ಗಂಗಾವತಿ.
ತಾಲೂಕಿನ ಗಂಗಾವತಿಯಿಂದ ಕಾರಟಗಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಬರುವ ಮರಳಿ ಟೋಲ್ ಗೇಟ್ ಹತ್ತಿರ ಪೊಲೀಸ್ ಇಲಾಖೆಯಿಂದ ಪ್ರತಿ ನಿತ್ಯ ೨೪ ಗಂಟೆಯೂ ವಾಹನಗಳನ್ನು ನಿಲ್ಲಿಸಿ ಅನವಶ್ಯಕವಾಗಿ ತಪಾಷಣೆ ಮಾಡುತ್ತಾ ಪ್ರಯಾಣಿಕರೆ ತೊಂದರೆ ಕೊಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಅವರು ಸಮರ್ಥವಾಣಿಯೊಂದಿಗೆ ಮಾತನಾಡಿ, ಪೊಲೀಸ್ ಇಲಾಖೆಯ ಈ ರೀತಿಯ ಕ್ರಮ ಸರಿಯಲ್ಲ. ಮರಳಿ ಹತ್ತಿರ ಮುಖ್ಯ ರಸ್ತೆಯಲ್ಲಿ ಟೋಲ್ ಪ್ಲಾಜಾ ಇದೆ. ಈ ಟೋಲ್‌ನಲ್ಲಿ ಎಲ್ಲಾ ವಾಹನಗಳು ತಪಾಷಣೆಯಾಗುತ್ತವೆ. ಆದರೂ ಈ ಟೊಲ್ ಹತ್ತಿರ ಪೊಲೀಸ್ ವಾಹನ ನಿಲ್ಲಿಸಿಕೊಂಡು ಪ್ರತಿ ನಿತ್ಯ ದಿನದ ೨೪ ಗಂಟೆಯಲ್ಲೂ ವಾಹನಗಳನ್ನು ತಪಾಷಣೆ ಮಾಡುತ್ತಿರುತ್ತಾರೆ. ದ್ವೀಚಕ್ರ, ಕಾರ್ ಸೇರಿದಂತೆ ಪ್ರತಿಯೊಂದು ವಾಹನಗಳನ್ನು ತಪಾಷಣೆ ಮಾಡಲಾಗುತ್ತಿದೆ. ಇದರಿಂದ ಈ ರಸ್ತೆಯಲ್ಲಿ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಸುಡು ಬಿಸಿಲಿನಲ್ಲಿ ಹತ್ತು ಇಪ್ಪತ್ತು ನಿಮಿಷ ವಾಹನ ನಿಲ್ಲಿಸುವುದರಿಂದ ವಾಹನದಲ್ಲಿರುವ ಮಹಿಳಾ, ವೃದ್ಧರು, ಮಕ್ಕಳು ಮತ್ತಿತರ ಆಸ್ಪತ್ರೆಗೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ಸ್ಥಳದಲ್ಲಿ ತಪಾಷಣೆ ಮಾಡುವ ಅಧಿಕಾರ ಯಾರು ಕೊಟ್ಟಿದ್ದಾರೆ. ಪೊಲೀಸ್ ಇಲಾಖೆಯಿಂದ ತಪಾಷಣೆ ಮಾಡುವ ಆದೇಶವಿದ್ದರೆ ವಾಹನಗಳನ್ನು ನಿಲ್ಲಿಸಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಆದರೆ ಇಲ್ಲಿ ಯಾವುದೇ ರೀತಿಯ ವ್ಯವಸ್ಥೆ ಇಲ್ಲದೇ ತಪಾಷಣೆ ಮಾಡಿ ಕಳುಹಿಸಿರುವ ಕ್ರಮ ಸರಿಯಲ್ಲ. ಇದರಿಂದ ಪ್ರಯಾಣಿಕರು ಬೇಸತ್ತಿದ್ದು, ಪ್ರಯಾಣಿಕರಿಗೆ ತೊಂದರೆ ಕೊಡುತ್ತಿರುವ ಬಗ್ಗ ಗೃಹ ಸಚಿವರಿಗೆ ದೂರು ನೀಡಲಾಗುವುದು. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ತಕ್ಷಣ ಪರಿಶೀಲಿಸಿ ತಪಾಷಣೆ ನಡೆಸುತ್ತಿರುವ ಕುರಿತು ಸಾರ್ವಜನಿಕರಿಗೆ ಮಾಹಿತಿ ಒದಗಿಸಬೇಕು ಎಂದು ರೆಡ್ಡಿ ಶ್ರೀನಿವಾಸ ಅಗ್ರಹಿಸಿದ್ದಾರೆ.