ಗಂಗಾವತಿ.
ರಾಜ್ಯ ಸರಕಾರ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಬಂದಿರುವ ರೂ.5000 ಕೋಟಿ ಅನುದಾನದಲ್ಲಿ ರೂ.2000 ಕೋಟಿ ಹಣವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಲು ಮುಖ್ಯಮಂತ್ರಿ ವಿವೇಚನೆಗೆ ನೀಡಲಾಗಿತ್ತು. ಕಲ್ಯಾಣ ಕರ್ನಾಟಕದ ಭಾಗದ ಅಭಿವೃದ್ಧಿಗೆ ಶಾಸಕರಿಗೆ ನೀಡಬೇಕಿದ್ದ ಅನುದಾನದಲ್ಲೂ ಪಂಗನಾಮ ಹಾಕುವ ಕೆಲಸ ನಡೆಯುತ್ತಿತ್ತು. ಈ ಕುರಿತು ನಾವು ರಾಜ್ಯಪಾಲರಿಗೆ ದೂರು ನೀಡುತ್ತಿದ್ದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಎಚ್ಚೆತ್ತುಕೊಂಡು ನಮಗೆ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದು ಶಾಸಕ ಗಾಲಿ ಜನಾರ್ಧನರೆಡ್ಡಿ ಹೇಳಿದರು.
ಭಾನುವಾರ ನಗರದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗದ ಪ್ರತಿಯೊಂದು ವಿಧಾನಸಭೆ ಕ್ಷೇತ್ರಗಳ ಅಭಿವೃದ್ಧಿಗೆ ೩೭೧ಜೆ ಕಲಂ ಜಾರಿ ಮಾಡಲಾಗಿದೆ. ಈ ಭಾಗದ ಅಭಿವೃದ್ಧಿಗಾಗಿ ಸರಕಾರ ರೂ.5000 ಕೋಟಿ ಅನುದಾನ ಘೋಷಣೆ ಮಾಡಿದೆ. ಆದರೆ ಈ ಅನುದಾನದಲ್ಲಿ ರೂ.2000 ಕೋಟಿ ಹಣವನ್ನು ತಮಗೆ ಇಷ್ಟ ಬಂದಂತೆ ಬಳಕೆ ಮಾಡಲು ಸರಕಾರದ ಕೆಲವು ಸಚಿವರು ಮುಂದಾಗಿದ್ದರು. ಇದು ನಮ್ಮ ಗಮನಕ್ಕೆ ಬರುತ್ತಿದ್ದಂತೆ ಈ ಭಾಗದ ವಿರೋಧ ಪಕ್ಷದ ಎಲ್ಲಾ ಶಾಸಕರು ರಾಜ್ಯಪಾಲರಿಗೆ ದೂರು ನೀಡುತ್ತಿದ್ದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ೨೦೦೦ ಕೋಟಿ ಅನುದಾನ ಈ ಭಾಗದ ಕ್ಷೇತ್ರದ ಅಭಿವೃದ್ಧಿಗೆ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಪ್ರಸಕ್ತ ಸಾಲಿಗೆ ಗಂಗಾವತಿ ಕ್ಷೇತ್ರಕ್ಕೆ ಸುಮಾರು ರೂ.60 ಕೋಟಿ ಅನುದಾನ ಬರುವ ನಿರೀಕ್ಷೆ ಇದೆ ಎಂದ ಅವರು ಮೂಡಾ ಹಗರಣ ಮತ್ತು ವಾಲ್ಮೀಕಿ ನಿಗಮದ ಹಗರಣದಲ್ಲಿ ರಾಜ್ಯ ಸರಕಾರಕ್ಕೆ ಕಂಟಕ ಎದುರಾಗಿದೆ. ಈ ಹಗರಣದಲ್ಲೇ ಮುಖ್ಯಮಂತ್ರಿಗಳ ಖುರ್ಚಿ ಅಲುಗಾಡುತ್ತಿದೆ. ಈ ಹಗರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮುಖ್ಯಮಂತ್ರಿಗಳಿಗೆ ಕಂಟವಾಗುವುದು ನಿಶ್ಚಿತ. ಹಗರ ಮುಚ್ಚಿ ಹಾಕಲು ಸರಕಾರ ಮಟ್ಟದಲ್ಲಿ ಷಡ್ಯಂತರ ನಡೆಯುತ್ತಿದ್ದು, ನಾವು ಇದನ್ನು ಸುಮ್ಮನೆ ಬಿಡುವುದಿಲ್ಲ. ಹಗರಣದ ಸತ್ಯಾಸತ್ಯತೆಯನ್ನು ಜನರಿಗೆ ತಿಳಿಸಲು ಪಾದಯಾತ್ರೆ ಹಮ್ಮಿಕೊಳ್ಳುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಎಂಎಲ್‌ಸಿ ಕರಿಯಣ್ಣ ಸಂಗಟಿ, ಬಿಜೆಪಿ ಮುಖಂಡ ಮನೋಹರಗೌಡ ಹೇರೂರು, ಯಮನೂರ ಚೌಡ್ಕಿ, ಚಂದ್ರು ಹಿರೂರು ಮತ್ತಿತರು ಇದ್ದರು.