ಗಂಗಾವತಿ.
ನಗರದಲ್ಲಿ ಜು.೨೭ರಂದು ಕೊಪ್ಪಳ ಲೋಕಸಭೆ ಕ್ಷೇತ್ರದ ಸಂಸದ ರಾಜಶೇಖರ ಹಿಟ್ನಾಳ್ ಅವರು ಚುನಾವಣೆಯ ಗೆಲುವಿನ ನಂತರ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗಾಗಿ ಹಮ್ಮಿಕೊಂಡಿರುವ ಅಭಿನಂದಾ ಸಮಾರಂಭದ ಬ್ಯಾನರ್‌ನಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ಶ್ರೀನಾಥ, ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ಯಾಮೀದ್ ಮನಿಯಾರ್ ಅವರ ಭಾವ ಚಿತ್ರಕ್ಕೆ ಕೋಕ್ ಕೊಟ್ಟು, ಮಾಜಿ ಸಚಿವ ಇಕ್ಬಾಲ್ ಅನ್ಸಾರಿಗೆ ಹೆಚ್ಚು ಮಣೆ ಹಾಕಿದ್ದು, ಚುನಾವಣೆ ನಂತರವೂ ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತ ಮುಂದುವರೆದಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮುಖಂಡರ ಭಿನ್ನಮತವನ್ನು ಲೆಕ್ಕಿಸದೇ ರಾಜಶೇಖರ ಹಿಟ್ನಾಳ್ ಸಹೋದರರು ಪ್ರತ್ಯೇಕವಾಗಿ ಎಲ್ಲಾ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗಂಗಾವತಿಯಲ್ಲಿ ೧೪ ಸಾವಿರ ಮತಗಳ ಲೀಡ್ ಪಡೆದುಕೊಂಡಿದ್ದಾರೆ. ಆದರೆ ಈಗ ಅಭಿನಂದನಾ ಸಮಾರಂಭದಲ್ಲಿ ಅನ್ಸಾರಿ ಬಣಕ್ಕೆ ಮಣೆ ಹಾಕಿ ಅನ್ಸಾರಿ ವಿರೋಧಿ ಬಣವನ್ನು ದೂರವಿಟ್ಟಿದ್ದಾರೆ ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿದೆ.
ಜು.೨೭ ಶನಿವಾರ ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ನೂತನ ಕಾಂಗ್ರೆಸ್ ಸಂಸದ ರಾಜಶೇಖರ ಹಿಟ್ನಾಳ್ ಅವರಿಂದ ಕಾಂಗ್ರೆಸ್ ಪಕ್ಷದ ಸಮಸ್ಥ ಮುಖಂಡರು, ಕಾರ್ಯಕರ್ತರು ಮತ್ತು ಮತದಾರರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂಬ ಬ್ಯಾನರ್ ನಗರದಲ್ಲಿ ಹಾಕಿದ್ದಾರೆ. ಈ ಬ್ಯಾನರ್‌ಗಳಲ್ಲಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಅವರನ್ನು ಹೆಚ್ಚು ಬಿಂಬಿಸಿರುವ ರಾಜಶೇಖರ ಹಿಟ್ನಾಳ್ ಅವರು ಸೋನಿಯಾಗಾಂಧಿ, ಖರ್ಗೆ, ರಾಹುಲ್‌ಗಾಂಧಿ, ತಂಗಡಗಿ, ರಾಯರೆಡ್ಡಿ, ಬಯ್ಯಾಪುರ, ಸಂಗಣ್ಣ ಕರಡಿ, ಬಾದರ್ಲಿ, ಹಸನ್‌ಸಾಬ್, ಲಲಿತಾರಾಣಿ ಮತ್ತು ಎಸ್.ಬಿ.ಖಾದ್ರಿ ಅವರ ಫೊಟೋಗಳನ್ನು ಮಾತ್ರ ಹಾಕಿದ್ದಾರೆ. ಆದರೆ ನಗರದಲ್ಲಿರುವ ಕಾಂಗ್ರೆಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ಶ್ರೀನಾಥ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ಯಾಮೀದ್ ಮನಿಯಾರ್ ಅವರ ಫೊಟೋಗಳನ್ನು ಕೈಬಿಟ್ಟಿರುವುದು ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಐದಾರು ವರ್ಷಗಳಿಂದ ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ ಹೆಚ್.ಆರ್.ಶ್ರೀನಾಥ, ಮಲ್ಲಿಕಾರ್ಜುನ ನಾಗಪ್ಪ ಮತ್ತು ಇಕ್ಬಾಲ್ ಅನ್ಸಾರಿ ನಡುವೆ ಬಹಿರಂಗ ಭಿನ್ನಮತವಿದೆ. ಮತ್ತು ವಿಧಾನಸಭೆ ಚುನಾವಣೆ ನಂತರ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೂಡಾ ಅನ್ಸಾರಿ ಬಣದಿಂದ ದೂರ ಉಳಿದು ಪ್ರತ್ಯೇಕ ಕಾಂಗ್ರೆಸ್ ಪಕ್ಷದ ಕಾರ್ಯ ಮಾಡುತ್ತಿದ್ದಾರೆ. ಮುಖಂಡರ ನಡುವಿನ ಭಿನ್ನಮತ ಕಳೆದ ಲೋಕಸಭೆ ಚುನಾವಣೆಯಲ್ಲೂ ನಡೆದಿತ್ತು. ಚುನಾವಣೆ ಪ್ರಚಾರ ಸಭೆಯಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಮ್ಮುಖದಲ್ಲಿ ಶ್ರೀನಾಥ, ಅನ್ಸಾರಿ ನಡುವೆ ಭಿನ್ನಮತ ಸ್ಪೋಟವಾಗಿತ್ತು. ಆದರೆ ಹಿಟ್ನಾಳ್ ಸಹೋದರರು ಮುಖಂಡರ ಭಿನ್ನಮತವನ್ನು ಜಾಣ್ಮೆಯಿಂದ ಎದುರಿಸಿದ್ದು, ಅನ್ಸಾರಿ ಮತ್ತು ಶ್ರೀನಾಥ ಅವರನ್ನು ಪ್ರತ್ಯೇಕವಾಗಿಯೇ ಭೇಟಿಯಾಗಿ ಎರಡು ಗುಂಪಿನಿಂದ ಪ್ರತ್ಯೇಕವಾಗಿ ಕಾಂಗ್ರೆಸ್ ಕಾರ್ಯಕ್ರಮ ಆಯೋಜಿಸಿ ಗೆಲುವಿನಲ್ಲಿ ಗಂಗಾವತಿಯಲ್ಲಿ ಮೇಲುಗೈಯಿ ಸಾಧಿಸಿದ್ದರು. ತಮ್ಮ ನಡುವೆ ಇದ್ದ ಭಿನ್ನಮತವನ್ನು ಶ್ರೀನಾಥ, ಅನ್ಸಾರಿ ಮತ್ತು ಮನಿಯಾರ್ ಅವರು ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರದಂತೆ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಾಜಶೇಖರ ಹಿಟ್ನಾಳ್‌ಪರ ಮತ ತಂದುಕೊಡಲು ಶ್ರಮಿಸಿದ್ದರು. ಆದರೆ ಲೋಕಸಭೆ ಚುನಾವಣೆ ಬೆನ್ನಲ್ಲೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಮನಿಯಾರ್ ಬಣ ಕೆಲಸ ಮಾಡಿತ್ತು. ಆದರೆ ರಾಜಶೇಖರ ಹಿಟ್ನಾಳ್ ಅವರು ದಿಡೀರ್ ಗಂಗಾವತಿಯಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದು, ಈ ಸಮಾರಂಭದ ಬ್ಯಾನರ್‌ಲ್ಲಿ ಶ್ರೀನಾಥ, ಮನಿಯಾರ್ ಅವರನ್ನು ಕೈಬಿಟ್ಟಿರುವುದು ಆಶ್ಚರ್ಯ ಮೂಡಿಸಿದೆ. ಮತ್ತು ಗಂಗಾವತಿ ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ಭಿನ್ನಮತ ಮುಂದುವರೆಯಲಿದೆಯೇ ಎಂಬ ಆತಂಕ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮೂಡುತ್ತಿದೆ.
ಲೋಕಸಭೆ ಚುನಾವಣೆ ನಂತರ ಇಕ್ಬಾಲ್ ಅನ್ಸಾರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರತ್ಯಕ್ಷವಾಗಿ ಬೆಂಬಲವಾಗಿ ನಿಂತಿದ್ದು, ಸರಕಾರದ ಎಲ್ಲಾ ನಾಮ ನಿರ್ದೇಶನಗಳು ಅನ್ಸಾರಿ ಬಣಕ್ಕೆ ಧಕ್ಕುತ್ತಿವೆ ಅನ್ಸಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕೂಡಾ ಸಾತ್ ನೀಡಿದ್ದು, ಗಂಗಾವತಿ ತಾಲೂಕಿನ ನಾಮ ನಿರ್ದೇಶನ ಪ್ರಕ್ರೀಯೆಯಲ್ಲಿ ತಮ್ಮ ಕನಕಗಿರಿ ಕ್ಷೇತ್ರದ ಕಾರ್ಯಕರ್ತರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಆದರೆ ಹೆಚ್.ಆರ್.ಶ್ರೀನಾಥ, ಮಲ್ಲಿಕಾರ್ಜುನ ನಾಗಪ್ಪ, ಶ್ಯಾಮೀದ್ ಮನಿಯಾರ್ ಬೆಂಬಲಿಗರಿಗೆ ಯಾವುದೇ ನಾಮ ನಿರ್ದೇಶನ ಹುದ್ದೆಗಳು ಧಕ್ಕುತ್ತಿಲ್ಲ. ಹೀಗಾಗಿ ಸರಕಾರ ಮತ್ತು ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ಅನ್ಸಾರಿ ಮೇಲುಗೈ ಸಾಧಿಸುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಹಿಡಿತ ಹೊಂದಿರುವ ಹಿಟ್ನಾಳ್ ಸಹೋದರರು ಲೋಕಸಭೆ ಚುನಾವಣೆ ನಂತರ ಗಂಗಾವತಿಯಲ್ಲಿರುವ ಕಾಂಗ್ರೆಸ್ ಭಿನ್ನಮತ ಶಮನ ಮಾಡುತ್ತಾರೆ ಎಂಬ ವಿಶ್ವಾಸ ಕಾರ್ಯಕರ್ತರು ಹೊಂದಿದ್ದರು. ಆದರೆ ಇವರು ಕೂಡಾ ಚುನಾವಣೆ ನಂತರ ಭಿನ್ನಮತಕ್ಕೆ ತುಪ್ಪ ಸುರಿಯುತ್ತಿದ್ದು, ಅಭಿನಂದನಾ ಸಮಾರಂಭದ ಬ್ಯಾನರ್‌ನಲ್ಲಿ ಅನ್ಸಾರಿಗೆ ಮಣೆ ಹಾಕಿ ಶ್ರೀನಾಥಗೆ ಕೈ ಕೊಟ್ಟಿರುವುದು ಗೋಚರವಾಗುತ್ತಿದೆ.
ಬಾಕ್ಸ್:
ಅಭಿನಂದನಾ ಸಮಾರಂಭವು ಪ್ರತ್ಯೇಕವಾಗುತ್ತದೆ
ಗಂಗಾವತಿ ಕ್ಷೇತ್ರದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಪರಿಶ್ರಮದಿಂದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಹೆಚ್ಚು ಲೀಡ್ ಬಂದಿದೆ. ಮತ್ತು ಸರಕಾರದ ಮಟ್ಟದಲ್ಲೂ ಅನ್ಸಾರಿಗೆ ಹೆಚ್ಚು ಮನ್ನಣೆ ಇರುವುದರಿಂದ ನಾಮ ನಿರ್ದೇಶನ ಪ್ರಕ್ರೀಯೆಯಲ್ಲಿ ಇಕ್ಬಾಲ್ ಅನ್ಸಾರಿ ಬೆಂಬಲಿತ ಕಾಂಗ್ರೆಸ್ ಕಾರ್ಯಕರ್ತರಿಗೆ ಸರಕಾರ ಅವಕಾಶ ನೀಡುತ್ತಿರುವುದು ಸಹಜವಾಗಿದೆ. ಸಂಸದ ರಾಜಶೇಖರ ಅವರು ಗಂಗಾವತಿಯಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಉಸ್ತುವಾರಿ ಇಕ್ಬಾಲ್ ಅನ್ಸಾರಿ ಅವರು ವಹಿಸಿಕೊಂಡಿದ್ದಾರೆ. ಹಾಗಾಗಿ ಬ್ಯಾನರ್‌ಗಳಲ್ಲಿ ಅನ್ಸಾರಿ ಅವರಿಗೆ ಹೆಚ್ಚು ಮನ್ನಣೆ ನೀಡಿದ್ದಾರೆ. ಚುನಾವಣೆ ಪೂರ್ವದಲ್ಲಿ ಎರಡು ಬಣಗಳಿಂದ ಪ್ರತ್ಯೇಕ ಕಾರ್ಯಕ್ರಮ ನಡೆಸಿದಂತೆ ಅಭಿನಂದನಾ ಸಮಾರಂಭವನ್ನು ಅನ್ಸಾರಿ ವಿರೋಧಿ ಬಣದಿಂದಲೂ ಪ್ರತ್ಯೇಕವಾಗಿ ನಡೆಸಬಹುದು.
ವಿಶ್ವನಾಥ ಮಾಲೀಪಾಟೀಲ್, ಕಾಂಗ್ರೆಸ್ ಮುಖಂಡರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!