ. ಅವರು ಈ ಹಿಂದೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರ ಆಶೀರ್ವಾದದಿಂದ ನಾನು ಈ ಚುನಾವಣೆಯಲ್ಲಿ ಆಯ್ಕೆಯಾದರೆ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಿ ಪಕ್ಷದ ಎಲ್ಲಾ ಮುಖಂಡರೊಂದಿಗೆ ಚರ್ಚಿಸಿ ಮಾಡಬೇಕಾದ ಕೆಲಸಗಳಿಗೆ ಯೋಜನೆ ರೂಪಿಸುತ್ತೇನೆ. ಎಂಟು ವಿಧಾನಸಭೆ ಕ್ಷೇತ್ರದಲ್ಲಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತಗಳಿಸುವ ವಿಶ್ವಾಸವಿದೆ. ಪಕ್ಷದ ಮುಖಂಡರು ಪರಿಶ್ರಮ, ಕಾರ್ಯಕರ್ತರ ನಿರಂತರ ಪ್ರಯತ್ನ ಗಮನಿಸಿದರೆ ಕನಿಷ್ಟ ಈ ಭಾರಿ ನಾನು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುವು ನಿರೀಕ್ಷೆ ಇದೆ. ಈ ಹಿಂದೆ ನನ್ನ ತಂದೆ ಸ್ಪರ್ಧಿಸಿದ್ದು, ಕಳೆದ ೨೦೧೯ರಲ್ಲಿ ನಾನು ಸ್ಪರ್ಧಿಸಿ ಪರಾಭವಗೊಂಡು ಈಗ ಪಕ್ಷ ಮತ್ತೊಮ್ಮೆ ನನಗೆ ಅವಕಾಶ ನೀಡಿದೆ. ಈ ಭಾರಿ ನನಗೆ ಅವಕಾಶ ನೀಡಬೇಕೆಂದು ಜನರು ತಿರ್ಮಾನಿಸಿರುವ ಮಾತು ಎಲ್ಲಾ ಕಡೆಗಳಲ್ಲೂ ಕೇಳಿ ಬರುತ್ತಿದೆ. ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ನಾನು ಈ ಚುನಾವಣೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಹತ್ತು ವರ್ಷ ಕೇಂದ್ರದಲ್ಲಿ ಅಧಿಕಾರ ನಡೆಸಿರುವ ಬಿಜೆಪಿ ಬಗ್ಗೆ ಜನರಲ್ಲಿ ನಂಬಿಕೆ ಕಡಿಮೆಯಾಗುತ್ತಿದೆ. ಹೀಗಾಗಿ ನಿರೀಕ್ಷೆ ಮೀರಿ ನನಗೆ ಮತ ಬರಲಿವೆ ಎಂದು ಹಿಟ್ನಾಳ್ ವಿಶ್ವಾಸ ವ್ಯಕ್ತಪಡಿಸಿದರು.
ಬಾಕ್ಸ್:
ಸಂಗಣ್ಣ ಕರಡಿ ಅವರಿಂದ ಪಕ್ಷಕ್ಕೆ ಬಲ
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಸೇರಿದಂತೆ ಜಿಲ್ಲೆಯ ಮತ್ತು ಲೋಕಸಭೆ ಕ್ಷೇತ್ರದ ಎಲ್ಲಾ ಮುಖಂಡರ ಪರಿಶ್ರಮದಿಂದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿಯಾಗಿದೆ. ಜೊತೆಗೆ ಕ್ಷೇತ್ರದಲ್ಲಿ ಎರಡು ಅವಧಿಗೆ ಸಂಸದರಾಗಿರುವ ಸಂಗಣ್ಣ ಕರಡಿ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಬಲ ಬಂದಿದೆ. ನನ್ನ ಗೆಲುವಿಗೆ ಅವರು ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ಕೊಪ್ಪಳ ಲೋಕಸಭೆಯಾದ್ಯಂತ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಈ ಚುನಾವಣೆಯಲ್ಲಿ ಈ ಭಾರಿ ಗೆಲ್ಲುವ ಕುರಿತು ಯೋಜನೆ ರೂಪಿಸಿದ್ದಾರೆ. ಮತ್ತು ಸಾಮೂಹಿಕವಾಗಿ ಎಲ್ಲರು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ನಿಶ್ಚಿತವಾಗಿ ನಾನು ಈ ಭಾರಿ ಜಯ ಗಳಿಸುತ್ತೇನೆ. ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವ ನಿರೀಕ್ಷೆ ಇದೆ.
ರಾಜಶೇಖರ ಹಿಟ್ನಾಳ್, ಕೊಪ್ಪಳ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!