ಗಂಗಾವತಿ.
ಬಕರೀದ್ ಹಬ್ಬದ ಅಂಗವಾಗಿ ನಗರ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಹಾಲಿ ಶಾಸಕ ಜನಾರ್ಧನರೆಡ್ಡಿ ಮತ್ತು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಬೆಂಬಲಿಗ ಮುಸ್ಲಿಂ ಮುಖಂಡರ ನಡುವೆ ಚಕಮಕಿ ನಡೆದಿದ್ದು, ಡಿವೈಎಸ್‌ಪಿ ಸಿದ್ಧಪ್ಪಗೌಡ ಪಾಟೀಲ್ ಸಮ್ಮುಖದಲ್ಲಿ ಶಾಂತಿಸಭೆ ಅಶಾಂತಿ ಸಭೆಯಾಗಿ ಮಾರ್ಪಟ್ಟಿದೆ.
ಜೂ.೧೭ ರಂದು ಮುಸ್ಲಿಂರ ಬಕರೀದ್ ಹಬ್ಬ ನಡೆಯಲಿದೆ. ಈ ನಿಮಿತ್ಯ ನಗರದಲ್ಲಿ ಹಿಂದು ಮುಸ್ಲಿಂರ ನಡುವ ಸೌಹಾರ್ದತೆ ವಾತಾವರಣ ನಿರ್ಮಿಸಿ ಹಬ್ಬವನ್ನು ಅತ್ಯಂತ ಶಾಂತಿಯುತವಾಗಿ ಆಚರಿಸಲು ಪೊಲೀಸ್ ಅಧಿಕಾರಿಗಳು ಶುಕ್ರವಾರ ಸಂಜೆ ನಗರದ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ಆಯೋಜಿಸಿದ್ದಾರೆ. ಶಾಂತಿ ಸಭೆಯಲ್ಲಿ ಮುಸ್ಲಿಂ ಮತ್ತು ಹಿಂದು ಸಮುದಾಯದ ಹಾಗೂ ವಿವಿಧ ಜಾತಿ, ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು ಭಾಗವಹಿಸುತ್ತಾರೆ. ಅದೇ ರೀತಿ ಇಂದು ನಡೆದ ಸಭೆಯಲ್ಲಿ ಮುಸ್ಲಿಂ ಮತ್ತು ಹಿಂದು ಸಮಾಜದ ಮುಖಂಡರ ಜೊತೆಗೆ ಹಾಲಿ, ಮಾಜಿ ಶಾಸಕರ ಬೆಂಬಲಿಗರು ಭಾಗವಹಿಸಿ ಶಾಂತಿಯುತ ಹಬ್ಬ ಆಚರಣೆಗೆ ಸಲಹೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಜನಾರ್ಧನರೆಡ್ಡಿ ಆಪ್ತ ಅಲಿಖಾನ್ ಮಾತನಾಡಿ, ನಗರದ ಈದಗಾ ಮೈದಾನದಲ್ಲಿ ಮುಸ್ಲಿಂರೆಲ್ಲರೂ ಸೇರಿ ರಾಜಕೀಯ ರಹಿತವಾಗಿ ಸಾಮೂಹಿಕ ಪ್ರಾರ್ಥನೆ ನಡೆಸುತ್ತಾರೆ. ಆದರೆ ಸಾಮೂಹಿಕ ಪ್ರಾರ್ಥನೆಯಲ್ಲಿ ಮಾಜಿ ಶಾಸಕರಿಗೆ ಮಾತನಾಡುವ ಅವಕಾಶ ನೀಡುವುದರಿಂದ ಅವರು ಜನರಲ್ಲಿ ಗೊಂದಲ ಸೃಷ್ಟಿಸುವಂತ ಹೇಳಿಕೆ ನೀಡುತ್ತಾರೆ. ಹೀಗಾಗಿ ಸಾಮೂಹಿಕ ಪ್ರಾರ್ಥನೆಯಲ್ಲಿ ಮಾತನಾಡಲು ರಾಜಕೀಯ ಮುಖಂಡರಿಗೆ ಅವಕಾಶ ನೀಡಬಾರದು ಎಂದು ಸಲಹೆ ನೀಡಿದ್ದಾರೆ. ಅಲಿಖಾನ್ ಸಲಹೆ ನೀಡುತ್ತಿದ್ದಂತೆ ಕೆರಳಿ ಕೆಂಡವಾದ ಇಕ್ಬಾಲ್ ಅನ್ಸಾರಿ ಬೆಂಬಲಿಗರಾದ ಎಸ್.ಬಿ.ಖಾದ್ರಿ, ಜೂಬೇರ್ ಮತ್ತಿತರು ಅಲಿಖಾನ್ ಮಾತಿಗೆ ಆಕ್ಷೇಪ ಎತ್ತುತ್ತಿದ್ದಂತೆ ಮಾತಿನ ಚಕಮಕಿ ಜೋರಾಗಿ ಎರಡು ಗುಂಪಿನ ಮುಖಂಡರು, ಕಾರ್ಯಕರ್ತರು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ತಕ್ಷಣ ಮಧ್ಯಸ್ಥಿಕೆವಹಿಸಿದ ಡಿವೈಎಸ್‌ಪಿ ಮತ್ತು ನಗರ ಮತ್ತು ಗ್ರಾಮೀಣ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಎರಡು ಗುಂಪಿನ ಮಾತಿನ ಚಕಮಕಿಗೆ ಬ್ರೇಕ್ ಹಾಕಿ ವಾತಾವರಣ ತಿಳಿಗೊಳಿಸಿ ಸಭೆಯನ್ನು ಮೊಟಕುಗೊಳಿಸಿದ್ದಾರೆ.
ಸಭೆಯಲ್ಲಿ ಉಪ ತಹಶೀಲ್ದಾರ, ತಾಪಂ ಇಓ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಬಾಕ್ಸ್:
ವಾತಾವರಣೆ ಕೆಡಿಸುವವರ ವಿರುದ್ಧ ಕಠಿಣ ಕ್ರಮ
ನಗರದಲ್ಲಿ ಹಿಂದು, ಮುಸ್ಲಿಂರ ಹಬ್ಬ ಮತ್ತಿತರ ಕಾರ್ಯಕ್ರಮಗಳು ಶಾಂತಿಯುತವಾಗಿ ಅಚರಿಸುವ ಉದ್ದೇಶದಿಂದ ಶಾಂತಿ ಸಭೆ ನಡೆಸಲಾಗುತ್ತದೆ. ಆದರೆ ಶಾಂತಿ ಸಭೆಯಲ್ಲೇ ವೈಯಕ್ತಿಕ ವಿಷಯಗಳನ್ನು ಮಾತನಾಡಿ ರಾಜಕೀಯ ಮಾಡುವುದು ಸರಿಯಲ್ಲ. ಹಬ್ಬದ ನೆಪದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸಿದರೆ ನಾವು ಸುಮ್ಮನೆ ಕೂಡದೇ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಶಾಂತಿ ಸಭೆಯಲ್ಲಿ ಅಶಾಂತಿ ವಾತಾವರಣ ಸೃಷ್ಟಿಸದರೆ ಹೇಗೆ ಎಂದು ಡಿವೈಎಸ್‌ಪಿ ಸಿದ್ಧಲಿಂಗಪ್ಪಗೌಡ ಪಾಟೀಲ್ ಎಚ್ಚರಿಸಿದರು.