ಗಂಗಾವತಿ.
ನಗರ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಬಕ್ರೀದ್ ಹಬ್ಬದ ಶಾಂತಿ ಸಭೆಯ ಸಂದರ್ಭದಲ್ಲಿ ಹೆಚ್ಚುವರಿ ಎಸ್‌ಪಿ, ಡಿವೈಎಸ್‌ಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಗಣ್ಯರ ಸಮ್ಮುಖದಲ್ಲೇ ವೇದಿಕೆಗೆ ನುಗ್ಗಿ ನನ್ನ ಮೇಲೆ ಹಲ್ಲೆ ನಡೆಸಲು ಬಂದಿರುವ ಮತ್ತು ಶಾಂತಿ ಸಭೆಯಲ್ಲಿ ಅಶಾಂತಿ ಸೃಷ್ಟಿಸಲು ಮುಂದಾಗಿರುವ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಬೆಂಬಲಿಗ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಜನಾರ್ಧನರೆಡ್ಡಿ ಆಪ್ತ ಕೆ.ಮೆಹಬೂಬ್ ಅಲಿಖಾನ್ ದೂರು ನೀಡಿದ್ದಾರೆ.
ಶುಕ್ರವಾರ ನಗರ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಶಾಂತಿ ಸಭೆಥಿ ನಂತರ ರಾತ್ರಿ ಅಲೀಖಾನ್ ದೂರು ನೀಡಿದ್ದಾರೆ. ಜೂ.೧೭ ರಂದು ನಡೆಯಲಿರುವ ಮುಸ್ಲಿಂ ಸಮುದಾಯದ ಬಕ್ರೀದ್ ಹಬ್ಬದ ಅಂಗವಾಗಿ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಪೊಲೀಸರ ಅನುಮತಿಯಂತೆ ಹಬ್ಬ ಆಚರಣೆ ಕುರಿತು ನಾನು ಮಾತನಾಡಿ, ಈದಾಗ ಮೈದಾನದಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆಯಲ್ಲಿ ರಾಜಕೀಯ ವ್ಯಕ್ತಿಗಳಿಗೆ ಮಾತನಾಡಲು ಅವಕಾಶ ಕೊಡುವುದು ಸರಿಯಲ್ಲ ಎಂದು ವಕ್ಫ್ ಅಧಿಕಾರಿಗಳಿಗೆ ಸಲಹೆ ನೀಡುತ್ತಿರುವ ಸಂದರ್ಭದಲ್ಲಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಬೆಂಬಲಿಗರಾಗಿರುವ ಜುಬೇರ್, ಎಸ್.ಬಿ.ಖಾದ್ರಿ, ರಫೀಕ್ ಸಂಪಂಗಿ ಇಸ್ಲಾಂಪುರ್, ಸೈಯದ್ ಬನ್ನಿಗಿಡದ ಕ್ಯಾಂಪ್, ಇಲಿಯಾಸ್ ಖಾದ್ರಿ, ಸದ್ದಾಂ ಲಕ್ಷ್ಮಿಕ್ಯಾಂಪ್, ಹನೀಫ್ ಬನ್ನಿಗಿಡದ ಕ್ಯಾಂಪ್, ಕೊಪ್ಪಳ ಹುಸೇನ್ ಬನ್ನಿಗಿಡದ ಕ್ಯಾಂಪ್, ಬಾಬರ್ ಪಂಪಾನಗರ, ಸಾಧಿಕ್ ಪೆಂಟರ್ ಭಗತ್ ಸಿಂಗ್ ನಗರ, ಕುಸ್ಕ್ ಹುಸೇನಿ ಭಗತ್ ಸಿಂಗ್ ನಗರ, ಮುಸ್ತಪ್ ಸಂಗಣ್ಣ ಕ್ಯಾಂಪ್ ಇವರುಗಳೆಲ್ಲರೂ ಹೆಚ್ಚುವರಿ ಎಸ್‌ಪಿ, ಡಿವೈಎಸ್‌ಪಿ, ಪೊಲೀಸ್ ಅಧಿಕಾರಿಗಳು, ಗ್ರೇಡ್-೨ ತಹಶೀಲ್ದಾರ, ವಕ್ಫ್ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲೇ ವೇದಿಕೆಗೆ ನುಗ್ಗಿ ನನ್ನ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರಲ್ಲದೇ ಹಲ್ಲೆ ಮಾಡಲು ಯತ್ನಿಸಿ ಅವ್ಯಾಚ್ಚ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ. ಹೀಗಾಗಿ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಲೀಖಾನ್ ದೂರು ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲೇ ನನಗೆ ನನಗೆ ಧಮ್ಕಿ ಹಾಕಿರುತ್ತಾರೆ. ನನ್ನ ಮೇಲೆ ಹಲ್ಲೆ ಮಾಡಲು ಬಂದಿರುವ ಕೆಲವರು ಪೊಲಿಸ್ ಠಾಣೆಯಲ್ಲಿ ರೌಡಿ ಶೀಟರ್ ಸೇರಿದಂತೆ ಹಲವು ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಠಾಣೆಯಲ್ಲಿ ದಾಖಲೆಗಳಿವೆ. ಇಂತಹ ವ್ಯಕ್ತಿಗಳು ಶಾಂತಿಸಭೆಗೆ ಆಗಮಿಸಿ ಅಧಿಕಾರಿಗಳು ಮತ್ತು ನಗರದ ವಿವಿಧ ಸಮಾಜದ ಮುಖಂಡರ ಸಮ್ಮುಖದಲ್ಲೇ ಅಶಾಂತಿ ಸೃಷ್ಟಿಸಿ, ಹಲ್ಲೆ ಮಾಡಲು ಇವರಿಗೆ ಅವಕಾಶ ಕೊಟ್ಟವರು ಯಾರು. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಹಿಂದು, ಮುಸ್ಲಿಂ ಸಮುದಾಯದಲ್ಲಿ ಶಾಂತಿ, ಸೌಹಾರ್ದತೆ ಸೃಷ್ಟಿಸಿ ಸಂಭ್ರಮದಿಂದ ಹಬ್ಬ ಆಚರಿಸಬೇಕೆಂದು ನಗರದ ನಾಗರೀಕರಿಗೆ ಸಂದೇಶ ರವಾನಿಸಬೇಕಾಗಿರುವ ಶಾಂತಿ ಸಭೆಯಲ್ಲಿ ದೌರ್ಜನ್ಯ, ಹಲ್ಲೆ ನಡೆಸಲು ಮುಂದಾಗುತ್ತಿರುವುದು ಖಂಡನೀಯವಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಶಾಂತಿ ಸಭೆಯಲ್ಲಿ ಅಶಾಂತಿ ಸೃಷ್ಟಿಸಿ ಅಧಿಕಾರಿಗಳ ಸಮ್ಮುಖದಲ್ಲೇ ನನ್ನ ಮೇಲೆ ಹಲ್ಲೆ ನಡೆಸಲು ಬಂದಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಲೀಖಾನ್ ದೂರು ನೀಡಿದ್ದಾರೆ.
ಬಾಕ್ಸ್:
ಐಜಿ ಲೋಕೇಶಕುಮಾರ ಭೇಟಿ: ಚರ್ಚೆ
ಶುಕ್ರವಾರ ಸಂಜೆ ನಗರ ಪೊಲೀಸ್ ಠಾಣೆಯಲ್ಲಿ ನಡೆದ ಬಕ್ರೀದ್ ಹಬ್ಬದ ಶಾಂತಿ ಸಭೆಯಲ್ಲಿ ಶಾಸಕ ಜನಾರ್ಧನರೆಡ್ಡಿ ಮತ್ತು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಬೆಂಬಲಿಗ ಮುಸ್ಲಿಂ ಮುಖಂಡರ ನಡುವೆ ನಡೆದ ಮಾತಿನ ಚಕಮಕಿ ಗಂಭೀರ ಪರಿಣಾಮ ಬೀರಿದೆ. ಪೊಲೀಸ್ ಠಾಣೆಯಲ್ಲಿ ಹೆಚ್ಚುವರಿ ಎಸ್‌ಪಿ, ಡಿವೈಎಸ್‌ಪಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲೇ ಶಾಂತಿ ಸಭೆಗೆ ಆಗಮಿಸಿದವರ ನಡುವೆ ಸಂಘರ್ಷ ಸೃಷ್ಟಿಯಾಗಿರುವುದು ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆಯಾಗಿದೆ ಎಂದು ಚರ್ಚೆಯಾಗುತ್ತಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಳ್ಳಾರಿ ವಲಯದ ಐಜಿ ಲೋಕೇಶಕುಮಾರ ಅವರು ಶನಿವಾರ ಗಂಗಾವತಿಗೆ ಭೇಟಿ ನೀಡಿ ಡಿವೈಎಸ್‌ಪಿ ಮತ್ತು ಪಿಐ ಅವರೊಂದಿಗೆ ಚರ್ಚಿಸಿದ್ದಾರಲ್ಲದೇ ಬಕ್ರೀದ್ ಹಬ್ಬದಂದು ಶಾಂತಿ ಸುವ್ಯವಸ್ಥೆಗೆ ಸೂಕ್ತ ಬಂದೋಬಸ್ತ್ ಏರ್ಪಡಿಸಬೇಕು ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ತರುವ ವ್ಯಕ್ತಿಗಳ ಮೇಲೆ ನಿಗಾವಹಿಸುವಂತೆ ಸೂಚನೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.