ಗಂಗಾವತಿ.
ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಬೇಕೆಂಬ ಉದ್ದೇಶದಿಂದ ಶೇ.೬೦ಕ್ಕೂ ಹೆಚ್ಚು ಮತದಾರರು ಸ್ವಯಂ ಪ್ರೇರಿತರಾಗಿ ಬಿಜೆಪಿಗೆ ಮತ ಹಾಕಬೇಕೆಂದು ಮಾತನಾಡಿಕೊಳ್ಳುತ್ತಿದ್ದಾರೆ. ಇಂತಹ ಮತದಾರರನ್ನು ಮತ್ತಷ್ಟು ಗಟ್ಟಿಗೊಳಿಸಿ ಇನ್ನು ಹೆಚ್ಚಿನ ಮತಗಳನ್ನು ತಮ್ಮತ್ತ ಸೆಳೆದುಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ. ಆದರೆ ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ ಶಾಸಕ ಜನಾರ್ಧನರೆಡ್ಡಿ ಬೆಂಬಲಿಗ ಬಿಜೆಪಿ ಮತ್ತು ಮೂಲ ಬಿಜೆಪಿ ಕಾರ್ಯಕರ್ತರ ನಡುವೆ ಸಮನ್ವಯ ಕೊರತೆ ಹೆಚ್ಚುತ್ತಿದೆ. ಇದರಿಂದಾಗಿ ಚುನಾವಣೆ ಕೆಲಸದಲ್ಲಿ ಬಿಜೆಪಿ ಕಾರ್ಯಕರ್ತರ ನಡುವೆ ಮುಸುಕಿನ ಗುದ್ದಾಟ ಬಹಿರಂಗವಾಗುವ ಲಕ್ಷಣ ಕಾಣುತ್ತಿದೆ.
ಸೋಮವಾರ ಕನಕಗಿರಿ ರಸ್ತೆಯಲ್ಲಿನ ಬಿಜೆಪಿ ಚುನಾವಣೆ ಕಚೇರಿಯಲ್ಲಿ ಶಾಸಕ ಜನಾರ್ಧನರೆಡ್ಡಿ ಬೆಂಬಲಿಗ ಬಿಜೆಪಿ ಮತ್ತು ಮೂಲ ಬಿಜೆಪಿ ಕಾರ್ಯಕರ್ತರ ನಡುವೆ ಚುನಾವಣೆ ನಿರ್ವಹಣೆ ಕುರಿತು ನಿರ್ಲಕ್ಷವಹಿಸಲಾಗುತ್ತಿದೆ ಎಂದು ವಾಗ್ವಾದ ಉಂಟಾಗಿದೆ. ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ಧನರೆಡ್ಡಿ ಕೆಆರ್‌ಪಿ ಪಕ್ಷವನ್ನು ವಿಸರ್ಜಿಸಿ ತಮ್ಮೆಲ್ಲ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾದರು. ರೆಡ್ಡಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಂತೆ ತಮ್ಮ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರಿಗೆ ಬಿಜೆಪಿಯಲ್ಲಿ ಸಕ್ರೀಯರಾಗುವಂತೆ ಕರೆ ನೀಡಿದರು. ಆದರೆ ಜನಾರ್ಧನರೆಡ್ಡಿ ಬೆಂಬಲಿಗ ಕೆಆರ್‌ಪಿಪಿಯಿಂದ ವಿಲೀನವಾಗಿರುವ ಕೆಲವು ಕಾರ್ಯಕರ್ತರು ಬಿಜೆಪಿಯಲ್ಲಿ ಹೊಂದಾಣಿಕೆಯಾಗಲು ಸಮಸ್ಯೆ ಎದುರಿಸುತ್ತಿದ್ದಾರೆ. ರೆಡ್ಡಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಂತೆ ಲೋಕಸಭೆ ಚುನಾವಣೆ ಪ್ರಕ್ರೀಯೆ ಪ್ರಾರಂಭವಾಗಿದ್ದರಿಂದ ಜನಾರ್ಧನರೆಡ್ಡಿ ರಾಜ್ಯದಾದ್ಯಂತ ಪ್ರವಾಸಕ್ಕೆ ತೊಡಗಿದರು. ಆದರೆ ಸ್ಥಳೀಯವಾಗಿ ಕೆಆರ್‌ಪಿಪಿಯ ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದ ಕಾರ್ಯಕರ್ತರು ಬಿಜೆಪಿ ಜೊತೆ ಸೇರಿಕೊಂಡು ಚುನಾವಣೆಯಲ್ಲಿ ಸಕ್ರೀಯವಾಗುವಲ್ಲಿ ವಿಳಂಬವಾಯಿತು. ಆದರೂ ಬಿಜೆಪಿ ಮುಖಂಡರು ಎರಡು ಗುಂಪಿನ ಕಾರ್ಯಕರ್ತರ ನಡುವೆ ಸಮನ್ವಯ ತರುವ ಕೆಲಸ ಮಾಡಿದರು.
ಹಾಲಿ, ಮಾಜಿ ಶಾಸಕರು ಮತ್ತು ಹಿರಿಯ ಬಿಜೆಪಿ ಮುಖಂಡರು ಸೇರಿ ಎರಡು ಗುಂಪಿನ ಕಾರ್ಯಕರ್ತರ ನಡುವೆ ಸಮನ್ವಯ ಮಾಡಿದ್ದರೂ ಚುನಾವಣೆ ಪ್ರಕ್ರೀಯೆ ಪ್ರಾರಂಭವಾಗುತ್ತಿದ್ದಂತೆ ವಾರ್ಡ್‌ಗಳಲ್ಲಿ ಪ್ರಚಾರ ಮಾಡಲು ಎರಡು ಗುಂಪಿನ ಕಾರ್ಯಕರ್ತರಲ್ಲಿ ಪ್ರತಿಷ್ಟೆ ಎದುರಾಗುತ್ತಿದೆ. ಮತ್ತು ವಾರ್ಡ್‌ಗಳಲ್ಲಿ ಚುನಾವಣೆಯ ಜವಬ್ದಾರಿ ಹಂಚಿಕೆ ವಿಷಯದಲ್ಲಿ ಎರಡು ಗುಂಪಿನ ಕಾರ್ಯಕರ್ತರ ನಡುವೆ ಮುಸುಕಿನ ಗುದ್ದಾಟ ಮುಂದುವರೆದಿದೆ. ಇದು ಮುಖಂಡರಿಗೆ ತಲೆನೋವ್ವಾಗುತ್ತಿದೆ. ವಾರ್ಡ್‌ಗಳಲ್ಲಿ ಚುನಾವಣೆ ಕೆಲಸ ಮಾಡಿ ಪಕ್ಷದ ಕಚೇರಿಗೆ ಬರುವ ಎರಡು ಗುಂಪಿನ ಕಾರ್ಯಕರ್ತರ ನಡುವೆ ಸಂಘರ್ಷ ಉಂಟಾಗುತ್ತಿದೆ. ಸೋಮವಾರ ಬೆಳೆಗ್ಗೆ ಎರಡು ಗುಂಪಿನ ಕಾರ್ಯಕರ್ತರ ನಡುವೆ ಕೆಲವು ವಾಗ್ವಾದ ಉಂಟಾಗಿರುವ ಘಟನೆ ನಡೆದಿರುವುದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಬದ್ಧ ವೈರಿಗಳಾಗಿ ಚುನಾವಣೆ ಎದುರಿಸಿದ್ದ ಹಾಲಿ ಮಾಜಿ ಶಾಸಕರು ಮತ್ತು ಮುಖಂಡರು ಸಾಮುಹಿಕವಾಗಿ ಒಗ್ಗಟ್ಟಿನಿಂದ ಚುನಾವಣೆ ಪ್ರಚಾರದಲ್ಲಿ ತೊಡಗುತ್ತಿದ್ದಾರೆ. ಆದರೆ ಕಾರ್ಯಕರ್ತರಲ್ಲಿ ಮಾತ್ರ ಸಮನ್ವಯ ಕೊರತೆ ಹೆಚ್ಚಾಗುತ್ತಿದೆ. ತಕ್ಷಣ ಬಿಜೆಪಿ ಚುನಾವಣಾ ನಿರ್ವಹಣ ತಂಡ ಮತ್ತು ಬಿಜೆಪಿ ಅಭ್ಯರ್ಥಿ ಗಂಗಾವತಿ ಕ್ಷೇತ್ರದಲ್ಲಿ ನಡೆಯುವ ಮುಸುಕಿನ ಗುದ್ದಾಟವನ್ನು ಸರಿಪಡಿಸುವ ಕೆಲಸ ಮಾಡಲು ಮುಂದಾಗಬೇಕು. ಇಲ್ಲದಿದ್ದರೆ ಚುನಾವಣೆಯಲ್ಲಿ ಪಕ್ಷಕ್ಕೆ ಕೆಟ್ಟ ಪರಿಣಾಮ ಬೀರುವ ಸಂದರ್ಭ ಉಂಟಾಗಬಹುದು ಎಂದು ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!